
ಹಿಂಡ್ಲಿಕಾಯಿ ಇಲ್ಲದೇ ನಮ್ಮ ಕರಾವಳಿಯಲ್ಲಿ ದೀಪಾವಳಿ ಪೂರ್ಣಗೊಳ್ಳುವುದೇ ಇಲ್ಲ. ಬೆಳಗ್ಗಿನ ಮೂರು ದಿನಗಳ ಪೂಜೆಯಲ್ಲಿ ಹಲಿಯೊಳಗಿಟ್ಟ ಕಾಯಿಗಳನ್ನು ಮೆಟ್ಟಿ ದುಷ್ಟ ಸಂಹಾರ ಮಾಡಿದ ಬಳಿಕ.. ಎಡಗಾಲಿನಲ್ಲಿ ಅದನ್ನೆತ್ತಿ ಹಂಚಿನ ಮೇಲೆ ಬಿಸಾಡುವುದು..
ನೀರು ತುಂಬಿದ ಹಂಡೆಗೆ ಹಿಂಡ್ಲಿಕಾಯಿ ಸಮೇತ ಅದರ ಬಳ್ಳಿಯನ್ನೇ ಸುತ್ತುವುದು.ಮೊದಲ ದಿನದ ರಾತ್ರಿಯ ಆರತಿ ತಟ್ಟೆಗೆ ಆರೇಳು ಹಿಂಡ್ಲಿಕಾಯಿಗಳನ್ನು ಇಬ್ಬಾಗ ಮಾಡಿ ಅದರೊಳಗಿನ ತಿರುಳು ತೆಗೆದು ಎಣ್ಣೆ ತುಂಬಿ ಬತ್ತಿ ಹಾಕಿ ದೀಪ ಹಚ್ಚುವುದು..
ಹೀಗೆ ನಮ್ಮಲ್ಲಿಯ ದೀಪಾವಳಿ ಹಿಂಡ್ಲಿಕಾಯಿಂದಲೇ ಸಂಪನ್ನಗೊಳ್ಳುತ್ತದೆ. ಬಹುಶಃ ನನಗನಿಸಿದಂತೇ ಬೇರೆ ಯಾವುದೇ ಆಚರಣೆಗಳಲ್ಲಿ ಹಬ್ಬಗಳಲ್ಲಿ ಇದರ ಬಳಕೆ ಕಂಡಂತಿಲ್ಲ. ನಾವು ಮಾತ್ರ ಸಣ್ಣವರಿದ್ದಾಗ ಕಾಲಡಿಯಲ್ಲಿ ಹಾಕಿ ತಿರುವುತ್ತ
” ಹಣ್ ಹಣ್ ಪತಳೇ
ಕಾಯ್ ಪತಳೇ”
ಎಂದು ಹಾಡಿ ಹಾಡಿ ಅದು ಒಡೆದು ಹೋಗದೇ ಪೂರ್ತಿ ತಿರುಳು ತೆಳುವಾದ ಮೇಲೆ ಬಳುಕುವ ಅದನ್ನು ಹಣೆಗೆ ಚಚ್ಚಿಕೊಳ್ಳುತ್ತ ಆಡುತ್ತಿದ್ದೆವು.