ರೈತರೇ ಸೇರಿಕೊಂಡು ಫ್ಯಾಕ್ಟರಿ ಮಾಡಬಹುದೇ : ರಾಹುಲ್ ಗಾಂಧಿ

0

ಭಾರತ್ ಜೋಡೋ ಯಾತ್ರೆ  ಚಿಕ್ಕನಾಯಕನಹಳ್ಳಿಯತ್ತ ಬಂದಾಗ  ರಾಹುಲ್ ಗಾಂಧಿ ಅವರ ಜೊತೆ ತೆಂಗು ಬೆಳೆಗಾರ ಅಣೆಕಟ್ಟೆ ವಿಶ್ವನಾಥ್ ಹೆಜ್ಜೆ ಹಾಕಿದರು.ಈ ಸಂದರ್ಭ ರಾಹುಲ್ ಅವರು ಕೃಷಿಕರ ಕಷ್ಟಸುಖಗಳನ್ನು ವಿಚಾರಿಸಿ ವಿವರ ಪಡೆದುಕೊಂಡಿರುವ ಬಗ್ಗೆ ವಿಶ್ವನಾಥ್ ಬರೆದಿದ್ದಾರೆ.

ರಾಹುಲ್ ಅವರಿಗೆ ತೆಂಗಿನ ಸಸಿಯನ್ನು ನೀಡಿ, ಈ ತೆಂಗಿನ ಸಸಿಯನ್ನು ಸ್ವರ್ಗದ ಮರ ಎನ್ನುತ್ತಾರೆ. ಈ ಮರದ ಎದುರು ನಾವು ಕಲ್ಪನೆ ಮಾಡಿಕೊಂಡಿದ್ದನ್ನು ಸಾಕಾರ ಮಾಡುವ ಮರ ಎನ್ನುತ್ತಾರೆ. ಭಾರತ ದೇಶಕ್ಕೆ ಹೊಸ ಹೊಸ ಮರುಕಲ್ಪನೆಗಳನ್ನು ನೀವು ನೀಡುತ್ತಿದ್ದೀರಿ, ಆ ಎಲ್ಲ ಕಲ್ಪನೆಗಳೂ ಸಾಕಾರಗೊಳ್ಳಲಿ ಎಂದು ಬಯಸಿ ಸಾಂಕೇತಿಕವಾಗಿ ಈ ತೆಂಗಿನ ಸಸಿಯನ್ನು ನೀಡುತ್ತಿದ್ದೇನೆ. ಎಂದು ಹೇಳಿದೆ. ಧನ್ಯವಾದಗಳು ಎಂದರು. ತಕ್ಷಣವೇ ಮಾತಿಗೆ ಮುಂದಾದರು.

ರಾಹುಲ್ ಗಾಂಧಿ: ನಿಮ್ಮದು ಎಷ್ಟು ಎಕರೆ  ತೋಟ ಇದೆ ಹೇಳಿ? ಎಂದರು.

ಅಣೇಕಟ್ಟೆ ವಿಶ್ವನಾಥ್: ಎರಡೂವರೆ ಎಕರೆಯಲ್ಲಿ 150 ತೆಂಗಿನ ಮರ

ರಾಗಾ: ಅದರಿಂದ ಎಷ್ಟು ಆದಾಯ ಬರುತ್ತಿದೆ?

ಅವಿ: ಪ್ರತಿವರ್ಷಕ್ಕೆ 10,000 ತೆಂಗಿನ ಕಾಯಿ ರೂ15 ಪ್ರತಿ ತೆಂಗಿನ ಕಾಯಿಗೆ  ಒಟ್ಟು1.5 ಲಕ್ಷದಷ್ಟು ಆದಾಯ ಬರುತ್ತಿದೆ.

ರಾಗಾ: ಖರ್ಚು ಎಷ್ಟು ಆಗುತ್ತದೆ.

ಅವಿ: ನಾನು ಲೆಕ್ಕ ಇಟ್ಟಿಲ್ಲ. ಕುಟುಂಬದ ಜನ ಮಾಡುವ ಕೂಲಿಯನ್ನೂ ಲೆಕ್ಕ ಹಾಕಿದರೆ ಆದಾಯಕ್ಕಿಂತ ಖರ್ಚೇ ಹೆಚ್ಚಾಗುತ್ತದೆ. ನಮಗೆ ಲಾಭದ ರೂಪದಲ್ಲಿ ಉಳಿಯುವುದು ಕೂಲಿ ಮಾತ್ರ.

ರಾಗಾ: ನಷ್ಟ ಆಗುವುದಾದರೆ  ಕುಟುಂಬ ಹೇಗೆ ನಿರ್ವಹಣೆಗೆ ಬೇರೇನು ಮಾಡುತ್ತೀರಿ?

ಅವಿ: ನಾನೀಗ ನಮ್ಮ ತೋಟದ ತೆಂಗಿನ ಕಾಯಿಯಿಂದ ವರ್ಜಿನ್ ಕೊಕೊನಟ್ ಆಯಿಲ್ ಮಾಡುತ್ತಿದ್ದೇನೆ. ಇದರಿಂದ ಸ್ವಲ್ಪ ಹೆಚ್ಚು ಆದಾಯ ಬರುತ್ತಿದೆ.

ರಾಗಾ: ಈಗ ಹೇಳಿ, ಒಂದು ಲೀಟರ್ ವರ್ಜಿನ್ ಕೊಕೊನಟ್ ಆಯಿಲ್ ತಯಾರಿಸಲು ತೆಂಗಿನ ಕಾಯಿ ಎಷ್ಟು ಬೇಕಾಗುತ್ತದೆ. ಖರ್ಚು ವೆಚ್ಚ ಎಷ್ಟಾಗುತ್ತದೆ.

ಅವಿ: ಹದಿನೈದು ತೆಂಗಿನಕಾಯಿ ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಈಗ ತೆಂಗಿನಕಾಯಿಗೆ ಹನ್ನೆರಡು ರೂಪಾಯಿ ಇದೆ. ವರ್ಜಿನ್ ಕೊಕೊನಟ್ ಆಯಿಲ್ ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ  ನನಗೆ ಒಂದು ತೆಂಗಿನಕಾಯಿಗೆ ಇಪ್ಪತ್ತೈದು ರೂಪಾಯಿ ಸಿಗುತ್ತಿದೆ. ನಾನು ನನ್ನ ತೋಟದ ತೆಂಗಿನಕಾಯಿಗಳನ್ನು ತೆಗೆದುಕೊಂಡು ಫ್ಯಾಕ್ಟರಿಗೆ ಹೋಗಿ ಅಲ್ಲಿ ಎಣ್ಣೆ ಉತ್ಪಾದಿಸಿಕೊಂಡು ಮಾರಾಟ ಮಾಡುತ್ತಿದ್ದೇನೆ.

ರಾಗಾ: ಹಾಗಾದರೆ, ಕೆಲವು ರೈತರನ್ನು ಸೇರಿಸಿಕೊಂಡು ನೀವೇ ಏಕೆ ಒಂದು ಫ್ಯಾಕ್ಟರಿ ಮಾಡಬಾರದು?

ಅವಿ: ಒಳ್ಳೆಯ ಆಲೋಚನೆ, ಆದರೆ ನನ್ನಲ್ಲಿ ಅಷ್ಟು ಬಂಡವಾಳವಿಲ್ಲ.

ರಾಗಾ: ಎಷ್ಟು ಬಂಡವಾಳ ಬೇಕಾಗುತ್ತದೆ.

ಅವಿ: ಹತ್ತುಲಕ್ಷರೂಪಾಯಿ ಬೇಕಾಗುತ್ತದೆ.

ರಾಗಾ: (ಕುತೂಹಲದಿಂದ) ಈ ವರ್ಜಿನ್ ಕೊಕೊನಟ್ ಆಯಿಲ್ ವಿಶೇಷತೆ ಏನು?

ಅವಿ: ನಾವು ಉತ್ಪಾದಿಸುತ್ತಿರುವ ವರ್ಜಿನ್ ಕೊಕೊನಟ್ ಆಯಿಲ್ ಗುಣಮಟ್ಟವು ಎಪಿಸಿಸಿ (ಏಸಿಯಾ ಫೆಸಿಫಿಕ್ ಕೊಕೊನಟ್ ಕಮ್ಮ್ಯೂನಿಟಿ) ಮಾನದಂಡದಂತಿದೆ. ಎಪಿಸಿಸಿ ಮಾನದಂಡವು ವರ್ಜಿನ್ ಕೊಕೊನಟ್ ಆಯಿಲ್ ಗೆ ಅಂತರಾಷ್ಟ್ರೀಯ ಮಾನದಂಡವಾಗಿದೆ.  ಇದರಲ್ಲಿರುವ  ಲಾರಿಕ್ ಆಸಿಡ್ ಎನ್ನುವ ಫ್ಯಾಟಿ ಆಸಿಡ್ ಶೇ50 ರಷ್ಟು ಇರುತ್ತದೆ. ತಾಯಿಯ ಎದೆ ಹಾಲನ್ನು ಬಿಟ್ಟರೆ ಇಷ್ಟು ಪ್ರಮಾಣದಲ್ಲಿ ಲಾರಿಕ್ ಆಸಿಡ್ ಸಿಗುವುದು ವರ್ಜಿನ್ ಕೊಕೊನಟ್ ಆಯಿಲ್ ನಲ್ಲಿ ಮಾತ್ರ ಎನ್ನುತ್ತಾರೆ. ಈ ಲಾರಿಕ್ ಆಸಿಡ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಕಾಯಿಲೆ, ಬಿಪಿ, ಅತೀತೂಕ, ಬೊಜ್ಜು, ಥೈರಾಯಿಡ್ ಸಮಸ್ಯೆಗಳು ಚರ್ಮದ ತೊಂದರೆ, ಕೂದಲು ಉದುರುವುದು ಇತ್ಯಾದಿ ಆರೋಗ್ಯದ ಸವಾಲನ್ನು ಎದುರಿಸುತ್ತಿರುವ ಜನರಿಗೆ ತುಂಬಾ ಸಹಕಾರಿಯಾಗಿದೆ.

ರಾಗಾ: ತೆಂಗಿನ ಕಾಯಿಯಿಂದ ಬೇರೆನನ್ನು ತಯಾರಿಸಬಹುದು.

ಅವಿ: ತೆಂಗಿನ ಕಾಯಿಯಿಂದ 150 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಬಹುದು. ತೆಂಗಿನ ಕಾಯಿಯಾಗುವ ಮೊದಲು ಹೊಂಬಾಳೆಯಿಂದ ನೀರಾ, ಎಳನೀರಾದಾಗ ಎಳನೀರು ಮಾರಾಟ ಮಾಡಬಹುದು, ಎಳನೀರಿನಿಂದ ಸ್ನೋಬಾಲ್, ಮಿನಿಮಲ್ ಪ್ರಾಸಸಿಂಗ್, ಎಳನೀರು ಬಾಟಲ್, ತೆಂಗಿನಕಾಯಿಯಾದಾಗ ವರ್ಜಿನ್ ಕೊಕೊನಟ್ ಆಯಿಲ್, ತೆಂಗಿನಕಾಯಿ ಹಾಲು, ಅನೇಕ ಸಿಹಿ ತಿನಿಸುಗಳು ತಯಾರಿಸಬಹುದು. ಒಣಗಿದಾಗ ಕೊಬ್ಬರಿ.

ರಾಗಾ: ಕೊಬ್ಬರಿ ಅಂದರೆ

ಡಿ.ಕೆ.ಶಿವಕುಮಾರ್: ಆಗಲೆ ನಿಮಗೊಂದು ಹಾರ ಹಾಕಿದರಲ್ಲ ಬಣ್ಣದ್ದು, ಅದೇ ಕೊಬ್ಬರಿ.

ಅವಿ: ಹೌದು, ಅದನ್ನು ಡ್ರೈಫ್ರೂಟ್ ಆಗಿ ತಿನ್ನುತ್ತಾರೆ.

ರಾಗಾ: ಎಣ್ಣೆ ತೆಗೆದಾಗ ಉಳಿಯುವುದನ್ನು ಏನು ಮಾಡುತ್ತಾರೆ?

ಅವಿ: ಹಸುಗಳಿಗೆ ಆಹಾರವಾಗಿ ಬಳಸುತ್ತಾರೆ. ಆದರೆ, ವರ್ಜಿನ್ ಕೊಕೊನಟ್ ಆಯಿಲ್ ತಯಾರಿಸುವುದರಿಂದ ಉಳಿಯುವ ಪುಡಿಯಿಂದ ತೆಂಗಿನಕಾಯಿ ಹಿಟ್ಟನ್ನು ತಯಾರಿಸಿ ರೊಟ್ಟಿಯನ್ನೂ ಮಾಡಬಹುದು. ತೆಂಗಿನಕಾಯಿ ಹಿಟ್ಟು ಭಾರತಕ್ಕೆ ಆಮದಾಗುತ್ತಿದೆ. ಇಲ್ಲಿ ಉತ್ಪಾದನೆ ಇಲ್ಲವೇ ಇಲ್ಲ. ಸಕ್ಕರೆ ಕಾಯಿಲೆ ರೋಗಿಗಳಿಗೆ ಈ ತೆಂಗಿನಕಾಯಿ ಹಿಟ್ಟು ಉತ್ತಮ ಪರ್ಯಾಯ ಆಹಾರವಾಗಿದೆ. ಏಕೆಂದರೆ, ಇದರಲ್ಲಿ ನಾರಿನ ಅಂಶ ಅಧಿಕವಾಗಿದೆ. ಅಷ್ಟೇ ಅಲ್ಲ ಈ ತೆಂಗಿನ ಕಾಯಿ ಹಿಟ್ಟಿನಿಂದ ಅನೇಕ ಬೇಕರಿ ತಿನಿಸುಗಳನ್ನು ತಯಾರಿಸಬಹುದು. ಮೈದಾಗೆ ಪರ್ಯಾಯವಾಗಿ ಬಳಸಬಹುದು.

ರಾಗಾ: ನೀವು ತೆಂಗಿನ ತೋಟದೊಳಗೆ ಅಡಿಕೆ ಬೆಳೆಯುತ್ತಿದ್ದೀರಾ?

ಅವಿ: ಇಲ್ಲ

 ರಾಗಾ: ತೆಂಗಿನ ತೋಟದ ಒಳಗೆ ಬೇರೆ ಏನೇನು ಬೆಳೆಯುತ್ತಿದ್ದೀರಿ?

ಅವಿ: ಸುತ್ತಲೂ ಅರಣ್ಯ ಮರಗಳಿವೆ.  ಒಳಗೆ ಹನ್ನೆರಡು ಜಾತಿಯ ಹಣ್ಣಿನ ಗಿಡಗಳಿವೆ. ಒಂದಿಷ್ಟು ತರಕಾರಿ ಬೆಳೆಯೋದು ಬಿಟ್ಟರೆ, ನಾನು ಆರ್ಥಿಕವಾಗಿ ಬೇರೇನೂ ಬೆಳೆಯುತ್ತಿಲ್ಲ.

ಡಿಕೆ ಶಿವಕುಮಾರ್: ಬಾಳೆ ಬೆಳೆಯುತ್ತಿಲ್ಲವೆ?

ಅವಿ: ಕೆಲವರು ಬೆಳೆಯುತ್ತಾರೆ. ನಾನೀಗ ನೆಡುತ್ತಿದ್ದೇನೆ.

ರಾಗಾ: ಹಾಗಾದರೆ, ತೆಂಗು ಬೇಸಾಯದಲ್ಲಿ ಬೇರೇನು ಸಮಸ್ಯೆ ಇದೆ ಹೇಳಿ?

ಅವಿ: ಇಲ್ಲಿ ಮುಖ್ಯವಾಗಿ ಇರುವ ಸಮಸ್ಯೆ ಮಾರುಕಟ್ಟೆಯದು. ಇಲ್ಲಿ ನಾವು ಕೊಬ್ಬರಿ ಮಾಡುತ್ತೇವೆ. ರೈತರು ಚೆನ್ನಾಗಿ ಬೆಳೆದಾಗ ಬೆಲೆ ಇರುವುದಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇದ್ದಾಗ ರೈತರ ಕೈಯಲ್ಲಿ ಬೆಳೆ ಇರುವುದಿಲ್ಲ. ಬಹುತೇಕ ಮಾರುಕಟ್ಟೆ ಮಧ್ಯವರ್ತಿಗಳು ನಿಯಂತ್ರಿಸುತ್ತಾರೆ. ರೈತರು ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ಬೇಕು. ಇಲ್ಲಿ ಎಫ್ ಪಿ ಓ (ರೈತ ಉತ್ಪಾದಕ ಕಂಪನಿಗಳು) ಗಳಿವೆ. ಎಫ್ ಪಿ ಓಗಳನ್ನು ಸರ್ಕಾರದ ಅನೇಕ ಇಲಾಖೆಗಳು ಸ್ಥಾಪಿಸಿ ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿವೆ. ಆದರೆ ಅವುಗಳನ್ನು ಹೇಗೆ ನಡೆಸಬೇಕೆಂದು ರೈತರಿಗೆ ನಿರ್ವಹಣಾ ಕೌಶಲ್ಯದ ಕೊರತೆ ಇದೆ. ಸರ್ಕಾರ ರೈತರು ಎಫ್ ಪಿ ಓ ನಡೆಸುವ ಬಗ್ಗೆ ರೈತರ ನಿರ್ವಹಣಾ ಕೌಶಲ್ಯ ಹೆಚ್ಚಿಸಲು ಕೆಲಸ ಮಾಡಬೇಕಿದೆ.

ರಾಗಾ: ಧನ್ಯವಾದಗಳು

ಅವಿ: ಧನ್ಯವಾದಗಳು

LEAVE A REPLY

Please enter your comment!
Please enter your name here