ರೈತರು ಸಾಲಗಾರರಲ್ಲ;  ಸರ್ಕಾರವೇ ಬಾಕಿದಾರ

0
ಸಾಂದರ್ಭಿಕ ಚಿತ್ರ
ಲೇಖಕರು: ಪ್ರಶಾಂತ್‌ ಜಯರಾಮ್

ಭಾರತ ದೇಶದಲ್ಲಿ ಈಗಿನ ಅಂದಾಜಿನ ಪ್ರಕಾರ ಕೃಷಿ ಉತ್ಪನ್ನಗಳಾದ ಅಕ್ಕಿ,ಗೋಧಿ,ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಸಾಂಬಾರ್ ಪದಾರ್ಥ,ಹಾಲು,ಮಾಂಸ, ಹಣ್ಣು, ತರಕಾರಿ, ಕಬ್ಬು, ಹೀಗೆ ಒಟ್ಟಾರೆ ಉತ್ಪಾದನೆ ಸುಮಾರು 1500 ದಶಲಕ್ಷ ಟನ್.ಇದರಲ್ಲಿ ಪ್ರಮುಖವಾಗಿ ಭತ್ತ ಮತ್ತು ಗೋಧಿ ಉತ್ಪಾದನೆ ಕ್ರಮವಾಗಿ 110 ಮತ್ತು 100 ದಶಲಕ್ಷ ಟನ್.ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ಗೋಧಿಯ ಬೆಲೆಯನ್ನು ಉದಾಹರಣೆಗೆ ತೆಗೆದುಕೊಂಡು,ಕೆಳಗಿನ ಅಂಕಿ ಅಂಶ ನೋಡೋಣ. ಬೇರೆ ಬೆಳೆಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಕನಿಷ್ಠ ವೇತನ:Minimum Pay Scale

—————————————-

1970-ರೂ 70/

2016-ರೂ 15,000/(+ ಇತರೆ)

ಹೆಚ್ಚಳ ಪ್ರಮಾಣ ಸುಮಾರು 300 ರಿಂದ 400 ಪಟ್ಟು

ಕನಿಷ್ಠ ಬೆಂಬಲ ಬೆಲೆ(MSP)

—————————————-

ಭತ್ತ:

1970-ರೂ 60/

2022-ರೂ 2040/

ಗೋಧಿ:

1970-ರೂ 75/

2022-ರೂ 2125/

ಹೆಚ್ಚಳ ಪ್ರಮಾಣ ಸುಮಾರು 25 ರಿಂದ 30 ಪಟ್ಟು. ಕನಿಷ್ಠ ಬೆಂಬಲ ಬೆಲೆ(MSP:Minimum Support Price)ಎಂದರೆ ಕೃಷಿ ಉತ್ಪಾದನೆ ಹೆಚ್ಚಾದಾಗ,ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಾಗ ರೈತರು ಬೆಳೆ ಬೆಳೆಯಲು ಮಾಡಿದ ಉತ್ಪಾದನಾ ವೆಚ್ಚ(Cost of Cultivation)ನಷ್ಟವಾಗದ ರೀತಿ, ರೈತರು ಹಾಕಿದ ಬಂಡವಾಳ ಸುರಕ್ಷತೆ ಮಾಡಲು ಸರ್ಕಾರ ಮಧ್ಯಪ್ರದೇಶ ಮಾಡಿ, ರೈತರಿಂದ ನೇರವಾಗಿ ಕನಿಷ್ಠ ಬೆಲೆಗೆ ಖರೀದಿಸುವುದು ಅಥವಾ ಕನಿಷ್ಠ ಬೆಲೆಗಿಂತ ಕಡಿಮೆಗೆ ಖರೀದಿಸದಂತೆ ನೋಡಿಕೊಂಡು ರೈತರ ನೆರವಿಗೆ ಬರುವ ವ್ಯವಸ್ಥೆ,ಇದು ಲಾಭದಾಯಕ ಬೆಲೆ ಅಲ್ಲ.

*ಶೇ 10%  ರೈತರಿಂದ ಮಾತ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತದೆ,ಅವರಿಗೆ ಬರಿ ಉತ್ಪಾದನಾ ವೆಚ್ಚ ಮಾತ್ರ ಉಳಿಯುತ್ತದೆ.ಇನ್ನುಳಿದ ರೈತರಿಗೆ ಉತ್ಪಾದನಾ ವೆಚ್ಚವು ಬರುವುದಿಲ್ಲ.

*ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಇಂದು ಬಹುತೇಕ ಬೆಳೆಗಳು ಮಾರಾಟವಾಗುತ್ತಿರುವುದನ್ನು ನಾವು ಕಾಣಬಹುದು,ರೈತನ ಉತ್ಪಾದನಾ ವೆಚ್ಚ ಕೂಡ ಹಿಂದಿರುಗದೆ ಸಾಲಗಾರನಾಗುತ್ತಿದ್ದಾನೆ.

*ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಯನ್ನು ರೈತರ ಬೆಳೆಗೆ ಅಂತಿಮ ಬೆಲೆ ಎನ್ನುವ ರೀತಿ ಘೋಷಣೆ ಮಾಡಿ ಬೀಗುತ್ತಿರುವುದು ನಾಚಿಕೆಗೇಡಿನ ಸಂಗತಿ.

*ರೈತರು ಬೆಳೆ ಮಾಡಿ, ಅದಕ್ಕೆ ಹಾಕಿದ ಬಂಡವಾಳ ವಾಪಸ್ಸು ಪಡೆಯಲು ಹೋರಾಟ ಮಾಡಬೇಕೆ? ಬೆಂಬಲ ಬೆಲೆ ಕೊಡಿ ಅಂತ ಕೇಳೋದೇ ಅವೈಜ್ಞಾನಿಕ,ಬೆಂಬಲ ಬೆಲೆ ಅನ್ನೋ ಪದ ಬಿಟ್ಟು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಲೆಗೆ ಮಾರಾಟ ಮಾಡುವ ನೀತಿ ರೂಪಿಸಿಕೊಳ್ಳಬೇಕಿದೆ.

*ಮೇಲಿನ ಅಂಕಿಅಂಶಗಳು ಕೇವಲ ತುಲನೆ ಮಾಡಿ ಅರ್ಥ ಮಾಡಿಸಲು ಮಾತ್ರ,ಯಾವುದೇ ಖಾಸಗಿ/ಸರ್ಕಾರಿ ನೌಕರರನ್ನು,ಉದ್ಯಮ,ವ್ಯಪಾರ,ಶಿಕ್ಷಣ, ವೈದ್ಯಕೀಯ,ಇನ್ನಿತರೆ ಕ್ಷೇತ್ರದವರನ್ನು ಗುರಿಯಾಗಿಸುವ ಬಗ್ಗೆಯಾಗಲಿ ಅವರ ವೃತ್ತಿಯನ್ನು ಅವಮಾನಿಸುವುದು ಅಥವಾ ನೋಯಿಸುವ ಅಥವಾ ನಿಂಧಿಸುವ ಯಾವ ರೀತಿ ಕೆಟ್ಟ ಉದ್ದೇಶ ಹೊಂದಿರುವುದಿಲ್ಲ.ಕೇವಲ ಉದಾಹರಣೆಗೆ ಮಾತ್ರ ತೆಗೆದುಕೊಂಡು ಹೋಲಿಕೆ ಮಾಡಲಾಗಿದೆ ಅಷ್ಟೇ.

*ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ವೇತನ ನಿಗದಿಪಡಿಸುತ್ತ ಬಂದಿದೆ,ಈ ರೀತಿ ವೇತನ ನಿಗದಿಪಡಿಸುವಾಗ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಆಧಾರ ತೆಗೆದುಕೊಳ್ಳುತ್ತದೆ ಅಲ್ಲವೇ?ರೈತರ ಉತ್ಪನ್ನ ಅಗತ್ಯ ಬಳಕೆ ವಸ್ತು ತಾನೆ? ಆದರೆ ರೈತರ ಉತ್ಪನ್ನ ಮತ್ತು ವೇತನ ಹೋಲಿಕೆ ಮಾಡಿದರೆ ನೌಕರರಿಗೆ ಸುಮಾರು 300 ರಿಂದ 400 ಪಟ್ಟು ರೈತರ ಉತ್ಪನ್ನಕ್ಕೆ ಕೇವಲ 25-30 ಪಟ್ಟು ಹೆಚ್ಚಳ ಕಂಡುಬಂದಿದ್ದು,ಇದು ತೀರಾ ಅವೈಜ್ಞಾನಿಕ ಹಾಗು ತಾರತಮ್ಯ ನೀತಿ ಎದ್ದು ಕಾಣುತ್ತಿದೆ.ಇದು ನೌಕರರ ಸಂಬಳಕ್ಕೆ ಮಾತ್ರ ಸೀಮಿತವಾಗಿ ಹೇಳುತ್ತಿಲ್ಲ, ಹೋಲಿಕೆಗಾಗಿ ಮಾತ್ರ ತೆಗೆದುಕೊಳ್ಳಲಾಗಿದೆ ಅಷ್ಟೇ. ಕಳೆದ 50 ವರ್ಷದಲ್ಲಿ ನಿವೇಶನ,ಮನೆ,ವಾಹನ, ಶಿಕ್ಷಣ,ಆಸ್ಪತ್ರೆ,ಚಿನ್ನಬೆಳ್ಳಿ,ಬಟ್ಟೆಬರೆ,ಸಾರಿಗೆ, ಜೀವನ ನಿರ್ವಹಣೆ ಹೀಗೆ ಎಲ್ಲಾವು ಹೆಚ್ಚಳವಾಗಿ ಸಾಗುತ್ತಿದೆ.

ಇದಕ್ಕೆ ಸರಿಸಾಮಾನವಾಗಿ ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಕಾಣದೆ ಹೋದಾಗ ರೈತರು ಸಮಾಜದಲ್ಲಿ ಇತರೆ ವರ್ಗದವರು ನೆಡೆಸುವ ಜೀವನಮಟ್ಟದ ಜೀವನ ನೆಡೆಸಲು ಸಾಧ್ಯವಾಗದೆ ಪರ್ಯಾಯ ಉದ್ಯೋಗಗಳ ಕಡೆ ಹೋಗುತ್ತಿದ್ದಾರೆ.

ರೈತರು ನೀಡುವ ಕೂಲಿ,ಬೀಜ,ಗೊಬ್ಬರ, ಉಳುಮೆ ಇತ್ಯಾದಿ ಎಲ್ಲವೂ ಸುಮಾರು 300 ರಿಂದ 400 ಪಟ್ಟು ಹೆಚ್ಚಳವಾಗಿದೆ.ವೇತನ ಆಯೋಗ ಪ್ರತಿ 10 ವರ್ಷಗೊಳಿಗೊಮ್ಮೆ ಹೆಚ್ಚಳ ಮಾಡಿದಂತೆ ಹಾಗು ಇತರೆ ಬೆಲೆಗಳ ಹೆಚ್ಚಳದ ಆಧಾರದಲ್ಲಿ ಕೃಷಿ ಬೆಲೆ ಆಯೋಗ ಕೂಡ ರೈತರು ಬೆಳೆದ ಬೆಳೆಗೆ ಬೆಲೆ ನಿಗಧಿಪಡಿಸಲಿ. ರೈತರ ಉತ್ಪನ್ನಗಳಿಗೆ ನ್ಯಾಯಯುತ್ತ ಬೆಲೆ ನೀಡಲು ಆರ್ಥಿಕ ಹೊರೆ ಕಾರಣ ನೀಡುವುದಾದರೆ,ರೈತರು ಮಾತ್ರ ಆರ್ಥಿಕ ಹೊರೆ ಹೊರಬೇಕೇ?ವೇತನ/ಬೆಲೆ ಹೆಚ್ಚಳದ ಪ್ರಕಾರ ಕೃಷಿ ಉತ್ಪನ್ನಗಳಿಗೆ ಬೆಲೆ ನೀಡಿ,ಇಲ್ಲವೇ ಕೃಷಿ ಉತ್ಪನ್ನಗಳಿಗೆ ನೀಡುತ್ತಿರುವ ಬೆಲೆ ಪ್ರಕಾರ ವೇತನ/ಬೆಲೆ ಇಳಿಸಿ.

ನಮ್ಮ ಸರ್ಕಾರದ ನೀತಿಗಳು ಕೃಷಿಗೆ ಪೂರಕವಾಗಿಲ್ಲ, ಕೃಷಿಯಿಂದ ಆದಷ್ಟು ಜನರನ್ನು ಒಕ್ಕಲೆಬಿಸುವ ನೀತಿಗಳು ಜಾರಿಯಾಗುತ್ತಿವೆ. ಪ್ರತಿದಿನ ಕೃಷಿಯಿಂದ ಸುಮಾರು 3000 ಜನ ಆಚೆ ಬರುತ್ತಿದಾರೆ.ಕೃಷಿಗೆ ಸೂಕ್ತ ಸ್ಥಾನಮಾನ,ವೈಜ್ಞಾನಿಕ ಬೆಲೆ ನೀಡದ ಹೊರತು ಹಾಕಿರುವ ಬಂಡವಾಳ ಹಿಂಪಡೆಯುವುದು ಕಷ್ಟವಿದೆ.

ಕೃಷಿ ಅನಿವಾರ್ಯವಾದರೂ ವಿದೇಶಿ ನೀತಿಗಳು, ವ್ಯಾಪಾರ ಒಪ್ಪಂದಗಳು ಭಾರತ ದೇಶದ ರೈತರನ್ನು ಮಾರುಕಟ್ಟೆಯಲ್ಲಿ ಸೋಲುವಂತೆ ಮಾಡಿದೆ. ಸರ್ಕಾರಗಳು ಮತ್ತು ನಮ್ಮ ಜನ ಸಾಮಾನ್ಯರಿಗೆ ಕೃಷಿ ಬಗ್ಗೆ ಮತ್ತು ರೈತರ ಬಗ್ಗೆ ಉದಾಸೀನ ಮನೋಭಾವ ಮೂಡಿದೆ.ಇಂಥ ಪರಿಸ್ಥಿಯಲ್ಲಿ  ರೈತ ಕೃಷಿ ಮಾಡಿ, ಕೃಷಿಯಿಂದ ಆದಾಯಗಳಿಸಿ ಜೀವನ ನಿರ್ವಹಣೆ ಮಾಡುವುದು,ಇಂದಿನ ಅರೋಗ್ಯ,ಶಿಕ್ಷಣ ಇತರೆ ವ್ಯವಸ್ಥೆಯೊಂದಿಗೆ ಬೆರೆತು ಸರಿಸಮಾನವಾದ ಶಿಕ್ಷಣ ಮತ್ತು ಅರೋಗ್ಯ ಸೇವೆ ಪಡೆಯುವುದು ಸುಲಭದ ಮಾತಲ್ಲ.ಕೃಷಿ ಲಾಭದಾಯಕ ವೃತ್ತಿಯಾದರೆ ಮಾತ್ರ ಕೃಷಿಯಲ್ಲಿ ಮುಂದುವರೆಯುತ್ತಾರೆ,ಲಾಭವಿಲ್ಲದಿದ್ದಲ್ಲಿ ಕೃಷಿಯನ್ನು ಅನಿವಾರ್ಯವಾಗಿ ತೊರೆಯುತ್ತಾರೆ.

*ವೇತನ ಆಯೋಗ ವೇತನ  ಹೆಚ್ಚಳ ಮಾಡಿದ ಪ್ರಮಾಣದ ಆಧಾರದಲ್ಲಿ ಪಹಣಿಯಲ್ಲಿ ನಮೂದಾಗಿರುವ ಬೆಳೆ ಪ್ರಕಾರ ಹಾಗು ಆ ವರ್ಷದ ಅಂದಾಜು ಇಳುವರಿ ಪರಿಗಣಿಸಿ ರೈತರು ಬೆಳೆದು ಕೊಟ್ಟಿರುವ ಉತ್ಪನ್ನಕ್ಕೆ ಬಾಕಿ ಚುಕ್ತಾ ಮಾಡಲಿ ಹಾಗು ಮುಂದಿನ ಬೆಳೆಗಳಿಗೆ ಸರಿಯಾದ ಬೆಲೆ ನೀಡಲಿ.ಕಳೆದ 10 ವರ್ಷದ ಕೃಷಿ ಉತ್ಪನ್ನದ ಬಾಕಿ ಮೊತ್ತವೇ 25 ಲಕ್ಷಕೋಟಿಗೂ ಅಧಿಕ.

*ರೈತರಿಗೆ ಬಾಕಿ ಮತ್ತು ಬೆಲೆ ಕೊಡಲಾಗದ ಸರ್ಕಾರಗಳು,ರೈತರನ್ನು ಸಾಲಗಾರರನ್ನಾಗಿ ಮಾಡಿದೆ.ರೈತರು ಸಾಲಗಾರರಲ್ಲ:ಸರ್ಕಾರವೇ ಬಾಕಿದಾರಾಗಿದ್ದು,ರೈತರ ಸಾಲ ಮನ್ನಾ ಮಾಡಲು ಸರ್ಕಾರಗಳಿಗೆ ಸಾಧ್ಯವೇ!?ಸಾಲ ಮನ್ನಾ ಮಾಡಬೇಕಿರುವುದು ರೈತರು,ಸರ್ಕಾರವಲ್ಲ!

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530

LEAVE A REPLY

Please enter your comment!
Please enter your name here