ಸಾಮಾನ್ಯವಾಗಿ ಎಲ್ಲ ಕೃಷಿ ಸಮುದಾಯಗಳು (ಮೂಲದಲ್ಲಿ ಕೃಷಿ ಸಮುದಾಯಗಳಾಗಿದ್ದ ಸಮುದಾಯಗಳೂ ಸೇರಿಕೊಂಡಂತೆ) ತಮ್ಮ ಹಬ್ಬಾಚರಣೆಗಳಲ್ಲಿ ಕೃಷಿ ಸಂಬಂಧೀ ಆಚರಣೆಗಳನ್ನು ಹೊಂದಿವೆ. ಈ ಸಮುದಾಯಗಳ ಸಂಸ್ಕೃತಿಯಲ್ಲಿ ಅವುಗಳು ಹಾಸುಹೊಕ್ಕಾಗಿವೆ. ನಮ್ಮ ಕಡೆ ಬೂಮಣ್ಣಿ ಹಬ್ಬ ನಡೆಯುವುದು ಹೀಗೆ.
ಬೂಮಣ್ಣಿ ಬುಟ್ಟಿ:
ಹಬ್ಬಕ್ಕೆ ವಾರ ಹತ್ತು ದಿನ ಮೊದಲೇ ಹೆಣ್ಮಕ್ಕಳು ಬಿದಿರಿನ ಬುಟ್ಟಿಯನ್ನು ಸಾರಿಸಿ, ಒಣಗಿಸಿ ಅದಕ್ಕೆ ಕೆಮ್ಮಣ್ಣು ಹಚ್ಚಿ ಅದರ ಮೇಲೆ ಚಿತ್ತಾರ ಬರೆಯುತ್ತಾರೆ. ಒಂದು ದೊಡ್ಡ ಬುಟ್ಟಿ ಮತ್ತೊಂದು ಸಣ್ಣ ಬುಟ್ಟಿ ಇರುತ್ತವೆ. ಈ ಚಿತ್ತಾರದಲ್ಲಿ ಭತ್ತದ ಸಸಿ, ಭತ್ತದ ಬಣವೆ, ಕೋಳಿ, ಏಣಿ, ಬುಟ್ಟಿ ಹೊತ್ತ ಮನುಷ್ಯರು, ಇತ್ಯಾದಿ ಇರುತ್ತವೆ. ಎಳೆಗಳನ್ನು ಹೊಡೆದು ‘ನಿಲಿ’ ಕೊಚ್ಚಿನ ಚೌಕಟ್ಟಿನ ನಡುವೆ ಈ ಆಕಾರಗಳು ಅತ್ಯಾಕರ್ಷಕವಾಗಿರುತ್ತವೆ. ಜನಪದ ಹೆಣ್ಮಕ್ಕಳ ಸೃಜನಶೀಲತೆಗೆ ಹಿಡಿದ ಕನ್ನಡಿ ಈ ಬೂಮಣ್ಣಿ ಬುಟ್ಟಿ ಮೇಲಿನ ಚಿತ್ತಾರ.
- ಹಬ್ಬದ ಹಿಂದಿನ ರಾತ್ರಿಯಿಡೀ ಮಹಿಳೆಯರು ಭೂಮ್ಕ್ಯವ್ಬನ ಅಂದರೆ ಭೂಮಿತಾಯಿಯ ಬಯಕೆಯ ತಿಂಡಿ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಕಡುಬು, ಹೋಳಿಗೆ, ಪಾಯಸ, ಕೇಸರಿ ಬಾತ್, ಮೊಸರು ಬುತ್ತಿ, ಬಜಿ, ಸೌತೇಕಾಯಿ ಮೊಸರಿನ ಕಿಚಡಿ, ಅನ್ನ, ಸಾರು, ಪಲ್ಯ, ಮೀನು, ಹೀಗೆ ವಿಧವಿಧದ ತಿನಿಸುಗಳು. ಇದರೊಂದಿಗೆ ನಾನಾ ಬಗೆಯ ತರಕಾರಿ, ಅನ್ನಹಾಕಿ ಚರಗವನ್ನು ಮಾಡಿರುತ್ತಾರೆ.
ಹಬ್ಬದ ದಿನ ಬೆಳಿಗ್ಗೆ ನಾಲ್ಕು ಅಥವಾ ಐದು ಗಂಟೆಗೇ ಮನೆಯ ಗಂಡಸರು ಗದ್ದೆ, ಹಿತ್ತಿಲುಗಳಿಗೆ ಚರಗ ಚೆಲ್ಲಿ ಬರುತ್ತಾರೆ. ಸಣ್ಣ ಬುಟ್ಟಿಯಲ್ಲಿ ಒಯ್ಯುವ ಚರಗವನ್ನು ಹೀಗೆ ಚೆಲ್ಲುವಾಗ “ಹಚ್ಚಂಬ್ಲಿ ಹರಿಬೆ ಸೊಪ್ಪು ಹಿತ್ಲಾಗಿರ ದಾರ್ ಹೀರೇಕಾಯಿ ಹೋಯ್ ಹೊಯ್ ಹೊಯ್” ಅಂತ ಕೂಗುತ್ತಾರೆ.
=======================
- ಒಂದು ಬೂಮಣ್ಣಿ ಬುಟ್ಟಿಯ ಮೇಲೆ ಚಿತ್ತಾರ ಬರೆಯೋಕೆ ಹೆಣ್ಮಕ್ಕಳು ಸುಮಾರು 15 ದಿನ ನಿದ್ದೆ ಬಿಡಬೇಕು.ಬೂಮಿ ಹುಣ್ಣಿಮೆಯ ಹಿಂದಿನ ರಾತ್ರಿಯಂತೂ ಒಂದು ಕ್ಷಣವೂ ನಿದ್ದೆ ಮಾಡಲಾಗುವುದಿಲ್ಲ.ಹಲವಾರು ತರದ ತಿನಿಸುಗಳನ್ನು(ಪಾಯಸ, ಕೇಸರಿಬಾತ್, ಮೊಸರು ಬುತ್ತಿ, ಚಿನ್ನಿ ಕಾಯಿ ಕಡುಬು, ಅಕ್ಕಿ ಕಡುಬು, ಕಜ್ಜಾಯ, ಮೀನು ಸಾರು, ಹೆಸರು ಕಾಳು ಉಂಡೆ, ಚಿತ್ರನ್ನ, ಅನ್ನ, ಸಾರು. ಪಲ್ಯ, ಹಾಗೆನೇ ಹಿತ್ತಿಲು ಮತ್ತೆ ಗದ್ದೆಗೆ ಬೀರಲು ಹಚ್ಚಂಬಲಿ (ಹಸಿರು+ಅಂಬಲಿ)- ಇದರಲ್ಲಿ ನಾನಾ ತರದ ತರಕಾರಿಗಳು ಇರ್ತವೆ.
=======================
ಬೆಳೆಗ್ಗೆ ಸ್ನಾನವಾದ ಮೇಲೆ ತಿನಿಸು, ಪೂಜೆ ಸಾಮಗ್ರಿಗಳನ್ನು ಬೂಮಣ್ಣಿ ಬುಟ್ಟಿಗಳಲ್ಲಿ ತುಂಬಿಕೊಂಡು ಗದ್ದೆಗೆ ಹೋಗಿ ಭತ್ತದ ಸಸಿ ಅಥವಾ ಅಡಿಕೆ ಮರಗಳಿಗೆ ಪೂಜೆ ಮಾಡುತ್ತಾರೆ. ಎರಡು ಸಸಿಗಳ ನಡುವೆ ಮಾವಿನ ತೋರಣ ಕಟ್ಟಿ, ಹೆಣ್ಮಕ್ಕಳು ತಮ್ಮ ತಾಳಿ, ಆಭರಣಗಳನ್ನು ಸಸಿಗೆ ಮುಡಿಸಿ ಗದ್ದೆ ಸಸಿಯನ್ನು ತುಂಬು ಗರ್ಭಿಣಿಯಾಗಿ ಪರಿಭಾವಿಸಿಕೊಂಡು ಸಿಂಗರಿಸಿ ತಂದ ಸಕಲ ತಿನಿಸುಗಳನ್ನು ಎಡೆಯಲ್ಲಿ ಇಡಲಾಗುತ್ತದೆ.
- ಎಡೆಗಳು:
ಪೂಜೆ ಮಾಡಿದ ಮೇಲೆ ಒಂದು ಗೂಳಿ ಎಡೆ ಮತ್ತೊಂದು ಇಲಿ ಎಡೆಗಳನ್ನು ಗದ್ದೆಯ ಬದುವಿನ ಮೇಲೆ ಇಡಲಾಗುತ್ತದೆ. ವಾಸ್ತವದಲ್ಲಿ ರೈತರ ಬೆಳೆಯನ್ನು ತಿಂದು ನಷ್ಟ ಮಾಡುವ ಇಲಿಯನ್ನು ಸಂತುಷ್ಟಗೊಳಿಸಲು ಇಲಿ ಎಡೆಯಾದರೆ ಪೂರ್ವಜರನ್ನು ಕಾಗೆ ರೂಪದಲ್ಲಿ ಕಲ್ಪಿಸಿಕೊಂಡು ಇಡುವುದು ಗೂಳಿ ಇಡೆ. ಕಾಗೆಗಳಲ್ಲಿ ದೊಡ್ಡ ಗಾತ್ರದ ದೆವ್ವಗಾಗೆ ಬಂದು ಆ ಎಡೆಯ ತಿನಿಸು ಕಚ್ಚಿಕೊಂಡು ಹೋದರೆ ಗೂಳಿ ಮುಟ್ಟಿತೆಂದುಕೊಂಡು ಊಟ ಮಾಡಲು ಮುಂದಾಗುತ್ತೇವೆ. ಗದ್ದೆಯಲ್ಲಿಯೇ ಮನೆಮಂದಿ ಕುಳಿತು ಊಟ ಮಾಡಿ ಮನೆಕಡೆ ಬರುತ್ತೇವೆ. ಇದಕ್ಕೆ ಮೊದಲು ಒಂದು ಕಡುಬನ್ನು ಗದ್ದೆಯಲ್ಲಿ ಹುಗಿದು ಬರುತ್ತೇವೆ. ಕುಯಿಲಿನ ಸಮಯದಲ್ಲಿ ಅದನ್ನು ಕಿತ್ತು ಭತ್ತದ ಬಣವೆ ಮೇಲಿಡುತ್ತಾರೆ.
ಈ ಇಡೀ ಆಚರಣೆಯ ತಾತ್ವಿಕತೆ ಏನು:
ಕೃಷಿ, ಆಚರಣೆಗೆ ಬಂದ ದಿನಗಳಿಂದಲೂ ಆದಿಮ ಕೃಷಿಕ ಸಮುದಾಯಗಳ ಸರಳ ತರ್ಕ ಏನೆಂದರೆ ಫಸಲು ಬೆಳೆಯುವ ಭೂಮಿ ಒಂದು ಹೆಣ್ಣು. ಗರ್ಭ ಧರಿಸಿ ಲೋಕಕ್ಕೆ ಫಸಲಿನ ರೂಪದಲ್ಲಿ ಫಲವತ್ತಿಕೆ ನೀಡುವ ಭೂತಾಯಿಯನ್ನು ಗರ್ಭವತಿಯಾದ ಹೆಣ್ಣಿನಂತೆಯೇ ಭಾವಿಸಿಕೊಂಡು ಆಕೆಯ ಬಯಕೆ ತೀರಿಸಿ, ಆಕೆ ಉತ್ತಮ ಫಸಲು ನೀಡುವಂತೆ ಮಾಡಬೇಕು ಎಂಬ ಆಶಯ ಇದರ ಹಿಂದಿದೆ. ಕೃಷಿ ಸಮುದಾಯಗಳು ಸುಗ್ಗಿಯ ನಂತರ ನಡೆಸುವ ಬಲಿ ಹರಕೆಯನ್ನು ರೂಢಿಗೆ ತಂದಿದ್ದು ಸಹ ಇದೇ ತಾತ್ವಿಕತೆಯ ಆಧಾರದಲ್ಲಿ ಎನ್ನುವುದು ಹಲವು ವಿದ್ವಾಂಸರ ಅಭಿಮತ.
ಭೂಮಿಯನ್ನು ಪೂಜಿಸುವ ಭೂಮಿ ಹುಣ್ಣಿಮೆಯಲ್ಲಿ ಬೂಮಣ್ಣಿ ಚಿತ್ತಾರ ಬರೆಯುವುದರಿಂದ ಹಿಡಿದು ಪೂಜೆ ಮಾಡುವವರೆಗೆ ಮಹಿಳೆಯರೇ ಪ್ರಮುಖ ಪಾತ್ರ ಗಂಡಸರದ್ದೇನಿದ್ದರೂ ಅವರು ಬರೆದ ಬೂಮಣ್ಣಿ ಬುಟ್ಟಿ ಹೊತ್ತುಕೊಂಡು ಹೋಗಿ, ಪೂಜೆ ಆದ ಮೇಲೆ ಕುಳಿತು ಗಡದ್ದಾಗಿ ಊಟ ಮಾಡುವುದು. ಇಲಿ, ಕಾಗೆಗಳಿಗೂ ಊಟ ಕೊಟ್ಟು, ಭೂಮ್ತಾಯಿಯ ಬಯಕೆ ತೀರಿಸಿ ನಮ್ಮ ಬಯಕೆಯನ್ನೂ ತೀರಿಸಿಕೊಳ್ಳುವ ಬೂಮಣ್ಣಿ ಹಬ್ಬ ಒಂದು ಜೀವಪರ, ಸ್ತ್ರೀಸಂಕೇತದ ಹಬ್ಬ.
ಸೀಗೆ ಹುಣ್ಣಿಮೆ ಮತ್ತು ಎಳ್ಳಮಾವಾಸೆಯ ದಿನ ವರುಷದಾಗ ಎರಡು ಚರಗದ ಹಬ್ಬ ಮಾಡ್ತೀವಿ ಉತ್ತರ ಕರ್ನಾಟಕದಲ್ಲಿ ಬೆಳೆ ಹುಲುಸಾಗಿ ಬರಲಿ ಅಂತ ಭೂಮಿತಾಯಿಗೆ ಪೂಜೆ ಮಾಡ್ತೀವಿ. ಮಾಡಿದ ನೈವೇದ್ಯವನ್ನು ಹೊಲದ ಬೆಳೆಯ ತುಂಬ ಚೆಲ್ಲುತ್ತೇವೆ. ನಂತ್ರ ಎಲ್ಲರೂ ಊಟ ಮಾಡ್ತೀವಿ. ಚರಗದ ಪೂಜೆಗೆ ಇನ್ನೊಂದು ಕಾರಣ ಇದೆ ಪಾಂಡವರ ಕತೆಯೊಂದಿಗೆ ತಳಿಕೆಯಾಗಿದೆ. ಭಾಳ ವರುಷದ ನಂತ್ರ ತವರಿನ ಹೊಲದಾಗ ಚರಗ ಪೂಜೆಗೆ ಹೋಗಿದ್ದೆ ಇವತ್ತು. ಚರಗನೂ ಚೆಲ್ಲಿದೆ. ಚರಗದ ಊಟನೂ ಸಕತ್ ಎತ್ತಿದೆ. ಹಕ್ಕರಿಕೆ, ಕಿರಕ್ ಸಾಲಿ ಪಲ್ಯ, ಕರಿಬೇವು, ಇತ್ಯಾದಿ ನನ್ನ ಕೈಯ್ಯಾರೆ ಸಂಗ್ರಹಿಸಿದೆ.
- ನಾವು ಚರಗ ಚೆಲ್ಲುವಾಗ ಒಬ್ರು ಮುಂದೆಮುಂದೆ ಚರಗದ ನೈವೇದ್ಯವನ್ನು ಹುಲ್ಲ್ ಹುಲ್ಲಿಗೋ ಎಂದು ಕೂಗುತ್ತಾ ಚೆಲ್ಲುತ್ತಾ ಹೋಗುತ್ತಾರೆ. ಹಿಂದೆ ಒಬ್ಬರು ನೀರನ್ನು ಸುರಮ್ಮಳ್ಳೋ ಎನ್ನುತ್ತಾ ಜೋರಾಗಿ ಸಿಂಪಡಿಸುತ್ತಾ ಹೋಗ್ತಾರೆ. ಹುಲ್ಲ್ ಹುಲ್ಲಿಗೊ ಸುರಮ್ಮಳಿಗೊ ಘೋಷಣೆಯ ಅರ್ಥ ಹುಲ್ಲುಹುಲ್ಲಿನಲ್ಲಿಯೂ ಕಾಳಾಗಿ ಸುರಿಯುವ ಅಮ್ಮ (ಭೂಮ್ತಾಯಿ)ನಿಗೆ ಧನ್ಯವಾದ ಎಂಬ ಅರ್ಥದಲ್ಲಿ ಬಂದಿರಬಹುದು.