ಬೋರ್ ಕೊರೆಸಿದ ನಂತರ ಪಂಪ್ ಸಮಸ್ಯೆ ಬಗ್ಗೆ ಯೋಚಿಸಿದ್ದೀರಾ

0
ಲೇಖಕರು: ಮಹೇಶ್ ಹೊನ್ನಾವರ, ಕೊಳವೆಬಾವಿ ತಜ್ಞರು

ಬೋರ್ ಕೊರೆಸುವುದೆಂದರೆ ಈಗಿನ ಕಾಲದಲ್ಲಿ ತುಂಬ ಈಸಿ. ಏಜೆಂಟರಿಗೆ ಕಾಲ್ ಮಾಡಿದ ತಕ್ಷಣ ರಿಗ್ ಬಂದುಬಿಡುತ್ತದೆ. ಬೋರ್ ಕೊರೆದಾಯಿತು. ನೀರೂ ಕೂಡ ಬಂದುಬಿಡ್ತು. ಡ್ರಿಲ್ಲರ್ ಬೋರ್ ಕೊರೆಯಬೇಕಾದರೆ ಅದೇನೋ ಜಲ್ಲಿ ಕಲ್ಲುಗಳನ್ನು ಹಿಡಿದು ತಂದು 160 ಫೀಟಿನ ಗ್ಯಾಪಲ್ಲಿ ನೀರು ಸಿಕ್ಕಿದೆ ಸಾರ್,”ನಲ್ಲ ತಣ್ಣಿ” ಅಂತಂದು ಜಲ್ಲಿ ಕಲ್ಲುಗಳನ್ನು ನಿಮ್ಮ ಕೈಯಲ್ಲಿಟ್ಟು ಹೋಗಿಬಿಡುತ್ತಾನೆ..ನೀರು ಭರಭರ ಹಾರುವುದ ನೋಡಿ ಎಲ್ಲರಿಗೂ ಖುಷಿಯೋ ಖುಶಿ..

ಮುನ್ನೂರಡಿ ಕೊರೆದು ಕ್ಯಾಪ್ ಹಾಕಿ ರಿಗ್ ಹೋಗಿಬಿಡುತ್ತದೆ. ಇಷ್ಟಕ್ಕೇ ಮುಗೀತಾ. ಉಹುಃ ಪಂಪ್ ಹಾಕಬೇಕಲ್ವಾ…ಪಂಪ್ ನವರಿಗೆ ಕಾಲ್ ಮಾಡಿ ಚೆನ್ನಾಗಿ ನೀರು ಬಂದಿದೆ,ಮುನ್ನೂರಡಿ ಆಳವಿದೆ ಬಂದು ಮಾತನಾಡಿ ಹೋಗಿ ಅಂತೀರಿ..ಅವರು ಬಂದು 280 ಅಡಿಗೆ ಪಂಪ್ ಇಳಿಸಿಬಿಡೋಣ ಅಂತ ತೀರ್ಮಾನ ಮಾಡಿ ಖರೀದಿಗೆ ಅಡ್ವಾನ್ಸ್ ಇಸ್ಕೊಂಡು ಹೋಗ್ತಾರೆ.

ಪಂಪ್ ತಂದು ಇಳಿಸುತ್ತ ಹೋದಂತೆ ಹೋದಂತೆ 160 ಅಡಿಗೆ ಪಂಪ್ ಸ್ಟ್ರಕ್ ಆಗಿಬಿಡುತ್ತದೆ. ಕೆಳಕ್ಕೂ ಹೋಗುವುದಿಲ್ಲ. ಮೇಲಕ್ಕೂ ಬರುವುದಿಲ್ಲ. ಪಂಪ್ ನವರು ಅಷ್ಟಕ್ಕೆ ಪಂಪ್ ಫಿಕ್ಸ್ ಮಾಡಿ ಮುಗಿಸುತ್ತಾರೆ. ಒಂದು ವರ್ಷ ಚೆನ್ನಾಗಿ ನೀರು ಬರುತ್ತದೆ..ಮಳೆಗಾಲದ ಸಿಡಿಲಿಗೆ ಪಂಪ್ ಸುಟ್ಟು ಹೋಗುತ್ತದೆ. ಆವಾಗ ಪಂಪ್ ಎತ್ತದೇ ರಿಪೇರಿ ಸಾಧ್ಯವಿಲ್ಲ..ರಿಪೇರಿಯಾಗದೇ ನೀರು ಬರುವುದಿಲ್ಲ.

ಅನಿವಾರ್ಯವಾಗಿ ಡಬಲ್ ಚೈನ್ ಪುಲ್ಲಿ ಲೋಡ್ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಲೋಡ್ ತಡೆಯಲಾಗದೇ ಪಂಪಿಗೆ ಜೋಡಿಸಿರುವ ಪೈಪ್ ತುಂಡಾಗಿ ಮೇಲೆ ಬರುತ್ತದೆ..ಅಲ್ಲಿಗೆ ಪಂಪಿನ ಕಥೆ ಗೋವಿಂದ! ಮತ್ತೆ ಹೊಸ ಪಂಪ್ ಖರೀದಿಸಿ ಇಳಿಸುವ ಕರ್ಮ ಬೋರ್ವೆಲ್ ಓನರ್ದು..

ಬಹುತೇಕ ದೊಡ್ಡ ನೀರು ಬಂದ ಬೋರ್ವೆಲ್ಲುಗಳ ಕಥೆ ಇದೇ ಹಾಗಾದರೆ ಇಲ್ಲಿ ನಡೆದ ತಪ್ಪೇನು ಎಂಬುದನ್ನು ನೋಡೋಣ. 160 ಅಡಿಗೆ ಬೋರ್ಡರ್ಸ್ ಬಂದಿದ್ದರಿಂದ ಪಂಪ್ 150 ಅಡಿಗೆ ಇಳಿಸಿದರೆ ಸಾಕು ಎಂದು ರಿಪೋರ್ಟ್ ಕೊಡದ ಏಜೆಂಟನದ್ದು ಮೋದಲನೇ ತಪ್ಪು. ಊರಿನ ಹಾಗೂ ನುರಿತ ವೃತ್ತಿಪರ ಪಂಪ್ ಇಳಿಸುವವರನ್ನು ಬಿಟ್ಟು ಹೆಂಡತಿಯ ತಂಗಿಯ ಗಂಡನ ತಮ್ಮನ ಮಾವನ ಮಗ ಪಂಪ್ ವ್ಯವಹಾರ ಮಾಡ್ತಾನೆ.ನಮ್ಮವನೇ ಹಾಗಾಗಿ ಅವನಿಗೇ ಕೊಟ್ಟುಬಿಡೋಣ ಅಂತ ತೀರ್ಮಾನಿಸಿದ್ದು ಪಾರ್ಟಿಯ ತಪ್ಪು..

ನುರಿತ ಪಂಪ್ ಡೀಲರ್ ಗಳು ಬಾರ್ಡರ್ಸ್ ಬಂದಿದ್ಯಾ ಇಲ್ಲವಾ ಅಂತ ಪರಿಶೀಲಿಸದೇ ಪಾರ್ಟಿ ಹೇಳಿದಷ್ಟು ಪಂಪ್ ಇಳಿಸುವುದೇ ಇಲ್ಲ. ಬ್ಲೈಂಡ್ ಆಗಿ ಪಂಪ್ ಇಳಿಸಿದ್ದು ಪಂಪಿನವನ ತಪ್ಪು. ಇದೆಲ್ಲದರ ಪರಿಣಾಮ ಅತ್ಯುತ್ತಮ ನೀರಿನ ಇಳುವರಿ ಬಂದ ಬೋರ್ವೆಲ್ ಡೆಡ್ ಆಗುತ್ತದೆ. ಪಂಪ್ ಸಿಕ್ಕಿಬಿದ್ದು ಪೈಪ್ ಮಾತ್ರ ಬಂದ ಸಂದರ್ಭದಲ್ಲಿ ಪಂಪ್ ಎತ್ತುವದು ಸಾಧ್ಯವೇ ಇಲ್ಲ.

ಬೋರ್ವೆಲ್ ರಿಗ್ ನಿಂದ ಪಂಪ್ ಕೆಳಕ್ಕೆ ದೂಡಿ ತಳ ಮುಟ್ಟಿಸಬಹುದು ಅಷ್ಟೆ.. ಪಂಪ್ ಲಾಸ್ ಮತ್ತು ಮುಂದ್ಯಾವುದೇ ಸಂದರ್ಭದಲ್ಲಿ ಬೋರ್ವೆಲ್ ಆಳ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಬೋರ್ವೆಲ್ ನಲ್ಲಿ ನೀರೆಷ್ಟು ಬಂದಿದೆ ಮತ್ತು ಬಂದಿರುವ ನೀರಿಗೆ ಎಷ್ಟು HP ಪಂಪ್ ಅಳವಡಿಸಬೇಕು ಮತ್ತು ಎಷ್ಟಡಿಗೆ ಇಳಿಸಬೇಕು ಎಂಬ ಮಾಹಿತಿಯನ್ನು ಕಡ್ಡಾಯವಾಗಿ ಏಜೆಂಟರಿಂದ ಪಡೆದು ವಿಷಯ ಮನದಟ್ಟು ಮಾಡಿಕೊಳ್ಳಿ. ಒಳ್ಳೆಯ ಸರ್ವೀಸ್ ಕೊಡುವ ಹಾಗೂ ಪಂಪಿನ ಬಗ್ಗೆ ಎಲ್ಲ ಮಾಹಿತಿ ಇರುವ ಡೀಲರ್ ಗಳ ಜೊತೆಗೆ ಮಾತ್ರ ವ್ಯವಹರಿಸಿ. ಒಂದೆರಡು ಸಾವಿರ ಹೆಚ್ಚು ಕಡಿಮೆಯಾದರೂ ಊರಿನವರೇ ಬೆಸ್ಟ್. ಸಾರ್ವಜನಿಕ ಹಿತಕ್ಕಾಗಿ

LEAVE A REPLY

Please enter your comment!
Please enter your name here