ಉತ್ತರ ಕನ್ನಡ ಜಿಲ್ಲೆಯಿಂದ ಮಲೇರಿಯಾ ರೋಗವನ್ನು 1950ರ ದಶಕದಲ್ಲಿ ತೊಡೆದು ಹಾಕಲಾಯಿತು. ಇದು ಅಲ್ಲಿಗೆ ಹೆಚ್ಚಿನ ಜನ ವಲಸೆ ಬಂದು, ಕಾಡು ಕಡಿದು ಕೃಷಿ ಮಾಡಲು ಉತ್ತೇಜಿಸಿತು. ಬಹುಶಃ ಆ ಸಮಯದಲ್ಲಿ ದೇಶ, ಆಹಾರ ಉತ್ಪಾದನೆಯಲ್ಲಿ ಸ್ವಾಲಂಬಿಯಾಗುವುದು ಬಹು ಮುಖ್ಯವಾಗಿತ್ತು. ಆದರೆ ಜನರ ಈ ಒಳ ಹರಿವು ಆನೆಗಳು ಬೆಳೆ ನಾಶ ಮಾಡುವುದನ್ನು ಹೆಚ್ಚಿಸಿತು.
ಇದಕ್ಕೆ ಪ್ರತಿಕ್ರಿಯೆಯಾಗಿ ಬೆಳೆ ಹಾನಿ ಮಾಡುವ ಆನೆಗಳನ್ನು ಕೊಲ್ಲಲು ಬಹುಮಾನ ನೀಡುತ್ತಿದ್ದರು. ಹೀಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಆನೆಗಳನ್ನು ಕೊಲ್ಲಲಾಯಿತು. ಇದರಿಂದಾಗಿ ಅವುಗಳು ಸಣ್ಣ ಸಂಖ್ಯೆಯಲ್ಲಿ 1956ರಲ್ಲಿ ಘೋಷಿತವಾದ ದಾಂಡೇಲಿ ವನ್ಯಜೀವಿಧಾಮದಲ್ಲಿ ಉಳಿದುಕೊಂಡವು.
ಕಾಳಿ ಹುಲಿ ಯೋಜನಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿರುವ ಹರುವಿನಲ್ಲಿ 60 ರಿಂದ 70 ಆನೆಗಳು ಉಳಿದುಕೊಂಡಿವೆ, ಇದು ಪಶ್ಚಿಮ ಘಟ್ಟದಲ್ಲಿ ಅವುಗಳ ಉತ್ತರ ಸರಹದ್ದಿನ ಸೀಮೆ. ಆದರೆ ಹಲವಾರು ಅಭಿವೃದ್ಧಿ ಯೋಜನೆಗಳು ಮತ್ತು ಜನವಸತಿ ಪ್ರದೇಶಗಳಿಂದ ಆ ಭೂಪ್ರದೇಶ ಸಾಕಷ್ಟು ಛಿದ್ರೀಕರಣವಾಗಿದೆ. ಅದರಿಂದ ಸುಗ್ಗಿಯ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕಿನ ನೂರಕ್ಕೂ ಹೆಚ್ಚು ಹಳ್ಳಿಗಳು ಮಾನವ-ಆನೆ ಸಂಘರ್ಷ ಎದುರಿಸುತ್ತವೆ.
ಕೆಲ ವಾರಗಳ ಹಿಂದೆ ಯಲ್ಲಾಪುರ ತಾಲ್ಲೂಕಿನ ತೆಂಗಿನಗೇರಿ ಹಳ್ಳಿಗೆ ಭೇಟಿ ನೀಡಿದ್ದೆ. ಅಲ್ಲಿ ಉಮೇಶ ಎಂಬುವರ ಚಿಕ್ಕ ಭತ್ತದ ಗದ್ದೆಯನ್ನೆಲ್ಲ ಆನೆಗಳು ತಿಂದು ಹಾಕಿದ್ದವು. ಉಮೇಶ ಅವರ ಕುಟುಂಬದವರು ಭತ್ತವನ್ನು ತಮ್ಮ ಸ್ವಂತ ಉಪಯೋಗಕ್ಕಾಗಿ ಬೆಳೆಯುತ್ತಾರೆ. ಆದರೆ ಈಗ ಉಮೇಶ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಕೊಂಡು ತರಬೇಕಾಗುತ್ತದೆ, ಇದು ಅವರ ಚಿಕ್ಕ ಕೃಷಿ ಆದಾಯದ ಮೇಲೆ ದೊಡ್ಡ ಹೊರೆಯಾಗುತ್ತದೆ. ಮಾನವ-ವನ್ಯಜೀವಿ ಸಂಘರ್ಷದ ಈ ತರಹದ ಪರೋಕ್ಷ ಪರಿಣಾಮಗಳನ್ನು ನಾವು ಹೆಚ್ಚು ಅರ್ಥ ಮಾಡಿಕೊಂಡಿಲ್ಲ.
ಹುಬ್ಬಳ್ಳಿ – ಅಂಕೋಲಾ ರೈಲು ಹಳಿ ಯೋಜನೆ (ಹು.ಅ.ರೈ.ಹ.ಯೋ) ಇಲ್ಲಿನ ಆನೆಗಳ ಆವಾಸಸ್ಥಾನವನ್ನು ಇನ್ನು ಹೆಚ್ಚು ತುಂಡರಿಸಿ ಮಾನವ-ಆನೆ ಸಂಘರ್ಷವನ್ನು ವರ್ಧಿಸುತ್ತದೆ ಮತ್ತು ಉಮೇಶ್ ರಂತಹ ಸಣ್ಣ ಹಿಡುವಳಿದಾರರು ಇದರ ಬೆಲೆಯನ್ನು ತೆರೆಬೇಕಾಗುತ್ತದೆ.
ಮಹಾರಾಷ್ಟ್ರದಲ್ಲಿ ಆನೆ ಸಂಘರ್ಷ
ಒಂದೆರೆಡು ಅಪರೂಪದ ಪ್ರಸಂಗಗಳನ್ನು ಬಿಟ್ಟರೆ ಮಹಾರಾಷ್ಟ್ರದಲ್ಲಿ ಕಾಡಾನೆಗಳಿರಲಿಲ್ಲ. 2002ರಲ್ಲಿ ಏಳು ಆನೆಗಳ ಒಂದು ಚಿಕ್ಕ ಗುಂಪು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಗೆ ಹೋಗಿ ಕರ್ನಾಟಕ್ಕೆ ಹಿಂದಿರುಗಿದವು. ಆಗಿನಿಂದ ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ಆನೆಗಳು ಹೋಗಿ ಬಂದ ವಿರಳ ಪ್ರಸಂಗಗಳಿವೆ.ಆದರೆ ೨೦೦೫ರಿಂದ ಸಿಂಧುದುರ್ಗ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಆನೆಗಳು ಬೀಡುಬಿಟ್ಟಿವೆ.
ಇದು, ಮಹಾರಾಷ್ಟ್ರದಲ್ಲಿ ಆನೆ ಸಂಘರ್ಷ ಪ್ರಾರಂಭವಾಗಲು ಕಾರಣವಾಯಿತು. ಅಲ್ಲಿನ ಅರಣ್ಯ ಇಲಾಖೆಯವರಿಗಾಗಲಿ ಅಥವಾ ಸ್ಥಳೀಯರಿಗಾಗಲಿ ಆನೆಗಳನ್ನು ಹೇಗೆ ನಿಭಾಯಿಸಬೇಕೆಂಬುದು ಸಹ ತಿಳಿದಿರಲಿಲ್ಲ. ಈ ಸಂಘರ್ಷ ಜನ ಮತ್ತು ಆನೆಗಳು ದೊಡ್ಡ ಬೆಲೆಯನ್ನು ತೆರುವಂತೆ ಮಾಡಿದೆ. ಆನೆಗಳ ಜೊತೆಗೆ ಹಲವಾರು ಜನ ಮರಣ ಹೊಂದಿದ್ದಾರೆ. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ನಾಶ ನಮ್ಮ ರೈತರಲ್ಲದೆ, ಪಕ್ಕದ ರಾಜ್ಯದ ರೈತರ ಮೇಲೂ ಪರಿಣಾಮ ಬೀರಿದೆ.
ಮಾನವ-ಆನೆ ಸಂಘರ್ಷಕ್ಕೂ ಮತ್ತು ಅರಣ್ಯ ನಾಶಕ್ಕೂ ಇರುವ ನೇರ ಸಂಬಂಧವನ್ನು ಪಶ್ಚಿಮ ಘಟ್ಟಗಳಲ್ಲಿ ನಮ್ಮ ಅಧ್ಯಯನಗಳು ಎತ್ತಿ ತೋರಿವೆ. ಅದು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಹು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಆನೆಗಳ ಆವಾಸಸ್ಥಾನವನ್ನು ಸಂರಕ್ಷಿಸುವುದು ಮತ್ತು ತುಂಡಾಗದಂತೆ ನೋಡಿಕೊಳ್ಳುವುದು ಮಾನವ-ಆನೆ ಸಂಘರ್ಷವನ್ನು ಕಡಿಮೆಗೊಳಿಸಲು ಇರುವ ಒಂದು ಬಹು ಮುಖ್ಯ ಸೂತ್ರ. ಹು.ಅ.ರೈ.ಹ.ಯೋ ತರಹದ ಅಪಕ್ವ ನಿರ್ಧಾರಗಳ ಬದಲು ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಒಂದು ಸಮಗ್ರ ಯೋಜನೆ ಬೇಕಾಗಿದೆ. ಎಲ್ಲಿ ನಾವು ಅಭಿವೃದ್ಧಿ ಯೋಜನೆಗಳಿಗೆ ಪ್ರಾಮುಖ್ಯತೆ ಕೊಡಬೇಕು ಎಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ಕೊಡಬೇಕು ಎನ್ನುವುದು ಗುರುತುಪಡಿಸಬೇಕು.
ಮಾನವ-ಆನೆ ಸಂಘರ್ಷ ಮತ್ತು ಅರಣ್ಯ ನಾಶಕ್ಕಿರುವ ಸಂಬಂಧದ ಬಗ್ಗೆ ಪ್ರಕಟಿತವಾದ ವೈಜ್ಞಾನಿಕ ಪ್ರಬಂಧ ಓದಲು ಇಚ್ಛಿಸುವವರು ಇಲ್ಲಿ ಅದನ್ನು ಪಡೆದುಕೊಳ್ಳಬಹುದು
https://journals.sagepub.com/doi/full/10.1177/1940082919865959