ಗಿಡ ಮರಗಳಿಂದ ಮಾತ್ರವೇ ಜಾಗತಿಕ ತಾಪಮಾನ ಕಡಿಮೆಯಾಗಲು ಸಾಧ್ಯ. ಗಿಡ ನೆಡಲು ಸಕಾಲವಾದ ಮಳೆಗಾಲವೂ ಆರಂಭವಾಗಿದೆ.ಯಾವ ಗಿಡವನ್ನು ನೆಡಲಿ ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಎದುರಾಗಿದೆ ಎಂದನಿಸುತ್ತಿದೆ.
“ಅಟೋ ಸ್ಟ್ಯಾಂಡಿನಲ್ಲಿ ನೆಡಲು ಒಂದೆರಡು ಅತ್ಯತ್ತಮ ಗಿಡಗಳನ್ನು ಕೊಡುವಿರಾ..? ಮಳೆಗಾಲದ ಆರಂಭಕ್ಕಿಂತ ಮೊದಲೇ ಗಿಡವನ್ನು ನೆಟ್ಟು, ನೀರು ನೀಡಿ, ಬೇಲಿ ಹಾಕುವ ಯೋಜನೆ ಇದೆ.ಪೂರ್ಣ ಮಳೆಗಾಲ ಗಿಡಕ್ಕೆ ಸಿಕ್ಕುವುದರೊಂದಿಗೆ ಒಂದೆರಡು ವರ್ಷಗಳಲ್ಲಿ ನೆರಳನ್ನು, ಹಣ್ಣನ್ನು ಪಡೆಯಲು ಯಾವ ಸಸಿಯನ್ನು ಸೂಚಿಸುತ್ತೀರಿ ಎಂಬ ಕೋರಿಕೆಯಲ್ಲಿ ವೃಕ್ಷ ಪ್ರೇಮ ಅಡಗಿಕೊಂಡಿತ್ತು.
ರಸ್ತೆ ಬದಿಯ ಸಾಲು ಮರಗಳಿಗೆ ಕೊಡಲಿ ಬೀಳುವುದು ಯಾರಿಗೂ ಇಷ್ಟವಿಲ್ಲ.ಮಾತು ಬಾರದ,ಮತದಾನ ಮಾಡದ, ಗಾಳಿ,ನೆರಳು ಮತ್ತು ಅಪರೂಪಕ್ಕೊಮ್ಮೆ ಹಣ್ಣು ಕಾಯಿಗಳನ್ನು ಸವಿಯಲು ನೀಡಿದ ವೃಕ್ಷ ಸಂಪತ್ತನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗು ರಸ್ತೆ ಬದಿಯ ಸಾಮಾನ್ಯ ನಾಗರಿಕಲ್ಲಿ ಇದೀಗ ಮನೆ ಮಾಡಿದೆ.ಅದರಲ್ಲೂ ದಾರಿ ಬದಿಯ ವ್ಯಾಪಾರಸ್ಥರು,ಅಟೋ ಚಾಲಕರು,ಹೋಟೇಲ್, ಅಂಗಡಿ ಮತ್ತು ಗ್ಯಾರೇಜ್ ಮಾಲಿಕರು ಮಾತ್ರವಲ್ಲ ಬಸ್ಸಿಗಾಗಿ ಕಾಯುವ ಮರವನ್ನೇ ಬಸ್ ಸ್ಟ್ಯಾಂಡ್ ಮಾಡಿಕೊಂಡ ಪ್ರಯಾಣಿಕರಂತೂ ತಮ್ಮ ಮರದಡಿಯ ಅನುಭವಗಳನ್ನು ಬಿಸಿಲಿನ ಜೊತೆಗೆ ಮೆಲುಕು ಹಾಕುತ್ತಿದ್ದಾರೆ ಎನ್ನುವುದು ಅಷ್ಟೇ ಸತ್ಯವಾಗಿದೆ.
ಏನೇ ಇರಲಿ,ಮರದಡಿಯ ಸಮೃದ್ಧಿಯ ಜೀವನದ ಬೆಲೆ ಗೊತ್ತಾಗಿದೆ.ಬಿಸಿಲಿನ ಸೆಕೆಗೆ,ಜಾಗತಿಕ ತಪಾಮಾನಕ್ಕೆ ಹಸಿರ ಕವಚ ಪರಿಹಾರ ಎಂಬುವುದನ್ನು ಎಲ್ಲರೂ ಒಪ್ಪಿಕೊಂಡಾಂತಾಗಿದೆ.ಹಾಗಾದರೆ,ತಡವೇಕೆ..? ಬನ್ನಿ ಮಳೆಗಾಲದ ಆರಂಭಕ್ಕೆ ಮುನ್ನವೇ ಒಂದೆರಡು ಗಿಡಗಳನ್ನು ನೆಟ್ಟು ನಮ್ಮೂರಿನ ರಸ್ತೆ ಬದಿಯ ಜೀವ ವೈವಿಧ್ಯತೆಯ ಸಂರಕ್ಷಣೆಗೆ ಅಳಿಲ ಸೇವೆ ಸಲ್ಲಿಸೋಣ.ಒಂದು ವೇಳೆ ಹೊಸ ಗಿಡ ನೆಡದಿದ್ದರೂ ಅಡ್ಡಿ ಇಲ್ಲ.ಕಳೆದ ವರುಷ ನೆಟ್ಟ ಗಿಡದೊಂದಿಗೆ ಮಾತನಾಡುತ್ತಾ ಸುಃಖ ದುಃಖವನ್ನು ಹಂಚಿಕೊಳ್ಳುವುದೂ ಒಳ್ಳೆಯ ಅಭ್ಯಾಸವೇ ಸರಿ.ಏನಂತೀರಿ ನೀವು..?
ನಮ್ಮೂರಿಗೆ ಸೈ ಎನಿಸಿರುವ ಚೆರ್ರಿ
ವೇಗವಾಗಿ ಬೆಳೆಯುವ,ಬೃಹತ್ ಮರವಾಗದ,ಹಣ್ಣನ್ನೂ,ನೆರಳನ್ನೂ ಒದಗಿಸುವ,ಒಂದು ವೇಳೆ ಪ್ರಕೃತಿ ವಿಕೋಪಕ್ಕೆ ಮರ ಧರೆಗುರುಳಿದರೂ ದೊಡ್ಡ ಪ್ರಮಾಣದ ಹಾನಿಯಾಗದ ಗಿಡಗಳನ್ನು ನೆಟ್ಟು ಬೆಳೆಸಲು ನಮ್ಮ ಮುಂದೆ ಹಲವು ಆಯ್ಕೆಗಳಿವೆ.
ಸಸ್ಯ ವಿದೇಶಿಯಾದರೂ,ಸದ್ಯದ ಬಿಸಿ ಏರುವಿಕೆಯ ಕಾಲದಲ್ಲಿ ನಮ್ಮೂರಿಗೆ ಹೊಂದಿಕೊಂಡು,ಮರದ ಆಸು ಪಾಸಿನಲ್ಲಿ ಎ.ಸಿ.ಯ ಅನುಭವ ನೀಡುವ ರಸ್ತೆ ಬದಿ ಮತ್ತು ಮಧ್ಯೆ ನೆಡುವ ಸಸ್ಯಗಳಲ್ಲಿ ಚೆರಿ ಗಿಡಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ.
ಇದು ಬರ್ಡ್ ಚೆರಿ,ಜಮೈಕಾ ಚೆರಿ ಎಂದು ಸಾಮಾನ್ಯವಾಗಿ ಕರೆಯಲ್ಪಡುತ್ತದೆ.ಮುಂಟಿಂಗೀಯ ಕಲಬುರ (Muntingia calabura) ಎಂಬ ವೈಜ್ಞಾನಿಕ ಹೆಸರಿದೆ.ಕನ್ನಡದಲ್ಲಿ ಗಸಗಸೆ ಮರ ಎಂದೂ ಕೆರೆಯುತ್ತಾರೆ.ಮೆಕ್ಸಿಕೊ ಮತ್ತು ಬೊಲಿವಿಯಾ ದೇಶವು ತವರೂರಾಗಿದ್ದು ಇದೀಗ ಪ್ರಪಂಚದ ಎಲ್ಲಾ ಭೂಖಂಡಗಳಲ್ಲೂ ವ್ಯಾಪಿಸಿದೆ ಈ ನೆರಳು ಮರ.
ಮೃದು ಮರವಿದು.ಕೆಂಬಣ್ಣದ,ಅತ್ಯುತ್ತಮ ಬೆಲ್ಲದ ರುಚಿಯ ಸಣ್ಣ ಹಣ್ಣುಗಳನ್ನು ವರ್ಷ ಪೂರ್ತಿ ನೀಡುತ್ತದೆ.ಬಾನಾಡಿಗಳಿಗಂತೂ ಚೆರಿ ಹಣ್ಣುಗಳೆಂದರೆ ಬಲು ಇಷ್ಟ.ಕೋಗಿಲೆ,ಬುಲ್ ಬುಲ್ ಹಾಗೂ ಉದ್ದ ಕೊಕ್ಕಿನ ಜೇನು ಹಕ್ಕಿಗಳಂತೂ ಮರವನ್ನು ಬಿಟ್ಟುಹೋಗಲಾರವು.!
ಸಣ್ಣ ಗಾತ್ರದ ಧಾರಾಳ ಎಲೆಗಳನ್ನೂ,ಸಾಕಷ್ಟು ಗೆಲ್ಲುಗಳನ್ನೂ ಹೊಂದಿರುವುದರಿಂದ ಇದು ಸಾಮಾನ್ಯ ಎತ್ತರದಲ್ಲಿ ವಿಸ್ತಾರವಾಗಿ ಬೆಳೆಯುತ್ತದೆ.ಒಂದೆರಡು ವರ್ಷಗಳ ಕಾಲ ನೀರು ಕೊಟ್ಟರೆ ಸಾಕು.ಗೊಬ್ಬರ ಬೇಕೆಂದೇನಿಲ್ಲ.ಗಿಡಗಳಿಗೆ ರೋಗದ ತೊಂದರೆಯೂ ಹೆಚ್ಚಿಲ್ಲ. ಪಾರೆ ಪ್ರದೇಶಗಳೆಡೆಗಳಲ್ಲಿ ಸಿಗುವ ಅಲ್ಪ ಪ್ರಮಾಣದ ಮಣ್ಣಿನಲ್ಲೂ,ಸಿಮೆಂಟ್,ಡಾಂಬರು ಬೆರೆತಿದ್ದು ಯಾರಿಗೂ ಬೇಡವಾದ ರೀತಿಯಲ್ಲಿ ಡಂಪ್ ಮಾಡಿದ ಮಣ್ಣಿನಲ್ಲಿಯೂ ಬೆಳೆಯುವ ಸ್ವಭಾವ ಚೆರಿಗಿದೆ.ಆದ್ದರಿಂದಲೇ ಕೆಲಸ ಮುಗಿದ ರಸ್ತೆ ಬದಿಗಳಲ್ಲಿ ನಾವು ನೆಟ್ಟು ಬೆಳೆಸದೆ ಪಕ್ಷಿಗಳ ಮೂಲಕ ಬೀಜ ಪ್ರಸಾರವಾದ ಚೆರಿ ಗಿಡಗಳನ್ನು ಕೆಲವೆಡೆಗಳಲ್ಲಿ ಕಾಣಲು ಸಾಧ್ಯವಿದೆ.
ಹೀಗೆ,ಹೆಚ್ಚಿನ ಆರೈಕೆ ಇಲ್ಲದೆ ಮೂರ್ನಾಲ್ಕು ಮೀಟರ್ ಮಾತ್ರ ಬೆಳೆಯುವ ಒಂದು ವಿಶಿಷ್ಟ ಸಸ್ಯವಿದು.ಗಿಡ ನೆಡಲು ಹೆಚ್ಚು ಸ್ಥಳ ಇಲ್ಲದ ರಸ್ತೆ ಬದಿಗಳಲ್ಲಿ ಇರುವ ಸ್ಥಳವನ್ನು ಸದುಪಯೋಗ ಪಡಿಸಿಕೊಳ್ಳಲು ಸೂಕ್ತ ಆಯ್ಕೆ ಇದು.
ಇನ್ನು ವಿದೇಶಿ ಎನ್ನುವವರಿಗೆ ಚೆರಿಯೇ ಆಗಬೇಕೆಂದೇನಿಲ್ಲ.ರೆಂಜ,ಹೊಳೆ ಧಾಸವಾಳ,ಅತ್ತಿ,ನೆಲ್ಲಿ,ಕನಿಕೊನ್ನೆ,ಹೊಂಗೆ,ಪೊನ್ನೆ,ನೇರಳೆ ಮುಂತಾದ ಸ್ಥಳೀಯ ವೆರೈಟಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಇವುಗಳು ಬೆಳೆಯುತ್ತಿರುವಾಗ ಟ್ರಿಮ್ ಮಾಡುತ್ತಾ ಬಂದರೂ ನೆರಳಿಗೆ,ಹಣ್ಣಿಗೆ ಮತ್ತು ಪರಿಶುಧ್ಧ ಗಾಳಿಗೆ ಕೊರತೆ ಇರದು.