ರೈತ ಉತ್ಪಾದಕ ಕಂಪನಿಗಳಿಂದ ರೈತರಿಗೆ ಅನುಕೂಲವಾಗಿದ್ದೀಯೇ ?

1
ಲೇಖಕರು: ಪ್ರಶಾಂತ್‌ ಜಯರಾಮ್

ರೈತರು ಬೆಳೆದ ಬೆಳೆಯನ್ನು ನೇರ ವಹಿವಾಟು ಮಾಡಲು ರೈತರೇ ಕಂಪನಿ ಕಟ್ಟಿ,ರೈತರ ಬೆಳೆಯನ್ನು ರೈತ ಕಂಪನಿ ಮೂಲಕ ಖರೀದಿ  ಸಂಸ್ಕರಣೆ,ಮಾರಾಟ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ (FPO) ಅಥವಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ(FPC) ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ರೀತಿಯ ಕಂಪನಿಗಳನ್ನು ಕಟ್ಟಲು ರೈತರಿಂದ ಷೇರು ಹಣ ಸಂಗ್ರಹ ಮಾಡಿ ಕಂಪನಿಗಳನ್ನು ಸಾಕಷ್ಟು ಕಡೆ ನೋಂದಣಿ ಮಾಡಿಸಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿರುತ್ತದೆ.

ಹಲವು ಕಂಪನಿ ನೋಂದಣಿಯಾದ ನಂತರ ಯಾವುದೇ ಕಾರ್ಯ ಚಟುವಟಿಕೆ ನೆಡೆಸಲು ಸಾಧ್ಯವಾಗಿಲ್ಲ,ಕೆಲವು ಕಂಪನಿಗಳು ಸರ್ಕಾರದಿಂದ  ಆರ್ಥಿಕ ನೆರವು( 2 ರಿಂದ 3 ವರ್ಷ ) ದೊರಕುವವರಗೆ ನಡದು ನಿಂತು ಹೋಗಿದೆ,ಇನ್ನೂ ಬೆರಳೆಣಿಕೆಯಷ್ಟು ಮಾತ್ರ ತಮ್ಮ ವೈಯಕ್ತಿಕ ಸಂಪರ್ಕ,ಸ್ವಂತ ಸಂಪನ್ಮೂಲ ಬಳಸಿ ನಡಯುತ್ತಿವೆ. ಒಟ್ಟಾರೆ ಈ ಯೋಜನೆಯಿಂದ ಸಾಧ್ಯದ ಮಟ್ಟಿಗೆ ಗಮನಿಸಿದಾಗ ರೈತ ಸಮುದಾಯಕ್ಕೆ ಅನುಕೂಲವಾಗಿಲ್ಲ.

ಈ ರೀತಿ ಪ್ರಾರಂಭಗೊಂಡ ಬಹುತೇಕ ಕಂಪನಿಗಳು ರೈತರ ಉತ್ಪನ್ನ ಮಾರಾಟ ಮಾಡಲು ವಿಫಲವಾಗಿವೆ, ಇದಕ್ಕೆ ಬದಲಾಗಿ ಖಾಸಗಿ ಕಂಪನಿಗಳು ತಯಾರು ಮಾಡುವ ರಸಗೊಬ್ಬರ,ಬೀಜ,ಕೀಟನಾಶಕ, ಕ್ರಿಮಿನಾಶಕ,ಕಳೆನಾಶಕ,ರಸವಾರಿ ಗೊಬ್ಬರ,ಟ್ರ್ಯಾಕ್ಟರ್, ಟಿಲ್ಲರ್,ಇತ್ಯಾದಿ ಕೃಷಿ ಉಪಕರಣ ಮಾರಾಟ ಮಾಡಲು ಸೀಮಿತವಾಗಿವೆ.ಜೊತೆಗೆ ಖಾಸಗಿ ಕಂಪನಿಗಳ ಬ್ರಾಂಡೆಡ್ ದಿನಸಿ ಪದಾರ್ಥ,ಸೋಪ್,ಪೇಸ್ಟ್ ಇತ್ಯಾದಿಗಳನ್ನು ರೈತ ಸದಸ್ಯರಿಗೆ ಮಾರಾಟ ಮಾಡಲಾಗುತ್ತಿದೆ.

ರೈತ ಕಂಪನಿಗಳು ಖಾಸಗಿ ಕಂಪನಿಗಳಿಂದ ನೇರ ಖರೀದಿ ಮಾಡುವುದರಿಂದ ರೈತರಿಗೆ ಲಾಭವಾಗಲಿದೆ ಎಂಬ ವಾದ ಸಮಂಜಸವಾಗಿರುವುದಿಲ್ಲ. ರೈತರು ತಮ್ಮ ಹಳ್ಳಿಗಳಲ್ಲಿ ನಡೆಸುತ್ತಿರುವ ಗೊಬ್ಬರ ಮತ್ತು ದಿನಸಿ ಅಂಗಡಿಗಳ ವ್ಯಾಪಾರಕ್ಕೆ ಧಕ್ಕೆಯಾಗಿ ಅವು ಮುಚ್ಚುವ ಸ್ಥಿತಿ ತಲುಪಬಹುದು.

ಕೃಷಿ ಉಪಕರಣಗಳನ್ನು  ಕೃಷಿ ಯಂತ್ರ ಧಾರೆ ಮೂಲಕ ಬಾಡಿಗೆ ನೀಡಲಾಗುತ್ತಿತ್ತು, ಬೀಜ,ಗೊಬ್ಬರ, ಇತ್ಯಾದಿ ಕೊಡಲು ಕೃಷಿ ಸಂಪರ್ಕ ಕೇಂದ್ರವಿತ್ತು.ರೈತ ಕಂಪನಿಯ ಮೂಲ ಉದ್ದೇಶ ವಿಫಲವಾಗಿ,ರೈತರು ಉತ್ಪಾದನೆ ಮಾಡಿ ಮಾರಾಟ ಮಾಡಬೇಕಾಗಿದ ಯೋಜನೆ ಉಲ್ಟಾ ಆಗಿ,ಖಾಸಗಿ ಕಂಪನಿಗಳು ರೈತರನ್ನು ನೆಟವರ್ಕ್ ಮಾಡಿಕೊಂಡು ಅವುಗಳ ಉತ್ಪನ್ನಗಳನ್ನು ರೈತರಿಗೆ ಮಾರಾಟ ಮಾಡಲು ಯಶಸ್ವಿಯಾಗುತ್ತಿವೆ.

ಒಂದು ಅರ್ಥದಲ್ಲಿ ಈ ಯೋಜನೆ ವೈಯಕ್ತಿಕವಾಗಿ ಕೆಲವು ಖಾಸಗಿ ವ್ಯಕ್ತಿಗಳು ರೈತ ಕಂಪನಿ ಹೆಸರಿನಲ್ಲಿ ಪ್ರಯೋಜನ ಪಡೆದಿರಬಹುದು. ಆದರೆ ರೈತ ಸಮುದಾಯಕ್ಕೆ ಅನುಕೂಲವಾಗಿಲ್ಲ.ಈ ಯೋಜನೆ ರೈತರ ಪಾಲಿಗೆ ಆಶಾದಾಯಕವಾಗಿ ಕಾಣಿಸದೆ ಇರುವುದಕ್ಕೆ ಸಾಕಷ್ಟು ಉದಾಹರಣೆ ನೀಡಬಹುದು.

ಕೆಲವು ಕಂಪನಿಗಳು ಲಾಭ ತೋರಿಸಿದರೂ ಅವುಗಳು ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿರುತ್ತದೆ. ಅವುಗಳು ಸರ್ಕಾರದಿಂದ ದೊರೆಯುವ ಆರ್ಥಿಕ ನೆರವು,ಗೋಡೌನ್ ಕಟ್ಟಲು,ವಾಹನ ಖರೀದಿಸಲು, ಕೋಲ್ಡ್ ಸ್ಟೋರೇಜ್,ಇನ್ನಿತರೇ ಸೌಲಭ್ಯ ಪಡೆಯಲು ರೈತರನ್ನು ತಮ್ಮ ಸ್ವಂತ ದುಡ್ಡು ಹಾಕಿ ಸದಸ್ಯರನ್ನಾಗಿ ಮಾಡಿಕೊಂಡು ಯೋಜನೆಯ ಪ್ರಕ್ರಿಯೆನ್ನು ನಾಮಕವಸ್ಥೆಗೆ ಮುಗಿಸಿ ರೈತ ಕಂಪನಿ ಸ್ಥಾಪಿಸಿ ಖಾಸಗಿ ಕಂಪನಿಗಳ ರೀತಿ ತಮ್ಮ ವಹಿವಾಟು ನೆಡೆಸುತ್ತಿವೆ,ಆ ಕಂಪನಿಗಳು ಮಾರಾಟ ಮಾಡುವ ಉತ್ಪನ್ನವನ್ನು ಆ ಕಂಪನಿಯ ರೈತ ಸದಸ್ಯರು ಬೆಳೆಯುತ್ತಿರುವುದಿಲ್ಲ.ರೈತರು ರೇಷ್ಮೆ ಮನೆ ಕಟ್ಟಲು ಸರ್ಕಾರದಿಂದ ಸಿಗುವ ಸಬ್ಸಿಡಿ ತೆಗೆದುಕೊಂಡ ನಂತರ ಅವುಗಳನ್ನು ಗೋಡೌನ್,ಕೊಟ್ಟಿಗೆ, ಮನೆಯಾಗಿ ಬಳಕೆ ಮಾಡಿಕೊಳ್ಳುವ ರೀತಿ,ರೈತ ಕಂಪನಿ ಕೂಡ ಸಿಗುವ ಸೌಲಭ್ಯ ಉಪಯೋಗ ಮಾಡಿಕೊಳ್ಳುತ್ತಿದೆ ಅಷ್ಟೇ.ಇದನ್ನು ತಪ್ಪು ಎಂದು ಹೇಳಲಾಗುವುದಿಲ್ಲ,ಸರ್ಕಾರಿ ವ್ಯವಸ್ಥೆ ಕೂಡ ಅಗೆಯೇ ಇದೆ.

FPO ಸಗಟು ವ್ಯಾಪಾರ ಪ್ರೋತ್ಸಾಹಿಸುವುದರಿಂದ ( Whole sale) ರೈತರನ್ನು  ಏಕಬೆಳೆ ಪದ್ದತಿಗೆ(Mono crop) ಸರ್ಕಾರವೇ ಉತ್ತೇಜನ ಕೊಟ್ಟಂತಾಗುವುದರಿಂದ ಸಮಗ್ರ ಕೃಷಿ, ವೈವಿಧ್ಯತೆ ಕೃಷಿಗೆ ಮಾರಕವಾಗಬಹುದು.

ರೈತ ಕಂಪನಿಗಳು ರೈತರಿಂದ ಉತ್ಪನ್ನ ಪಡೆದು ಅವರಿಗೆ ತಕ್ಷಣ ಹಣ ಪಾವತಿಸುವಷ್ಟು ಶಕ್ತವಾಗಿದ್ದೀಯೇ?

ಉತ್ಪನ್ನ ಖರೀದಿಸಿ ಅವುಗಳನ್ನು ಮೌಲವರ್ಧನೆ ಮಾಡಲು ಬೇಕಿರುವ ತಾಂತ್ರಿಕ ಕೌಶಲ್ಯ ಮತ್ತು ಯಂತ್ರಕ್ಕೆ ಬೇಕಾದ ಬಂಡವಾಳ ಪೂರೈಕೆ ಹೇಗೆ?

ಮೌಲ್ಯವರ್ಧನೆ ಮಾಡಿದ ನಂತರ ಬ್ರಾಂಡಿಂಗ್ ಮಾಡಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳ ಜೊತೆಗೆ ಪೈಪೋಟಿ ನೀಡಲು ಸಾಧ್ಯವೇ?ಅವುಗಳು ನೀಡುವ ಜಾಹಿರಾತು,ನೂರಾರು ಕೋಟಿ ಹೊಡಿಕೆ,ವ್ಯಾಪಾರಿಗಳಿಗೆ ಅವು ತಮ್ಮ ಉತ್ಪನ್ನಗಳನ್ನು ಸಾಲದ ರೂಪದಲ್ಲಿ ನೀಡುವುದು,ಇತ್ಯಾದಿ ನಡುವೆ ರೈತ ಕಂಪನಿ ಕೆಲವು ಲಕ್ಷ ರೂಪಾಯಿಗಳ ಅಲ್ಪ ಬಂಡವಾಳದಲ್ಲಿ ಸ್ಪರ್ಧೆ ನೀಡುವುದು ಹೇಗೆ?

ರೈತರು ಬ್ರಾಂಡ್ ಮಾಡಿದ ಉತ್ಪನ್ನವನ್ನು ಮಾರಾಟ ಮಾಡಲು ಸರ್ಕಾರ ಯಾವುದೇ ಪ್ರತ್ಯೇಕ ವೇದಿಕೆ ಕಲ್ಪಿಸಿಕೊಟ್ಟಿಲ್ಲ,ಪಡಿತರ ಅಂಗಡಿ, ಹಾಲಿನ ಡೈರಿ ಇತ್ಯಾದಿ ಕಡೆ ಮಾರಾಟದ ವೇದಿಕೆ ಕಲ್ಪಿಸಲು ಅವಕಾಶವಿದೆ.ಗ್ರಾಹಕರಿಗೆ ತಲುಪಿಸಲು ಅಂಗಡಿ ಮಳಿಗೆ ಮಾಡಲು ಹಣ ಹೊಂದಿಸುವುದು ಹೇಗೆ?

ಈ ಯೋಜನೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ಕೆಲವೊಂದು ವಿಚಾರಗಳನ್ನು ಗಮನಿಸಬೇಕು, ಆಗ ನಮ್ಮಗೆ ರೈತ ಕಂಪನಿಯ ಕನ್ನಡಿಯೊಳಗಿನ ಗಂಟು ಅರ್ಥವಾಗುತ್ತದೆ.

ಇವರೆವಿಗೂ ಎಷ್ಟು ರೈತ ಕಂಪನಿ ನೋಂದಣಿಯಾಗಿದೆ?

ಅದರಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತಿದೆ?

ರೈತ ಕಂಪನಿ ನೆಡೆಸಲು ಇರುವ ತೊಂದರೆಗಳೇನು?

ರೈತ ಕಂಪನಿಗಳು ಎಷ್ಟು ರೈತರಿಂದ ನೇರವಾಗಿ ಉತ್ಪನ್ನ ಖರೀದಿ ಮಾಡಿ ಹಣ ಪಾವತಿ ಮಾಡಿದೆ?

ರೈತರಿಗೆ ತಮ್ಮ ಉತ್ಪನ್ನವನ್ನು ಹೊರಗಡೆ ಮಾರಾಟ ಮಾಡುವುದಕ್ಕಿಂತ ರೈತ ಕಂಪನಿಯಲ್ಲಿ ಹೆಚ್ಚು ಬೆಲೆ ದೊರಕಿದ್ದಿಯೇ?

ರೈತ ಕಂಪನಿ ಅಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ರೈತರ ಉತ್ಪನ್ನವನ್ನು ಹೇಗೆ ಖರೀದಿಸಲು ಸಾಧ್ಯವಾಗುತ್ತದೆ?

ರೈತರ ಉತ್ಪನ್ನವನ್ನು ದಾಸ್ತಾನು ಮಾಡಲು ಗೋಡೌನ್ ಅವಶ್ಯಕತೆ ಹೇಗೆ? ಈಗಾಗಲೇ ದಾಸ್ತಾನು ಮಾಡಲು ಎಪಿಎಂಸಿ ಗಳಲ್ಲಿ ಅವಕಾಶವಿತ್ತು ಮತ್ತು ದಾಸ್ತಾನು ಇಟ್ಟು ಬ್ಯಾಂಕ್ ನಲ್ಲಿ ಸಾಲ ಪಡೆಯುವ ಸೌಲಭ್ಯವಿತ್ತು.

ರೈತರ ಉತ್ಪನ್ನವನ್ನು ರೈತ ಕಂಪನಿಗಳು ಎಷ್ಟು ಪ್ರಮಾಣದಲ್ಲಿ ಮಾರಾಟ ಮಾಡಿದೆ ಮತ್ತು ಅದರಲ್ಲಿ ಬಂದ ಲಾಭ ಎಷ್ಟು? ರೈತ ಸದಸ್ಯರಿಗೆ ಎಷ್ಟು ಲಾಭದ ಹಣ ಕೊಡಲಾಗಿದೆ?

ಸಹಕಾರ ಬ್ಯಾಂಕ್ ಸದಸ್ಯತ್ವ ಹೊಂದಿರುವ ಗ್ರಾಹಕರಿಗೆ ಕೂಡ ರೂ ಸಾವಿರ ಷೇರು ಮೊತ್ತಕ್ಕೆ ಒಂದಷ್ಟು ಡಿವಿಡೆಂಡ್, ಗಿಫ್ಟ್, ಸ್ವೀಟ್ ಬಾಕ್ಸ್ ಕೊಡಲಾಗುತ್ತಿದೆ, ಅದೇ ರೀತಿ ರೈತ ಕಂಪನಿ ಕೂಡ ನೂರಾರು ರೂಗಳ ಅಲ್ಪ ಮೊತ್ತದ ಚೆಕ್ ವಿತರಣೆ ಮಾಡಿ ರೈತರಿಗೆ ಭಾರಿ ಅನುಕೂಲ ಮಾಡಿಕೊಟ್ಟಿರೋ ರೀತಿ ಬಿಂಬಿಸಿಕೊಳ್ಳುತ್ತವೆ,ಇದರಿಂದ ರೈತರಿಗೆ ಯಾವ ಭಾಗ್ಯದ ಬಾಗಿಲು ತೆರೆಯುವುದಿಲ್ಲ.

ಉದಾಹರಣೆಗೆ ನೋಡುವುದಾದರೆ ಮಂಡ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಕಬ್ಬು ಮತ್ತು ತೆಂಗನ್ನು ಬೆಳೆಯುತ್ತಾರೆ,ಈ ಜಿಲ್ಲೆಗಳಲ್ಲಿ ಕಬ್ಬು ಮತ್ತು ತೆಂಗನ್ನು ಎಷ್ಟು ರೈತರಿಂದ ಖರೀದಿ ಮಾಡಿ ಬೆಲ್ಲ,ಕೊಬ್ಬರಿ ಎಣ್ಣೆ ಮಾಡಿರುವ ರೈತ ಕಂಪನಿಗಳಿವೆ?ಸಾಮಾನ್ಯವಾಗಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಜೋಳ, ಭತ್ತವನ್ನು ಎಷ್ಟು ರೈತರಿಂದ ಪಡೆದು ಅದನ್ನು ಮೌಲ್ಯವರ್ಧನೆ ಮಾಡಿ ಯಶಸ್ಸು ಸಾಧಿಸಿವೆ? ಕೋಳಿ ಮತ್ತು ಕುರಿ ಸಾಕಾಣಿಕೆದಾರರು ರೈತ ಕಂಪನಿ ಮಾಡಿ ಮಳಿಗೆ ತೆರೆದು ಮಾಂಸವನ್ನು ನೇರ ಗ್ರಾಹಕರಿಗೆ ತಲುಪಿಸಲಾಗಿದೆ?

ಮೇಲೆ ಪ್ರಸ್ತಾಪ ಮಾಡಲಾದ ವಿಚಾರಗಳು  ಪ್ರಾಯೋಗಿಕವಾಗಿ ಏಕೆ ಅನುಷ್ಠಾನ ಮಾಡಲು ಆಗುತ್ತಿಲ್ಲ ಎಂಬ ಬಗ್ಗೆ ನಾವು ಆತ್ಮವಂಚನೆ ಮಾಡಿಕೊಳ್ಳದೇ ಮುಕ್ತವಾಗಿ ಚರ್ಚೆ ಮಾಡಬೇಕು.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ರೈತ ಕಂಪನಿಗಳು ಕೂಡ ಸದೃಢವಾಗಿ ನಡೆಸಲಾಗುತ್ತಿಲ್ಲದ ಸತ್ಯವನ್ನು ವೈಯಕ್ತಿಕವಾಗಿ ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಕಾರಣಾಂತರಗಳಿಂದ ಆ ಕಂಪನಿಗಳು ಬಹಿರಂಗವಾಗಿ ಹೇಳಿಕೊಳ್ಳಲಾಗುತ್ತಿಲ್ಲ.

ರೈತರ ಕಲ್ಯಾಣದ ಹೆಸರಿನಲ್ಲಿ ಸರ್ಕಾರದ ಯೋಜನೆಗಳನ್ನು ಆರ್ಥಿವಾಗಿ ಬಲಾಢ್ಯರಾಗಿರುವ ವ್ಯಕ್ತಿಗಳು ಮಾತ್ರ ಅನುದಾನ ಪಡೆದು ನಡೆಸುವ ಕಂಪನಿಗಳು ವೈಯಕ್ತಿಕವಾಗಿ ಅವರಿಗೆ ಲಾಭ ತಂದುಕೊಡಬಹುದೇ ಹೊರತು ರೈತ ಸಮುದಾಯಕ್ಕೆ ಯಾವ ಅನುಕೊಲವಾಗಿಲ್ಲದಿರುವುದನ್ನು ಗಮನಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  9342434530

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

1 COMMENT

  1. ಸರ್ಕಾರ ಉತ್ತೇಜಿಸುವ ಕೆಲಸ ಮಾಡಬಹುದು. ಮೂಲ ಬಂಡವಾಳ ಕೊಡಬಹುದು. ರೈತ ಉತ್ಪಾದಕ ಕಂಪನಿಯನ್ನು ಯಶಸ್ವಿಯಾಗಿ ನಡೆಸಿ, ಲಾಭದ ಹಳಿಗೆ ತರುವ ಹೊಣೆ ರಥ ಉತ್ಪಾದನಾ ಕಂಪನಿಯ ಸದಸ್ಯರು ಹಾಗೂ ಶೇರುಧಾರದಾಗಿರುತದೆ.
    ಬೆಳೆಗೆ ಬೇಕಾದ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಬಳಸುವುದು, ಬೆಲೆ ಬೆಳೆಯಲು ಬೇಕಾದ ಒಳ ಹರಿವುಗಳನ್ನು ಉತ್ಪಾದಕ ಕಂಪನಿಯೊಂದಿಗೆ ನೇರ ಸಂಪರ್ಕ ಸಾಧಿಸಿ ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳನ್ನು ಒದಗಿಸುವುದು, ನೇರ ಮಾರಾಟಕ್ಕೆ ಮಾರ್ಗ ಹುಡುಕುವುದು, ಉಪ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟ ಇವುಗಳು ಕಂಪನಿಯ ಸದಸ್ಯರುಗಳ ಮೂಲಕವೇ ನಡೆಯ ಬೇಕು.ಇದು ಬಿಟ್ಟು ಬೇರೆ ಉದ್ದೇಶಗಳಿಗೆ ಗಮನ ಹರಿಸಿದರೆ ರಥ ಉತ್ಪಾದಕ ಕಂಪನಿಗಳು ಅವನತಿಯ ಹಾದಿ ಹಿಡಿಯುತ್ತವೆ. ಯಾರಾದರೂ ಅಟ್ಟ ಹತುವವನಿಗೆ ಏಣಿ ಹಾಕಬಹುದೇ ಹೊರತು, ಅವರ ಎಲ್ಲ ಭಾರಗಳನ್ನು ಹೊರಲು ಸಾದ್ಯವಿಲ್ಲ. ಸರ್ಕಾರ ಮೂಲ ಸೌಕರ್ಯ ಒದಗಿಸಿ, ಉತ್ತಮ ಜವಾಬ್ದಾರಿ ನಿಭಾಯಿಸಿ ದೆ. ರೈತ ಉತ್ಪಾದಕ ಕಂಪನಿಗಳು ಲಾಭದ ಹಳಿಯಲ್ಲಿ ನಡೆಸಬೇಕು, ಇದು ರೈತ ರದೆ ಜವಾಬ್ದಾರಿ.

LEAVE A REPLY

Please enter your comment!
Please enter your name here