ಸೂರ್ಯಕಾಂತಿ ನಮ್ಮ ದೇಶದ ಹಾಗೂ ರಾಜ್ಯದ ಪ್ರಮುಖವಾದ ಎಣ್ಣೆಕಾಳು ಬೆಳೆ. ಇದನ್ನು ಕರ್ನಾಟಕ ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಸುಮಾರು 1.36 ಲಕ್ಷ ಟನ್ ಉತ್ಪಾದಿಸಲಾಗುತ್ತಿದೆ, ಹಾಗೂ ಇದರ ಉತ್ಪಾದಕತೆ ಪ್ರತಿ ಹೆಕ್ಟೇರಿಗೆ 850 ಕೆ.ಜಿ./ ಹೆಕ್ಟೇರ್‌ಯಷ್ಟಿದೆ. ಈ ಬೆಳೆಯನ್ನು ಭಾರತದಲ್ಲಿ ಸುಮಾರು 2.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.
ಭಾರತದಲ್ಲ್ಲಿ ಸೂರ್ಯಕಾಂತಿ ಬೆಳೆಯ ಉತ್ಪಾದಕತೆ ಪ್ರತಿ ಹೆಕ್ಟೇರಿಗೆ ಸರಾಸರಿ 923 ಕೆ.ಜಿ./ ಇದ್ದು ಸೂರ್ಯಕಾಂತಿ ಬೆಳೆಯುವ ಇತರ ಪ್ರಗತಿ ಪರ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆ. ದೇಶದ ಸೂರ್ಯಕಾಂತಿ ಬೆಳೆಯ ಒಟ್ಟು ವಿಸ್ತೀರ್ಣದಲ್ಲಿ ಶೇಕಡ 60ಕ್ಕಿಂತ ಹೆಚ್ಚು ವಿಸ್ತೀರ್ಣ ಹಾಗೂ ಸುಮಾರು ಶೇಕಡ 35ಕ್ಕಿಂತ ಹೆಚ್ಚು ಉತ್ಪಾದನೆ ಕರ್ನಾಟಕದಲ್ಲಿ ಇರುವುದರಿಂದ ಕರ್ನಾಟಕವು “ಸೂರ್ಯಕಾಂತಿ ರಾಜ್ಯ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೂರ್ಯಕಾಂತಿ ಎಣ್ಣೆಯು ಒಳ್ಳೆಯ ಗುಣಮಟ್ಟದಾಗಿದ್ದು ಪ್ರಪಂಚದ ಎಲ್ಲಾ ದೇಶಗಳ ಮನಗೆದ್ದಿರುವುದರಿಂದ ಈ ಬೆಳೆಯ ಉತ್ಪಾದಕತೆಯ ಮಟ್ಟವನ್ನು ಹೆಚ್ಚಿಸಲು ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ.
ಸೂರ್ಯಕಾಂತಿ ಬೆಳೆಯನ್ನು ಸುಮಾರು 40 ವರ್ಷಗಳಿಂದಲೂ ನಮ್ಮ ದೇಶದಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಈ ಬೆಳೆಯ ಬೇಸಾಯ ಇತರೆ ಎಣ್ಣೆಕಾಳು ಬೆಳೆಗಳಿಗೆ ಹೋಲಿಸಿದರೆ ಬಹಳ ಇತ್ತೀಚಿನದು. ಆದರೂ, ಕಡಿಮೆ ಅವಧಿಯಲ್ಲಿಯೇ ಇದು ನಮ್ಮ ರೈತರನ್ನು ಆಕರ್ಷಿಸಿರುತ್ತದೆ. ಇದಕ್ಕೆ ಮುಖ್ಯ ಕಾರಣಗಳು :
- ಇದು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದಾದ ಬೆಳೆ
- ಶೀಘ್ರವಾಗಿ ಕೊಯ್ಲಿಗೆ ಬರುವ ಸಾಮರ್ಥ್ಯ
- ವಿವಿಧ ಬಗೆಯ ಮಣ್ಣುಗಳಲ್ಲಿ (ಕಪ್ಪು, ಕೆಂಪು, ಮರಳು ಮಿಶ್ರಿತ ಕೆಂಪು) ಬೆಳೆಯಬಹುದಾದ ಗುಣ
- ಶುಷ್ಕ ವಾತಾವರಣಕ್ಕೆ ಹೊಂದಿಕೊಳ್ಳುವ ಶಕ್ತಿ
- ಅಧಿಕ ಇಳುವರಿ ಕೊಡುವ ಸಾಮರ್ಥ್ಯ
- ಬೀಜದಲ್ಲಿ ಹೆಚ್ಚಿನ ಪುಷ್ಟಿದಾಯಕವಾದ ಮತ್ತು ಉತ್ತಮ ದರ್ಜೆಯ ಎಣ್ಣೆಯ ಅಂಶ
- ಸುಲಭ ಬೇಸಾಯ ಮತ್ತು ಅಧಿಕ ಆದಾಯ
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸೂರ್ಯಕಾಂತಿ ಸಂಕರಣ ತಳಿಗಳ ಅಭಿವೃದ್ಧಿ ಕಾರ್ಯವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಕೈಗೊಂಡಿತು. 1980ರಲ್ಲಿ ಭಾರತದ ಮೊಟ್ಟ ಮೊದಲ ಸೂರ್ಯಕಾಂತಿ ಸಂಕರಣ ತಳಿ ಬಿ.ಎಸ್.ಹೆಚ್-1ನ್ನು ರಾಷ್ಟ್ರ ಮಟ್ಟದಲ್ಲಿ ಸಾಗುವಳಿಗಾಗಿ ಬಿಡುಗಡೆ ಮಾಡಲಾಯಿತು. ಒಂದು ಪ್ರಮುಖ ಮೈಲಿಗಲ್ಲಾಗಿ ದೇಶದಲ್ಲಿನ ಇತರೆ ಸರ್ಕಾರಿ ಹಾಗೂ ಸರ್ಕಾರೇತರ ಸಂಶೋಧನಾ ಸಂಸ್ಥೆಗಳಲ್ಲಿಯೂ ಸಹ ಸಂಕರಣ ತಳಿಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಂಕರಣ ಯುಗಕ್ಕೆ ನಾಂದಿಯಾಯಿತು. ತದನಂತರ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಿಂದ ಹಲವಾರು ಸಂಕರಣ ತಳಿಗಳನ್ನು ಬಿಡುಗಡೆ ಮಾಡಲಾಗಿದೆ (ಕೋಷ್ಟಕ-1 ಮತ್ತು 2).
ಕೋಷ್ಟಕ-1: ಸೂರ್ಯಕಾಂತಿ ಸಂಕರಣ ತಳಿಗಳ ವೈಶಿಷ್ಟತೆಗಳು
ಕೋಷ್ಟಕ-2: ಸೂರ್ಯಕಾಂತಿ ಸಂಕರಣ ತಳಿಗಳ ವಿಸ್ತೀರ್ಣ ಹಾಗೂ ಉತ್ಪಾದನೆ
ಸಸ್ಯ ಸಂರಕ್ಷಣೆ
ಸೂರ್ಯಕಾಂತಿ ಬೆಳೆಗೆ, ಕೀಟ ಮತ್ತು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಅವುಗಳ ಹತೋಟಿಗಾಗಿ, ಶಿಫಾರಸ್ಸು ಮಾಡಿರುವ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳುವುದು ಅತ್ಯವಶ್ಯಕ. ಬೆಳೆಯು ಹೂವಿನ ಹಂತದಲ್ಲಿದ್ದಾಗ ಎಂಡೋಸಲ್ಫಾನ್ ಬಿಟ್ಟು ಬೇರೆ ರಾಸಾಯನಿಕ ವಸ್ತುಗಳಿಂದ ಸಿಂಪರಣೆ ಮಾಡಬಾರದು.
ಮುಖ್ಯವಾದ ಸೂಚನೆ
ಸೂರ್ಯಕಾಂತಿ ಬೆಳೆಗೆ ಪಕ್ಷಿಗಳ (ಗಿಳಿ) ಹಾವಳಿಯು ಕಾಳು ಕಟ್ಟುವ ಸಮಯದಿಂದ ಕಟಾವಿನವರೆಗೆ ಅತಿ ಹೆಚ್ಚು. ಈ ಹಾವಳಿಯನ್ನು ಹತೋಟಿಯಲ್ಲಿಡಲು ಈ ಸಮಯದಲ್ಲಿ ಕಾವಲು ಇಡುವುದು ಸೂಕ್ತ. ಈ ಹಾವಳಿಯು ಬೆಳಗಿನ ಬೇಳೆ ಮತ್ತು ಸಾಯಂಕಾಲ ಹೆಚ್ಚು.
ರೈತರು ಒಟ್ಟಾಗಿ 15 ಹೆಕ್ಟೇರಿಗಿಂತ ಹೆಚ್ಚಿನ ಭೂಮಿಯಲ್ಲಿ ಸೂರ್ಯಕಾಂತಿ ಬೆಳೆಯುವುದರಿಂದ ಪಕ್ಷಿಗಳನ್ನು ಯಶಸ್ವಿಯಾಗಿ ಹತೋಟಿಯಲ್ಲಿಡಬಹುದು.
ಮುಂಚೂಣಿ ಪ್ರಾತ್ಯಕ್ಷಿಕೆಗಳು
ಅ.ಭಾ.ಸು.ಸಂ. ಸೂರ್ಯಕಾಂತಿ ವಿಭಾಗದಿಂದ ಪ್ರತೀ ವರ್ಷವು ಐ.ಐ.ಓ.ಆರ್., ಹ್ಶೆದರಬಾದ್ ರವರ ಸಹಯೋಗದಲ್ಲಿ ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ರೈತರ ಜಮೀನಿನಲ್ಲಿ 100ಎಕರೆ ಪ್ರದೇಶದಲ್ಲಿ ಹೊಸದಾಗಿ ಸೂರ್ಯಕಾಂತಿ ಸಂಕರಣ ತಳಿಗಳನ್ನು ಬಿಡುಗಡೆ ಮಾಡಲಾಗಿದೆ.
ಕೆ.ಬಿ.ಎಸ್.ಹೆಚ್-78, ಕೆ.ಬಿ.ಎಸ್.ಹೆಚ್-85, ಕೆ.ಬಿ.ಎಸ್.ಹೆಚ್-88 ಹಾಗೂ ಕೆ.ಬಿ.ಎಸ್.ಹೆಚ್-90ರ ಸುಧಾರಿತ ಬೇಸಾಯ ಕ್ರಮಗಳು, ಸುಧಾರಿತ ಕೀಟ ಹಾಗೂ ರೋಗಗಳ ನಿರ್ವಹಣ ಕ್ರಮಗಳನ್ನು ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ಕೈಗೊಳ್ಳಲಾಗಿದೆ. ಮುಂಚೂಣಿ ಪ್ರಾತ್ಯಕ್ಷಿಕೆಯ ಸಂಕರಣ ತಳಿಗಳ ಇಳುವರಿಯು ಸರಿಸುಮಾರು 10-15% ಹೆಚ್ಚಿನ ಇಳುವರಿಯನ್ಮ್ನ ರೈತರು ಪಡೆಯುತ್ತಿದ್ದಾರೆ.
ಸೂರ್ಯಕಾಂತಿ ಬೆಳೆಯಲ್ಲಿ ಬರುವ ರೋಗಗಳು
- ನೆಕ್ರೋಸಿಸ್ ನಂಜು ರೋಗ:
ಭಾಧಿತ ಸಸ್ಯಗಳು, ಗಿಡ್ಡವಾಗಿದ್ದು ಮತ್ತು ಎಲೆಗಳು ಗಾತ್ರವು ತುಂಬಾ ಚಿಕ್ಕದಾಗಿ ಕಾಣುವುದು. ಕುಡಿಯ ಭಾಗವು ಬೇಗ ಒಣಗಿ ಸಾಯುತ್ತದೆ. ಒಂದು ಕಿಲೋಗ್ರಾಂ ಬಿತ್ತನೆ ಬೀಜಕ್ಕೆ 5ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲ್ಯೂ.ಎಸ್. ಕೀಟನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಬಿತ್ತನೆಯಾದ 25 ಮತ್ತು 45 ದಿನಗಳಲ್ಲಿ ಎರಡು ಸಿಂಪರಣೆ ಮಾಡಬೇಕು. ಪ್ರತಿ ಸಿಂಪರಣೆಗೆ 250 ಲೀ. ದ್ರಾವಣ ಬಳಸುವುದು. ಪ್ರತಿ ಲೀಟರ್ ನೀರಿಗೆ 0.50 ಮಿ. ಲೀ. ಇಮಿಡಾಕ್ಲೋಪ್ರಿಡ್ (200 ಎಸ್. ಎಲ್), ಬೆರೆಸಿಕೊಂಡು ಬೆಳೆಗೆ ಸಿಂಪಡಿಸುವುದು. ಸಿಂಪರಣೆ ಮಾಡಿದ ಮಾರನೆಯ ದಿನ ರೋಗ ತಗುಲಿದ ಸಸ್ಯಗಳನ್ನು ಗುರುತಿಸಿ ಕಿತ್ತು ನಾಶಪಡಿಸಬೇಕು.
- ಎಲೆ ಚುಕ್ಕೆ ರೋಗ
ಎಲೆಗಳ ಮೇಲೆ ಕಡು ಕಂದು ಅಥವಾ ಕಪ್ಪು ಬಣ್ಣದಲ್ಲಿ, ವೃತ್ತಾಕಾರ ಅಥವಾ ಅಂಡಾಕಾರವಾದ ಸಣ್ಣ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
ಶಿಲೀಂದ್ರ ನಾಶಕ (ಪ್ರತಿ ಲೀಟರಿಗೆ 2.5 ಗ್ರಾಂ. ನಂತೆ) ಅಥವಾ ಪ್ರೊಪಿಕೋನಝೋ಼ಲ್ ಪ್ರತಿ ಲೀಟರಿಗೆ 1 ಮಿಲಿ ಯಂತೆ ಬೆಳೆ ಬಿತ್ತನೆಯಾದ 30 ಮತ್ತು 45 ದಿವಸದಲ್ಲಿ ಸಿಂಪರಣೆ ಮಾಡಬೇಕು.
- ಬೂದಿ ರೋಗ
ಎಲೆಗಳ ಮೇಲೆ ಅಲ್ಲಲ್ಲಿ ಬೂದಿ ಚೆಲ್ಲಿದ ಹಾಗೆ ಶಿಲೀಂದ್ರದ ಅವಕಗಳನ್ನು ಕಾಣಬಹುದು.
ಕನಿಷ್ಠ ಬೆಂಬಲ ಬೆಲೆ:
ಸೂರ್ಯಕಾಂತಿಯ ಕನಿಷ್ಠ ಬೆಂಬಲ ಬೆಲೆಯು ಪ್ರಸಕ್ತ ರೂ.7280/- ಇದೆ. ಕಳೆದ ಸಾಲಿಗೆ ಹೋಲಿಸಿದರೆ ರೂ. 520/- ಏರಿಕೆಯಾಗಿರುತ್ತದೆ. ಉತ್ತಮವಾದ ಕನಿಷ್ಠ ಬೆಂಬಲ ಬೆಲೆಯು ರೈತರಿಗೆ ವರವಾಗುತ್ತಿದೆ. ಹೆಚ್ಚಿನ ರೈತರು ಸೂರ್ಯಕಾಂತಿ ಬೇಸಾಯ ಕೈಗೊಳ್ಳಲು ತೊಂಬಾ ಅನುಕೂಲಕರವಾಗಿದೆ.
ಕರ್ನಾಟಕ ಎಣ್ಣೆಕಾಳು ಮಂಡಳಿ ಒಟ್ಟಾರೆ 2023 ರಲ್ಲಿ ಕೆ.ಬಿ.ಎಸ್.ಹೆಚ್-78ರ ಸಂಕರಣ ತಳಿಯ 2500 ಕ್ವಿಂಟಾಲ್ ಬೀಜೋತ್ಪಾದನೆ ಮಾಡಿ ಅದರಲ್ಲಿ 1500 ಕ್ವಿಂಟಾಲ್ (75,000ಎಕರೆ) ಬೀಜವನ್ನು ಮುಂಗಾರು 2024ರ ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ಉಚಿತ ಬೀಜವನ್ನು ವಿತರಿಸಿದ್ದಾರೆ.
ಲೇಖಕರು:
ಡಾ. ಎಂ. ಎಸ್. ಉಮಾ, ಡಾ. ಎಸ್. ಡಿ. ನೆಹರು, ಶ್ರೀ. ದತ್ತಾತ್ರೇಯ ಭಟ್, ಡಾ. ಅರ್ಜುಮನ್ ಬಾನು, ಡಾ. ಕೆ. ಎಂ. ಶ್ರೀನಿವಾಸ್ ರೆಡ್ಡಿ, ಡಾ. ಸಿ. ಪಿ. ಮಂಜುಳ, ಮತ್ತು ಡಾ. ಕೆ. ಎಸ್. ಸೋಮಶೇಖರ್, ಅಖಿಲ ಭಾರತ ಸಂಯೋಜಿತ ಸೂರ್ಯಕಾಂತಿ ಬೆಳೆ ಪ್ರಾಯೋಜನೆ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು 560065