ನಮ್ಮ ರಾಜ್ಯದಲ್ಲಿ ಅಪಾರ ಸಂಖ್ಯೆಯ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಕೃಷಿ ಇಲ್ಲದೇ ಹೈನುಗಾರಿಕೆಯನ್ನೇ ಪ್ರಧಾನವಾಗಿ ಮಾಡುತ್ತಿರುವ ವ್ಯಕ್ತಿಗಳಿದ್ದಾರೆ. ಇವರ ಜೀವನ ನಿರ್ವಹಣೆ ಇದರಿಂದಲೇ ಸಾಗುತ್ತಿದೆ. ಆದ್ದರಿಂದ ಸುಸ್ಥಿರ ಮಾದರಿಯಲ್ಲಿ ಹೈನುಗಾರಿಕೆ ಮಾಡುವುದು ಅತ್ಯಂತ ಅವಶ್ಯಕ.
ಹೈನುಗಾರಿಕೆ ಎನ್ನುವುದು ಮೇಲ್ನೋಟ್ಟಕ್ಕೆ ಸರಳ, ಆಕರ್ಷಕ. ಈ ಭಾವನೆಯಿಂದಲೇ ಈ ಕ್ಷೇತ್ರಕ್ಕೆ ಬಂದು ನಷ್ಟಕ್ಕೀಡಾದವರು ಅನೇಕ. ಇದಕ್ಕೆ ಪ್ರಮುಖ ಕಾರಣ ಹೈನುಗಾರಿಕೆ ಬಗ್ಗೆ ಅವರಿಗೆ ಸೂಕ್ತವಾದ ಮಾಹಿತಿ, ತರಬೇತಿ ಇಲ್ಲದಿರುವುದೇ ಆಗಿದೆ. ಹಸು ಸಾಕಲು ತರಬೇತಿ ಬೇಕೆ ಎಂದು ಭಾವಿಸುವವರೂ ಇದ್ದಾರೆ. ಖಂಡಿತ ಇದು ಬೇಕು. ಇದರಿಂದ ವೈಜ್ಞಾನಿಕ ಮಾದರಿಯಲ್ಲಿ ಹೈನುಗಾರಿಕೆ ಮಾಡುವುದು ಮತ್ತು ಲಾಭಾಂಶ ಪಡೆಯುವುದು ಸಾಧ್ಯವಾಗುತ್ತದೆ.


ಹೈನುಗಾರಿಕೆಯಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಪ್ರಮಾಣ ಹೀಗೆ ಬೇರೆಬೇರೆ ಹಂತಗಳಿವೆ. ಇವುಗಳನ್ನು ಅನುಕರಿಸುವವರಲ್ಲಿ ವಿದೇಶಿ ತಳಿಗಳಾದ ಜರ್ಸಿ, ಎಚ್.ಎಫ್ ಮತ್ತು ಮಿಶ್ರತಳಿ ಹಸುಗಳನ್ನು ಸಾಕುವವರೇ ಹೆಚ್ಚು. ಇದಕ್ಕೆ ಕಾರಣ ಇವುಗಳು ಅಧಿಕ ಪ್ರಮಾಣದ ಹಾಲು ನೀಡುತ್ತವೆ ಎನ್ನುವುದೇ ಆಗಿದೆ. ಇಂಥ ಹಸುಗಳು ಪಾಲನೆ-ಪೋಷಣೆ ನಾನಾ ಕಾರಣಗಳಿಂದ ಸೂಕ್ಷ್ಮವಾಗಿರುತ್ತವೆ. ಬಹಳ ಜಾಗರೂಕತೆಯಿಂದ ಅವುಗಳನ್ನು ಸಾಕಣೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ.
ದೇಸೀ ತಳಿ ರಾಸುಗಳಿಗೆ ಭಾರತ ಹೆಸರುವಾಸಿ. ಇಲ್ಲಿನ ತಳಿಗಳು ಅಂತರರಾಷ್ಟ್ರೀಯ ಗಮನವನ್ನೂ ಸೆಳೆದಿವೆ. ಇದಕ್ಕೆ ಪ್ರಮುಖ ಕಾರಣ ಅವುಗಳಲ್ಲಿರುವ ರೋಗ ನಿರೋಧಕ ಶಕ್ತಿ. ಹಾಲಿನ ಗುಣಮಟ್ಟ. ಇವುಗಳ ಮತ್ತೊಂದು ವೈಶಿಷ್ಟ ಎಂದರೆ ವಿದೇಶಿ ತಳಿಗಳ ಹಾಗೆ ಇವು ಸೂಕ್ಷ್ಮ ದೇಹಸ್ಥಿತಿ ಹೊಂದಿರುವುದಿಲ್ಲ. ಎಂಥ ವಾತಾವರಣಕ್ಕೂ ಹೊಂದಿಕೊಳ್ಳುವ ಶಕ್ತಿ ಅವುಗಳಿಗಿರುತ್ತದೆ. ಅವುಗಳಿಗೆ ಮೌಲ್ಯವರ್ಧಿಸಿದ ಪಶು ಆಹಾರವನ್ನೇ ನೀಡಬೇಕು ಎಂದೇನೂ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಇವುಗಳ ಸಾಕಣೆ ವೆಚ್ಚ ಕಡಿಮೆ.
ಹೈನುಗಾರಿಕೆಗೆ ಮುಂದಾಗುವವರು ಮತ್ತು ಹೈನುಗಾರಿಕೆ ಮಾಡಬೇಕೆಂದು ಆಲೋಚಿಸುವವರು ಮೊದಲು ಮಾಡಬೇಕಾದ ಕೆಲಸ ಎಂದರೆ ಉತ್ತಮ ಆರೋಗ್ಯ ಇರುವ ಹಸುಗಳನ್ನು ಖರೀದಿ ಮಾಡುವುದು. ಈ ಹಂತದಲ್ಲಿ ಎಡವಿದರೆ ಮುಂದೆ ನಷ್ಟಗಳ ಸರಮಾಲೆಯೇ ಉಂಟಾಗುತ್ತದೆ. ಹಸುಗಳ ಆರೋಗ್ಯ ಉತ್ತಮವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ. ನುರಿತ ಹೈನುಗಾರರಿಗೆ ಮೇಲ್ನೋಟ್ಟದ ಕೆಲವು ಲಕ್ಷಣಗಳಿಂದಲೇ ಹಸು ಆರೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ. ಆದರೆ ಎಲ್ಲರಿಗೂ ಅಂಥ ಪರಿಣತಿ ಇರುವುದಿಲ್ಲ. ಆದ್ದರಿಂದ ನುರಿತ ಪಶುಪಾಲಕರು ಮತ್ತು ಪಶುವೈದ್ಯರ ನೆರವು ಪಡೆಯುವುದು ಸೂಕ್ತ.
ಕೆಲವರು ದೂರದೂರದ ಪ್ರದೇಶಗಳಿಂದಲೂ ಹಸುಗಳನ್ನು ತರುತ್ತಾರೆ. ಹೀಗೆ ತರುವಾಗ ಬಹಳ ಎಚ್ಚರಿಕೆ ವಹಿಸಬೇಕು. ಟೆಂಪೋ, ಲಾರಿಗಳಿಗೆ ಅವುಗಳನ್ನು ಆರಾಮವಾಗಿ ಹತ್ತಿಸಬೇಕು ಮತ್ತು ಇಳಿಸಬೇಕು. ಹೀಗೆ ಮಾಡದಿದ್ದರೆ ಅವುಗಳ ಕಾಲುಗಳಿಗೆ ತೊಂದರೆ ಉಂಟಾಗಬಹುದು. ಸಾರಿಗೆ ಖರ್ಚು ಉಳಿತಾಯದ ದೃಷ್ಟಿಯಿಂದ ಒಂದೇ ವಾಹನದಲ್ಲಿ ಅಧಿಕ ಸಂಖ್ಯೆಯ ರಾಸುಗಳನ್ನು ತುಂಬಬಾರದು. ಇದರಿಂದ ಅವುಗಳಿಗೆ ಉಸಿರುಗಟ್ಟಿದಂಥ ವಾತಾವರಣ ಉಂಟಾಗುತ್ತದೆ. ಅವುಗಳು ಆರಾಮವಾಗಿ ನಿಲ್ಲಲ್ಲು ಸ್ಥಳವಕಾಶ ಇರಬೇಕು.
ದೀರ್ಘ ಪಯಣವಿದ್ದಾಗ ವಾಹನದಲ್ಲಿ ಸೂಕ್ತ ಪ್ರಮಾಣದ ಮೇವು ಮತ್ತು ನೀರಿನ ಸಂಗ್ರಹಣೆ ಇರಬೇಕು. ದಾರಿಯಲ್ಲಿ ಸಿಗುವ ಹೊಂಡಗಳಲ್ಲಿ ಇರುವ ನೀರನ್ನು ಕುಡಿಸಬಾರದು. ಏಕೆಂದರೆ ಆ ನೀರು ಕಲುಷಿತವಾಗಿರುವ ಸಾಧ್ಯತೆ ಇರುತ್ತದೆ. ಜಾನುವಾರುಗಳಿಗೂ ನೀರಿನಿಂದ ಬರುವ ತೊಂದರೆಗಳು ಅನೇಕ. ನೀರು ಕಲುಷಿತವಾಗಿದ್ದರೆ ಅವುಗಳಿಗೆ ಬೇಧಿ ಉಂಟಾಗಬಹುದು. ಹೊಟ್ಟೆಯಲ್ಲಿ ಹುಳುಗಳ ಸಮಸ್ಯೆ ಉದ್ಬವಿಸಬಹುದು. ಆದ್ದರಿಂದ ಪಯಣದ ವೇಳೆ ಶುದ್ಧ ನೀರನ್ನು ಒದಗಿಸುವುದು ಅತ್ಯವಶ್ಯಕ.
ಹಸುಗಳನ್ನು ತಂದ ನಂತರ ಮೊದಲು ಮಾಡಬೇಕಾದ ಕೆಲಸವೆಂದರೆ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸುವುದು. ಕೆಲವೊಂದು ಪ್ರದೇಶಗಳಲ್ಲಿ ಜಾನುವಾರುಗಳ ಸಾಂಕ್ರಾಮಿಕ ರೋಗಗಳು ಹೆಚ್ಚಿರುತ್ತವೆ. ಅಂಥಲ್ಲಿ ಭಾರಿ ಮುಂಜಾಗ್ರತೆ ವಹಿಸಬೇಕು. ಸಾಂಕ್ರಮಿಕ ರೋಗಗಳಿಂದ ರಕ್ಷಣೆ ನೀಡುವಂಥ ಲಸಿಕೆಗಳನ್ನು ಹಾಕಿಸಬೇಕು. ಇದಕ್ಕಾಗಿ ಪಶುಪಾಲನಾ ನೋಟ್ ಬುಕ್ ನಿರ್ವಹಣೆ ಮಾಡಬೇಕು. ಅದರಲ್ಲಿ ಹಸುಗಳ ಆರೋಗ್ಯದ ವಿವರಗಳನ್ನು ಬರೆದಿಡಬೇಕು. ಲಸಿಕೆಗಳನ್ನು ಹಾಕಿಸಿದ ದಿನಾಂಕ ಮತ್ತು ಹಾಕಿಸಿದ ಲಸಿಕೆ ಯಾವುದು ಎಂಬ ವಿವರ ನಮೂದಿಸಬೇಕು.


ಪ್ರಯಾಣದ ವೇಳೆ ಅನಾರೋಗ್ಯಕ್ಕೀಡಾದ ಹಸು ಇದ್ದರೆ ಅದನ್ನು ಕೊಟ್ಟಿಗೆಯಲ್ಲಿ ಎಲ್ಲ ಹಸುಗಳ ಜೊತೆ ಕಟ್ಟಬಾರದು. ಈಗಾಗಲೇ ಕೊಟ್ಟಿಗೆಯಲ್ಲಿ ಹಸುಗಳಿದ್ದು ಅವುಗಳಲ್ಲಿ ರೋಗಪೀಡಿದ ಹಸುಗಳು ಇದ್ದರೆ ಅಂಥವುಗಳ ಜೊತೆಯೂ ಕಟ್ಟಬಾರದು. ಕೆಲದಿನ ಪ್ರತ್ಯೇಕವಾಗಿ ಕಟ್ಟಬೇಕು. ಪಶುವೈದ್ಯರಿಂದ ತಪಾಸಣೆಗೊಳಸಪಡಿಸಬೇಕು. ಇದರಿಂದ ಹಸುವಿಗೆ ಉಂಟಾಗಿರುವ ತೊಂದರೆ ಏನು ಎಂಬುದು ತಿಳಿಯುತ್ತದೆ. ಅವುಗಳಿಗೆ ಪಶುವೈದ್ಯರು ಶಿಫಾರಸು ಮಾಡಿದ ಔಷಧಗಳನ್ನೇ ಅವರು ಸೂಚಿಸಿದ ಪ್ರಮಾಣದಲ್ಲಿ ನೀಡಬೇಕು. ನಿಖರ ಮಾಹಿತಿ, ಪರಿಣತಿ ಇಲ್ಲದೇ ತಾವೇ ತಿಳಿದ ಔಷಧ ನೀಡಲು ಹೋಗಬಾರದು. ಅದು ಹಸುಗಳಿಗೆ ಮಾರಣಾಂತಿವಾಗಿ ಪರಿಣಮಿಸಬಹುದು.

LEAVE A REPLY

Please enter your comment!
Please enter your name here