ಮಂಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂಗಡಿಮುಗ್ಗಟ್ಟುಗಳವರು ಸಾಮಗ್ರಿಗಳನ್ನು ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹಣ್ಣಿನ ಅಂಗಡಿಗಳವರ ಬವಣೆ ಮತ್ತಷ್ಟೂ ಹೆಚ್ಚು. ಇನ್ನು ತೋಟಗಾರಿಕೆ ಮಾಡುವವರು ಫಸಲು ಕಾಯಲು ಮಾಡದೇ ಇರುವ ಉಪಾಯಗಳಿಲ್ಲ.ವಿಶೇಷವಾಗಿ ಮಲೆನಾಡು-ಕರಾವಳಿ ಜಿಲ್ಲೆಗಳ ತೋಟಗಾರರು ಮಂಗಗಳನ್ನು ದೂರವಿಡಲು ನಾನಾ ತಂತ್ರಗಳನ್ನು ಬಳಸಿದ್ದಾರೆ. ಬಳಸುತ್ತಿದ್ದಾರೆ.
ರಾಜಕೀಯ ಸಮಾವೇಶಗಳು ಮುಕ್ತಾಯವಾದ ನಂತರ ಅಲ್ಲಿ ನಿಲ್ಲಿಸಿದ್ದ ಪ್ರಮುಖರ ಕಟೌಟ್ ಹಾಗೇ ಇರುತ್ತವೆ. ಅಂಥವುಗಳನ್ನು ತಂದು ಹೊಲ – ತೋಟಗಳಲ್ಲಿ ಇಟ್ಟವರೂ ಇದ್ದಾರೆ. ಅವುಗಳನ್ನು ದೂರದಿಂದ ನೋಡಿದಾಗ ಜೀವಂತ ವ್ಯಕ್ತಿಗಳೇ ನಿಂತಿದ್ದಾರೇನೊ ಎಂಬ ಭಾವನೆ ಬರುತ್ತದೆ. ಈ ತಂತ್ರ ಒಂದಷ್ಟು ದಿನ ಪ್ರಯೋಜನಕ್ಕೆ ಬಂದಿದೆ. ನಂತರ ನಿಧಾನವಾಗಿ ಮಂಗಗಳಿಗೆ ಅವುಗಳು ಮನುಷ್ಯರಲ್ಲ ಎಂಬುದು ಅರಿವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕೆಲವರು ತೋಟಗಾರರು ಮಂಗಗಳನ್ನು ದೂರ ಅಟ್ಟಲು ಲೇಸರ್ ಗನ್ ಬಳಸುತ್ತಿದ್ದಾರೆ. ಕೆಲವೆಡೆ ಈ ತಂತ್ರ ಪ್ರಯೋಜನಕಾರಿಯಾಗಿದೆ. ಒಂದಿಬ್ಬರು ಈಗ ಮಂಗಗಳು ಇದಕ್ಕೂ ಹೆದರುತ್ತಿಲ್ಲ ಎಂದಿದ್ದಾರೆ. ಮತ್ಯಾವುದಾದರೂ ಉಪಾಯ ಮಾಡಬೇಕಲ್ಲ. ಆಗ ಹೊಳೆದಿದ್ದು ಹುಲಿ ಉಪಾಯ. ಮಂಗಗಳು ಹುಲಿ-ಚಿರತೆ ಕಂಡರೆ ಬೆದರಿ ನಡುಗುತ್ತವೆ. ಕಾಡಿನಲ್ಲಿ ಇವುಗಳ ಸಂಖ್ಯೆ ಜೊತೆ ಹಣ್ಣುಗಳ ಮರಗಳು ಕಡಿಮೆಯಾಗಿದ್ದು ಕೂಡ ಮಂಗಗಳ ಹಾವಳಿ ಹೆಚ್ಚಾಗಲು ಕಾರಣ.
“ಮಂಗಗಳು ಮೊದಲೇ ಬುದ್ಧಿವಂತ ಪ್ರಾಣಿಗಳು. ಮನುಷ್ಯನ ಎಲ್ಲಾ ತಂತ್ರಗಳನ್ನು ವೇಗವಾಗಿ ಅರ್ಥ ಮಾಡಿಕೊಳ್ಳುತ್ತವೆ. ಆಗಾಗ ನಾವು ತಂತ್ರಗಾರಿಕೆ ಬದಲಿಸಿಕೊಳ್ಳಬೇಕು. ಅವು ಹುಲಿಗೆ ಹೆದರುವಷ್ಟು ಬೇರೆ ಯಾವುದಕ್ಕೂ ಹೆದರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡ ನಾವು ಮಲೆನಾಡಿನ ರೈತರು ನಾಯಿಗಳಿಗೆ ಹುಲಿಯ ರೂಪ ನೀಡಿ, ಬೆಳೆಗಳ ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ” ಇದು ಈ ತಂತ್ರವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ರೈತರೊಬ್ಬರ ಮಾತು.
ಹೇರ್ ಡೈ ಬಳಸಿ ನಾಯಿಗೆ ಹುಲಿ ಪಟ್ಟೆ ಬರೆದು ಜಮೀನಿನಲ್ಲಿ ತಿರುಗಾಡಿಸುವ ಪ್ರಯತ್ನ ಮಾಡಿದರು. ನಾಯಿ ಬೊಗಳುವ ಶಬ್ದವನ್ನು ರೆಕಾರ್ಡ್ ಮಾಡಿ ತೋಟಗಳಲ್ಲಿ ಪ್ಲೇ ಮಾಡಿದರು. ಈ ಬಳಿಕ ಕಾಫಿ, ಬಾಳೆ, ಅಡಕೆ ಮತ್ತು ಮೆಕ್ಕೆ ಜೋಳದ ತೋಟಗಳಲ್ಲಿ ಮಂಗಗಳ ಜೊತೆಗೆ ಕಾಡುಕೋಣ, ಜಿಂಕೆಗಳ ಹಾವಳಿಯೂ ಕಡಿಮೆಯಾಗಿದೆ.
ಇತ್ತ ರೈತರ ತೋಟಗಳ ಬೆಳೆ ನಾಶ ತಡೆಯಲು ಸರಕಾರ ಮಂಕಿ ಪಾರ್ಕ್ ಸ್ಥಾಪಿಸಲು ಮುಂದಾಗುತ್ತಿದೆ. ಉನ್ನತ ಅಧ್ಯಯನ ನಡೆಸಲು ಹಿಮಾಚಲ ಪ್ರದೇಶಕ್ಕೆ ತಂಡ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂಥ ಪ್ರಯತ್ನ ನಡೆಯುವುದು ಒಳ್ಳೆಯದು.ಮಂಗಗಳ ಪಾರ್ಕ್ ಮಾಡಿದ ನಂತರವಾದರೂ ಅವುಗಳ ರೈತರ ತೋಟಗಳಲ್ಲಿ ಬಂದು ಬಿಡಾರ ಹೂಡುತ್ತವೊ ಇಲ್ಲವೊ ಎಂಬುದು ಗೊತ್ತಾಗುತ್ತದೆ.