ಸಮನ್ವಯ ಮೀನು ಸಾಕಣೆ ಲಾಭಗಳು

0

ಈಗಾಗಲೇ ಕೃಷಿಕರು ಅನುಸರಿಸುತ್ತಿರುವ ಕೃಷಿಪದ್ಧತಿ, ಕುರಿ, ಕೋಳಿ ಇತ್ಯಾದಿ ಸಾಕಣೆಯೊಂದಿಗೆ ಮೀನು ಸಾಕಣೆ ಮಾಡುವುದನ್ನು ಸಮನ್ವಯ ಮೀನು ಸಾಕಣೆ ಎಂದು ಹೇಳಬಹುದು. ಇದರಿಂದ ಇನ್ನೂ ಹೆಚ್ಚಿನ ಪರಿಶ್ರಮ, ವೆಚ್ಚವಿಲ್ಲದೇ ಹೆಚ್ಚಿನ ಲಾಭ ಗಳಿಸಬಹುದು. ರೇಷ್ಮೆ, ಅಣಬೆ, ಹಂದಿ, ಕೋಳಿ, ಬಾತುಕೋಳಿ, ಜಾನುವಾರುಗಳ ಜೊತೆಗೆ ಮೀನು ಕೃಷಿ ಮಾಡುವಿಕೆಯ ವಿಧಾನಗಳನ್ನು ತಜ್ಞರು ವಿವರಿಸಿದ್ದಾರೆ.

ಡಾ. ಸುಪ್ರೀತಾ ಬಿ.ಯು. ಸಹಾಯಕ ಪ್ರಾಧ್ಯಾಪಕರು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು

ರೇಷ್ಮೆ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ

ಈ ಪದ್ಧತಿಯಲ್ಲಿ ರೇಷ್ಮೆ ಕೃಷಿಯನ್ನು ಮೀನು ಕೃಷಿಯೊಂದಿಗೆ ಸಂಯೋಜಿಸಲಾಗಿದೆ .ಇಲ್ಲಿ ಉತ್ಪತ್ತಿಯಾಗುವ ಹಿಪ್ಪು ನೇರಳೆ ಎಲೆಗಳನ್ನು ಪ್ರಾಥಮಿಕವಾಗಿ ರೇಷ್ಮೆ ಹುಳು ಸೇವಿಸುತ್ತದೆ. ಮುಂದಿನ ಹಂತದಲ್ಲಿ ಈ ರೇಷ್ಮೆ ಹುಳುಯಿಂದ ರೇಷ್ಮೆಯ ಇಳುವರಿಯನ್ನು ಪಡೆಯಲಾಗುತ್ತದೆ. ರೇಷ್ಮೆ ಉತ್ಪಾದನಾ ಅವಧಿಯಲ್ಲಿ  ರೇಷ್ಮೆ ಹುಳುಗಳಿಂದ ಉತ್ಪತ್ತಿಯಾಗುವಂತಹ  ಮಲವನ್ನ ಮೀನು ಕೊಳಗಳಿಗೆ ನೇರವಾಗಿ ಬಿಡಲಾಗುತ್ತದೆ. ಈ ರೇಷ್ಮೆ ಮಲವು ನೈಸರ್ಗಿಕವಾಗಿ ಕೊಳದ ನೀರನ್ನು ಗೊಬ್ಬರೀಕರಣ ಮಾಡುತ್ತದೆ. ಕೆಲವೊಂದು ಮೀನುಗಳು ನೇರವಾಗಿ ಮಲವನ್ನೇ ಆಹಾರವನ್ನಾಗಿ ಸೇವಿಸುತ್ತದೆ. ಹೀಗೆ ರೇಷ್ಮೆ ಮತ್ತು ಮೀನು ಸಮಗ್ರ ಕೃಷಿಯು ಒಂದಕ್ಕೊಂದು ಪೂರಕವಾಗಿದ್ದು ರೈತರಿಗೆ ಉತ್ತಮ ಇಳುವರಿಯನ್ನು ತಂದುಕೊಡಲು ಸಹಾಯ ಮಾಡುತ್ತದೆ.

ಜಾನುವಾರು ಮತ್ತು ಮೀನು ಸಮಗ್ರ ಕೃಷಿ ಪದ್ಧತಿ

ಜಾನುವಾರು ಮತ್ತು ಮೀನು ಸಮಗ್ರ ಕೃಷಿ ಪದ್ಧತಿಯು  ವಿವಿಧ ವ್ಯವಸ್ಥೆಗಳಾದ; ಜಾನುವಾರು-ಮೀನು ವ್ಯವಸ್ಥೆ, ಹಂದಿ-ಮೀನು ವ್ಯವಸ್ಥೆ, ಕೋಳಿ-ಮೀನು ವ್ಯವಸ್ಥೆ, ಬಾತುಕೋಳಿ-ಮೀನು ವ್ಯವಸ್ಥೆ, ಮೇಕೆ-ಮೀನು ವ್ಯವಸ್ಥೆ, ಮೊಲ-ಮೀನು ವ್ಯವಸ್ಥೆಯನ್ನು  ಒಳಗೊಂಡಿರುತ್ತದೆ.

ಈ ಪದ್ಧತಿಯಲ್ಲಿ  ಪ್ರಾಣಿಗಳಿಂದ ಉತ್ಪತ್ತಿಯಾಗುವ ಮಲವನ್ನು ನೇರವಾಗಿ ಮೀನಿನ ಕೊಳಗಳಿಗೆ ನೈಸರ್ಗಿಕ ಗೊಬ್ಬರವನ್ನಾಗಿ ಉಪಯೋಗಿಸಿ ಅದರಿಂದ ಮೀನಿನ ಕೊಳದಲ್ಲಿ,  ಮೀನುಗಳಿಗೆ ಬೇಕಾದ  ನೈಸರ್ಗಿಕ ಆಹಾರ (  ಫೈಟೋಪ್ಲ್ಯಾಂಕ್ಟನ್  ಮತ್ತು  ಜುಪ್ಲ್ಯಾಂಕ್ಟನ್) ಉತ್ಪಾದಿಸಲು  ಮತ್ತು ನೇರವಾಗಿ ಮಲವನ್ನು ಮೀನುಗಳ ಆಹಾರವನ್ನಾಗಿ ಬಳಸಬಹುದು. ಈ  ವ್ಯವಸ್ಥೆಯಿಂದ, ಮೀನು ಕೃಷಿಕರಿಗೆ ರಾಸಾಯನಿಕ ಗೊಬ್ಬರಕ್ಕೆ  ಮತ್ತು ಮೀನಿನ ಆಹಾರಕ್ಕೆ ತಗಲುವ ವೆಚ್ಚವನ್ನು  ಕಡಿತಗೊಳಿಸಿ, ಹೆಚ್ಚಿನ ಲಾಭ ಗಳಿಸುವಂತೆ ಮಾಡಬಹುದು.

ಹಂದಿ ಮತ್ತು ಮೀನು ಸಮಗ್ರ ಕೃಷಿ  ಪದ್ಧತಿ

ಈ ವಿಧದ ಸಮಗ್ರ ಪದ್ಧತಿಯಲ್ಲಿ ಹಂದಿ ಮತ್ತು ಮೀನಿನ ಕೃಷಿಯನ್ನು ಸಂಯೋಜಿಸಿದೆ. ಒಂದು ಹಂದಿಗೆ 3-4  ಚದುರ ಮೀಟರ್ ನೆಲದ ಜಾಗದ  ಅಗತ್ಯವಿರುತ್ತದೆ. ಈ ಕೃಷಿ ಪದ್ಧತಿಯಲ್ಲಿ, ಒಂದು ಹೆಕ್ಟೇರ್ ಪ್ರದೇಶದ ಮೀನಿನ ಕೊಳವನ್ನು ಫಲವತ್ತಾಗಿಸಲು, 60-100 ಹಂದಿಗಳು   ಬೇಕಾಗುತ್ತದೆ.

ಒಂದು ಹೆಕ್ಟರ್ ಮೀನಿನ ಕೊಳವನ್ನು  ಫಲವತ್ತಾಗಿಸಲು ಅಥವಾ ಗೊಬ್ಬರಿಕಲಿಸಲು 1 ವರ್ಷಕ್ಕೆ ಐದು ಟನ್ ಹಂದಿ ಗೊಬ್ಬರ ಅಗತ್ಯವಿರುತ್ತದೆ ಮತ್ತು 30-40 ಹಂದಿಗಳಿಂದ ಹೊರಹಾಕಲ್ಪಟ್ಟ ಮಲವಿಸರ್ಜನೆಯು ಒಂದು ಹೆಕ್ಟೇರ್ ಕೊಳವನ್ನು ಫಲವತ್ತಾಗಿಸಲು ಸಾಕಾಗುತ್ತದೆ. ಹಂದಿ ಸಾಕಣೆಗೆ, ಅಡುಗೆ ತ್ಯಾಜ್ಯ, ಜಲಸಸ್ಯಗಳು ಮತ್ತು ಬೆಳೆ ತ್ಯಾಜ್ಯಗಳನ್ನು ನೀಡಬಹುದು.

6 ತಿಂಗಳ ನಂತರ ಮೊದಲ ಹಂದಿಗಳನ್ನು ವಿಲೇವಾರಿ ಮಾಡಿದಾಗ, ಕೊಳಕ್ಕೆ ಹೋಗುವ ಮಲವಿಸರ್ಜನೆಯ ಪ್ರಮಾಣವು ಕಡಿಮೆಯಾಗುತ್ತದೆ. ಇದು ಮೀನಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಕೊಳದಲ್ಲಿನ ಸಾವಯವ ಹೊರೆಯು ಮುಂದಿನ 2 ತಿಂಗಳುಗಳವರೆಗೆ ಉಬ್ಬರವಿಳಿತಕ್ಕೆ ಸಾಕಾಗುತ್ತದೆ.

ಹೊಸ ಹಂದಿಮರಿಗಳು ಹೆಚ್ಚು ಮಲವಿಸರ್ಜನೆಯನ್ನು ಮಾಡುತ್ತವೆ. ಹಂದಿ ಸಗಣಿ 69 – 71 % ತೇವಾಂಶ, 1.3 – 2 % ಸಾರಜನಕ ಮತ್ತು 0.36 – 0.39 ಫಾಸ್ಫೇಟ್ ಅನ್ನು ಹೊಂದಿರುತ್ತದೆ.  ಸುಮಾರು 30-35 ಹಂದಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವು 1 ಟನ್ ಅಮೋನಿಯಂ ಸಲ್ಫೇಟ್ಗೆ ಸಮನಾಗಿರುತ್ತದೆ.

ಈ ಸಮಗ್ರ ಕೃಷಿ ಪದ್ಧತಿಯಲ್ಲಿ  ವೈಟ್ ಯಾರ್ಕ್ಷೈರ್, ಲ್ಯಾಂಡ್ರೇಸ್ ಮತ್ತು ಹ್ಯಾಂಪ್ಶೈರ್ನಂತಹ   ಹಂದಿ ತಳಿಗಳನ್ನು  ಬೆಳೆಸಬಹುದಾಗಿದೆ.  ಹಾಗೂ ಮೀನಿನಲ್ಲಿ   ಬೆಳ್ಳಿ ಗೆಂಡೆ ಮೀನು,  ಹುಲ್ಲು ಗೆಂಡೆ  ಮೀನು ಮತ್ತು ಸಾಮಾನ್ಯ  ಗೆಂಡೆ ಮೀನುಗ ಳನ್ನು (2: 1: 1   ಅನುಪಾತದಲ್ಲಿ) ಹಂದಿಗಳೊಂದಿಗೆ  ಸಾಕಬಹುದಾಗಿದೆ.

ಕೋಳಿ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ

 ಈ  ಪದ್ಧತಿಯಲ್ಲಿ, ಕೋಳಿ ಮತ್ತು ಮೀನು  ಕೃಷಿಯನ್ನು ಸಂಯೋಜಿಸಿದ್ದು ಕೋಳಿ  ಹಿಕ್ಕೆಗಳು ರಂಜಕ ಮತ್ತು ಸಾರಜನಕದಲ್ಲಿ ಸಮೃದ್ಧವಾಗಿವೆ.ಆದ್ದರಿಂದ ಕೋಳಿ ಗೊಬ್ಬರವು ಪರಿಣಾಮಕಾರಿ ರಸಗೊಬ್ಬರವಾಗಿ,  ಮೀನಿನ ಕೊಳವನ್ನು ನೈಸರ್ಗಿಕವಾಗಿ  ಫಲೀಕರಣಕ್ಕೆ ಉಪಯೋಗವಾಗುತ್ತದೆ.

ಈ ಬಗೆಯ ಸಂಯೋಜನೆಯಲ್ಲಿ, ಕೊಳದ ನೇರ ಫಲೀಕರಣಕ್ಕೆ ಅನುಕೂಲವಾಗುವಂತೆ ಬಿದಿರಿನ  ನೆಲಹಾಸುಗೆಗಳನ್ನು ಮೀನಿನ ಕೊಳದ ಮೇಲೆಯೇ ಕೋಳಿ ಗೂಡನ್ನು ನಿರ್ಮಾಣ ಮಾಡಬೇಕು.

ಸುಮಾರು 1 ಹೆಕ್ಟೇರ್ ಮೀನಿನ ಕೊಳಕ್ಕೆ 25,000   ಕೋಳಿಮರಿಗಳನ್ನು  ಸಾಕಬಹುದಾಗಿದೆ. ಒಂದು ಕೋಳಿ ವರ್ಷಕ್ಕೆ,  ಸರಿಸುಮಾರು 25 ಕೆಜಿ ಕೋಳಿ ಗೊಬ್ಬರವನ್ನು ಉತ್ಪಾದಿಸುತ್ತದೆ. ಹಾಗೂ ಕೋಳಿಯಿಂದ 90,000 ರಿಂದ 1,00,000 ಮೊಟ್ಟೆಗಳು ಮತ್ತು 2,500 ಕೆಜಿ ಮಾಂಸವನ್ನು ಉತ್ಪಾದಿಸಬಹುದು.

ಈ ಕೋಳಿ ಮತ್ತು ಮೀನು ಸಮಗ್ರ ಕೃಷಿ  ಪದ್ಧತಿಯ ವೈಶಿಷ್ಟ್ಯವೇನೆಂದರೆ ಯಾವುದೇ ರಾಸಾಯನಿಕ ಗೊಬ್ಬರ ಮತ್ತು ಪೂರಕ ಆಹಾರವಿಲ್ಲದೆ 3000 – 4500 ಕೆಜಿ   ಮೀನಿನ ಇಳುವರಿಯನ್ನ ಪಡೆದು ಹೆಚ್ಚಿನ ಲಾಭವನ್ನು  ರೈತರು ಗಳಸಬಹುದಾಗಿದೆ.

ಬಾತುಕೋಳಿ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ

 ಈ ಪದ್ಧತಿಯಲ್ಲಿ ಬಾತುಕೋಳಿಗಳನ್ನು ಮೀನಿನ ಕೃಷಿಯೊಂದಿಗೆ ಸಂಯೋಜಿಸಿದೆ.   ಬಾತು ಕೋಳಿಗಳು ಮೀನಿನ ಕೊಳದಲ್ಲಿ  ಮೀನಿನ   ಬೆಳವಣಿಗೆಯನ್ನ ಕುಂಠಿತಗೊಳಿಸುವ ಬಕ  ಪ್ರಾಣಿಗಳಾದ  ಮರಿ ಕಪ್ಪೆಗಳು, ಗೊದಮೊಟ್ಟೆಗಳು ಮತ್ತು ಡ್ರ್ಯಾಗನ್ಫ್ಲೈಗಳನ್ನು ಸೇವಿಸುವ ಮೂಲಕ ಮೀನುಗಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುತ್ತವೆ.

ಬಾತುಕೋಳಿಯ ಹಿಕ್ಕೆಯೂ ಇಂಗಾಲ, ರಂಜಕ, ಪೊಟ್ಯಾಸಿಯಮ್, ಸಾರಜನಕ, ಕ್ಯಾಲ್ಸಿಯಂ, ಇತ್ಯಾದಿಗಳಂತಹ ಅಂಶಗಳೊಂದಿಗೆ 25 ಪ್ರತಿಶತ ಸಾವಯವ ಮತ್ತು 20 ಪ್ರತಿಶತ ಅಜೈವಿಕ ವಸ್ತುಗಳನ್ನು ಹೊಂದಿರುತ್ತದೆ. ಈ ಬಾತುಕೋಳಿಗಳು ಹೆಚ್ಚಿನ ಸಮಯವನ್ನು ಮೀನಿನ ಕೊಳದಲ್ಲೇ ಕಳೆಯುವುದರಿಂದ ಅದರ ಹಿಕ್ಕೆಯೂ ಕೊಳಗಳಿಗೆ ನೇರವಾಗಿ  ಬಿಡುಗಡೆಗೊಂಡು ಕೊಳಗಳನ್ನು ನೈಸರ್ಗಿಕವಾಗಿ       ಗೋಬ್ಬರಿಕರಣಗೊಳಿಸುತ್ತದೆ.

ಬಾತುಕೋಳಿಗಳು ನಿರಂತರವಾಗಿ ತನ್ನ ರೆಕ್ಕೆಯನ್ನು ಬಡೆದುಕೊಳ್ಳುತ್ತಾ ,  ನಿಸರ್ಗದ ಆಮ್ಲವನ್ನು ಕೊಳದ ನೀರಿಗೆ ಬೆರೆಸಿ, ಕೊಳದ ನೀರನ್ನು ನೈಸರ್ಗಿಕವಾಗಿ  ಗಾಳಿಯಾಡಿಸಿ (aeration) ಮೀನಿನ ಕೊಳದ ನೀರಿನ ಗುಣಮಟ್ಟವನ್ನು ಕಾಪಾಡುತ್ತದೆ . 1 ಹೆಕ್ಟೇರ್ ಮೀನಿನ ಕೊಳವನ್ನು ಫಲವತ್ತಾಗಿಸಲು 100 ರಿಂದ 3,000 ಬಾತುಕೋಳಿಗಳ ಅಗತ್ಯವಿದೆ.

ಜಾನುವಾರು ಮತ್ತು ಮೀನು ಸಮಗ್ರ ಕೃಷಿ ಪದ್ಧತಿಗಳಲ್ಲಿ ಮೆಲಕು ಹಾಕುವ ಪ್ರಾಣಿಗಳಾದಂತಹ    ಆಡುಗಳು ಮತ್ತು ಕುರಿಗಳನ್ನು ಕೂಡ  ಮೀನು ಕೃಷಿಯೊಂದಿಗೆ ಸಂಯೋಜಿಸಲಾಗುತ್ತದೆ . ಆದರೆ, ಇತರ ಸಮಗ್ರ ಕೃಷಿಗೆ ಹೋಲಿಸಿದಾಗ ಬಹಳ ಕಡಿಮೆ ಪ್ರಮಾಣದಲ್ಲಿ  ಅಭ್ಯಾಸ ಮಾಡಲಾಗುತ್ತಿದೆ.

ಅಣಬೆ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ

ಅಣಬೆ ಕೃಷಿಗೆ ಹೆಚ್ಚಿನ ಮಟ್ಟದ ಆರ್ದ್ರತೆಯ ಅಗತ್ಯವಿರುತ್ತದೆ ಮತ್ತು ಆದ್ದರಿಂದ  ಅಣಬೆ ಕೃಷಿಯು ವಿಸ್ತಾರಗೊಳ್ಳುತ್ತಿದೆ.  ಅಣಬೆ ಕೃಷಿಯಲ್ಲಿ ಅಗಾರಿಕಸ್ ಬಿಸ್ಪೊರಸ್, ವೊಲೊರಿಯೆಲಾ ಎಸ್ಪಿಪಿ. ಮತ್ತು ಪ್ಲೆರೊಟಸ್ ಎಸ್ಪಿಪಿ.,   ಮುಂತಾದ ವಾಣಿಜ್ಯ ಅಣಬೆಗಳನ್ನು ಬೆಳೆಸಬಹುದಾಗಿದೆ.

ಹೀಗೆ  ಒಂದಕ್ಕಿಂತ ಹೆಚ್ಚು ಕೃಷಿಯನ್ನು ಸಂಯೋಜಿಸಿ ಏಕಕಾಲದಲ್ಲೇ ವಿವಿಧ ಬೆಳೆಗಳನ್ನ ದುಪ್ಪಟ್ಟು ಇಳುವರಿಯೊಂದಿಗೆ ಪಡೆದುಕೊಂಡು ರೈತರು ಆಹಾರ ಭದ್ರತೆಯ ಜೊತೆಗೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಕೂಡ ಉತ್ತಮಗೊಳಿಸಬಹುದು.

LEAVE A REPLY

Please enter your comment!
Please enter your name here