ಭಾರಿಬೇಡಿಕೆಯ ನೇರಳೆ ಕೃಷಿ, ಮಾರುಕಟ್ಟೆ ವಿವರ

2

ಒಗರು, ಸಿಹಿ ಮಿಶ್ರಿತ, ತಿಂದರೆ ಬಾಯೆಲ್ಲ ನೇರಳೆ ಬಣ್ಣ. ಇಂಥ ನೇರಳೆ ಹಣ್ಣನ್ನು ಇಷ್ಟಪಡದರೇ ಇಲ್ಲ ಎನ್ನಬಹುದು. ರಾಜ್ಯದ ದಕ್ಷಿಣ ಭಾಗದಲ್ಲಿ ನೇರಳೆ, ಉತ್ತರ ಭಾಗದಲ್ಲಿ ನೇರಲ ಎಂದು ಕರೆಯಿಸಿಕೊಳ್ಳುವ ಈ ಹಣ್ಣಿನ ಮರಗಳು ಕೇವಲ ಹತ್ತದಿನೈದು ವರ್ಷಗಳ ಹಿಂದೆ ಕಾಡು ಬೆಳೆ. ಹೆದ್ದಾರಿ ಬದಿಗಳಲ್ಲಿ ಸಾಮಾನ್ಯವಾಗಿ ಇದನ್ನು ಕಾಣಬಹುದಾಗಿತ್ತು. ಹೊಲದ ಬದುಗಳ ಅಂಚಿನಲ್ಲಿ ಎಲ್ಲಿಯೋ ಅಲ್ಲೊಂದು ಇಲ್ಲೊಂದು ಮರ ಕಾಣುತ್ತಿದ್ದವು. ಇಂಥ ನೇರಳೆಗೆ ಈಗ ಭಾರಿ ಡಿಮ್ಯಾಂಡ್

ದೇಹದ ಆರೋಗ್ಯ ಕಾಪಾಡುವ ಹಣ್ಣು

ನೇರಳೆ ಹಣ್ಣು ಬಾಯಿರುಚಿಗಷ್ಟೆ ಅಲ್ಲ, ದೇಹದ ಆರೋಗ್ಯವನ್ನೂ ಕಾಪಾಡುವಂಥ ಹಣ್ಣು. ಇದರಲ್ಲಿರುವ ಔಷಧ ಗುಣಗಳು ಅಪಾರ. ಇದರಿಂದಾಗಿಯೇ ಇತ್ತೀಚಿನ ವರ್ಷಗಳಲ್ಲಿ ಇದು ಭಾರಿ ಬೇಡಿಕೆ ಪಡೆದುಕೊಂಡಿದೆ. ಕೆಲವು ಬಾರಿ ಇದರ ಬೆಲೆ ಕೇಳಿದರೆ ಬೆಚ್ಚಿ ಬೀಳುವಂತಾಗುತ್ತದೆ.  ಮಧುಮೇಹ, ರಕ್ತದೊತ್ತರ ನಿಯಂತ್ರಿಸುವ ಗುಣ ಇದರಲ್ಲಿರುವುದೇ ಆಗಿದೆ. ಇಂಥ ನೇರಳೆಯನ್ನು ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ನಾಗರದಾಸನಹಳ್ಳಿ ನಿವಾಸಿ ಎನ್.ಸಿ. ಪಟೇಲ್ ಅವರು ವ್ಯವಸ್ಥಿತವಾಗಿ ಕೃಷಿ ಮಾಡುತ್ತಿದ್ದಾರೆ.

ನೇರಳೆಮರದ ಆಯಸ್ಸು ನೂರು ವರ್ಷ !

ಸಿಜಿಗಿಯಮ್ ಕುಮಿನಿ ಎಂಬ ಸಸ್ಯ ವರ್ಗಕ್ಕೆ ಸೇರಿದ ನೇರಳೆ ಸಸ್ಯ ಸುಮಾರು 100 ವರ್ಷಗಳವರೆಗೆ ಬಾಳುತ್ತದೆ. ಮೊದಲೆಲ್ಲ ಬೇಲಿಯಂಚಿನಲ್ಲಿಯಷ್ಟೆ ಇದನ್ನು ಕಾಣಬಹುದಾಗಿತ್ತು. ರಸ್ತೆಬದಿಗಳಲ್ಲಿಯೂ ಸಾಲುಮರಗಳಲ್ಲಿ ಇದು ಸ್ಥಾನ ಪಡೆದಿತ್ತು. ಆಗೆಲ್ಲ ಇದರ ಹಣ್ಣುಗಳು ಹೆಚ್ಚಾಗಿ ಹಕ್ಕಿ-ಪಕ್ಷಿಗಳಿಗೆ ಆಹಾರವಾಗುತ್ತಿತ್ತು. ಹೆಚ್ಚು ಗಟ್ಟಿಯಿಲ್ಲದ ಇದರ ರೆಂಬೆಗಳ ಮೇಲೆ ನಿಂತು ಹಣ್ಣು ಕೊಯ್ಯುವ ಕಾರ್ಯ ಮಾಡುತ್ತಿದ್ದವರು ವಿರಳವಾಗಿದ್ದರು. ಕೆಳಗೆ ಉದುರಿದ ಹಣ್ಣುಗಳನ್ನು ಹೆಕ್ಕಿ ತಿನ್ನಲಾಗುತ್ತಿತ್ತು. ಇಂಥ ನೇರಳೆ ಕೃಷಿ ಈಗ ಪಡೆದಿರುವ ಪ್ರಾಮುಖ್ಯತೆ ಅಪಾರ.

ಪ್ರಗತಿಪರ ಕೃಷಿಕ

ಬೆಂಗಳೂರು ನಗರ ಜಿಲ್ಲೆಯ ಗ್ರಾಮ ನಾಗದಾಸನಹಳ್ಳಿ ನಿವಾಸಿ ಎನ್.ಸಿ. ಪಟೇಲ್ ಅವರು ಪ್ರಗತಿಪರ ಕೃಷಿಕ. ತೋಟಗಾರಿಕೆ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿರುವ ಇವರು ಮೊದಲಿಗೆ ನಾಗದಾಸನಹಳ್ಳಿ ಸಮೀಪವೇ ಇರುವ ತಮ್ಮ ದ್ರಾಕ್ಷಿ ತೋಟದ ಬೇಲಿಯಂಚಿನಲ್ಲಿ ಒಂದಷ್ಟು ನೇರಳೆ ಗಿಡಗಳನ್ನು ನೆಟ್ಟಿದ್ದರು. ಹಣ್ಣಿನ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿ ಇದರದೇ ತೋಟ ಮಾಡುವ ನಿರ್ಧಾರಕ್ಕೆ ಬಂದರು.

ಪ್ರಗತಿಪರ ಕೃಷಿಕ ಎನ್.ಸಿ. ಪಟೇಲರು ಬೇರೆಬೇರೆ ಭಾಗಗಳಲ್ಲಿ ನೇರಳೆ ಕೃಷಿ ಮಾಡುತ್ತಿದ್ದಾರೆ. ಈ ತೋಟದಲ್ಲಿರುವುದು ಹದಿನಾಲ್ಕು ವರ್ಷದ ಹಿಂದೆಯೇ ನೆಟ್ಟ ಗಿಡಗಳು. ಇಂದು ಮರಗಳಾಗಿ ಬೆಳೆದಿವೆ. ಆದರೆ ಇವು ಕಾಡುಬೆಳೆಯ ಮಾದರಿ ಎತ್ತರವಾಗಿ ಬೆಳೆದಿಲ್ಲ. ಇದಕ್ಕೆ ಕಾರಣ ಕಾಲಕಾಲಕ್ಕೆ ಅವುಗಳನ್ನು ಪ್ರೂನಿಂಗ್ ಮಾಡುತ್ತಾ ಬಂದಿರುವುದು. ಇದರಿಂದಾಗಿಯೇ ಇವುಗಳ ರೆಂಬೆಗಳು ಚಾಚಿಕೊಂಡ ಸುತ್ತಳತೆ ಹೆಚ್ಚಾಗಿದೆ ಹೊರತು ಎತ್ತರವಾಗಿಲ್ಲ.

ಬಂಜರುಭೂಮಿಯಲ್ಲಿಯೂ ಸೈ

ನೇರಳೆ ಸಸ್ಯದ ಗುಣಗಳು ಅಪಾರ. ಮುಖ್ಯವಾಗಿ ಇದು ಎಂಥಾ ಮಣ್ಣಿನಲ್ಲಿಯೂ ಬೆಳೆಯಬಲ್ಲದು. ಆದ್ದರಿಂದ ಕಡಿಮೆ ಫಲವತ್ತತೆ ಇರುವ, ಬಂಜರು ಎನ್ನಿಸಿದ ಭೂಮಿಗಳಲ್ಲಿಯೂ ಇದನ್ನು ಬೆಳೆಯಬಹುದು. ಕಲ್ಲು ಬಂಡೆಗಳೇ ಹೆಚ್ಚಾಗಿರುವ ಪ್ರದೇಶಗಳಲ್ಲಿಯೂ ಇದು ಉತ್ತಮವಾಗಿ ಬೆಳವಣಿಗೆಯಾಗುತ್ತದೆ. ಈ ಅಂಶಗಳೂ ಇದರ ಕೃಷಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ.

ನೇರಳೆ ಸಸ್ಯವನ್ನು ಬರ ನಿರೋಧಕ ಬೆಳೆ ಎಂದು ಕರೆಯಬಹುದು. ಭಾರಿ ಕಡಿಮೆ ನೀರು, ಕಡಿಮೆ ಪ್ರಮಾಣದ ಪೋಷಕಾಂಶ ಒದಗಿಸಿದರೂ ಇದು ಉತ್ತಮವಾಗಿ ಬೆಳವಣಿಗೆಯಾಗುತ್ತದೆ. ಆದ್ದರಿಂದ ಇದರ ಕೃಷಿ ಸಣ್ಣ, ಮಧ್ಯಮ ಪ್ರಮಾಣದ ರೈತರಿಗೂ ಅನುಕೂಲಕರ. ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆಗೆ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದಿರುವುದೇ ಇದಕ್ಕೆ ಕಾರಣ. ಇಂಥ ಸಂದರ್ಭದಲ್ಲಿ ಕಡಿಮೆ ನೀರು ನೀಡಿದರೂ ಬೆಳೆಯುವಂಥ ನೇರಳೆ ಪ್ರಾಮುಖ್ಯತೆ ಪಡೆದುಕೊಂಡಿದೆ.

ಬೇರೆ ತೋಟಗಾರಿಕೆ ಬೆಳೆಗಳಿಗೆ ಹೋಲಿಸಿದರೆ ನೇರಳೆ ಗಿಡಗಳಿಗೆ ಕೀಟ ಬಾಧೆ ಮತ್ತು ರೋಗ ಬಾಧೆ ಕಡಿಮೆ. ಪೋಷಕಾಂಶವೂ ಕಡಿಮೆ ಪ್ರಮಾಣದಲ್ಲಿ ಸಾಲುವುದರಿಂದ ನಿರ್ವಹಣಾ ವೆಚ್ಚಾ ಅತೀ ಕಡಿಮೆ. ಆದರೆ ಹಣ್ಣುಗಳಿಗೆ ಕಜ್ಜಿ ರೋಗ ಉಂಟು ಮಾಡುವ ಕೀಟವಿದೆ. ಇದನ್ನು ನಿಯಂತ್ರಣ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಹಣ್ಣಿನಲ್ಲಿ ಗಂಟುಗಳು ಉಂಟಾಗಿ ಮಾರುಕಟ್ಟೆ ಮೌಲ್ಯ ಕಳೆದುಕೊಳ್ಳುತ್ತವೆ.

ಅಧಿಕ ಬಿಸಿಲು ಪ್ರದೇಶಕ್ಕೂ ಸೂಕ್ತ

ಹೆಚ್ಚು ಬಿಸಿಲು ಬೀಳುವ ಪ್ರದೇಶಗಳಿಗೂ ನೇರಳೆ ಸಸ್ಯಗಳು ಸೂಕ್ತ. ಆದ್ದರಿಂದಲೇ ಬಿಸಿಲುನಾಡೇಂದೇ ಹೆಸರಾಗಿರುವ ಬಳ್ಳಾರಿ, ಕೊಪ್ಪಳ, ರಾಯಚೂರು ಪ್ರದೇಶಗಳಲ್ಲಿಯೂ ನೇರಳೆ ಕೃಷಿ ಜನಪ್ರಿಯಗೊಳ್ಳುತ್ತಿದೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ನೇರಳೆ ಕೃಷಿ ವ್ಯಾಪಕಗೊಳ್ಳುತ್ತಿದೆ.

ಕಡಿಮೆ ಗೊಬ್ಬರ, ಕಡಿಮೆ ನೀರು, ಕೀಟಬಾಧೆ-ರೋಗಬಾಧೆ ಅಂಶಗಳ ಗಣನೀಯವಾಗಿ ಕಡಿಮೆ ಇರುವುದರಿಂದಾಗಿ ಕೃಷಿ ಕಾರ್ಮಿಕರ ಅವಶ್ಯಕತೆ ಇರುವ ಸಂದರ್ಭಗಳು ಕಡಿಮೆ. ಕೊಯ್ಲು ಮಾಡುವಾಗ ಮಾತ್ರ ಇವರ ಅವಶ್ಯಕತೆ ಹೆಚ್ಚಿರುತ್ತದೆ. ಈ ಎಲ್ಲ ಕಾರಣಗಳಿಂದ ಬೇರೆ ತೋಟಗಾರಿಕೆ ಬೆಳೆಗಳನ್ನು ಕೃಷಿ ಮಾಡಲು ತಗುಲುವ ವೆಚ್ಚಕ್ಕೆ ಹೋಲಿಸಿದರೆ ನೇರಳೆ ಕೃಷಿ ವೆಚ್ಚ ಭಾರಿ ಕಡಿಮೆ

ನೇರಳೆ ಕೃಷಿಯನ್ನೇ ಪ್ರಮುಖವಾಗಿ ಬೆಳೆಯುವ ಸಂದರ್ಭದಲ್ಲಿ ಕಾಡು ನೇರಳೆ ಸಸಿಗಳನ್ನೇ ತಂದು ಬೆಳೆಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆ ಹಣ್ಣುಗಳ ಗಾತ್ರ ಅತ್ಯಂತ ಕಡಿಮೆ. ಇಳುವರಿಯೂ ಹೆಚ್ಚಿರುವುದಿಲ್ಲ. ಆದ್ದರಿಂದ ಲಾಭದಾಯಕವಾದ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ.. ಈ ನಿಟ್ಟಿನಲ್ಲಿ ಸುಧಾರಿತ ತಳಿಗಳ ಅವಶ್ಯಕತೆ ಹೆಚ್ಚು.

ನೇರಳೆ ಕೃಷಿಯನ್ನು ಮಾಡಲು ಮುಂದಾಗುವವರು ತಮ್ಮ ಪ್ರದೇಶದಲ್ಲಿ ಅತ್ಯುತ್ತಮವಾಗಿ ಬೆಳೆಯುವ ತಳಿ ಯಾವುದೆಂದು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ ತಜ್ಞರ ನೆರವು ಪಡೆದುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಉತ್ತಮ ತಳಿ ಎಂದು ಭಾವಿಸಿ ಗುಣಮಟ್ಟ ಇಲ್ಲದ ತಳಿಗಳನ್ನು ತಂದು ನೆಟ್ಟರೆ ನಷ್ಟವಾಗುತ್ತದೆ. ಇಂದು ಸುಧಾರಿತ ತಳಿಗಳು ಲಭ್ಯವಿವೆ.

ಬೆಳೆಗಾರ ಎನ್.ಸಿ. ಪಟೇಲ್ ಅವರು ನಾಗದಾಸನಗಹಳ್ಳಿ ಮತ್ತು ಕೋಳೂರಿನ ತಮ್ಮ ತೋಟಗಳಲ್ಲಿ ಕಸಿಗಿಡಗಳನ್ನೇ ಬೆಳೆಯುತ್ತಿದ್ದಾರೆ. ಇದಕ್ಕೆ ಬೇಕಾದ ಮೂಲ ಮತ್ತು ಸುಧಾರಿತ ಅಂಶವುಳ್ಳ ತಳಿಗಳು ಇವರ ತೋಟದಲ್ಲಿಯೇ ಇವೆ. ನರ್ಸರಿಗಳಿಂದ ಸಸಿಗಳನ್ನು ಹಣ ತೆತ್ತು ತರುವುದಕ್ಕಿಂತ ಈ ಮಾದರಿಯ ಸಸಿಗಳನ್ನೇ ಬೆಳೆಯುವುದು ಅತ್ಯುತ್ತಮ ಎನ್ನುತ್ತಾರೆ.

ನೇರಳೆ ಕೃಷಿಗೆ ಬೇಡಿಕೆ ಹೆಚ್ಚಿದಂತೆ ನರ್ಸರಿಗಳೂ ಹೆಚ್ಚಾಗಿವೆ. ಕರ್ನಾಟಕದಲ್ಲಿರುವುದಕ್ಕಿಂತ ನೆರೆಯ ಮಹಾರಾಷ್ಟ್ರ, ತಮಿಳುನಾಡಿನಲ್ಲಿರುವ ನರ್ಸರಿಗಳ ಸಂಖ್ಯೆ ಹೆಚ್ಚು. ಎನ್.ಸಿ. ಪಟೇಲ್ ಅವರು ತಾನು ನೇರಳೆ ಕೃಷಿ ಆರಂಭಿಸಿದ ಸಂದರ್ಭದಲ್ಲಿ ನೇರಳೆ ಸಸಿಗಳನ್ನು ಮಾರಾಟ ಮಾಡುವ ನರ್ಸರಿಗಳೇ ಇರಲಿಲ್ಲ ಎನ್ನುತ್ತಾರೆ. ಕಸಿ ಮಾಡಿದ ಗಿಡಗಳೇ ಉತ್ತಮ ಎಂದು ಅದರ ಗುಣಗಳನ್ನು ಪಟ್ಟಿ ಮಾಡುತ್ತಾರೆ

ಕೃಷಿಕ ಎನ್.ಸಿ.ಪಟೇಲ್ ಅವರ ಪುತ್ರ ಪ್ರದೀಪ್ ಸಹ ತೋಟಗಾರಿಕೆಯಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ. ನೇರಳೆ ಕೃಷಿ ಕುರಿತು ಇವರಿಗಿರುವ ತಿಳಿವಳಿಯೂ ಅಪಾರ. ಈ ಹಿನ್ನೆಲೆಯಲ್ಲಿ ನಾಟಿ ಗಿಡಗಳು, ಸುಧಾರಿತ ತಳಿಗಳು ಮತ್ತು ಕಸಿ ಮಾಡಿದ ಸಸಿಗಳ ಗುಣಾವಗುಣಗಳನ್ನು ಪಟ್ಟಿ ಮಾಡುತ್ತಾರೆ. ಎಲ್ಲಿಂದಲೂ ಗಿಡಗಳನ್ನು ತಂದು ನಾಟಿ ಮಾಡುವ ಬದಲು ಕೃಷಿಕರೇ ಗಿಡಗಳನ್ನು ಕಸಿ ಮಾಡಿಸುವುದು ಸೂಕ್ತ ಎಂದು ಅಭಿಪ್ರಾಯಪಡುತ್ತಾರೆ.

ಗಿಡದಿಂದ ಗಿಡಕ್ಕೆ ಸೂಕ್ತ ಅಂತರ

ನೇರಳೆಯನ್ನು ವಾಣಿಜ್ಯ ಬೆಳೆಯಾಗಿ ಮಾಡಲು ಮುಂದಾಗುವವರು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ನೀಡಬೇಕಾದ ಅಂತರವನ್ನು ತಿಳಿಯಬೇಕು. ಸಾಮಾನ್ಯವಾಗಿ ತೋಟಗಳಲ್ಲಿ ಗಿಡದಿಂದ ಗಿಡಕ್ಕೆ ನೀಡಿರುವ ಅಂತರ ಹೆಚ್ಚು. ಇವುಗಳ ಅಂತರ 30 ಅಡಿ ತನಕ ಇರುತ್ತಿತ್ತು. ಇದರಿಂದ ಹೆಚ್ಚು ಗಿಡಗಳನ್ನು ನಾಟಿ ಮಾಡಲು ಆಗುವುದಿಲ್ಲ.

ಕಾಡು ನೇರಳೆ ಗಿಡಗಳು ಬಹು ಎತ್ತರವಾಗಿ ಬೆಳೆಯುತ್ತವೆ. ವಾಣಿಜ್ಯ ಬೆಳೆಯಾಗಿ ತೆಗೆದುಕೊಂಡಾಗ ಈ ರೀತಿ ಬೆಳೆಯಲು ಬಿಟ್ಟರೆ ಹಣ್ಣುಗಳ ಕೊಯ್ಲು ಕಾರ್ಯ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಅವುಗಳು ಎತ್ತರಕ್ಕೆ ಬೆಳೆಯದಂತೆ ಪ್ರೂನಿಂಗ್ ಮಾಡಬೇಕಾಗುತ್ತದೆ. ಗಿಡ ಕಡಿಮೆ ಅಂತರದಲ್ಲಿ ರೆಂಬೆಗಳನ್ನು ಅರಳಿಸಿಕೊಂಡರೆ ಹಣ್ಣುಗಳ ಕೊಯ್ಲು ಸಲೀಸು. ಕಡಿಮೆ ಅಂತರದಲ್ಲಿ ನೆಲಕ್ಕೆ ಬೀಳುವುದರಿಂದ ಹಾಳಾಗುವ ಹಣ್ಣುಗಳ ಸಂಖ್ಯೆಯೂ ಕಡಿಮೆ.

ಮಾರುಕಟ್ಟೆಯಲ್ಲಿ ದಪ್ಪ ಗಾತ್ರದ ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಇಂಥ ತಳಿಯನ್ನು ಜಂಬು ನೇರಳೆ ಎಂದು ಕರೆಯುತ್ತಾರೆ. ನರ್ಸರಿಯಿಂದ ಸಸಿ ತರುವ ಸಂದರ್ಭದಲ್ಲಿ ಅಥವಾ ಕಸಿ ಮಾಡುವ ಸಂದರ್ಭದಲ್ಲಿ ಅವುಗಳು ಜಂಬು ಅಂದರೆ ದೊಡ್ಡ ಗಾತ್ರದ ಹಣ್ಣುಗಳನ್ನು ನೀಡುತ್ತವೆಯೇ ಎಂದು ಖಾತರಿ ಪಡಿಸಿಕೊಳ್ಳಬೇಕು. ದೊಡ್ಡ ಗಾತ್ರದ ಹಣ್ಣುಗಳು ದೂರದೂರದ ರಾಜ್ಯಗಳಿಗೆ ಸಾಗಣೆಯಾಗುತ್ತವೆ. ವಿದೇಶಗಳಿಗೂ ರಫ್ತಾಗುತ್ತವೆ.

ಸಾಮಾನ್ಯವಾಗಿ ನೇರಳೆ ಮರಗಳು ಮಾರ್ಚ್, ಏಪ್ರಿಲ್ ನಲ್ಲಿ ಹೂ ಬಿಡಲು ಆರಂಭಿಸುತ್ತವೆ. ಈ ಬಳಿಕ ಹಸಿರು ಬಣ್ಣದ ಕಾಯಿಗಳು ಗೊಂಚಲು ಗೊಂಚಲಾಗಿ ಕಾಣಿಸಿಕೊಳ್ಳುತ್ತವೆ. ತದ ನಂತರ ಈ ಹಸಿರು ಬಣ್ಣದ ಕಾಯಿಗಳು ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಪಕ್ವವಾದಂತೆಲ್ಲ ಗಾಢ ನೀಲಿ ಬಣ್ಣ ಮತ್ತು ಹೊಳಪು ಹೊಂದುತ್ತವೆ. ಸಾಮಾನ್ಯವಾಗಿ ನೇರಳೆಯನ್ನು ಮರದಲ್ಲಿಯೇ ಹಣ್ಣಾಗಲು ಬಿಡಲಾಗುತ್ತದೆ. ಕಾಯಿ ಇರುವಾಗಲೇ ಕಿತ್ತರೆ ಅವುಗಳು ಹಾಳಾಗುತ್ತವೆ. ಮರದಿಂದ ಹಣ್ಣುಗಳನ್ನು ಕೊಯ್ಲು ಮಾಡಲು ನೈಪುಣ್ಯತೆ ಬೇಕು

ಅತ್ಯುತ್ತಮ ಮಾರುಕಟ್ಟೆ

ನೇರಳೆಹಣ್ಣುಗಳಿಗೆ ಅತ್ಯುತ್ತಮ ಮಾರುಕಟ್ಟೆ ಇದೆ. ಇಂಥ ಅವಕಾಶವನ್ನು ಬೆಳೆಗಾರರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೆಲವೊಂದು ಮುಖ್ಯ ಅಂಶಗಳನ್ನು ಅನುಸರಿಸಬೇಕು. ಹಣ್ಣುಗಳಿಗೆ ಗಾಯವಾಗದಂತೆ ಕೊಯ್ಲು ಮಾಡುವುದರ ಜೊತೆಗೆ ಅದನ್ನು ಸೂಕ್ತ ರೀತಿಯಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಪ್ಯಾಕ್ ಮಾಡಬೇಕು

ಬೆಂಗಳೂರಿನ ಕೆ.ಆರ್. ಮಾರುಕಟ್ಟೆಗೆ ಸ್ಥಳೀಯ ಮತ್ತು ಗ್ರಾಮಾಂತರ ಜಿಲ್ಲೆ, ರಾಮನಗರ, ಕೋಲಾರ, ತುಮಕೂರು ಜಿಲ್ಲೆಗಳಿಂದ ಮತ್ತು ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದಲೂ ನೇರಳೆ ಹಣ್ಣುಗಳನ್ನು ತರಲು ಶುರು ಮಾಡುತ್ತಾರೆ. ಬೆಳಗ್ಗೆ 4 ಗಂಟೆಯಿಂದಲೇ ಇಲ್ಲಿ ವಹಿವಾಟು ಆರಂಭವಾಗುತ್ತದೆ. ಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಬಂದಿದ್ದರೆ ಖರೀದಿಸಲು ಪೈಪೋಟಿ ಉಂಟಾಗಿ ಹೆಚ್ಚು ಬೇಡಿಕೆ ಉಂಟಾಗುತ್ತದೆ.

ದೂರದ ಪ್ರದೇಶಗಳಿಂದ ಬಹಳ ಕಷ್ಟದಿಂದ ಇಲ್ಲಿಗೆ ಸಾಗಣೆ ಮಾಡಿ ತಂದಿರುವ ರೈತರು ಉತ್ತಮ ಮಾರುಕಟ್ಟೆ ನಿರೀಕ್ಷೆಯಲ್ಲಿರುತ್ತಾರೆ. ಸೂಕ್ತ ಬೆಲೆ ದೊರಕಿದರೆ ಅವರಿಗೆ ಅಪಾರ ಖುಷಿಯಾಗುತ್ತದೆ. ತಮ್ಮ ಪರಿಶ್ರಮಕ್ಕೂ ಉತ್ತಮ ಬೆಲೆ ದೊರಕಿತೆಂದು ಭಾವಿಸುತ್ತಾರೆ. ಮಾರುಕಟ್ಟೆಯ ಖರೀದಿದಾರರ ಕೂಗುವಿಕೆ, ಬಂದವರ ಗದ್ದಲಗಳ ನಡುವೆ ಅವರು ತಾವು ಪರಿಶ್ರಮದಿಂದ ಬೆಳೆಗೆ ಉತ್ತಮ ಬೆಲೆ ದೊರೆತರೆ ಸಾಕು ಎಂದು ನಿರೀಕ್ಷಿಸುತ್ತಿರುತ್ತಾರೆ.

ಕೆ.ಆರ್. ಮಾರುಕಟ್ಟೆಯಲ್ಲಿ ನೇರಳೆ ವಹಿವಾಟು ಅಪಾರ ಪ್ರಮಾಣದಲ್ಲಿ ನಡೆಯುತ್ತದೆ. ಬೆಳಗ್ಗೆ 4 ಕ್ಕೆ ಆರಂಭವಾದರೆ ಅಪರಾಹ್ನ 12ಕ್ಕೆಲ್ಲ ಮಾರುಕಟ್ಟೆ ಮುಕ್ತಾಯವಾಗುತ್ತದೆ. ಬುಟ್ಟಿಗಳಲ್ಲಿ, ಪ್ಲಾಸ್ಟಿಕ್ ಕ್ರೇಟುಗಳಲ್ಲಿ ಹಣ್ಣುಗಳನ್ನು ತುಂಬಿ ತಂದಿರುತ್ತಾರೆ. ಹಣ್ಣುಗಳು ಹಾಳಾಗದಿರಲಿ ಎಂದು ಅದರ ಮೇಲೆ ನೇರಳೆ ಎಲೆಗಳನ್ನು ಹರಡಿ ಚೀಲದ ಹೊದಿಕೆ ಹಾಕಿರುತ್ತಾರೆ.

ಬೆಳೆಗಾರರು ತಂದಿರುವ ಹಣ್ಣುಗಳ ಮಾದರಿಗಳನ್ನು ಖರೀದಿದಾರರು ನೋಡುತ್ತಾರೆ. ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಹಣ್ಣುಗಳ ಬುಟ್ಟಿ, ಕ್ರೇಟುಗಳನ್ನು ವಿಂಗಡಿಸಲಾಗುತ್ತದೆ. ಹಣ್ಣುಗಳ ಗಾತ್ರ ಮತ್ತು ಗುಣಮಟ್ಟಕ್ಕೆ ಅನುಸಾರವಾಗಿ ಬೆಲೆ ಕೂಗಲಾಗುತ್ತದೆ. ಈ ಸಂದರ್ಭದಲ್ಲಿ ಬಿಡಿ ಮಾರಾಟಗಾರರು ನಿರೀಕ್ಷಿಸುತ್ತಿರುತ್ತಾರೆ. ಬೆಲೆ ನಿಗದಿ ಆದ ಕೂಡಲೇ ಖರೀದಿದಾರರ ಮುಖಾಂತರ ಇವರು ಹಣ್ಣುಗಳನ್ನು ತೆಗೆದುಕೊಳ್ಳುತ್ತಾರೆ. ಇದೊಂದು ಸಂಕೀರ್ಣ ಪ್ರಕ್ರಿಯೆ. ಈ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಂಡ ಬಳಿಕ ಬೆಳೆಗಾರರಿಗೆ ಹಣ ಸಂದಾಯವಾಗುತ್ತದೆ.

ಸಾಮಾನ್ಯವಾಗಿ ರೈತರಿಂದ ಹಣ್ಣುಗಳನ್ನು ಖರೀದಿಸಿದ ನಂತರ ಮತ್ತೆ ಬಿಡಿ ಮಾರಾಟಗಾರಿಗೆ ಮಾರುವಾಗ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಲಾಗುತ್ತದೆ. ಇವರು ಗ್ರಾಹಕರಿಗೆ ಮಾರಾಟ ಮಾಡುವಾಗ ತಮ್ಮ ಖರ್ಚು ಕಳೆದು ಲಾಭಾಂಶ ಸೇರಿಸಿ ಮಾರಾಟ ಮಾಡುತ್ತಾರೆ. ಇದೊಂದು ಬಹು ದೊಡ್ಡ ಮಾರಾಟ ಸರಪಳಿ.

ನೇರಳೆಹಣ್ಣಿನ ಮೌಲ್ಯವರ್ಧನೆ
ನೇರಳೆಹಣ್ಣಿನ ತಿರುಳಿನಿಂದ ವೈನ್, ವಿನೇಗರ್, ಜೆಲ್ಲಿ, ಜಾಮ್, ಜ್ಯೂಸ್ ತಯಾರಿಸಲಾಗುತ್ತದೆ. ಜ್ಯೂಸಿಗಂತೂ ಭಾರಿ ಪ್ರಮಾಣದಲ್ಲಿ ಬೇಡಿಕೆ ಇದೆ. ಇಂಥ ಪಾನೀಯಗಳನ್ನು ತಯಾರಿಸುವ ಕಂಪನಿಗಳು ಬೆಳೆಗಾರರಿಂದ ನೇರವಾಗಿ ಹಣ್ಣುಗಳನ್ನು ಖರೀದಿ ಮಾಡಿದರೆ ಬೆಳೆದವರ ಪರಿಶ್ರಮಕ್ಕೆ ಹೆಚ್ಚಿನ ಮೌಲ್ಯ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮೌಲ್ಯವರ್ಧನೆ ಕಾರ್ಯ ಹೆಚ್ಚುಹೆಚ್ಚಾಗಿ ನಡೆಯಬೇಕಾಗಿದೆ.

ರಾಜ್ಯದಲ್ಲಿ ಫಲವತ್ತತೆ ಕಡಿಮೆ ಇರುವ ಭೂಮಿ ಸಾಕಷ್ಟಿದೆ. ಇಂಥಲ್ಲಿ ನೇರಳೆ ಕೃಷಿಯನ್ನು ಮಾಡಬಹುದು. ಇದರಿಂದ ಆಗುವ ಅನುಕೂಲಗಳು ಅಪಾರ. ಕಡಿಮೆ ಖರ್ಚು, ಕಡಿಮೆ ಶ್ರಮ, ಕೃಷಿ ಕಾರ್ಮಿಕರ ಅಗತ್ಯವೂ ಕಡಿಮೆ. ಮಾರುಕಟ್ಟೆಯೂ ವಿಸ್ತಾರವಾಗಿದೆ. ದಿನದಿಂದ ದಿನಕ್ಕೆ ಈ ಹಣ್ಣಿನ ಮೌಲ್ಯವರ್ಧನೆ ಮಾಡುವ ಕಂಪನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಎಲ್ಲದರ ಲಾಭವನ್ನು ಪಡೆಯಲು ಬೆಳೆಗಾರರು ಮುಂದಾಗಬೇಕಾಗಿದೆ.

2 COMMENTS

  1. ಬಹಳ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ಕೃಷಿಕ ಪಟೇಲ್ ಅವರ ಫೋನ್ ನಂಬರ್ ಕೊಟ್ಟಿದ್ದರೆ ಚೆನ್ನಾಗಿತ್ತು. ಇಂತಹ ಅಪರೂಪದ ಕೃಷಿ ಬಗ್ಗೆ ತಿಳಿಸುತ್ತಿರಿ. ಬರಡು ಭೂಮಿ, ಕಡಿಮೆ ಫಲವತ್ತತೆಯ ಜಮೀನುಗಳ ರೈತರಿಗೆ ಇಂತಹ ಮಾಹಿತಿಗಳು ತುಂಬ ಉಪಯುಕ್ತ.

  2. ಯಾವ ತಳಿ ಉತ್ತಮ, ಗಿಡ ನೆಟ್ಟ ನಂತರ ಎಷ್ಟು ವರ್ಷಗಳಾದ ಮೇಲೆ ಫಸಲು ಬರುತ್ತದೆ? IIHR ನಲ್ಲಿ ಸುಧಾರಿತ ಸಸ್ಯಗಳು ಸಿಗಬಹುದೇ? ಮುಂತಾದ ವಿವರಗಳನ್ನು ನೀಡಿದರೆ ಒಳ್ಳೆಯದು

LEAVE A REPLY

Please enter your comment!
Please enter your name here