ಚಿತ್ರ-ಲೇಖನ: ಕುಮಾರ ರೈತ

ಹೈನುರಾಸುಗಳಿಗೆ ಮೇವನ್ನು ಒದಗಿಸುವ ರೀತಿ ವೈಜ್ಞಾನಿಕ ದೃಷ್ಟಿಯಿಂದ ಕೂಡಿರಬೇಕು. ಒಂದು ಹಸುವಿಗೆ ಒಂದು ದಿನಕ್ಕೆ ಎಷ್ಟು ಪ್ರಮಾಣದ ಮೇವು ಬೇಕು. ಇದು ಎಂಥಾ ಮೇವಾಗಿರಬೇಕು. ಯಾವ ಯಾವ ಪೋಷಕಾಂಶಗಳನ್ನು ನೀಡಬೇಕು ಎಂಬುದನ್ನೆಲ್ಲ ತಿಳಿದಿರಬೇಕು. ಇವೆಲ್ಲದರ ಜೊತೆಗೆ ಒಂದು ಹಸುವಿಗೆ ಒಂದು ದಿನಕ್ಕೆ ಎಷ್ಟು ಪ್ರಮಾಣದ ನೀರು ಅವಶ್ಯಕ ಎಂಬುದನ್ನೂ ಅರಿತಿರುವುದು ಅಗತ್ಯ.

ದಿನದ ಯಾವ ಯಾವ ಸಮಯದಲ್ಲಿ ಮೇವು-ನೀರು ಒದಗಿಸಬೇಕು ಎಂಬುದು ಕೂಡ ಪ್ರಮುಖ ವಿಚಾರ. ಮೇವನ್ನು ಒದಗಿಸುವ ರೀತಿ ಬಗ್ಗೆಯೂ ಗಮನ ನೀಡಬೇಕು. ಹೊಲ-ಗದ್ದೆಯಿಂದ ಕೊಯ್ಲು ಮಾಡಿ ತಂದ ಮೇವನ್ನು ಹಾಗೇ ನೀಡುವುದು ಸೂಕ್ತವಲ್ಲ. ಅದನ್ನು ಸಣ್ಣದಾಗಿ ಕತ್ತರಿಸಿ ನೀಡಬೇಕು. ಕೊಟ್ಟ ಮೇವು ಪೋಲಾಗದಂತೆ ನೋಡಿಕೊಳ್ಳಬೇಕು. ಇಷ್ಟೆಲ್ಲ ಅಂಶಗಳನ್ನು ಅಳವಡಿಸಿದಾಗ ಮಾತ್ರ ಹೈನುಗಾರಿಕೆ ಘಟಕದ ನಿರ್ವಹಣೆ ಸೂಕ್ತ ರೀತಿಯಲ್ಲಿರುತ್ತದೆ.

ಡೈರಿ ಘಟಕದಲ್ಲಿ ಅಬೂಬಕರ್ ಸಿದ್ಧಿಕ್ ಖಂಡಿಗೆ

ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟುವ ರೀತಿಯಲ್ಲಿಯೂ ಭಿನ್ನತೆಗಳಿವೆ. ಮುಖಾಮುಖಿ ಪದ್ಧತಿ, ಬಾಲಬಾಲ ಪದ್ಧತಿಗಳಿವೆ. ಇಲ್ಲಿ ಬಾಲಬಾಲ ಪದ್ಧತಿ ಅನುಸರಿಸಲಾಗಿದೆ. ಇದರಿಂದ ಸಾಕಷ್ಟು ಉತ್ತಮಮ ಪರಿಣಾಗಳು ಉಂಟಾಗುತ್ತವೆ. ಹಾಲು ಕರೆಯುವ ಯಂತ್ರಗಳನ್ನು ಕೆಚ್ಚಲುಗಳಿಗೆ ಅಳವಡಿಸಲು ಪೈಪುಗಳನ್ನು ಸರಾಗವಾಗಿ ತೆಗೆದುಕೊಂಡು ಹೋಗಬಹುದು, ಏಕಕಾಲದಲ್ಲಿ ಎರಡು ಬದಿಯ ಹಸುಗಳ ಕೆಚ್ಚಲುಗಳ ಪರಿಶೀಲನೆಯೂ ಸಾಧ್ಯವಾಗುತ್ತದೆ.

ಮುಖಾಮುಖಿ ಪದ್ಧತಿಯಲ್ಲಿ ಹಸುಗಳನ್ನು ಕಟ್ಟಿದಾಗ ಗಂಜಲ ಮತ್ತು ಕೊಟ್ಟಿಗೆ ತೊಳೆದ ನೀರು ಹರಿದು ಹೋಗಲು ಎರಡು ಚರಂಡಿಗಳನ್ನು ನಿರ್ಮಿಸಬೇಕಾಗುತ್ತದೆ. ಆದರೆ ಬಾಲಬಾಲ ಪದ್ಧತಿಯಲ್ಲಿ ಒಂದೇ ಚರಂಡಿ ಸಾಕಾಗುತ್ತದೆ. ಇದು ಕೆಲಸದ ಹೊರೆಯನ್ನು ಕಡಿಮೆ ಮಾಡುವುದಲ್ಲದೇ ಕೆಲಸಕಾರರ ಸಂಖ್ಯೆಯನ್ನು ತಗ್ಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಸರಾಗವಾಗಿ  ಕೈಗಾಡಿ ಎಳೆದುಕೊಂಡು ಹೋಗಿ ಸಗಣಿ ಎತ್ತಿ ಹಾಕುವುದು ಕೂಡ ಸಲೀಸಾಗುತ್ತದೆ.

ಮುಖಾಮುಖ ಪದ್ಧತಿ ಕೊಟ್ಟಿಗೆ

ಹೈನು ಘಟಕ ಬೃಹತ್ ಆದಷ್ಟು ನಿರ್ವಹಣೆ ಕಷ್ಟಕರ. ಆದ್ದರಿಂದ ಸೂಕ್ತ ಯೋಜನೆ ಅಗತ್ಯ. ಸಾಂಕ್ರಮಿಕ ರೋಗಗಳು ಬಂದರೆ ಬಹುಬೇಗ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಶುವೈದ್ಯರು ನಿಯಮಿತವಾಗಿ ಬಂದು ತಪಾಸಣೆ ಮಾಡುವುದು ಅಗತ್ಯ. ರೋಗಬಾಧೆ ಇದೆ ಎಂದು ಕಂಡು ಬಂದ ಹಸುವನ್ನು ಪ್ರತ್ಯೇಕವಾಗಿರಿಸುವುದು ಅತ್ಯಂತ ತುರ್ತಿನ ಕಾರ್ಯ. ಅದನ್ನು ಬೇರೆ ಕಡೆ ಇಟ್ಟು ಚಿಕಿತ್ಸೆ ನೀಡಲು ಆರಂಭಿಸಬೇಕು.

ಪೋಷಕಾಂಶಗಳನ್ನು ಸಮರ್ಪಕ ಪ್ರಮಾಣದಲ್ಲಿ ನೀಡದಿದ್ದರೆ ಹಸುಗಳ ರೋಗ ನಿರೋಧಕ ಶಕ್ತಿ, ಹಾಲು ಉತ್ಪಾದಕ ಶಕ್ತಿ ಕುಗ್ಗುತ್ತದೆ. ಅದು ರೋಗಗಳ ಗೂಡಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಧಿಕ ಹಾಲು ನೀಡುವ ತಳಿಯ ಹಸುಗಳಿಗೆ ಅಧಿಕ ಪೌಷ್ಟಿಕಾಂಶದ ಅಗತ್ಯತೆ ಇರುತ್ತದೆ. ವಿವಿಧ ತಳಿಗಳ ಹಸಿರು ಮೇವು ನೀಡುವುದರಿಂದ ಪೌಷ್ಟಿಕಾಂಶಗಳ ಕೊರತೆ ತಕ್ಕಮಟ್ಟಿಗೆ ನೀಗುತ್ತದೆಯಾದರೂ ಪಶು ಆಹಾರದ ಅವಶ್ಯಕತೆಯೂ ಇರುತ್ತದೆ. ಟಾನಿಕ್ ಗಳನ್ನೂ ನೀಡಬೇಕಾಗುತ್ತದೆ.

ಪ್ರಸ್ತುತ ಈ ಹೈನುಘಟಕದಲ್ಲಿ 150ಕ್ಕೂ ಹೆಚ್ಚು ಹಸುಗಳಿವೆ. ಇದನ್ನು 500 ಹೈನುರಾಸುಗಳಿರುವ ಘಟಕವಾಗಿ ಮತ್ತಷ್ಟೂ ಮೇಲ್ದರ್ಜೆಗೇರಿಸಲು ಸಿದ್ಧಿಕ್ ಅವರು ಸಿದ್ಧತೆ ನಡೆಸಿದ್ದಾರೆ. ಇದು ಭವಿಷ್ಯದ ಯೋಜನೆಯಾಗಿದೆ. ಇದರ ಜೊತೆಗೆ ಕ್ಷೀರೋದ್ಯಮದಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಇದುವರೆಗೂ ಇವರ ಬದ್ಧತೆ ಮತ್ತು ಯಶಸ್ಸು ಗಮನಿಸಿದರೆ ಇವೆಲ್ಲ ಯೋಜನೆಗಳು ಸಫಲಗೊಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ

ಹೈನುಗಾರಿಕೆಯಲ್ಲಿ ಅನುಭವ ಪಡೆಯಬೇಕು, ಮಾಡುತ್ತಿರುವ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸಬೇಕು ಎಂಬ ನಿರೀಕ್ಷೆಗಳೊಂದಿಗೆ ಬರುವ ಆಸಕ್ತರಿಗೆ ಸಿದ್ಧಿಕ್ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಇದೆಲ್ಲದರ ಜೊತೆಗೆ ಅವರು ಕಾರ್ಮಿಕರೊಂದಿಗೆ ಸ್ನೇಹಭಾವನೆಯಿಂದ ಇರುವುದು ಕೂಡ ಗಮನಾರ್ಹ ಸಂಗತಿಯೇ ಆಗಿದೆ. ಇವೆಲ್ಲ ಕಾರಣಗಳಿಂದ ಇದೊಂದು ಹೈನುಗಾರಿಕೆ ಪಾಠಶಾಲೆಯೇ ಆಗಿದೆ.

1 COMMENT

LEAVE A REPLY

Please enter your comment!
Please enter your name here