ಚಿತ್ರ-ಲೇಖನ: ಕುಮಾರ ರೈತ

ಕರುಗಳ ಪೋಷಣೆಯೇ ಸವಾಲಿನ ಕೆಲಸ. ಇದರಲ್ಲಿ ವ್ಯತ್ಯಯಗಳು ಉಂಟಾದರೆ ಕರುಗಳ ಸಾವು ಸಂಭವಿಸುವ ಸಾಧ್ಯತೆ ಅಪಾರ. ಸಾಂಪ್ರದಾಯಿಕ ಹೈನುಗಾರಿಕೆಯಲ್ಲಿ ಕರುಗಳ ಪೋಷಣೆಗೂ, ಆಧುನಿಕ ಹೈನುಗಾರಿಕೆಯಲ್ಲಿನ ಕರುಗಳ ಪೋಷಣೆಗೂ ಸಾಕಷ್ಟು ವ್ಯತ್ಯಾಸಗಳಿವೆ. ವಾಣಿಜ್ಯ ದೃಷ್ಟಿಯಿಂದ ಹೈನುಗಾರಿಕೆ ಮಾಡುವ ಸಂದರ್ಭದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳಿವು ಎಂದು ಹೇಳಲಾಗುತ್ತದೆ.
ಹಸುಗಳಿಗೆ ನೀಡುವ ಪ್ರಾಮುಖ್ಯತೆಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಕರುಗಳಿಗೆ ನೀಡಬೇಕಾಗುತ್ತದೆ. ಬೃಹತ್ ಕಾಯದ ಹಸುಗಳು ಹೆಚ್ಚು ಸಂಖ್ಯೆಯಲ್ಲಿ ಇರುವ ಕೊಟ್ಟಿಗೆಯಾದರೆ ಕರುಗಳನ್ನು ತಾಯಿ ಹಸುವಿನ ಜೊತೆಗೆ ಕಟ್ಟುವುದು ಸೂಕ್ತವಲ್ಲ. ಪ್ರತ್ಯೇಕವಾಗಿ ಕಟ್ಟಬೇಕು. ಇದನ್ನು ಕಟ್ಟುವ ಜಾಗ ಸ್ವಚ್ಛವಾಗಿರಬೇಕು. ಏಕೆಂದರೆ ಕರುವಿನ ದೇಹ ಪ್ರಕೃತಿ ಸೂಕ್ಷ್ಮ. ಸಣ್ಣಸಣ್ಣ ಸೋಂಕುಗಳಿಗೂ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಅಬೂಬಕರ್ ಸಿದ್ದಿಕ್ ಖಂಡಿಗೆ ಹೇಳುತ್ತಾರೆ.

ಡೈರಿ ಘಟಕದಲ್ಲಿ ಅಬೂಬಕರ್ ಸಿದ್ಧಿಕ್ ಖಂಡಿಗೆ

ಕೊಟ್ಟಿಗೆಯಲ್ಲಿ ಸೊಳ್ಳೆ ಮತ್ತು ನೊಣಗಳ ಹಾವಳಿ ತೀವ್ರವಾಗಿರುತ್ತದೆ. ಇದನ್ನು ನಿಯಂತ್ರಿಸುವುದು ಅತ್ಯಂತ ಅಗತ್ಯ. ಇಲ್ಲದಿದ್ದರೆ ಇದು ಸೋಂಕು ರೋಗಗಳಿಗೆ ನಾಂದಿಯಾಗುತ್ತದೆ. ಇದನ್ನೆಲ್ಲ ತಡೆಯಲು ಕೊಟ್ಟಿಗೆಯಲ್ಲಿ ಫ್ಯಾನುಗಳನ್ನು ಅಳವಡಿಸಲಾಯಿತು. ಇದರ ಜೊತೆಗ ಮ್ಯಾಟ್ ಗಳನ್ನು ಕೂಡ ಹಾಕಿದ್ದು ಸ್ವಚ್ಛತೆಯ ನಿರ್ವಹಣೆಗೆ ಮತ್ತಷ್ಟೂ ಅನುಕೂಲವಾಯಿತು. ಇದಕ್ಕೆಲ್ಲ ಹೆಚ್ಚು ಹಣ ಖರ್ಚಾದರೂ ಆ ಬಗ್ಗೆ ಚಿಂತಿಸಲಿಲ್ಲ

ಈ ಹೈನುಘಟಕವನ್ನು ಆರಂಭಿಸಿದಾಗ ಇದ್ದಿದ್ದು ಕೇವಲ ಐದೇ ಹಸುಗಳು ಇಂದು ಇಲ್ಲಿ ನೂರೈವತ್ತಕ್ಕೂ ಹೆಚ್ಚು ಹಸುಗಳಿವೆ. ಆರಂಭದಲ್ಲಿ ಹೆಚ್ಚು ಕ್ಷೀರೋತ್ಪಾದನೆ ಮಾಡದ ಹಸುಗಳನ್ನು ತಂದಿದ್ದರು. ಅವುಗಳಲ್ಲಿ ಸಂಕರ ತಳಿಗಳೇ ಹೆಚ್ಚಾಗಿದ್ದವು. ಅನುಭವ ಹೆಚ್ಚಿದಂತೆ ಬೇರೆಬೇರೆಡೆಯಿಂದ ಹೆಚ್ಚು ಹಾಲು ನೀಡುವ ಎಚ್.ಎಫ್. ಮತ್ತು ಜರ್ಸಿ ತಳಿಗಳನ್ನು ತಂದರು. ಪ್ರಸ್ತುತ ಇಲ್ಲಿ ವಿದೇಶಿ ತಳಿಗಳಲ್ಲದೇ ಸ್ಥಳೀಯ ತಳಿ ಹಸುಗಳೂ ಇವೆ. ಗೀರ್ ತಳಿ ಹಸುಗಳು ಇಲ್ಲಿರುವುದು ಗಮನಾರ್ಹ.

ವರ್ಷದಿಂದ ವರ್ಷಕ್ಕೆ ಈ ಘಟಕದಲ್ಲಿ ಹೈನುರಾಸುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿನ ನಿರ್ವಹಣೆ ನೋಡಲು ಬರುವ ಆಸಕ್ತ ರೈತರು ಮತ್ತು ಹೈನೋದ್ಯಮವನ್ನೇ ಅವಲಂಬಿಸಿದವರು ಹೆಚ್ಚುವರಿ ಎನಿಸಿದ ಹಸುಗಳನ್ನು ಮಾರಾಟ ಮಾಡುವ ಆಲೋಚನೆ ಬಗ್ಗೆ ವಿಚಾರಿಸಿದ್ದರು. ಈ ನಂತರ ಹೈನುರಾಸುಗಳನ್ನು ಚೆನ್ನಾಗಿ ಸಾಕಣೆ ಮಾಡಿ ಅದು ಉತ್ತಮ ಪ್ರಮಾಣದ ಹಾಲು ನೀಡುವ ಹಂತಕ್ಕೆ ಬಂದಾಗ ಅದನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಲೂ ಸಾಕಷ್ಟು ಲಾಭವಿದೆ.

ಬೃಹತ್ ಹೈನು ಘಟಕಗಳನ್ನು ನಿರ್ವಹಣೆ ಮಾಡುವ ಕಾರ್ಯ ಒಬ್ಬಿಬ್ಬರಿಂದ ಆಗುವುದಿಲ್ಲ. ಹೆಚ್ಚು ಸಂಖ್ಯೆಯಲ್ಲಿ ಕೆಲಸಗಾರರು ಬೇಕಾಗುತ್ತಾರೆ. ಕೃಷಿ ಮತ್ತು ಕೃಷಿ ಸಂಬಂಧಿತ ಕಾರ್ಯಗಳಿಗೆ ಸ್ಥಳೀಯವಾಗಿ ಕಾರ್ಮಿಕರ ಲಭ್ಯತೆಯಲ್ಲಿ ಸಾಕಷ್ಟು ಕೊರತೆ ಇದೆ. ಆದ್ದರಿಂದ ಇವರು ಉತ್ತರ ಭಾರತದ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಅವರಿಗೆ ಸೂಕ್ತ ತರಬೇತಿ ನೀಡಿದ್ದಾರೆ.

ಹೆಚ್ಚು ಮಂದಿ ಕೆಲಸಗಾರರು ಇದ್ದಾಗ ಸಮನ್ವಯತೆ ಇರದಿದ್ದರೆ ಕೆಲಸದಲ್ಲಿ ಕೊರತೆಗಳು ಉಂಟಾಗುತ್ತವೆ. ಆದ್ದರಿಂದಲೇ ಇಲ್ಲಿ ಪ್ರತಿಯೊಬ್ಬರಿಗೂ ನಿರ್ದಿಷ್ಟ ಕೆಲಸಗಳನ್ನು ವಹಿಸಲಾಗಿದೆ. ಕೊಟ್ಟಿಗೆ ಸ್ವಚ್ಛತೆ, ಹಾಲು ಕರೆಯುವಿಕೆ, ಸಂಗ್ರಹಣೆ, ಡೈರಿಗೆ ರವಾನೆ, ಮೇವು ತರುವಿಕೆ, ಮೇವು ಕತ್ತರಿಸುವಿಕೆ, ಕರುಗಳ ಪಾಲನೆ, ತೋಟದ ನಿರ್ವಹಣೆ ಇತ್ಯಾದಿ ಕೆಲಸಗಳನ್ನು ಬೇರೆಬೇರೆ ವ್ಯಕ್ತಿಗಳಿಗೆ ವಹಿಸಿದ್ದಾರೆ. ಇವರು ತಾವು ಮಾಡುವ ಈ ಕಾರ್ಯಗಳಲ್ಲೆಲ್ಲ ನಿಪುಣರು ಆಗಿದ್ದಾರೆ. ಇದು ಒಟ್ಟಾರೆ ಘಟಕದ ನಿರ್ವಹಣೆ ಮೇಲೆ ಉತ್ತಮ ಪರಿಣಾಮ ಬೀರಿದೆ.

ಹೈನು ಘಟಕದ ಮಾಲೀಕರಾದ ಅಬೂಬಕರ್ ಅವರು ಉಸ್ತುವಾರಿಗಷ್ಟೆ ಸೀಮಿತವಾಗಿಲ್ಲ. ತಾವು ಕೂಡ ಕೆಲಸದಲ್ಲಿ ತೊಡಗುತ್ತಾರೆ. ಹಸುಗಳ ಮೈ ತೊಳೆದ ನಂತರ ಬ್ರಷ್ ನಿಂದ ಅದನ್ನು ಉಜ್ಜುವ ಪರಿಪಾಠವನ್ನು ಇಲ್ಲಿ ರೂಢಿಸಿಕೊಳ್ಳಲಾಗಿದೆ. ಹಸುಗಳಿಗೆ ಮೈ ತುರಿಕೆ ಇದರಿಂದ ಕಡಿಮೆಯಾಗುತ್ತದೆ. ಅದರ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಇಂಥ ಸಣ್ಣಸಣ್ಣ ಅಂಶಗಳು ಕೂಡ ಹೈನೋದಮದಲ್ಲಿ ಪರಿಣಾಮಕಾರಿ ಸಂಗತಿಗಳಾಗಿವೆ.

ಹಸುಗಳಿಗೆ ಮೇವನ್ನು ಕತ್ತರಿಸಿ ನೀಡಲು ಇಲ್ಲಿ ಚಾಪ್ ಕಟರ್ ಯಂತ್ರವಿದೆ. ಗ್ರಾಮಾಂತರ ಪ್ರದೇಶವಾದ ಕಾರಣ ವಿದ್ಯುತ್ ಲಭ್ಯತೆ ಇಲ್ಲದಿದ್ದ ಸಂದರ್ಭಗಳಲ್ಲಿ ಜನರೇಟರ್ ಬಳಸಿಯೂ ಇದನ್ನು ಚಾಲನೆ ಮಾಡಲಾಗುತ್ತದೆ. ಈ ಯಂತ್ರಕ್ಕೆ ಉದ್ಧದ ದೊಡ್ಡದೊಡ್ಡ ಹುಲ್ಲಿನ ಹೊರೆಗಳನ್ನು ಹಾಕಿದರೆ ಅದು ಸಣ್ಣಸಣ್ಣ ತುಣುಕುಗಳಾಗಿ ಹೊರ ಬೀಳುತ್ತದೆ. ತೋಟದಲ್ಲಿ ಸಿಗುವ ಸಸ್ಯ ತ್ಯಾಜ್ಯಗಳನ್ನು ಇಲ್ಲಿ ಹಾಕಿ ಸಣ್ಣದಾಗಿ ಕತ್ತರಿಸಲಾಗುತ್ತದೆ. ಬಾಳೆ ದಿಂಡನ್ನು ಹಾಕುವ ಮೊದಲು ಅದನ್ನು ಕತ್ತರಿಸಿ ಅದರ ಭಾಗಗಳನ್ನು ಯಂತ್ರಕ್ಕೆ ಹಾಕಿ ತುಣುಕುಗಳಾಗುವಂತೆ ಮಾಡಲಾಗುತ್ತದೆ. ಈ ರೀತಿ ಮಿಶ್ರಿತವಾದ ಮೇವನ್ನು ಹೈನುರಾಸುಗಳು ಆನಂದದಿಂದ ಮೇಯುತ್ತವೆ.
ಕರುಗಳು ಜನಿಸಿದ ನಂತರ ಅವುಗಳನ್ನು ತಾಯಿ ಹಸುವಿನ ಜೊತೆ ಬಿಡುವುದಿಲ್ಲ. ಇದಕ್ಕೆ ಕಾರಣ ಕರು ಬಿಟ್ಟರೆ ಮಾತ್ರ ಹಸು ಹಾಲು ಕರೆಯಲು ಅವಕಾಶ ನೀಡುವ ಅಭ್ಯಾಸ ರೂಢಿಸಿಕೊಳ್ಳುತ್ತದೆ ಎನ್ನುವುದಾಗಿದೆ. ಇದಲ್ಲದೇ ಭಾರಿ ಗಾತ್ರದ ಹಸುಗಳಿರುವ ಕೊಟ್ಟಿಗೆಯಲ್ಲಿ ಕರುಗಳನ್ನು ಬಿಟ್ಟರೆ ಅವುಗಳು ಕಾಲ್ತುಳಿತಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕರುಗಳನ್ನು ಪ್ರತ್ಯೇಕವಾಗಿ ಕಟ್ಟಿ ನಿರ್ವಹಣೆ ಮಾಡಲಾಗುತ್ತದೆ.

ಹಾಲು ಕರೆದ ನಂತರ ಅದನ್ನು ಸ್ವಚ್ಛವಾದ ಡಬ್ಬದಲ್ಲಿ ಹಾಕಲಾಗುತ್ತದೆ. ಈ ಡಬ್ಬದ ಕೆಳಭಾಗದಲ್ಲಿ ರಬ್ಬರ್ ನಿಪ್ಪಲ್ ಜೋಡಿಸಲಾಗಿರುತ್ತದೆ. ಇದನ್ನು ಕರುವಿನ ಬಾಯಿ ಬಳಿ ಇಟ್ಟರೆ ಅದು ಜೋರಾಗಿ ಚೀಪಿ ಹಾಲು ಕುಡಿಯುತ್ತದೆ. ಒಂದು ಕರುವಿಕೆ ಎಷ್ಟು ಪ್ರಮಾಣದ ಹಾಲು ನೀಡಲಾಗುತ್ತದೆ ಎಂಬ ಬಗ್ಗೆ ನಿಖರತೆ ಇದೆ. ಅವಶ್ಯಕತೆಗಿಂತಲೂ ಹೆಚ್ಚು ಹಾಲು ಕೊಟ್ಟರೆ ಅದಕ್ಕೆ ಭೇದಿ ಉಂಟಾಗುವ ಸಾಧ್ಯತೆ ಇರುತ್ತದೆ. ಕರುವಿಗೆ ಸಾಂಕ್ರಮಿಕ ರೋಗಗಳು ಬಾಧಿಸದಂತೆ ಲಸಿಕೆಗಳನ್ನು ಹಾಕಿಸಲಾಗುತ್ತದೆ.
ಕರು ಬೆಳೆದಂತೆಲ್ಲ ಅದರ ಆಹಾರದ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಮೇವನ್ನು ಪಚನ ಮಾಡಿಕೊಳ್ಳುವ ಹಂತಕ್ಕೆ ಬಂದಾಗ ಬೇರೆಬೇರೆ ತಳಿಯ ಮೇವನ್ನು ಕತ್ತರಿಸಿ ಮಿಶ್ರಣ ಮಾಡಿ ನೀಡಲಾಗುತ್ತದೆ, ಇದರ ಜೊತೆಗೆ ಇತರೇ ಪಶು ಆಹಾರವನ್ನು ಪೂರೈಸಲಾಗುತ್ತದೆ. ಉತ್ತಮ ಮೇವು ಲಭ್ಯವಾಗುವುದರಿಂದ ಕರುವಿನ ಬೆಳವಳಿಗೆ ಶೀಘ್ರವಾಗಿ ವೃದ್ಧಿಸುತ್ತದೆ. ಮುಂದೆ ಅದು ಹಾಲು ನೀಡುವ ಪ್ರಮಾಣದ ಮೇಲೆಯೂ ಪರಿಣಾಮಗಳು ಉಂಟಾಗುತ್ತವೆ.
ನಾಳೆ: ಹಸು ಕಟ್ಟುವ ಪದ್ಧತಿಗಳು: ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 94470 25034

LEAVE A REPLY

Please enter your comment!
Please enter your name here