ಕೆರೆ ತುಂಬಿದರಷ್ಟೇ ಸಾಲದು ! ?

0

ಜಲಾಶಯಗಳಿಂದ ಮಳೆಯಾಶ್ರಿತ ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವುದು ಉತ್ತಮ ಕ್ರಮ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಮುಖ್ಯವಾಗಿ ಅಂತರ್ಜಲ ಏರಿಕೆಯಾಗುತ್ತದೆ. ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ. ಇದರಲ್ಲಿ ಇನ್ನೊಂದು ವಿಚಾರವೂ ಇದೆ. ಸಮೀಪದಲ್ಲಿರುವ ಜಲಾಶಯಗಳಿಗಿಂತ ಈ ಕೆರೆಗಳೇ ಹಳೆಯವು. ಅಂದಿನವರ ದೂರದರ್ಶಿತ್ವದಿಂದ ಇವುಗಳು ನಿರ್ಮಾಣವಾಗಿ ಮಳೆಗಾಲದಲ್ಲಿ ತುಂಬುತ್ತಿದ್ದವು. ಈಗ ಕೆಲವೆಡೆ ಮಳೆ ಪ್ರಮಾಣ ಕಡಿಮೆಯಾದರೂ ಸರಾಸರಿ ಮಳೆ ಬೀಳುವಿಕೆ ಇದ್ದೇ ಇದೆ. ಹಾಗಿದ್ದರೆ ಕೆರೆಗಳಿಗ್ಯಾಕೆ ನೀರು ಹರಿದು ಬರುತ್ತಿಲ್ಲ. ಇದನ್ನೂ ಆಲೋಚಿಸಬೇಕು. ಇವೆಲ್ಲದರ ಜೊತೆಗೆ ಕೃಷಿಕರ ಬದುಕು ಹಸನಾಗಲೂ ದೂರದರ್ಶಿತ್ವದ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇದರ ಬಗ್ಗೆ ಕೃಷಿ – ಪರಿಸರ ತಜ್ಞ, ರಾಜ್ಯ ತೋಟಗಾರಿಕೆ ಇಲಾಖೆ ವಿಶ್ರಾಂತ ನಿರ್ದೇಶಕ, ಬೆಳವಲ ಪ್ರತಿಷ್ಠಾನದ ಮುಖ್ಯಸ್ಥ ಡಾ. ಕೆ. ರಾಮಕೃಷ್ಣಪ್ಪ ಆಲೋಚಿಸಿದ್ದಾರೆ. ಅವರು ಕೃಷಿಕರ ಬದುಕು ಉತ್ತಮವಾಗಲು ಶ್ರಮಿಸುತ್ತಿರುವ ಚಿನ್ನಸ್ವಾಮಿ ವಡ್ಡಗೆರೆ ಮತ್ತು ಇತರ ಚಳವಳಿಗಾರರಿಗೆ- ಸಂಘಟಕರಿಗೆ ಬರೆದ ಪತ್ರ ಇಲ್ಲಿದೆ.

ಕಳೆದ 15 ದಿನಗಳಿಂದ ಚಾಮರಾಜನಗರ ಜಿಲ್ಲೆ, ವಡ್ಡಗೆರೆ ಕೆರೆಯೂ ಸೇರಿದಂತೆ ಸುತ್ತಮುತ್ತಲ ಕೆರೆಗಳಿಗೆ ಕಬಿನಿ ಜಲಾಶಯದ ನೀರು ಹರಿದಿದೆ. ಇದರಿಂದ ನೀರು ತುಂಬಿ ಕೆರೆಗಳು ಕೋಡಿ ಬೀಳುತ್ತಿವೆ.  ಸುತ್ತಮುತ್ತಲ ಗ್ರಾಮಗಳ ಜನರು ಈ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುತ್ತಿರುವ ಚಿತ್ರಗಳನ್ನು ನೋಡಿ ಸಂತೋಷವಾಯಿತು. ನಿಮ್ಮೆಲ್ಲರ ಸತತ ಹೋರಾಟ, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಶ್ರಮದಿಂದಾಗಿ ಇದು ಫಲಪ್ರದವಾಗಿದೆ.

ಕೆರೆ ಕಟ್ಟೆಗಳಲ್ಲಿ ನೀರು ನಿಂತಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಾಗುವುದು, ಪರಿಸರ ಹಸಿರಾಗುವುದು, ಪಶು ಪಕ್ಷಿಗಳಿಗೆ ಅನುಕೂಲವಾಗುವುದು, ರೈತರ ನೀರಿನ ಬವಣೆ ನೀಗಿ ಸ್ವಲ್ಪ ಆದಾಯ ವೃದ್ಧಿಸುವುದು ಸಹಜ. ಇದಕ್ಕಾಗಿಯೇ ಹಿಂದಿನ ಆಡಳಿತರೂಢರು ಹಾಗೂ ನಮ್ಮ ಹಿರಿಯರು ಪ್ರತಿ ಊರಿನಲ್ಲೂ ಕೆರೆಕಟ್ಟೆಗಳನ್ನು ನಿರ್ಮಿಸಿ ಅವುಗಳನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬರುತ್ತಿದ್ದರು. ಇದು ಎಲ್ಲರಿಗೂ ತಿಳಿದ ವಿಷಯ. ನಾನು ಜ್ಞಾಪಿಸುವ ಅಗತ್ಯ ವಿರಲಿಲ್ಲ , ಆದರೂ ಜ್ಞಾಪಿಸುತ್ತಿದ್ದೇನೆ.

ನಾನು 1986-89 ರವರೆವಿಗೆ ಮೈಸೂರು ಜಿಲ್ಲಾ ತೋಟಗಾರಿಕೆ ಅಧಿಕಾರಿಯಾಗಿದ್ದಾಗ ವಡ್ಡಗೆರೆಯೂ ಸೇರಿದಂತೆ ಗುಂಡ್ಲುಪೇಟೆ ತಾಲ್ಲೂಕಿನ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭಗಳಲ್ಲಿ ಅಲ್ಲಿನ ಹಳ್ಳಕೊಳ್ಳಗಳಲ್ಲಿ ನೀರು , ಅಕ್ಕ ಪಕ್ಕ ಮರಗಿಡಗಳು, ಹಸಿರು ಹೊಲ ಗದ್ದೆಗಳನ್ನು ನೋಡಿದ್ದ ನೆನಪು ಈಗಲೂ ಹಸಿರಾಗಿದೆ. ಆದರೆ 2018 ರಲ್ಲಿ ನಿಮ್ಮ ಊರಿಗೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳು ಬೇರೆಯದಾಗಿತ್ತು. ಜತೆಗೆ ಭಯಂಕರವಾಗಿತ್ತು. ಎಲ್ಲಿ ನೋಡಿದರಲ್ಲಿ ಒಣಗಿದ ತೆಂಗಿನ ಮರಗಳು, ಬರಡಾದ ಪರಿಸರ, ವ್ಯವಸಾಯವೇ ಬೇಡವೆನ್ನುತ್ತಿದ್ದ ನಿರಾಸೆ ಮುಖಗಳು!

ಗಿಡಮರಗಳ ಕಣ್ಮರೆ, ಎಲ್ಲೆಂದರಲ್ಲಿ ಕೊರೆದ ಕೊಳವೆಬಾವಿಗಳು, ಹೆಚ್ಚು ನೀರು ಬಯಸುವ ತೆಂಗು, ಬಾಳೆ , ಅಡಿಕೆ, ಭತ್ತ, ಕಬ್ಬು, ತರಕಾರಿ ಬೆಳೆಗಳು ಮತ್ತು ಅವುಗಳ ಉತ್ಪನ್ನ ಹೆಚ್ಚಿಸಲು ಅತಿಯಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ. ಅದಕ್ಕೂ ಮಿಗಿಲಾಗಿ ಕಳೆ ನಾಶಕಗಳ ಬಳಕೆ. ಇವುಗಳಿಂದಾಗಿ ಕೃಷಿ ಪರಿಸರ ಸಂಪೂರ್ಣ ಹಾಳಾಗಿರುವುದೇ ಕೃಷಿ ಅನಾಹುತಗಳಿಗೆ ಕಾರಣವೆಂಬುದನ್ನು ಹಲವಾರು ಸಂದರ್ಭಗಳಲ್ಲಿ ನಾನು ತಿಳಿಸಿದ್ದೇನೆ.

ಗುಂಡ್ಲುಪೇಟೆ ತಾಲ್ಲೂಕಿನ ಕೆರೆಕಟ್ಟೆಗಳಿಗೆ ಈಗ ನೀರು ಬಂದಿದೆ. ರೈತರಲ್ಲಿ ಮತ್ತೆ ವ್ಯವಸಾಯದಲ್ಲಿ ಅಸಕ್ತಿ ಬರಬಹುದು. ಆದರೆ ನನ್ನ ಪ್ರಕಾರ ಇದು ಸಹ ಶಾಶ್ವತವಲ್ಲ. ಮುಂದೆ ಕಬಿನಿ ಡ್ಯಾಮ್ ತುಂಬದೇ ಇರಬಹುದು. ತುಂಬಿದರೂ ಬೆಂಗಳೂರು ಮತ್ತಿತರ ನಗರಗಳಿಗೆ ಕುಡಿಯುವ ನೀರಿಗೆ ಸಾಕಾಗದಿರಬಹುದು. ಸದಾ ನೀರು ಹರಿಯುವ ಮಂಡ್ಯ ಜಿಲ್ಲೆಯಲ್ಲಿ ರೈತರೇನು ಚಿನ್ನದ ಬದುಕು ಬಾಳುತ್ತಿಲ್ಲ. ಆದರೆ ಕೇವಲ 450 ಮಿಲಿ ಮೀಟರ್ ಮಳೆ ಬೀಳುವ ಬರದ ನಾಡಾದ ಕುಷ್ಟಗಿ ತಾಲ್ಲೂಕಿನಲ್ಲಿ ರಮೇಶ್ ಬೆಲವಟಗಿ ಮತ್ತು ಸಂಗಡಿಗರು ಹಸಿರು ಕಾನನಗಳನ್ನು ನಿರ್ಮಿಸಿದ್ದಾರೆ ಅತೀ ಕಡಿಮೆ ಮಳೆ ಬೀಳುವ. ರಾಜಸ್ತಾನದ ಪಿಪ್ಲಾ೦ತ್ರಿಯಲ್ಲಿ ಜನ ಮನಸ್ಸು ಮಾಡಿ ಬರಡು ಭೂಮಿಯನ್ನೂ ಸಹ ಹಸಿರು ಬಂಗಾರವಾಗಿಸಿದ್ದಾರೆ.

ಮಳೆಯಾಶ್ರಿತ ಪ್ರದೇಶಗಳಲ್ಲಿಯೂ ಹಿಂದಿನ ತಪ್ಪನ್ನು ಮತ್ತೆ ಮಾಡದೇ, ಕೃಷಿ ಪರಿಸರವನ್ನು ಉಳಿಸುವ ಬೆಳೆಪದ್ದತಿಗಳನ್ನು ಅನುಸರಿಸುವುದು ಹಿಂದೆಂದಿಗಿಂತ ಈಗ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನನ್ನ ಸರಳ ಸಲಹೆಗಳು ಮುಂದಿನಂತಿವೆ.
1. ನೀರು ಬರುತ್ತೆ ಅಂತ ಮತ್ತೆ ಹೆಚ್ಚು ಹೆಚ್ಚು ಕೊಳವೆ ಭಾವಿಗಳ ತೆಗೆಯುವುದನ್ನು ನಿಲ್ಲಿಸುವುದು .
2. ಮರ ಆಧಾರಿತ ಶಾಶ್ವತ ಕೃಷಿ ಪದ್ದತಿಗಳನ್ನು ಅನುಸರಿಸುವುದು.

3.ಕೃಷಿಯಲ್ಲಿ ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳ ಬಳಕೆಯನ್ನು ಹಂತ ಹಂತ ವಾಗಿ ಕಡಿಮೆ ಮಾಡುವುದು. ಕಳೆ ನಾಶಕಗಳನ್ನು ಈಗಿಂದೀಗಲೇ ಸಂಪೂರ್ಣ ನಿಲ್ಲಿಸುವುದು

  1. ಜಾನುವಾರುಗಳ ಸಾಗಾಣಿಕೆಗೆ ಹೆಚ್ಚು ಒತ್ತು ನೀಡುವುದು.
  2. ಕೆರೆಕಟ್ಟೆಗಳ ನೀರನ್ನು ಅಂತರ್ಜಲ ವೃದ್ಧಿಗೆ, ಧನ ಕರುಗಳ ಕುಡಿಯುವ ನೀರಿಗೆ ಮಾತ್ರ ಮೀಸಲಿಡುವುದು .
  3. ಥೈಲ್ಯಾಂಡ್ ರೀತಿ ಎಲ್ಲ ಕಡೆ ರೈತ ಮಾರುಕಟ್ಟೆಗಳನ್ನು ನಿರ್ಮಿಸಲು ಪ್ರಯತ್ನಿಸುವುದು.

ಮಳೆಯಾಶ‍್ರಿತ ಪ್ರದೇಶಗಳ ಕೆರೆಗಳಿಗೆ ನೀರು ತುಂಬಿಸಲು ಹೋರಾಟ ಮಾಡುತ್ತಿರುವ ಚಳವಳಿಗಾರರು ಈ ಜವಾಬ್ದಾರಿಯನ್ನು ಸಹ ತೆಗೆದು ಕೊಂಡರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟೂ ರಚನಾತ್ಮಕವಾಗುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಮುಖ್ಯವಾಗಿ ಇದಕ್ಕೆ ಅಗತ್ಯವಿರುವ ಕೃಷಿಪದ್ಧತಿಗಳ ಬಗ್ಗೆ ಅಗತ್ಯ ಉದಾಹರಣೆಗಳ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಒಮ್ಮೆ ವಿಶ್ವಾಸ ಮೂಡಿದರೆ ಅದು ನಿರಂತರವಾಗಿ ಮುಂದುವರಿಯುತ್ತದೆ. ಚಳವಳಿಗಾರರ ಹೋರಾಟದ ಪರಿಶ್ರಮದ ಪ್ರತಿಫಲ ಶಾಶ್ವತವಾಗಿರುತ್ತದೆ. ಇವು ನನ್ನ ಮನದಾಳದ ಅಭಿಪ್ರಾಯಗಳು. ದಯವಿಟ್ಟು ತಪ್ಪು ತಿಳಿಯಬೇಡಿ. ಈ ನಿಟ್ಟಿನಲ್ಲಿ ಇತರ ತಜ್ಞರ ಸಲಹೆಗಳನ್ನು ಸಹ ಪಡೆದು ಮುನ್ನೆಡೆಯಿರಿ.

LEAVE A REPLY

Please enter your comment!
Please enter your name here