ಆರೋಗ್ಯದಾಯಕ ಬೆಟ್ಟದ ನೆಲ್ಲಿ ಕೃಷಿ

0

ಯಕೃತ್ತಿನ ಬಲವರ್ಧಕ

ನೆಲ್ಲಿಯು ಭಾರತದ ಒಂದು ಪ್ರಮುಖವಾದ ಔಷಧ ಹಾಗು ಹಣ್ಣಿನ ಬೆಳೆಯಾಗಿದೆ. ಇದನ್ನು ‘ಆಮ್ಲ’ ಅಥವಾ ‘ಇಂಡಿಯನ್ ಗೂಸ್ ಬರ‍್ರಿ’ ಎಂದು ಕರೆಯಲಾಗುತ್ತದೆ. ಇದು ಯುಪೊರಿಯೇಸಿ ಕುಟುಂಬಕ್ಕೆ ಸೇರಿರುತ್ತದೆ. ನೆಲ್ಲಿ ಕಾಯಿಯ ಅತಿ ಹೆಚ್ಚಿನ ಸಿ-ಜೀವಸತ್ವ (ಪ್ರತಿ 100 ಗ್ರಾಂ ಕಾಯಿಯಲ್ಲಿ 700 ಮಿ.ಗ್ರಾಂ) ಹೊಂದಿರುವುದರಿಂದ  ಯಕೃತ್ತಿನ ಬಲವರ್ಧಕವಾಗಿ ಬಳಸಲಾಗುತ್ತದೆ.

ನೆಲ್ಲಿ ಔಷಧಗಳು

ನೆಲ್ಲಿಯನ್ನೂಳಗೊಂಡ ಔಷಧಗಳೆಂದರೆ ಚ್ಯವನ್‌ಪ್ರಾಶ್, ತ್ರಿಫಲ ಚೂರ್ಣ, ಬ್ರಹ್ಮ ರಸಾಯನ ಮತ್ತು ಮಧುಮೇಹ ಚೂರ್ಣ, ನೆಲ್ಲಿಯು ವಿರೇಚಕ, ಮೂತ್ರವರ್ಧಕ ಗುಣಗಳುಳ್ಳ ಅಪರೂಪದ ಬೆಳೆ. ಹಣ್ಣಿನ ತಿರುಳಿನಲ್ಲಿರುವ ಪಿಲ್ವೆöನ್ ಸಸ್ಯಾಸಾರವನ್ನು ನರಗಳ ದೌರ್ಬಲ್ಯಗಳಲ್ಲಿ ಬಳಸಲಾಗುತ್ತದೆ. ಇದಲ್ಲದೆ ಗೃಹ/ಗುಡಿ ಕೈಗಾರಿಕೆಗಳಿಂದ ಇದಕ್ಕೆ ಉತ್ತಮವಾದ ಬೇಡಿಕೆ ಇದೆ. ಇದನ್ನು ತಲೆಗೂದಲಿನ ಎಣ್ಣೆ ತಯಾರಿಕೆಯಲ್ಲಿ ಬಣ್ಣ ತಯಾರಿಕೆಯಲ್ಲಿ, ಶಾಂಪೂ ತಯಾರಿಕೆಯಲ್ಲಿ, ಸೌಂದರ್ಯವರ್ಧಕವಳಲ್ಲಿ ಹಾಗೂ ಹಲ್ಲಿನ ಪುಡಿಗಳಲ್ಲಿ ಬಳಸಲಾಗುತ್ತದೆ.

ಮಣ್ಣು:

ಲಘು ಮಣ್ಣಿನಿಂದ ಜೇಡಿಮಣ್ಣುಗಳವರೆಗೆ ವಿವಿಧ ಬಗೆಯ ಮಣ್ಣುಗಳಲ್ಲಿ ಇದನ್ನು ಬೆಳೆಯಬಹುದಾಗಿದೆ. ಆದರೆ ಹೆಚ್ಚು ಮರಳಿನಿಂದ ಕೂಡಿದ ಮಣ್ಣು ಈ ಬೆಳೆಗೆ ಸೂಕ್ತವಲ್ಲ. ಒಣ ಪ್ರದೇಶದಲ್ಲೂ ಸಹ ಬೆಳೆಯಬಹುದು. ಸ್ವಲ್ಪವಟ್ಟಿಗೆ ಲವಣಾಂಶವಿರುವ ಮಣ್ಣಿನಲ್ಲಿಯೂ ಇದನ್ನು ಬೆಳೆಯಬಹುದಾಗಿದೆ.

ಹವಾಗುಣ:

ಇದು ಉಷ್ಣವಲಯಕ್ಕೆ ಹೊಂದುವಂತಹ ಬೆಳೆ. ವರ್ಷದಲ್ಲಿ 630-800 ಮಿ.ಮೀ. ಮಳೆಯಾದರೆ ಉತ್ತಮವಾಗಿ ಬೆಳೆಯುತ್ತದೆ. ನಾಟಿ ಮಾಡಿದ ಮೊದಲ ಮೂರು ವರ್ಷಗಳ ಕಾಲ ಗಿಡಗಳನ್ನು ಅತಿ ಹೆಚ್ಚಿನ ಬಿಸಿಲು ಮತ್ತು ಕೊರೆಯುವ ಚಳಿಯಿಂದ ರಕ್ಷಿಸಬೇಕಾಗುತ್ತದೆ. ನಂತರ ಗಿಡಗಳು ಹೆಚ್ಚು ಬೆಳೆದಾದ ಮೇಲೆ ಅವುಗಳಿಗೆ ಅತಿ ಕಡಿಮೆ ಮತ್ತು ಹೆಚ್ಚಿನ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಬರುತ್ತದೆ.

ತಳಿಗಳು
ಬನಾರಸಿ:

ಇದು ಜನಪ್ರಿಯ ಅಲ್ಪಾವಧಿ ತಳಿಯಾಗಿದ್ದು, ದೊಡ್ಡ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಸ್ವಕೀಯ ಪರಾಗಸ್ಪರ್ಶ ಸಮಸ್ಯೆ ಇರುವುದರಿಂದ ಇಳುವರಿ ಕಡಿಮೆ ಕೊಡುತ್ತದೆ. ಈ ತಳಿಯು ಕ್ಯಾಂಡಿ ಮಾಡಲು ಸೂಕ್ತವಾಗಿದೆ.

ಕೃಷ್ಣಾ:

ಇದು ಬೇಗ ಕೊಯ್ಲಿಗೆ ಬರುವ ತಳಿಯಾಗಿದ್ದು, ಸಾಧಾರಣ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಸಿಪ್ಪೆ ತೆಳುವಾಗಿದ್ದು ಏಪ್ರಿಕಾಟ್ ಹಳದಿ ಬಣ್ಣದಿಂದ ಕೂಡಿದ್ದು ನೇರಳೆ ಹೊಳಪನ್ನು ಹೊಂದಿ ಹೆಚ್ಚು ನಾರಿನಿಂದ ಕೂಡಿದೆ. ಹಣ್ಣು ಕಡಿಮೆ ರಸ ಹಾಗೂ ಅತಿ ಹೆಚ್ಚಿನ “ಸಿ” ಅನ್ನಾಂಗ ಒಳಗೊಂಡಿದ್ದು ಕ್ಯಾಂಡಿ ಮಾಡಲು ಸೂಕ್ತವಾಗಿದೆ.

ಚಕೈಯಾ:

ಇದು ತಡವಾಗಿ ಕೊಯ್ಲಿಗೆ ಬರುವ ತಳಿಯಾಗಿದ್ದು, ಅಧಿಕ ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳು ಸಾಧಾರಣ ದೊಡ್ಡದಿದ್ದು ತಿರುಳು ನಾರಿನಿಂದ ಕೂಡಿದೆ.
ಕಾಂಚನ್:

ಚಕೈಯಾ ತಳಿಯಿಂದ ನೈಸರ್ಗಿಕವಾಗಿ ಉತ್ಪನ್ನವಾದ ತಳಿ. ಇದು ಮಧ್ಯಮ ಅವಧಿಯ ಹೆಚ್ಚು ಇಳುವರಿ ಕೊಡುವ ತಳಿ. ಹಣ್ಣುಗಳು ಮಧ್ಯಮ ಗಾತ್ರ ಹೊಂದಿದ್ದು ಹಳದಿ ಮಿಶ್ರಿತ ಹಸಿರು ಬಣ್ಣ ಪಡೆದಿರುತ್ತದೆ. ತಿರುಳು ನಾರಿನಿಂದ ಕೂಡಿದ್ದು ಬಿರುಸಾಗಿರುತ್ತದೆ. ಉಪ್ಪಿನಕಾಯಿ ಹಾಗೂ ಇನ್ನಿತರ ಪದಾರ್ಥಗಳ ತಯಾರಿಕೆಗೆ ಸೂಕ್ತ. ಎನ್ ಎ – 6, ಎನ್‌ಎ – 7, ಎನ್‌ಇ-10 ಮತ್ತು ಬಿಎಸ್‌ಆರ್-1 (ಭವಾನಿ ಸಾಗರ್) ಇವುಗಳು ಇತರೆ ಪ್ರಮುಖ ತಳಿಗಳು.

ಬೇಸಾಯ ಕ್ರಮಗಳು
ಸಸ್ಯಾಭಿವೃದ್ಧಿ:

ಸಾಮಾನ್ಯವಾಗಿ ಗುರಾಣಿಕಸಿ ವಿಧಾನದಿಂದ ಸಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದು ವರ್ಷ ಮಯಸ್ಸಿನ ಬೀಜ ಸಸಿಗಳ ಉತ್ತಮವಾದ ತಳಿಗಳಿಂದ ಆಯ್ಕೆ ಮಾಡಿದ ಕಣ್ಣುಗಳನ್ನು ಕಣ್ಣು ಕಸಿ ಮಾಡುವುದರಿಂದ ಉತ್ತಮ ಸಂತತಿಯ ಸಸಿಗಳನ್ನು ಪಡೆಯಬಹುದಾಗಿದೆ. ಆದರೆ ಹಳೆಯ ಮರ ಅಥವಾ ಕಡಿಮೆ ಇಳುವರಿ ಕೊಡುವ ಮರಗಳಿಂದ ಕಣ್ಣುಗಳನ್ನು ಆರಿಸಬಾರದು.

ನಾಟಿ:

ಭೂಮಿಯನ್ನು ಉಳುಮೆ ಮಾಡಿದ ನಂತರ, 1 ಘನ ಮೀ. ಅಳತೆಯ ಗುಣಿಗಳನ್ನು 4.5 ಮೀ. * 4.5 ಮೀ. ಅಂತರದಲ್ಲಿ ತೆಗೆಯಬೇಕು ನಂತರ ಗುಣಿಯಿಂದ ಹೊರತೆಗೆದ ಮಣ್ಣನ್ನು ಸೂರ್ಯನ ಶಾಖಕ್ಕೆ 15-20 ದಿವಸ ಹಾಗೆಯೇ ಬಿಡಬೇಕು. ಪ್ರತಿ ಗುಣಿಯನ್ನು ಮೇಲ್ಮಣ್ಣು 15 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು 0.5 ಕಿ.ಗ್ರಾಂ ರಂಜಕವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ತುಂಬಬೇಕು. ನಂತರ ಕಣ್ಣು ಹಾಕಿದ ಗಿಡಗಳನ್ನು ಗುಣಿಗಳ ಮಧ್ಯದಲ್ಲಿ ಕಣ್ಣು ಹಾಕಿದ ಭಾಗ ಭೂಮಿಯ ಮೇಲ್ಮಟ್ಟದಲ್ಲಿರುವಂತೆ ನಾಟಿ ಮಾಡಬೇಕು.

ನಾಟಿ ಮಾಡುವ ಮೊದಲು 15 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು 0.5 ಕಿ.ಗ್ರಾಂ ರಂಜಕವನ್ನು ಪ್ರತಿ ಗುಣಿಯಲ್ಲಿ ಹಾಕಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ಸಾರಜನಕ 30 ಗ್ರಾಂ (ಪ್ರತಿ ಗಿಡಕ್ಕೆ) ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ 10 ವರ್ಷಗಳ ಕಾಲ ಕೊಡಲು ಶಿಫಾರಸ್ಸು ಮಾಡಲಾಗಿದೆ.

ನೀರಾವರಿ:

ನಾಟಿ ಮಾಡಿದ ಎಳೆಯ ಸಸಿಗಳು ಚೇತರಿಸಿಕೊಳ್ಳುವ ತನಕ 15 ದಿನಗಳ ಅಂತರದಲ್ಲಿ ನೀರು ಕೊಡಬೇಕು. ಫಸಲು ಕೊಡುವ ಮರಗಳಿಗೆ ಬೇಸಿಗೆಯಲ್ಲಿ ಪ್ರತಿ ವಾರಕೊಮ್ಮೆ ನೀರು ಕೊಡಬೇಕು. ಮುಂಗಾರಿನ ನಂತರ ಅಕ್ಟೋಬರ್-ಡಿಸೆಂಬರ್ ತಿಂಗಳುಗಳಲ್ಲಿ 25-30 ಲೀಟರ್ ನೀರನ್ನು ಹನಿ ನೀರಾವರಿ ಪದ್ಧತಿಯಲ್ಲಿ ಕೊಡುವುದರಿಂದ ಉತ್ತಮವಾದ ಇಳುವರಿ ಪಡೆಯಲು ಸಾಧ್ಯ.

ಸವರುವಿಕೆ:

ಸುಮಾರು 4-5 ಒಳ್ಳೆಯ ಆಕಾರದ ಅಗಲ ಕೋನವುಳ್ಳ ಕೊಂಬೆಗಳನ್ನು ಬಿಟ್ಟು ಉಳಿದ ರೆಂಬೆಗಳನ್ನು ಕತ್ತರಿಸಬೇಕು. ಇದಲ್ಲದೆ ರೋಗಗ್ರಸ್ಥ , ಒಣಗಿದ, ನಿಶ್ಯಕ್ತ ಕೊಂಬೆಗಳನ್ನು ಸಹ ಡಿಸೆಂಬರ್ ಕೊನೆಯ ವಾರದಲ್ಲಿ ಕತ್ತರಿಸಿ ತೆಗೆಯಬೇಕು.

ಹೊದಿಕೆ ಮತ್ತು ಅಂತರ ಬೇಸಾಯ:

ಬೇಸಿಗೆಯಲ್ಲಿ ಬತ್ತದ ಹುಲ್ಲು ಅಥವಾ ಗೋಧಿಯ ಹುಲ್ಲನ್ನು ಗಿಡಗಳ ಬುಡದಲ್ಲಿ 15-20 ಸೆಂ.ಮೀ. ಎತ್ತರದವರೆಗೆ ಹೊದಿಸುವುದರಿಂದ ತೇವಾಂಶ ಸಂರಕ್ಷಣೆಯಾಗುವುದಲ್ಲದೆ ಕಳೆಗಳನ್ನು ಹತೋಟಿಯಲ್ಲಿಡಬಹುದು. ಹೆಸರುಕಾಳು, ಹುರುಳಿಕಾಳು, ಅಥವಾ ಅಲಸಂದ ಬೆಳೆಗಳನ್ನು ಸುಮಾರು 8 ವರ್ಷಗಳ ಕಾಲ ಬೆಟ್ಟದ ನೆಲ್ಲಿಯಲ್ಲಿ ಅಂತರ ಬೆಳೆಗಳಾಗಿ ಬೆಳೆಯಬಹುದಾಗಿದೆ.
ಸಸ್ಯ ಸಂರಕ್ಷಣೆ

ಕೀಟಗಳು: ತೊಗಟೆ ತಿನ್ನುವ ಹುಳು

ಹತೋಟಿ ಕ್ರಮಗಳು: ಪರಿಣಾಮಕಾರಿ ಸಾವಯವ ದ್ರಾವಣಗಳನ್ನು ಪಿಚಕಾರಿಯ ಮೂಲಕ ರಂಧ್ರಗಳೊಳಕ್ಕೆ ಸೇರಿಸಿ ಕೆಸರಿನಿಂದ ಮುಚ್ಚುವುದರಿಂದ ತೊಗಟೆ ತಿನ್ನುವ ಹುಳುಗಳನ್ನು ಹತೋಟಿ ಮಾಡಬಹುದು.

ರೋಗಗಳು: ತುಕ್ಕುರೋಗ

ಹತೋಟಿ ಕ್ರಮಗಳು: ಇಂಡೋಫಿಲ್ ಎಂ.45 ಅನ್ನು ಶೇ. 0.03 ರ ಪ್ರಮಾಣದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ 15 ದಿನಗಳ ನಂತರ ಹೀಗೆ ಎರಡು ಬಾರಿ ಸಿಂಪಡಿಸುವುದರಿAದ ತುಕ್ಕು ರೋಗವನ್ನು ಹತೋಟಿ ಮಾಡಬಹುದು. ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ದ್ರಾವಣ ಸಿಂಪಡಿಸಬೇಕು. ಇದಕ್ಕೂ ಹೆಚ್ಚು ಬಳಸಿದರೆ ಗಿಡಕ್ಕೆ ಹಾಗೂ ಪರಿಸರಕ್ಕೆ ಹಾನಿ.

ಕೊಯ್ಲು ಮತ್ತು ಇಳುವರಿ

ನಾಟಿ ಮಾಡಿದ ಸುಮಾರು 4-5 ವರ್ಷಗಳ ನಂತರ ಗಿಡಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಕಾಯಿಗಳು ತೆಳು ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ಕಾಯಿಗಳು ಬಹಳ ಗಟ್ಟಿಯಾಗಿ ಗಿಡದಲ್ಲಿ ಕಟ್ಟಿಕೊಂಡಿರುವುದರಿAದ ಮರದ ಕೊಂಬೆಯನ್ನು ಜೋರಾಗಿ ಅಲುಗಾಡಿಸುವುರದಿಂದ ಕಾಯಿಗಳು ನೆಲಕ್ಕೆ ಉದುರುತ್ತವೆ. ಅಲ್ಲದೆ ಉದ್ದನೆಯ ಬಿದಿರು ಕಡ್ಡಿಗೆ ಬಾಗಿದ ಕಡ್ಡಿ ಸಹ ಕೊಯ್ಲು ಮಾಡಬಹುದು. ಸದೃಢವಾದ 10 ವರ್ಷದ ಒಂದು ಮರದಿಂದ ಸುಮಾರು 50-70 ಕಿ.ಗ್ರಾಂ ಕಾಯಿಗಳನ್ನು ಕೊಯ್ಲು ಮಾಡಬಹುದಾಗಿದೆ. ಸರಾಸರಿ ಒಂದು ನೆಲ್ಲಿಕಾಯಿಯ ತೂಕ 60-70 ಗ್ರಾಂ ನಷ್ಟಿರುತ್ತದೆ ಹಾಗೂ 1 ಕಿ.ಗ್ರಾಂ ನಲ್ಲಿ 15-20 ಕಾಯಿಗಳಿರುತ್ತವೆ. ಈ ಬೆಳೆಯು ಸುಮಾರು 70 ವರ್ಷಗಳವರೆಗೆ ಇಳುವರಿ ಕೊಡಬಲ್ಲದು.

ಲೇಖಕರು:

ಪಂಕಜ ಬಿ.ಡಿ., ನಾಗರಾಜ್ ಗೋಕಾಂವಿ., ಭರತ್ ಕುಮಾರ್ ಟಿ.ಪಿ., ಡಾ.ಸುಕನ್ಯಾ ಟಿ.ಎಸ್., ಡಾ.ಗಿರೀಶ್ ಆರ್., ಡಾ.ಯೋಗೀಶಾರಾಧ್ಯ ಆರ್.

LEAVE A REPLY

Please enter your comment!
Please enter your name here