ಹಸಿವು ಬಾಧಿಸುತ್ತಿರುವ ಜನಸಂಖ್ಯೆ 828  ಮಿಲಿಯನ್‌ಗೂ ಅಧಿಕ !

0

ಬೆಂಗಳೂರು: ಅಕ್ಟೋಬರ್ 17: ವಿಶ್ವದ ಹಸಿವು ಮತ್ತು ಬಡತನದ ಅರಿವನ್ನು ಹೆಚ್ಚಿಸುವ ಮತ್ತು ಸುಸ್ಥಿರ ಬದಲಾವಣೆಗೆ ಪ್ರೇರೆಪಿಸುವ ಗುರಿಯೊಂದಿಗೆ 1979 ರಿಂದ ಪ್ರತಿ ವರ್ಷ ಆಕ್ಟೋಬರ್ 17 ರಂದು 150ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕುಲಪತಿ ಡಾ. ಕೆ.ಸಿ. ನಾರಾಯಣಸ್ವಾಮಿ ಹೇಳಿದರು.

ಅವರಿಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ರೈತ ತರಬೇತಿ ಸಂಸ್ಥೆ ಮತ್ತು ಸಿಬ್ಬಂದಿ ತರಬೇತಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿತವಾಗಿದ್ದ “ವಿಶ್ವ ಆಹಾರ ದಿನಾಚರಣೆ – 2022  ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯಾವುದೇ ವ್ಯಕ್ತಿ ಅಪೌಷ್ಠಿಕ ಅಥವಾ ಹಸಿವಿನಿಂದ ಬಳಲಬಾರದು ಎಂಬುದು ಮುಖ್ಯ ಉದ್ದೇಶವಾಗಿದ್ದು, “ಯಾರನ್ನೂ ಹಿಂದೆ ಬಿಡಬೇಡಿ” ಎಂಬುದು ಈ ವರ್ಷದ ಘೋಷಾ ವಾಕ್ಯವಾಗಿದೆ ಎಂದರು.

ವಿಶ್ವದಾದ್ಯಂತ ಸುಮಾರು 3.1 ಶತಕೋಟಿ ಜನರಿಗೆ ಉತ್ತಮ ಆಹಾರ ದೊರಕುತ್ತಿಲ್ಲ. ಸುಮಾರು 828 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ. 2019 ರಿಂದ ಕೋವಿಡ್-19 ನಂತಹ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಹಸಿವನ್ನು ಅನುಭವಿಸುವ ಜನರ ಸಂಖ್ಯೆ 100 ಮಿಲಿಯನ್‌ಗಿಂತಲೂ ಅಧಿಕವಾಗಿದೆ ಎಂದು ವಿವರಿಸಿದರು.

ಈ ದಿಶೆಯಲ್ಲಿ  ಆಹಾರ ಉತ್ಪಾದನೆ, ಉತ್ಪಾದಕತೆ ಹಾಗೂ ಸುಸ್ಥಿರ ಬೆಳವಣಿಗೆಗೆ ಒತ್ತುನೀಡಿ ಆರೋಗ್ಯಯುತ ಪೋಷಣೆ, ಪರಿಣಾಮಕಾರಿ ಪರಿಸರ ಮತ್ತು ಉತ್ತಮ ಜೀವನದೊಂದಿಗೆ ಜಾಗತೀಕರಣಗೊಂಡ ಪ್ರಪಂಚದಲ್ಲಿ ನಾವು ಮುನ್ನುಗ್ಗಬೇಕಾಗಿದೆ. ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಎಂದರು.

ಭೂಮಿ ಮೇಲಿನ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಸೇವಿಸುವ ಹಕ್ಕು ಇದೆ. ಸಮೀಕ್ಕೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚಾಗಿದ್ದಾರೆ. ಬಡರಾಷ್ಟçಗಳಲ್ಲಿ ಶೇ.50 ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಿ ಆಧುನಿಕ ತಾಂತ್ರಿಕತೆಗಳ ಅಳವಡಿಕೆಯಿಂದ ಸದಾ ಹಸಿರು ಕ್ರಾಂತಿಯತ್ತ ಮುನ್ನುಗ್ಗಬೇಕು ಎಂದರು.

ನಾಗರೀಕತೆ ಆಹಾರದ ಮೇಲೆ ಅವಲಂಬಿತವಾಗಿದೆ. ಕೇವಲ ಆಹಾರ ಉತ್ಪಾದನೆಯನ್ನು ಮಾತ್ರ ಹೆಚ್ಚಿಸಿದರೆ ಸಾಲದು. ಅದು ಸಮರ್ಪಕವಾಗಿ ಸಮನಾಗಿ ಹಂಚಿಕೆಯಾದಾಗ ಮಾತ್ರ ದೇಶ ರಾಮರಾಜ್ಯವಾಗುವುದು. ಆಹಾರಕ್ಕಾಗಿ ಬಿಕ್ಷೆಬೇಡುವ ಸ್ಥಿತಿ ಯಾರಿಗೂ ಯಾವ ದೇಶಕ್ಕೂ ಯಾವಕಾಲಕ್ಕೂ ಬರಬಾರದು. ಯಾವ ದೇಶದಲ್ಲಿ ರೈತ ಸಂತೋಷವಾಗಿರುತ್ತಾನೋ ಆ ದೇಶ ಸುಭಿಕ್ಷವಾಗಿರುವುದು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ , ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ವಿಸ್ತರಣಾ ನಿರ್ದೇಶಕ ಡಾ. ಕೆ. ನಾರಾಯಣ ಗೌಡ   ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಕೃಷಿವಿಶ್ವವಿದ್ಯಾಲಯದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬೆಂಗಳೂರು ಇಲ್ಲಿನ ಸಹ ವಿಸ್ತರಣಾ ನಿರ್ದೇಶಕ   ಡಾ. ಎಸ್.ಎಲ್.ಜಗದೀಶ್,  ರೈತ ತರಬೇತಿ ಸಂಸ್ಥೆಯ ಮುಖ್ಯ ಬೋಧಕ ಡಾ: ವಿ.ಎಲ್. ಮಧುಪ್ರಸಾದ್, ಮುಖ್ಯ ಬೋಧಕರು, , ಕೃಷಿ ವಿಶ್ವವಿದ್ಯಾಲಯದ ತರಬೇತಿ ಸಂಯೋಜಕ, ಹಿರಿಯ ವಾರ್ತಾತಜ್ಞ ಡಾ: ಕೆ. ಶಿವರಾಮು,  ರೈತ ತರಬೇತಿ ಸಂಸ್ತೆಯ ಸಹ ಪ್ರಾಧ್ಯಾಪಕ  ಡಾ: ಬನು ದೇಶಪಾಡೆ ಹಾಜರಿದ್ದರು

LEAVE A REPLY

Please enter your comment!
Please enter your name here