ಇತ್ತೀಚೆಗೆ ಸುತ್ತೂರು ಜಾತ್ರೆಯ ಅಂಗವಾಗಿ ನಡೆದ ಕೃಷಿ ಗೋಷ್ಠಿಯಲ್ಲಿ ನನ್ನ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದವರ ಪೈಕಿ ನನಗೆ ಹೆಚ್ಚು ಇಷ್ಟವಾದವರು ಆನೇಕಲ್ ತಾಲ್ಲೂಕಿನ ಕಂಬಳೀಪುರದ ಸಾವಯವ ರೈತ ಕಾಂತರಾಜು. ಇವರ ಬಗ್ಗೆ ಅಲ್ಲಲ್ಲಿ ಕೇಳಿದ್ದ ನಾನು ಕಳೆದ ಸಲ ಬೆಂಗಳೂರಿನಲ್ಲಿ ನಡೆದ ಕೃಷಿಮೇಳಕ್ಕೆ ಹೋಗಿದ್ದಾಗ ಭೇಟಿಮಾಡಲು ಪ್ರಯತ್ನಿಸಿದ್ದೆ, ಕರೆ ಮಾಡಿದಾಗ ಅವರು ತೋಟದಲ್ಲಿ ಇರಲಿಲ್ಲ. ಅನ್ಯ ಕೆಲಸ ನಿಮಿತ್ತ ಆಚೆ ಹೋಗಿದ್ದರು.
ಅರಸುವ ಬಳ್ಳಿ ಕಾಲಸುತ್ತಿಕೊಂಡಂತೆ ಇಬ್ಬರೂ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದೇವು .ಇದನ್ನೇ ಅಸ್ತಿತ್ವದ ಆಟ, ನಾವು ತೀವ್ರವಾಗಿ ಬಯಸಿದ್ದು ಆಗಿಯೇ ಆಗುತ್ತದೆ ಎನ್ನುವುದು. ವೇದಿಕೆ ಮೇಲೆ ನಮ್ಮ ಜೊತೆಗೆ ರಾಜಕಾರಣಿಗಳು, ಸಚಿವರೂ ಇದ್ದರು. ಅವರ ಭಾಷಣದ ಸಮಯದಲ್ಲಿ ನಾನು ಕಾಂತರಾಜು ಅವರ ಪಿಸುಮಾತುಗಳನ್ನು ಕೇಳಿಸಿಕೊಳ್ಳುತ್ತಾ ಕುಳಿತಿದ್ದೆ. ಆಗ ಅವರು ನನ್ನೊಂದಿಗೆ ಹಂಚಿಕೊಂಡ ವಿಚಾರಗಳು ಹೀಗಿವೆ.
ಕಾಂತರಾಜು ಅವರಿಗೆ ಒಟ್ಟು ಹತ್ತು ಎಕರೆ ಜಮೀನಿದೆ. ಅದರಲ್ಲಿ ಸಾವಿರಾರು ಅಡಿಗಳವರೆಗೂ ಹತ್ತಾರು ಕೊಳವೆ ಬಾವಿಗಳನ್ನು ಕೊರೆಸಲಾಯಿತಾದರೂ ನಿರೀಕ್ಷೆ ಮಾಡಿದ ಪ್ರಮಾಣದಲ್ಲಿ ನೀರು ಬರಲಿಲ್ಲ. ಎರಡು ಕೊಳವೆ ಬಾವಿಯಿಂದ ಅಲ್ಪಸ್ವಲ್ಪ ನೀರು ಬಂತು. ಅದರಲ್ಲಿ ಸಾವಯವ ಪದ್ದತಿಯಲ್ಲಿ ಸಮಗ್ರ ಬೇಸಾಯ ಮಾಡುತ್ತಾ ಬಂದಿದ್ದು; ನೆಮ್ಮದಿಯಾಗಿದ್ದಾರೆ. ತರಕಾರಿ, ಹೂ, ಮಾವು, ಸಪೋಟ, ಅಂಜೂರಾ, ಹುಣಸೆ, ತೆಂಗು, ನುಗ್ಗೆಕಾಯಿ, ರಾಗಿ, ಅವರೆಕಾಯಿ ಜೊತೆಗೆ ಕುರಿಕೋಳಿ ಸಾಕಾಣೆ ಕೂಡ ಮಾಡುತ್ತಾರೆ.
“ಕಳೆದ ವರ್ಷ, ಹತ್ತು ಸಾವಿರ ರಾಗಿ ಕಾಳನ್ನು ಟ್ರೈಯಲ್ಲಿ ನರ್ಸರಿ ಮಾಡಿ ಮಳೆ ಆಶ್ರಯದಲ್ಲಿ ಆರು ಕ್ವಿಂಟಾಲ್ ರಾಗಿ ಬೆಳೆದೆ. ಮಳೆ ಸರಿಯಾಗಿ ಬಾರದೆ ಒಮ್ಮೆ ಟ್ಯಾಂಕರಿನಲ್ಲಿ ನೀರು ತಂದು ಉಣಿಸಿದ್ದೆ. ಒಂದೇ ಮಳೆಗೆ ಗುಣಿ ಪದ್ಧತಿಯಲ್ಲಿ ಹಾಕಿದ್ದ ರಾಗಿ ಕೈಹಿಡಿಯಿತು. ಮುಕ್ಕಾಲು ಎಕರೆಯಲ್ಲಿ ಅವರೆ ಹಾಕಿದ್ದೆ. ಸಾಲಿನಿಂದ ಸಾಲಿಗೆ ಐದೂವರೆ ಅಡಿಗೆ ಒಂದು ಸಾಲು ನಾಟಿ ಅವರೆ, ಇನ್ನೊಂದು ಸಾಲು ಹೆಬ್ಬಾಳ ವಿವಿ ಅಭಿವೃದ್ಧಿಪಡಿಸಿದ ತಳಿ ಅವರೆ ಹಾಕಿದ್ದೆ, ಒಂದು ಮೂರು ತಿಂಗಳು ಕಾಯಿ ಬಿಟ್ಟರೆ ಇನ್ನೊಂದು ಆರು ತಿಂಗಳು ಕಾಯಿ ಬಿಡುತ್ತದೆ. ಮೊನ್ನೆ ಸಹ 50 ಕೆಜಿ ಅವರೆ ಮಾರಾಟ ಮಾಡಿ ಇಲ್ಲಿಗೆ ಬಂದೆ .ನಂಬಿಕೆಯಿಂದ ಯೋಜಿಸಿ ಕೃಷಿ ಮಾಡಿದರೆ ಬೇಸಾಯ ಎಂದಿಗೂ ನಷ್ಟದ ವೃತ್ತಿ ಅಲ್ಲ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
“ನಾನು ಕೃಷಿಗೆ ಬಂದಾಗ ಒಂಭತ್ತು ಲಕ್ಷ ಸಾಲ ಇತ್ತು. ಬೇಸಾಯದಿಂದಲೇ ಸಾಲ ತೀರಿಸಿದೆ. ಅಲ್ಲದೆ ಇಪ್ಪತ್ತು ಲಕ್ಷ ರೂಪಾಯಿ ಖರ್ಚುಮಾಡಿ ಸೋದರಿಯರ ಮದುವೆ ಮಾಡಿದೆ. ಕಳೆದ ವರ್ಷ ಮಳೆ ಕಡಿಮೆ ಬಂತಾದರೂ ಆರು ಲಕ್ಷ ರೂಪಾಯಿ ಆದಾಯಗಳಿಸಿದೆ. ಕಳೆದ ವರ್ಷ ಎಂಟು ಲಕ್ಷ ರೂಪಾಯಿ ಆದಾಯ ಬಂದಿತ್ತು” ಎಂದು ಅವರು ಪ್ರತಿಯೊಂದರ ಲೆಕ್ಕಕೊಡುವಾಗ ನಮ್ಮ ಬೇಸಾಯದ ನಡೆ ತಪ್ಪಿದ್ದು ಎಲ್ಲೆಲ್ಲಿ ಎನ್ನುವುದು ಗೊತ್ತಾಗುತ್ತದೆ. ಅಷ್ಟು ಪ್ರಾಕ್ಟಿಕಲ್ ಆಗಿ ಕಾಂತರಾಜು ತಮ್ಮ ಬೇಸಾಯದ ಅನುಭವವನ್ನು ಹೇಳುತ್ತಾರೆ.
“ತೋಟದಲ್ಲಿ ಮನೆ ಇದೆ.ಗುಜರಾತ್ ಬಾಯ್ಲರ್ ಹಾಕಿಸಿಕೊಂಡಿದ್ದೇನೆ. ಗೋಬರ್ ಗ್ಯಾಸ್ ಇದೆ. ಸ್ಲರಿ, ತ್ಯಾಜ್ಯ ಎಲ್ಲವೂ ಬಳಕೆಗೆ ಬರುತ್ತವೆ. ತೋಟದಿಂದ ಒಂದು ಹನಿ ಮಳೆಯ ನೀರು ಹೊರಗೆ ಹೋಗುವುದಿಲ್ಲ. ತ್ಯಾಜ್ಯಗಳು ಅಲ್ಲೇ ಕೊಳೆತು ಕಳಿತು ಹ್ಯೂಮಸ್ ಆಗುತ್ತವೆ. ನಮ್ಮ ತಂದೆಯವರು ಸಂತೆಗೆ ಹೋಗಿ ತರಕಾರಿ, ಹೂ ಮಾರಾಟ ಮಾಡಿಕೊಂಡು ಬರುತ್ತಾರೆ” ಎಂದು ಹೆಮ್ಮೆಯಿಂದ ಹೇಳುವಾಗ ಅವರ ಮೊಗದಲ್ಲಿ ಸಂತೃಪ್ತಿಯ ನಗೆ ಕಾಣಿಸುತ್ತದೆ.
ಕೇವಲ 120 ಮನೆಗಳಿರುವ ಕಂಬಳಿಪುರದಲ್ಲಿ ಸಾವಯವ ಕೃಷಿಕರ ಸಂಘ ರಚನೆ ಮಾಡಿಕೊಂಡಿದ್ದಾರೆ. ಅಲ್ಲದೆ ಗುಂಪು ಕೃಷಿ ಮಾಡುತ್ತಾ ಮಾರುಕಟ್ಟೆ ಸಮಸ್ಯಗೆ ತಾವೇ ಉತ್ತರ ಕಂಡುಕೊಂಡಿದ್ದಾರೆ. ಗ್ರಾಮದ ಬಹುತೇಕ ರೈತರು ‘ ಸಹಜ ಸಮೃದ್ಧ’ ಸಂಸ್ಥೆಗೆ ತರಕಾರಿ ಸರಬರಾಜು ಮಾಡುತ್ತಾರೆ.
“ನೀವು ಮಧ್ಯಾಹ್ನ ನಮ್ಮೂರಿಗೇನಾದರೂ ಬಂದರೆ ಜನರೆಲ್ಲಾ ಮನೆ ಮುಂದೆ ಹೂ ಕಟ್ಟುತ್ತಾ ಕುಳಿತಿರುತ್ತಾರೆ. ನಮ್ಮೂರಲ್ಲಿ ಸೋಮಾರಿಗಳ ಸಂಖ್ಯೆ ಕಡಿಮೆ. ಪ್ರತಿ ದಿನ ಬೆಳಗ್ಗೆ ಜಮೀನಿಗೆ ಹೋಗಿ ಗಿಡಮರಗಳ ಯೋಗಕ್ಷೇಮ ವಿಚಾರಿಸದಿದ್ದರೆ ಅವು ಫಲ ನೀಡಲ್ಲ. ಸರಿಯಾಗಿ ತಿಳಿದು ಹದವರಿತು ಬೇಸಾಯ ಮಾಡಿದರೆ ಎಂದಿಗೂ ನಷ್ಟ ಇಲ್ಲ. ಪ್ರತಿ ತಿಂಗಳು ನಾವು ಸರಾಸರಿ ನಲವತ್ತರಿಂದ ಐವತ್ತು ಸಾವಿರ ಆದಾಯ ಗಳಿಸಿಯೇ ಗಳಿಸುತ್ತೇವೆ” ಎಂದು ಹೇಳುವಾಗ ಅವರ ಶ್ರಮ,ಶ್ರದ್ಧೆಯೇ ದುಡಿಮೆಯ ಶಕ್ತಿ ಎನ್ನುವುದು ಗೊತ್ತಾಗುತ್ತದೆ.
ಶಾಲೆಗೆ ಹೋಗುವ ತಮ್ಮ ಪುಟಾಣಿ ಮಕ್ಕಳನ್ನು ಸಂತೆಗೆ ಕರೆದುಕೊಂಡು ಹೋಗಿ ವ್ಯಾಪಾರ ಮಾಡುತ್ತಿರುವ ಪೋಟೊಗಳನ್ನು ಮೊಬೈಲ್ ಪೋನಿನಲ್ಲಿ ತೋರಿಸಿದಾಗ ಮಕ್ಕಳನ್ನು ಬೆಳೆಸುವ ರೀತಿಗೆ, ಅವರ ಕೃಷಿ ಪ್ರೀತಿಗೆ ನಾನು ಮೂಕನಾದೆ.ಇಂಥವರ ಸಂತತಿ ಸಾವಿರವಾಗಲಿ. ಕಂಬಳಿಪುರದಂತಹ ಗ್ರಾಮಗಳ ಗುಣ ನಮ್ಮ ಎಲ್ಲಾ ಹಳ್ಳಿಗಳಿಗೂ ಹಬ್ಬಲಿ. ಗುಂಪು ಕೃಷಿ ಜಾರಿಯಾಗಲಿ ಎಂಬ ಆಶಯದೊಂದಿಗೆ ಈ ಪುಟ್ಟ ಟಿಪ್ಪಣಿ ಬರೆದಿದ್ದೇನೆ.