ಕಳೆ ನಾಶಕ್ಕೆ ಪರ್ಯಾಯ ಏನು? ಸಾವಯವ ಕಳೆನಾಶಕ ಎಂಬುದು ಇದೆಯೇ ?

2

ನಿರಂತರ ಕಳೆನಾಶಕವನ್ನು ಬಿಟ್ಟುದರ ಪರಿಣಾಮವಾಗಿ ಪಾಚಿ ಬೆಳೆದ ತೋಟ ಒಂದರ ಚಿತ್ರಸಹಿತ, ಕಳೆನಾಶಕದ ಧೂರ್ತ ಮುಖದ ಪರಿಚಯದ ಲೇಖನವೊಂದು ಬರೆದಿದ್ದೆ. ಆ ಲೇಖನದ ಮುನ್ನಲೆಯಲ್ಲಿ ಬಂದ ಪ್ರಶ್ನೆಗಳೆರಡು ನನ್ನ ಗಮನ ಸೆಳೆದಿತ್ತು.

1) ಪಾಚಿ ಬೆಳೆದ ತೋಟದಿಂದ ಸಮಸ್ಯೆ ಏನು? ನಿರ್ವಹಣೆಗೆ ಅನುಕೂಲ ಅಲ್ಲವೇ?

2) ಕಳೆ ನಾಶಕ್ಕೆ ಪರ್ಯಾಯ ಏನು? ಸಾವಯವ ಕಳೆನಾಶಕ ಎಂಬುದು ಇದೆಯೇ

ದಡ್ಡು ಕಟ್ಟಿದ ಹಸ್ತಗಳು

ನಿರಂತರ ಅಡಿಕೆ ಸುಲಿಯುವವರ, ಕೊಟ್ಟು ಪಿಕಾಸಿನ ಕೆಲಸ ಮಾಡುವವರ ಹಸ್ತಗಳನ್ನು ಪರೀಕ್ಷಿಸಿದ್ದೀರಾ? ಗಟ್ಟಿಯಾಗಿ ದಡ್ದು ಕಟ್ಟಿರುವುದನ್ನು ಕಂಡಿರಬಹುದು. ಆ ಜಾಗಕ್ಕೆ ಸ್ಪರ್ಶಜ್ಞಾನ ಇರುವುದಿಲ್ಲ. ಇದ್ದರೂ ಬಲು ಸ್ವಲ್ಪ. ಅಪರೂಪಕ್ಕೆ ಕೆಲವೊಮ್ಮೆ ಕೆಲವರಿಗೆ ದಡ್ಡು ಒಡೆದು ರಕ್ತ ಜಿನುಗುವುದನ್ನು ಕಂಡಿರಬಹುದು. ತೀವ್ರ ನೋವು ಅನುಭವಿಸಿರುವುದನ್ನು ಕೇಳಿರಬಹುದು. ಆ ಗಟ್ಟಿತನ ಮನುಷ್ಯನ ಸಂಪೂರ್ಣ ಶರೀರದಲ್ಲಿ ಇದ್ದರೆ ಏನಾಗಬಹುದು ಊಹಿಸಿಕೊಳ್ಳಿ.

ಸೂಕ್ಷ್ಮಾಣು ಜೀವಿಗಳ ಆವಾಸಸ್ಥಾನ

ಅದೇ ರೀತಿ ನಿರಂತರ ಕಳೆನಾಶಕ ಬಳಕೆಯ ಪರಿಣಾಮದಿಂದ ಸಸ್ಯ ಬೆಳವಣಿಗೆ ಇಲ್ಲದೆ, ಸೂರ್ಯನ ಶಾಖದಿಂದ, ಮಳೆಯ ಹೊಡೆತದಿಂದ, ಗಾಳಿಯ ಸ್ಪರ್ಶದಿಂದ ಭೂಮಿ ಗಟ್ಟಿಯಾಗುತ್ತಾ ಸಾಗುತ್ತದೆ. ನೀರು ಭೂಮಿಗೆ ಹಿಂಗಗಲು ಸಮಸ್ಯೆಯಾಗುವುದು. ನೀರು ಬಳಸುವ ಪ್ರಮಾಣ ಜಾಸ್ತಿ ಬೇಕಾಗುವುದು. ಭೂಮಿಯನ್ನು ಸಡಿಲಗೊಳಿಸುವ ಸೂಕ್ಷ್ಮಾಣು ಜೀವಿಗಳ ಆವಾಸಸ್ಥಾನ ಕುಸಿದು ಬೀಳುವುದು.

ಎರೆಹುಳು

ಹಳೆಯ ಕೃಷಿ ಪದ್ಧತಿಯಲ್ಲಿ ಗಟ್ಟಿಯಾದ ಭೂಮಿಯನ್ನು ಅಗತೆ ಮಾಡುವ ಕ್ರಮವಿತ್ತು. ಕಾಲಾಂತರದಲ್ಲಿ ದೊರೆಯದ ಮಾನವ ಶ್ರಮದಿಂದಾಗಿ ಕಳೆಗಳೇ ತನ್ನ ಬೇರಿನ ರೂಪದಲ್ಲಿ ಮತ್ತು ಎರೆಹುಳು, ನರ್ತೆಗಳು ಭೂಮಿಯಲ್ಲಿ ಮಾಡುವ ರಂಧ್ರಗಳಿಂದಾಗಿ ಭೂಮಿ ಸಡಿಲಗೊಳ್ಳುತ್ತದೆ ಎಂಬುದನ್ನು ಕೊಂಡುಕೊಂಡೆವು. ಕಳೆಗಳೇ ಕಳಿತು ಗೊಬ್ಬರವಾಗುವ ಪರಿಣಾಮದಿಂದಾಗಿ ಭೂಮಿಯಲ್ಲಿ ಸಾವಯವ ಇಂಗಾಲದ ಅಂಶ ಏರುವುದೆಂದೂ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುವುದೆಂಬುದು ಸರ್ವಸಮ್ಮತ ಅಭಿಪ್ರಾಯ. ದಡ್ಡು ಕಟ್ಟಿದ ಮಾನವ ಶರೀರಕ್ಕೆ ಯಾವ ಅಪಾಯ ಬರಬಹುದೋ, ಅದೇ ರೀತಿಯ ಅಪಾಯಗಳು ನಮ್ಮ ಭೂಮಿಗೆ ಬರಬಹುದು ಎಂಬ ಎಚ್ಚರ ನಮಗಿರಬೇಕು.

ಸಾವಯವ ತತ್ವದಲ್ಲಿ  ನಾಶಕಗಳು ಎಂಬ ಪದಕ್ಕೆ ಅರ್ಥವಿಲ್ಲ. ಕೇವಲ ನಿಯಂತ್ರಕಗಳು ಮಾತ್ರ. ಆ ದೃಷ್ಟಿಯಿಂದ ಯೋಚಿಸುವುದಾದರೆ ನಾನು ಕಂಡುಕೊಂಡ ಎರಡು ದಾರಿಗಳು.

ಎ.ಪಿ. ಸದಾಶಿವ ಮರಿಕೆ

ಕಳೆ ನಿಯಂತ್ರಣ

ಮಾನವ ಶ್ರಮದಿಂದಲೇ ಕತ್ತಿಯಲ್ಲಿ ಹೆರೆದು ತೆಗೆದು ಬರುವ ಕಳೆಯನ್ನು ನಿಯಂತ್ರಿಸುತ್ತಿದ್ದ ನನಗೆ ಪರ್ಯಾಯವಾಗಿ ಕಂಡುಕೊಂಡದ್ದು ಹುಲ್ಲು ಕತ್ತರಿಸುವ ಯಂತ್ರಗಳು. ಪೆಟ್ರೋಲು ಸುಡುವುದರಿಂದ ಆಗುವ ವಾಯುಮಾಲಿನ್ಯ ಅಲ್ಪಸ್ವಲ್ಪ ಇದ್ದರೂ ಸಾಕಷ್ಟು ಪರಿಸರಸ್ನೇಹಿ ಎಂದು ಎನಿಸಿಕೊಳ್ಳುತ್ತದೆ. ಆದರೆ ವರುಷದಲ್ಲಿ ಕೊನೆಯ ಪಕ್ಷ ಎರಡು ಸರ್ತಿಯಾದರೂ ನಿಯಂತ್ರಿಸದೆ ಇದ್ದರೆ ಅಡಿಕೆ ಬೆಳೆ ಸಂಗ್ರಹ ಸ್ವಲ್ಪ ಕಷ್ಟವೇ ಸರಿ. ತಗಲುವ ವೆಚ್ಚ ಅಪಾರ ಎಂದು ಕಂಡುಬಂದುದರಿಂದ ಸಾಧ್ಯವಾದಷ್ಟು ಒಂದೇ ಸರ್ತಿಗೆ ಸೀಮಿತಗೊಳಿಸಿದ್ದೆ. ಆದರೆ ಹುಲ್ಲಿನ ಮಧ್ಯದಲ್ಲಿ ಅಡಿಕೆ ಹೆಕ್ಕುವ ಕಷ್ಟ ಮತ್ತು ಉಳಿದು ಹಾಳಾಗುವ ಬೆಳೆ ನಷ್ಟ ಹೊಸ ದಾರಿ ಒಂದನ್ನು ಹುಡುಕುತ್ತಿತ್ತು. ಮಿತ್ರರನೇಕರು ಮಾಡಿ ನೋಡಿ ಗೆದ್ದ ಸಲಹೆ ತೋಟಕ್ಕೆ ದನಗಳನ್ನು ಬಿಡುವುದು. ತೋಟದಿಂದ ಹೊರ ಹೋಗದಂತೆ ( ಬೇರೆಯವರಿಗೆ ಉಪದ್ರವ ಆಗದಂತೆ )ಸಾಕಷ್ಟು ಗಟ್ಟಿಯಾದ ಬೇಲಿಯ ನಿರ್ಮಾಣ ಮಾಡಿ ದನಗಳನ್ನು ಬಿಡಹೊರಟೆ.

ದನಗಳು

ಮೊದಲಿಗೆ ಒಂದು ಎಕರೆ ಜಾಗದ ತೋಟದಲ್ಲಿ ಆರಂಭ ಮಾಡಿದೆ. ತುಂಬಾ ಪ್ರಯೋಜನಕಾರಿ ಎಂದು ಕಂಡುಬಂದುದರಿಂದ ಸಂಪೂರ್ಣ ಆರು ಎಕರೆಗೆ ವಿಸ್ತರಿಸಿದೆ. ಸುಮಾರು ಒಂದು ಅಡಿಗಿಂತ ಜಾಸ್ತಿ ಬೆಳೆದು ನಿಂತಿದ್ದ ಹುಲ್ಲು 15ರಷ್ಟು ದನಗಳು ಹೋಗಿ ಒಂದು ತಿಂಗಳಲ್ಲಿ ತಿಂದು ಮುಗಿಸಿದ್ದವು . ಬೇಸಿಗೆಯಲ್ಲೂ ಹುಲ್ಲಿನ ಎಡೆಯಲ್ಲಿ ಅಡಗಿ ಕುಳಿತಿದ್ದ ಅಡಿಕೆ ಕೂಡ ಹೆಕ್ಕಿಸಿಕೊಳ್ಳಲು ತಯಾರಾಗಿದ್ದವು. ಹಸಿದ ದನಗಳ ಹೊಟ್ಟೆತುಂಬಿಸುವಲ್ಲಿಯೂ ಬಲು ದೊಡ್ಡ ಉಪಕಾರವನ್ನೇ ಕಂಡಿತ್ತು.

ದನಗಳಿಂದ ಉಪಕಾರ

ಅಡಿಕೆ ಹೆಕ್ಕುವ ಕೃಷಿ ಸಹಾಯಕಿಯ ಬಾಯಿಯಲ್ಲಿ ಉದ್ಘಾರವೊಂದು ಹೊರಬಂತು.ಎಷ್ಟು ಸಮಯದಿಂದ ಹುಲ್ಲಿನ ಮಧ್ಯೆಯಲ್ಲಿ ಅಡಿಕೆ ಕಾಣದೆ, ಕಾಣದ ಗುಂಡಿಯಲ್ಲಿ ಬಿದ್ದೆದ್ದುಕೊಂಡು ಆಗುವ ಸಮಸ್ಯೆಗೆ ತುಂಬಾ ಚೆನ್ನಾದ ಪರಿಹಾರ ಸಿಕ್ಕಿತು. ಇಷ್ಟು ಉಪಕಾರ ದನಗಳಿಂದ ಆಗಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಮದ್ದಿನ ಬೇರೂ  ಸಿಗದಂತೆ ಮಾಡುವ ಮದ್ದು ಬಿಡುವುದರಿಂದ ಇದು ಸಾವಿರಪಾಲು ಲೇಸು

ಸೂಚನೆ

ಶಾಲೆಯ ಮೆಟ್ಟಿಲನ್ನೇ ಹತ್ತದ ಮಹಿಳೆಯೊಬ್ಬಳ ಬಾಯಲ್ಲಿ ಬಂದ ಮಾತುಗಳು ವಿದ್ಯಾವಂತರೆನಿಸಿಕೊಂಡ ನಮ್ಮಂತವರ  ಮುಖಕ್ಕೆ ರಾಚಿದಂತ್ತಿತ್ತು. ಅದೆಷ್ಟು ವಿಧದ ಔಷಧಿ ಸಸ್ಯಗಳ ಹೆಸರು  ಮತ್ತು ಮಹತ್ವವನ್ನು ಕಳಕೊಂಡಿದ್ದೇವೆ ಎಂಬುದರ ಸೂಚನೆ ಆಕೆಯದ್ದು ಎಂದು ಅರ್ಥ ಆಗಿತ್ತು.

ಸಮಸ್ಯೆಗಳಿವೆ

ದನಗಳನ್ನು ಬಿಡುವಾಗ ಸಮಸ್ಯೆ ಇಲ್ಲವೇ ಇಲ್ಲ ಎಂದಲ್ಲ.ತೋಟದಲ್ಲಿ ಹುಲ್ಲು ಮುಗಿದಾಗ ಎಳೆಯ ಅಡಿಕೆ ಗಿಡಗಳಿಗೆ ಬಾಯಿ ಹಾಕುತ್ತವೆ. ಬಾಳೆಯ ಸಣ್ಣ ಕುರುಳೆ ಗಳನ್ನು ತಿನ್ನುತ್ತವೆ. ಎಳೆಯ ಕೊಕ್ಕೋ ಮಿಡಿ ಗಳಿದ್ದರೆ ಕಥಮ್. ಪದಾಘಾತಕ್ಕೆ ಸಿಲುಕಿದ ಸ್ಪಿಂಕ್ಲರ್ ಕುಟ್ಟಿಗಳು ಮಠಾಶ್.

ಸಮಸ್ಯೆಗಳಿಗೆ ಪರಿಹಾರ

 ಇವುಗಳಿಗೂ ಪರಿಹಾರವನ್ನು ಕಂಡುಕೊಂಡೆ. ಹುಲ್ಲು  ಕಡಿಮೆಯಾದಾಗ ತೋಟಕ್ಕೆ ಬಿಡುವುದಕ್ಕೆ ರಜೆ ಕೊಡಬೇಕಾಗುತ್ತದೆ.15 ದಿನದಲ್ಲಿ ಚಿಗುರಿದರೆ ಪುನಹ ಬಿಟ್ಟರೆ ಸರಿ ಹೊಂದುತ್ತದೆ. ಕೊಕ್ಕೋ ಮಿಡಿ ಇರುವ ಸಮಯ ಅಂದರೆ ಜೂನ್ ಕೊನೆಯವರೆಗೆ ಬಿಡುವ ಹಾಗಿಲ್ಲ. ಡಿಸೆಂಬರ್ ಅಂತ್ಯದವರೆಗೆ ಬಿಟ್ಟರೆ ಸಾಕು. ಆನಂತರ ಬೇಕು ಎಂದು ಅನಿಸಿದರೆ ಒಂದಾವರ್ತಿ  ಯಂತ್ರದ ಮೊರೆ ಹೋಗಬೇಕಾಗಬಹುದು

ಭೂಮಿ ಎಂಬುದು ಬ್ಯಾಂಕಿನ ನಿಖರ ಠೇವಣಿ

ಮಣ್ಣೂ ಹಾಳಾಗದೆ, ಪ್ರಕೃತಿಗೂ ಮಾರಕವಾಗದೆ ಯಾವುದೇ ನಾಶಕದ ಮೊರೆ ಹೋಗದೆ, ಗೋವನ್ನು ಉಳಿಸಿಕೊಂಡು ಮಾಡುವ ಕೃಷಿ ಅತ್ಯಂತ ದೊಡ್ಡ ಪರಿಹಾರವಲ್ಲವೇ? ಕೆಲದಿನಗಳ ಹಿಂದೆ ಭೇಟಿಯಾದ ಸಹಜ ಕೃಷಿಕನೊಬ್ಬನ ಮಾತು ತುಂಬಾ ಮಾರ್ಮಿಕ.ಅತಿಯಾದ ವಿಸ್ತರಣೆಯ ಕೃಷಿ, ಭೂಮಿಯ ಸತ್ವವನ್ನು ಹೀರಿ ಮಾಡುವ ಕೃಷಿ, ಮುಂದಿನ ಪೀಳಿಗೆಯ ಬದುಕಿನ ಹಕ್ಕನ್ನು ಮತ್ತು ಸಾಮರ್ಥ್ಯವನ್ನು ಕಿತ್ತುಕೊಂಡಂತೆ. ಭೂಮಿ ಎಂಬುದು ಬ್ಯಾಂಕಿನ ನಿಖರ ಠೇವಣಿಯಂತೆ.ಅನಗತ್ಯ ಬಳಸಿದರೆ ಬದುಕನ್ನೇ ಹಾಳು ಮಾಡಿಕೊಂಡಂತೆ . ಈ ಮಾತುಗಳನ್ನು ಮತ್ತೆ ಮತ್ತೆ ನೆನೆಯುತ್ತಾ ಕೇಳುತ್ತಿರುವ ಅಂಬಾರವದತ್ತ ಗಮನಹರಿಸುವೆ.

ಲೇಖಕರು: ಎ.ಪಿ. ಸದಾಶಿವ ಮರಿಕೆ

2 COMMENTS

LEAVE A REPLY

Please enter your comment!
Please enter your name here