ಕೊಳವೆಬಾವಿಯಲ್ಲಿ ಎಷ್ಟು ಪ್ರಮಾಣ ನೀರು ಬರುತ್ತಿದೆ ಎಂದು ತಿಳಿಯುವ ವಿಧಾನ

0
ಲೇಖಕರು: ಪ್ರಶಾಂತ್‌ ಜಯರಾಮ್

ಕೊಳವೆಬಾವಿ ತೆಗೆದು ಅದಕ್ಕೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ಬಹುತೇಕ ರೈತರಿಗೆ ತಮ್ಮ ಕೊಳವೆಬಾವಿಯಿಂದ ಎಷ್ಟು ಪ್ರಮಾಣದ ನೀರು ಹೊರ ಬರುತ್ತಿದೆ ಎಂಬ ಮಾಹಿತಿ ಇರುವುದಿಲ್ಲ.ನೀರಿನ ಇಳುವರಿ ಕೇಳಿದಾಗ ಇಂಚ್ ಲೆಕ್ಕದಲ್ಲಿ ಹೇಳುವುದು ವಾಡಿಕೆಯಾಗಿದೆ. ಆದರೆ ಅದನ್ನು ಪರಿಗಣಿಸಿ ನೀರಿನ ನಿಖರ ಅಳತೆ ಮಾಡಲಾಗುವುದಿಲ್ಲ. ಬೆಳೆ ಆಯೋಜನೆ, ಹನಿ ಅಥವಾ ತುಂತುರು ನೀರಾವರಿ ಮಾಡಲು ಸರಿಯಾದ ವಿನ್ಯಾಸ ರೂಪಿಸಲಾಗುವುದಿಲ್ಲ.
ಹಾಲಿ ನಿಮ್ಮ ಜಮೀನಿನ ಚಾಲ್ತಿಯಲ್ಲಿರುವ ಕೊಳವೆ/ ತೆರೆದ ಬಾವಿಯಿಂದ ಮೋಟಾರ್/ಪಂಪ್ ಮೂಲಕ ಬರುತ್ತಿರುವ ನೀರಿನ ಅಳತೆಯನ್ನು ಮಾಡುವುದನ್ನು ನೀರಿನ ಇಳುವರಿ ಪರೀಕ್ಷೆ (water yielding test) ಎಂದು ಕರೆಯಲಾಗುತ್ತದೆ.
ನೀರಿನ ಇಳುವರಿ ಪರೀಕ್ಷೆ ಮಾಡಿ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ,ನಿಮ್ಮಲ್ಲಿ ಲಭ್ಯತೆ ಇರುವ ವಿದ್ಯುತ್ ಪೂರೈಕೆ ಅವಧಿಯನ್ನು ಗಣನೆಗೆ ತೆಗೆದುಕೊಂಡು ಆನಂತರ ಅದಕ್ಕೆ ಹೊಂದಿಕೆ ಆಗುವಂತೆ ಡ್ರಿಪ್ /ಸ್ಪ್ರಿಂಕ್ಲೆರ್ ನೀರಾವರಿ ವಿನ್ಯಾಸ ಮಾಡಿಕೊಳ್ಳಿ.ನೀರಿನ ಅಳತೆ ಮಾಡದೇ ವಿನ್ಯಾಸ ಮಾಡುವುದರಿಂದ ಬೆಳೆಗಳಿಗೆ ಅವಶ್ಯಕತೆಗೆ ಅನುಗುಣವಾಗಿ ನೀರು ಪೂರೈಕೆ ಮಾಡಲಾಗುವುದಿಲ್ಲ.
ತಪ್ಪಾಗಿ ವಿನ್ಯಾಸ ಮಾಡುವುದರಿಂದ ಕಡಿಮೆ ಒತ್ತಡವಾದಾಗ ನೀರು ಡ್ರಿಪ್ ಪೈಪ್/ಸ್ಪ್ರಿಂಕ್ಲೆರ್ ಪೈಪ್ ಮೂಲಕ ಆ ಪೈಪ್ ಸಾಮರ್ಥ್ಯಕ್ಕೆ ತಕ್ಕ ನೀರು ಹೊರ ಸೂಸುವುದಿಲ್ಲ. ಆಗ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುತ್ತದೆ. ಅಧಿಕ ಒತ್ತಡವಾದಾಗ ಪೈಪ್ ಲೈನ್ ಒತ್ತಡಕ್ಕೆ ಸಿಲುಕಿ ಹೊಡೆದು ಹೋಗುತ್ತದೆ.ನೀರಿನ ಲಭ್ಯತೆಗೆ ತಕ್ಕಂತೆ ವಿಭಾಗ ಮಾಡಿಕೊಂಡು(Section) ಪ್ರತಿ ವಿಭಾಕ್ಕೆ ಗೇಟ್ ವಾಲ್ ಹಾಕಿ ಕೊಳ್ಳಬೇಕು.

ನೀರಿನ ಅಳತೆ ಪರೀಕ್ಷೆ ಮಾಡಲು 200 ಲೀಟರ್ ಅಳತೆಯ ಡ್ರಮ್ ಅಥವಾ ನಿಮ್ಮಲ್ಲಿ ಲಭ್ಯವಿರುವ ಅಳತೆಯ ಡ್ರಮ್ ಮತ್ತು ಮೊಬೈಲ್ ನಲ್ಲಿರುವ ಸ್ಟಾಪ್ ವಾಚ್ ಸಿದ್ದ ಮಾಡಿಟ್ಟಿಕೊಳ್ಳಬೇಕು.

ಮೋಟಾರ್ /ಪಂಪ್ ಚಾಲು ಮಾಡಿ ಕನಿಷ್ಠ 15 ನಿಮಿಷ ನೀರನ್ನು ಹೊರ ಹೋಗಲು ಬಿಡಬೇಕು,
ಬೋರ್ವೆಲ್ ಚಾಲು ಮಾಡುವ ಮುನ್ನ ಮೇಲ್ಮಟ್ಟದಲ್ಲಿ ಹೆಚ್ಚು ನೀರು ಸಂಗ್ರಹವಾಗಿರುವುದರಿಂದ ಮೊದಲ 15 ನಿಮಿಷ ಹೆಚ್ಚು ನೀರು ಹೊರ ಬರುತ್ತದೆ. ಆನಂತರ ನೀರಿನ ಹೊರ ಹರಿವು ಸ್ಥಿರವಾಗುವುದರಿಂದ ಈ ಸಮಯದಲ್ಲಿ ನೀರಿನ ಅಳತೆಯನ್ನು ಮಾಡಬೇಕು.

ಬೋರ್ವೆಲ್ ನಲ್ಲಿ ಹೊರ ಬರುವ ನೀರನ್ನು ಸಂಗ್ರಹ ಮಾಡಲು 200 ಲೀಟರ್ ಡ್ರಮ್ ಕೆಳಗಿಟ್ಟು ಅದು ತುಂಬುವ ಸಮಯವನ್ನು ಸ್ಟಾಪ್ ವಾಚ್ ಮೂಲಕ ಗುರುತು ಹಾಕಿಕೊಳ್ಳಬೇಕು. ಡ್ರಮ್ ನಲ್ಲಿ ತುಂಬಿದ ನೀರನ್ನು ಖಾಲಿ ಮಾಡಿಕೊಂಡು ಒಟ್ಟು 3 ಬಾರಿ ಡ್ರಮ್ ತುಂಬಲು ತೆಗೆದುಕೊಳ್ಳುವ ಸಮಯವನ್ನು ಗುರುತು ಹಾಕಿ ಅದು ತೆಗೆದುಕೊಳ್ಳುವ ಸರಾಸರಿ ಸಮಯ ಕಂಡು ಹಿಡಿಯಬೇಕು.
ಉದಾಹರಣೆಗೆ 200 ಲೀಟರ್ ಡ್ರಮ್ ತುಂಬಲು 60 ಸೆಕೆಂಡ್ ತೆಗೆದುಕೊಂಡರೆ:
200 ಲೀಟರ್ /60 ಸೆಕೆಂಡ್ =3.3 ಲೀಟರ್ /ಸೆಕೆಂಡ್
01 ನಿಮಿಷಕ್ಕೆ:3.3*60=200 ಲೀಟರ್ /ನಿಮಿಷ
01 ಗಂಟೆಗೆ :200*60 =12,000 ಲೀಟರ್ /ಗಂಟೆಗೆ.
ಈ ರೀತಿಯಾಗಿ ನಿಮ್ಮ ಬೋರ್ವೆಲ್ ನಿಂದ ಬರುವ ನೀರಿನ ಪ್ರಮಾಣವನ್ನು ಲೀಟರ್ ಲೆಕ್ಕದಲ್ಲಿ ಲೆಕ್ಕ ಹಾಕಿಕೊಳ್ಳಬೇಕು.
ನೀರಿನ ಹೊರ ಹರಿವಿನ ಪ್ರಮಾಣ ತಿಳಿದ ನಂತರ ಡ್ರಿಪ್ ಇರ್ರಿಗೇಷನ್ ಮಾಡಲು ಶೇ 80% ಮತ್ತು ಸ್ಪ್ರಿಂಕ್ಲೆರ್ ಇರ್ರಿಗೇಷನ್ ಮಾಡಲು ಶೇ 60% ಗಣನೆಗೆ ತೆಗೆದುಕೊಂಡು ವಿನ್ಯಾಸ ಮಾಡಬೇಕು.
ಮೇಲಿನ ಉದಾಹರಣೆ ರೀತಿ 12 ಸಾವಿರ ಲೀಟರ್ ಪ್ರಮಾಣಕ್ಕೆ ಶೇ 80% ಅಂದರೆ 9600 ಲೀಟರ್, ಶೇ 60% ಅಂದರೆ 7200 ಲೀಟರ್ ಎಂದು ಪರಿಗಣಿಸಿ ಅದಕ್ಕೆ ತಕ್ಕ ರೀತಿಯ ನೀರಾವರಿ ವಿನ್ಯಾಸ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
93424 34530

LEAVE A REPLY

Please enter your comment!
Please enter your name here