ಚಿನ್ನಸ್ವಾಮಿ ವಡ್ಡಗೆರೆ, ಕೃಷಿಕರು ಮತ್ತು ಪತ್ರಕರ್ತರು

ಅಪ್ಪನ ಕಾಲದಿಂದ ಅರಿಶಿಣ ಬೆಳೆಯುತ್ತಿದ್ದೇವೆ.ಮೂರು ದಶಕಗಳ ಅನುಭವ ನಮ್ಮದು.ತಮಿಳುನಾಡಿನ ರೈತರು ನಮ್ಮಲ್ಲಿ ಬೇಸಾಯ ಮಾಡಲು ಬಂದಾಗ ನಮಗೆ ಅರಿಶಿಣ ಬೇಸಾಯ ಕಲಿಸಿಕೊಟ್ಟರು. ಅರಿಶಿನದ ಜೊತೆ ಈರುಳ್ಳಿ ಅಥವಾ ಬೀನ್ಸ್ ಅನ್ನು ಮಿಶ್ರ ಬೆಳೆಯಾಗಿ ಮಾಡುತ್ತಿದ್ದೆವು. ಅದನ್ನು ಬಿಟ್ಟರೆ ಬೇರೆ ಪ್ರಯೋಗ ಮಾಡುತ್ತಿರಲಿಲ್ಲ.

ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದ ಯುವರೈತ ಮಹಾದೇವಶೆಟ್ಟಿ ಅರಿಶಿಣದ ಜೊತೆ ಕೊತ್ತಂಬರಿ (ಧನಿಯಾ), ಈರುಳ್ಳಿ, ಮೆಣಸಿನಕಾಯಿ ಹೀಗೆ ಒಟ್ಟು ನಾಲ್ಕು ಬೆಳೆಗಳನ್ನು ಸಂಯೋಜನೆ ಮಾಡಿ ಮಿಶ್ರ ಬೇಸಾಯ ಮಾಡುವುದರಿಂದ ಹೇಗೆ ಲಾಭ ಪಡೆಯಬಹುದು ಎಂದು ತಮ್ಮ ಅನುಭವವನ್ನು ಹಂಚಿಕೊಂಡಾಗ ನಮಗೆಲ್ಲಾ ಅಚ್ಚರಿ !.

ಆಯರಹಳ್ಳಿಯ ಮಾದಪ್ಪನವರು ” ಅರಿಶಿನ ಕಟಾವು ಮಾಡುವಾಗ ಹೇಗೆ ಶೇ.70 ರಷ್ಟು ಹಣ ಉಳಿಸಬಹುದು.ಸಾಂಪ್ರದಾಯಿಕ ರೀತಿಯಲ್ಲಿ ಮನೆಯಲ್ಲಿಯೆ ಹೇಗೆ ಒಣಗಿಸಿದ ಅರಿಶಿಣವನ್ನು ಎರಡು ವರ್ಷ ಕೆಡದಂತೆ ಇಡಬಹುದು ” ಎನ್ನುವುದನ್ನು ಸ್ವ ಅನುಭವದ ಮೂಲಕ ಹೇಳಿದಾಗ ಇನ್ನೊಂದು ಅಚ್ಚರಿ !

ದೇವಗಳ್ಳಿಯ ಸಾವಯವ ಕೃಷಿಕ ಶಂಕರೇಗೌಡರು ” ಕೇವಲ ಏಳು ಗುಂಟೆಯಲ್ಲಿ ಅರಿಶಿಣ ಬೆಳೆದು ಪ್ರತಿವರ್ಷ ಒಂದು ಲಕ್ಷ ರೂಪಾಯಿಗಳಿಸುತ್ತಿದ್ದೇನೆ” ಎಂದಾಗ ಮತ್ತೊಂದು ಅಚ್ಚರಿ. ರೈತರ ಅನುಭವದ ಮಾತುಗಳನ್ನು ಕೇಳಿದ ರೈತರಿಗೆ ಮಂಗಳವಾರ ಹೀಗೆ ಅಚ್ಚರಿಗಳ ಮೇಲೆ ಅಚ್ಚರಿ.

ನಂಜನಗೂಡು ತಾಲೂಕಿನ ತಾಯೂರಿನಲ್ಲಿರುವ ರಾಜಬುದ್ದಿ ಅವರ ತೋಟದಲ್ಲಿ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಮೈಸೂರಿನ ತೋಟಗಾರಿಕಾ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಸಂಯುಕ್ತಾಶ್ರಯದಲ್ಲಿ ಪ್ರಾಧ್ಯಾಪಕ ಬಿ.ಎಸ್.ಹರೀಶ್ ನೇತೃತ್ವದಲ್ಲಿ ನಡೆದ ‘ಅರಿಶಿಣ ಕೃಷಿಯ ನೂತನ ಮತ್ತು ಸುಧಾರಿತ ತಂತ್ರಜ್ಞಾನಗಳ ಕುರಿತಾದ ಕ್ಷೇತ್ರೋತ್ಸವದಲ್ಲಿ ರೈತರಿಗೆ ಹಲವು ಉಪಯುಕ್ತ ಮಾಹಿತಿ ಲಭ್ಯವಾಯಿತು.

ವೆಚ್ಚ ಕಡಿಮೆ ಮಾಡಿಕೊಳ್ಳುವ, ಉತ್ಪಾದನೆ ಹೆಚ್ಚಳ ಮಾಡುವ, ಮಿಶ್ರ ಬೆಳೆಗಳನ್ನು ಸಂಯೋಜನೆ ಮಾಡುವ, ಕಳೆ ನಿಯಂತ್ರಣ ಮಾಡುವ, ಮೌಲ್ಯವರ್ಧನೆ ಮಾಡುವ, ಅರಿಶಿನ ಬೇಯಿಸುವ, ಒಣಗಿಸಿ ಸಂಸ್ಕರಣೆ ಮಾಡುವ ಬಗ್ಗೆ ಸ್ವತಃ ಅರಿಶಿಣ ಬೆಳೆಗಾರರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಆದಾಯವನ್ನು ಹೇಗೆ ದ್ವಿಗುಣ ಮಾಡಿಕೊಳ್ಳಬಹುದು ಎಂದು ತಿಳಿಸಿಕೊಟ್ಟರು.

ಪ್ರಗತಿಪರ ಕೃಷಿಕ ಕ್ಷೀರಸಾಗರ ಅವರ ತೋಟದ ಚಿತ್ರ. ಸಾಂದರ್ಭಿಕವಾಗಿ ಬಳಸಲಾಗಿದೆ.

ನಾನು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಅನುಭವವನ್ನು ಹಂಚಿಕೊಂಡೆ. ರೈತರ ಆದಾಯ ದ್ವಿಗುಣ ಮಾಡಬೇಕು ಎಂದು ಮಾತನಾಡುವ ಮಹಾನುಭಾವರು ಇಂತಹ ಮಾದರಿಗಳ ಬಗ್ಗೆ ಮುಚ್ಚಿದ ಕಣ್ಣನ್ನು ತೆರೆಸಿದರೆ ರೈತ ಮತ್ತು ಕೃಷಿ ಎರಡೂ ಬೆಳೆಯುತ್ತವೆ ಮತ್ತು ಉಳಿಯುತ್ತವೆ. ಮರೆಯುವ ಮುನ್ನ, ರಾಜಬುದ್ದಿ ಅವರ ತೋಟದಲ್ಲಿ ನೀಡಿದ ಆತಿಥ್ಯದ ಪಾಯಸದ ಊಟ, ಅರಿಶಿಣ ಮಿಶ್ರಿತ ಸುವಾಸನೆ ಯುಕ್ತ ರುಚಿಯಾದ ಹಾಲಿನ ಸ್ವಾದ ಹೀಗಲೂ ನಾಲಗೆಯ ಮೇಲೆ ಇದೆ.

1 COMMENT

LEAVE A REPLY

Please enter your comment!
Please enter your name here