
ಅದು 1998 ರ ಕಾಲ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಗಸೂರಿನ ಕೃಷಿಕರು ನನ್ನೆದುರು ಅಕ್ಕಿ ಮುಡೆ ಕಟ್ಟುವ ಪ್ರಾತ್ಯಕ್ಷಿಕೆ ಮಾಡಿದರು. ನಾನು ಚಿತ್ರ ದಾಖಲಿಸಿದೆ. ಅದು ಇಲ್ಲಿದೆ. ವಿಷಯ ಇಷ್ಟೇ ಅಲ್ಲ, ಈ ಮುಡೆ ಕಟ್ಟುವಾಗ ಎಷ್ಟು ದೊಡ್ಡದು ಮಾಡಲಿ? ಕೇಳಿದ್ದರು. “50. ಕಿಲೋ ತೂಕದ್ದು ಮಾಡಿ “ಎಂದಿದ್ದೆ. “ನನಗೇ ತೂಕ ತೆಳುದಿಲ್ಲ, ನಮ್ದು ಪಾಯಲಿ ಲೆಕ್ಕ ” ಎಂದು ನಗುತ್ತಾ ಕೆಲಸ ಆರಂಭಿಸಿದರು.
ಬಾಳೆ ಬಳ್ಳಿಯನ್ನು ಮಡಚಿ ಪಾದಕ್ಕೆ ಸಿಕ್ಕಿಸಿ ಮೊಳಕಾಲು ಚಿಪ್ಪಿನ ತನಕ ಅಳೆದು ಅದನ್ನು ಮುಡೆ ಪಾಯದ ಹಗ್ಗವಾಗಿಸಿ ಭತ್ತದ ಹುಲ್ಲಿನಿಂದ ಕಟ್ಟುವ ಕೆಲಸ ಶುರು ಮಾಡಿದರು. ಅವರು ಕೊಡ್ತಿಗೆಯಿಂದ ಬಡಿಯುತ್ತಾ ಅಕ್ಕಿ ತುಂಬುತ್ತಾ ಹೋದಂತೆ ಮುಡೆ ಬಿಗಿಯಾಗಿ ಸುಂದರ ಆಕಾರ ಪಡೆಯಿತು. ಈ ಮುಡೆ ತೂಕ ಮಾಡಿದರೆ 50 ಕಿಲೋ ಮೀರಿ ಅರ್ಧ ಕಿಲೋ ಮಾತ್ರ ಜಾಸ್ತಿ ತೂಗಿತು.
ಅಕ್ಕಿಯನ್ನು ತೂಕ ಮಾಡದೇ ಬಾಳೆ ಬಳ್ಳಿಯ ಅಂದಾಜಿನಲ್ಲಿ ಮುಡೆ ಕಟ್ಟಿ ನನ್ನೆದುರು ಗ್ರಾಮ ಕೌಶಲ್ಯ ತೋರಿದ ಅಗಸೂರು ಹಿರಿಯರು ಇಂದಿಗೂ ಕಾಡುತ್ತಾರೆ. ಮುಂದೆ 2001 ರಿಂದ ಸತತ 20 ವರ್ಷಕಾಲ ಅಡಿಕೆ ಪತ್ರಿಕೆಗೆ ನೆಲ ಮೂಲ ಜ್ಞಾನದ ಕುರಿತು ಅಂಕಣ ಬರೆದೆ, ಅಂಕಣದ ಹೆಸರು “ಮುಡೆ ಬಳ್ಳಿ ” ಎಂದಾಗಿತ್ತು. ಇದಕ್ಕೆ ಕಾರಣ ಅಗಸೂರು ಗ್ರಾಮದ ಈ ಹಿರಿಯರು !
1924ರ ಹೊತ್ತಿಗೆ ಕಾಡುಮರಕ್ಕೆ ಹಬ್ಬಿದ ಬಳ್ಳಿ ಕಡಿಯಲು ಬ್ರಿಟಿಷರು ಸುತ್ತೋಲೆ ಹೊರಡಿಸಿದ್ದರು. ಅದರ ವಿರುದ್ಧ ಚಳುವಳಿ ನಡೆಯಿತು. ಅದಕ್ಕೇ ಮುಖ್ಯ ಕಾರಣ ಕಾಡುಬಳ್ಳಿ ಕಡಿದರೆ ಮುಂದೆ ಕೃಷಿಕರಿಗೆ ಮುಡೆ ಕಟ್ಟಲು ಬೆತ್ತದ ಬಳ್ಳಿ ಕೊರತೆಯಾಗುತ್ತದೆಂಬ ಕಾರಣವಿತ್ತು. ಇದು ಕಾಡುಬಳ್ಳಿ ಉಳಿಸುವ ಮೊದಲ ಚಳವಳಿಯೂ ಹೌದು.