ಬೆಂಗಳೂರು: ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ ರೂ.ಗಳ ಸಹಾಯಧನವನ್ನು ಪ್ರಸ್ತುತ 300 ಜನರಿಗೆ ನೀಡಲಾಗುತ್ತಿದೆ. ಇದನ್ನು 1000 ಮೀನುಗಾರರಿಗೆ ಸಹಾಯಧನ ಹೆಚ್ಚಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಅವರು ಅಕ್ಟೋಬರ್ 16 ರಂದು ಉದ್ಘಾಟಿಸಿ, ಮಾತನಾಡಿದರು.
ಸ್ತ್ರೀ ಸಾಮರ್ಥ್ಯ ಯೋಜನೆಯಡಿ 3 ರಿಂದ 5 ಲಕ್ಷ ನೀಡಲಾಗುತ್ತಿದ್ದು ಒಳನಾಡು ಮೀನುಗಾರಿಕೆ ಕೈಗೊಳ್ಳಲು ಮುಂದೆ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಸ್ವಾಮಿ ವಿವೇಕಾನಂದರ ಯೋಜನೆಯಡಿ ನೀಡುವ ಸಹಾಯ ಧನವನ್ನು ಬಳಸಿ ಸುಮಾರು 1000 ಸಂಘಗಳಿಗೆ ಮೀನುಗಾರಿಕೆ ಕೈಗೊಳ್ಳಲು ಸಹಾಯ ಮಾಡಲಾಗುತ್ತದೆಈಗಾಗಲೇ ಆದೇಶ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಮೀನುಗಾರಿಕೆಯಲ್ಲಿ ರಾಜ್ಯ ಇನ್ನೂ ಸಾಧನೆ ಮಾಡಬೇಕಿದೆ. ರಫ್ತು ಮಾಡುವಲ್ಲಿ ಆಂಧ್ರಪ್ರದೇಶ ಮುಂದುವರೆದಿದೆ. ಒಂದು ತಂಡವನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ಯಲು ಸೂಚಿಸಿರುವುದಾಗಿ ತಿಳಿಸಿದರು.
ಈಗಿರುವ ಮೀನುಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸಿ, ಈಗಿನ ರಫ್ತು ಪ್ರಮಾಣಕ್ಕಿಂತ ಮೂರುಪಟ್ಟು ಹೆಚ್ಚು ಮಾಡಬೇಕೆಂದು ಸೂಚಿಸಿದ್ದೇನೆ. ಇದಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದರು.