ಕ್ಯಾರಂಬೋಲಾ , ಕಮರಾಕ್ಷಿ, ಧಾರೆ ಹುಳಿ, ಕರಿಮಾದಲ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಹುಳಿಮಿಶ್ರಿತ ಸಿಹಿ ಹಣ್ಣು ಅಡ್ಡಲಾಗಿ ಕತ್ತರಿಸಿದರೆ ಐದು ಭಾಹುಗಳುಳ್ಳ ನಕ್ಷತ್ರದಂತೆ ಕಾಣುತ್ತದೆ. ಅದಕ್ಕಾಗಿಯೇ ಈ ಹಣ್ಣು ‘ ಸ್ಟಾರ್ ಫ್ರೂಟ್ ‘ ಎಂದು ಹೆಚ್ಚು ಜನಪ್ರಿಯವಾಗಿರುವುದು .
ಹೆಸರು ಹಲವು, ಆಕರ್ಷಕ ಬಣ್ಣ ಮತ್ತು ಪರಿಮಳ , ಬೆಳೆಯುವುದು ಸುಲಭ ಆದಾಗ್ಯೂ ಬೇರೆ ದೇಶಗಳಂತೆ ನಮ್ಮಲ್ಲಿ ಇದನ್ನು ವಾಣಿಜ್ಯ ವಾಗಿ ಬೆಳೆಯುತ್ತಿಲ್ಲ. ಕಾರಣ ಸ್ಟಾರ್ ಫ್ರೂಟ್ ಉಪಯೋಗಿಸುವ ವಿಧಾನ ಅನೇಕರಿಗೆ ತಿಳಿದಿಲ್ಲ. ಹೀಗಾಗಿ ಎಲ್ಲರ ತೋಟದಲ್ಲಿ ಒಂದೋ ಎರಡೋ ಸ್ಟಾರ್ ಫ್ರೂಟ್ ಗಿಡಗಳು, ಉಳಿದಂತೆ ಬರೀ ಮಾವು, ಸಪೋಟ , ಸೀಬೆ … ಇತ್ಯಾದಿ.
ಮಕ್ಕಳಿಗೆ ಇಷ್ಟವಾದ ಹಣ್ಣು ಯಾವತ್ತೂ ಆರೋಗ್ಯದ ದೃಷ್ಟಿಯಿಂದ ಅನೇಕ ಪ್ರಯೋಜನಗಳಿರುತ್ತವೆ. ಆದರೆ ದೊಡ್ಡವರು ತಿನ್ನಲು ಬಿಡುವುದಿಲ್ಲ. ಅಂತೆಯೇ ಸ್ಟಾರ್ ಫ್ರೂಟ್ ಕೂಡ. ಹೋಗಲಿ ಬಿಡಿ, ಮುಂದುವರಿಯೋಣ!
ಬೆಳವಲ ಫಾರಂ ನಲ್ಲಿ ಕೃಷಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಧ ಗಂಟೆಗೊಮ್ಮೆ ಸ್ಟಾರ್ ಫ್ರೂಟ್ ಹಣ್ಣಿನ ಗಿಡದ ಹತ್ತಿರ ಹೋಗಿ ಇನ್ನೂ ಮಾಗದ ಕಾಯಿಗಳನ್ನೇ ಕಿತ್ತು ತಿನ್ನುತ್ತಿದ್ದುದನ್ನು ನೋಡಿ ‘ಏನ್ರಪ್ಪಾ ಅಷ್ಟೊಂದು ಇಷ್ಟಾನಾ ಆ ಹಣ್ಣು ‘ ಎಂದು ವಿಚಾರಿಸಿದೆ. ‘ ಹೌದು ಅಂಕಲ್, ತುಂಬಾ ರುಚಿಯಾಗಿದೆ, ನಾವು ಎಂದೂ ಈ ಹಣ್ಣು ತಿಂದಿರಲಿಲ್ಲ , ಒಂದು ಹಣ್ಣು ತಿಂದರೆ ಅರ್ಧ ಘಂಟೆ ಹೆಚ್ಚಿಗೆ ಕೆಲಸ ಮಾಡಬಹುದು’ ಎಂಬ ಉತ್ತರ.
ಹಾಗಿದ್ದ ಮೇಲೆ ಈ ಹಣ್ಣಿನ ಜ್ಯೂಸ್ ಮಾಡಿದರೆ ಬಹಳ ಚೆನ್ನಾಗಿಯೇ ಇರಬಹುದೆಂದು ಮಂಜುಳಾ ಸಿದ್ದಪ್ಪ ಅವರಿಗೆ ಸಲಹೆ ಮಾಡಿದ ಮಾರನೆ ದಿನವೇ ಜ್ಯೂಸ್ ಸಿದ್ಧ . ಈಗ ತೋಟದಲ್ಲಿ ಸ್ಟಾರ್ ಫ್ರೂಟ್ ಹಣ್ಣಿದ್ದರೆ ಟೀ ಬದಲು ಇದರದೇ ಜ್ಯೂಸ್. ಒಬ್ಬಬ್ಬರೂ ಎರಡು – ಮೂರು ಗ್ಲಾಸ್ ಜ್ಯೂಸ್ ಖಾಲಿ ಮಾಡುತ್ತಾರೆ . ನನಗೂ ಜ್ಯೂಸ್ ತುಂಬಾ ಇಷ್ಟವಾಗಿ ಇದರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಕುತೂಹಲ ಬಂತು.
ಕ್ಯಾರಂಬೋಲಾ ಎಂಬ ಪದವು “food apatizer” (ಆಹಾರದ ಹಸಿವು ಹೆಚ್ಚಿಸುವ)ಎಂಬ ಅರ್ಥವಿರುವ ಸಂಸ್ಕೃತ ಪದದಿಂದ ಬಂದಿದೆ. ಹೆಸರಿನಂತೆಯೇ ಈ ಹಣ್ಣಿನ ಜ್ಯೂಸ್ ಹಸಿವನ್ನು ಹೆಚ್ಚಿಸುವಲ್ಲಿ ಹಾಗೂ ದಣಿವನ್ನು ನಿವಾರಿಸುವಲ್ಲಿ ಸಹಕಾರಿಯಾಗಿರುವುದನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಆದರೆ ಆರೋಗ್ಯದ ದೃಷ್ಟಿಯಿಂದ ಸಂಶೋಧನೆ ಹೇಳುವುದು ಇನ್ನೂ ಕುತೂಹಲ.
ಥೈಲ್ಯಾಂಡಿನ ಹಿರಿಯ ನಾಗರೀಕರು ದಿನಕ್ಕೆ 2 ಬಾರಿ ಸ್ಟಾರ್ ಫ್ರೂಟ್ ಸೇವಿಸುವುದರಿಂದ ಅವರಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ( antioxident) ಜಾಸ್ತಿ ಯಾಗಿರುವುದು ಮತ್ತು ಲಿಪೊಪ್ರೋಟೀನ್ ಗೆ ಸಂಬಂದಿಸಿದ ವಿಟಮಿನ್ ಸಿ ಮತ್ತು ವಿಟಮಿನ್ ಎ ಪ್ರಮಾಣವು ಉತ್ತಮಗೊಂಡು , ಫ್ಯಾಟಿ ಲಿವರ್ (Fatty liver) ತೊಂದರೆಗಳು ಕಡಿಮೆ ಯಾಗಿರುವುದನ್ನು ಸಂಶೋಧನೆಯೊಂದು 2016 ರಲ್ಲಿ ತಿಳಿಸಿದೆ.
ಇಂಡೋನೇಷ್ಯಾದ ಲಾಮ್ಪಂಗ್ ಯೂನಿವರ್ಸಿಟಿ 2017 ರಲ್ಲಿ ನಡೆಸಿದ ಸಂಶೋಧನೆಯಿಂದ ಅಧಿಕ ಪ್ರಮಾಣದ ರಕ್ತದೊತ್ತಡ ಕಡಿಮೆ ಮಾಡುವ ಅಲೋಪತಿ ಓಷಧಿ ಗಳಷ್ಟೇ ಸ್ಟಾರ್ ಫ್ರೂಟ್ ಜ್ಯೂಸ್ ಸಹ ಫಲಕಾರಿಯಾಗಿರುವುದನ್ನು ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೆ ಈ ಹಣ್ಣಿನ ಜ್ಯೂಸ್ ಕಡಿಮೆ ಕ್ಯಾಲೋರಿ , ಹೆಚ್ಚಿನ ಫೈಬರ್ ಅಂಶ, ವಿಟಮಿನ್ ಬಿ, ವಿಟಮಿನ್ ಸಿ, ಸೋಡಿಯಂ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಅನೇಕ ಪ್ರಮುಖ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವುದರಿಂದ ಗ್ಯಾಸ್ಟ್ರಿಕ್ ತೊಂದರೆ ಇರುವವರಿಗೆ ಸೂಕ್ತವಾಗಿರುತ್ತದೆ ಎಂದು ಆಹಾರ ಪೌಷ್ಟಿಕಾಂಶ ತಜ್ಞರು ವರದಿ ಮಾಡಿದ್ದಾರೆ.
ಇಂತಹ ಆಹ್ಲಾದಕರವಾದ ಸ್ಟಾರ್ ಫ್ರೂಟ್ ಜ್ಯೂಸ್ ಅನೇಕರಿಗೆ ಪರಿಚಯವಿಲ್ಲ. ಆದರೆ ಇದನ್ನು ಮಾಡುವುದು ಬಹಳ ಸುಲಭ. ಚೆನ್ನಾಗಿ ಬಲಿತು ಮಾಗಿದ ಹಣ್ಣುಗಳನ್ನು ಶುದ್ಧ ನೀರಿನಲ್ಲಿ ತೊಳೆದು ಅಡ್ಡಲಾಗಿ ಕತ್ತರಿಸಿ , ಮಿಕ್ಸಿಯ ಜ್ಯೂಸ್ ಜಾರ್ ನಲ್ಲಿ 2 ನಿಮಿಷ ತಿರುಗಿಸಿ ನಂತರ ಅಗತ್ಯದಷ್ಟು ನೀರು , ಬೆಲ್ಲ ಅಥವಾ ಸಕ್ಕರೆಯನ್ನು ಹಾಕಿ ಮತ್ತೊಮ್ಮೆ ತಿರುಗಿಸಿ ಜ್ಯೂಸ್ ಸ್ಟೇನರ್ ನಲ್ಲಿ ಸೋಸಿ ಕೊಂಡರೆ ಜ್ಯೂಸ್ ರೆಡಿಯಾಗುತ್ತದೆ. (ಮಧ್ಯಮ ಗಾತ್ರದ 2 ಹಣ್ಣು + 1 ಗ್ಲಾಸ್ ನೀರು ಅಗತ್ಯದಷ್ಟು ಬೆಲ್ಲ ಅಥವಾ ಸಕ್ಕರೆ = 1 ಗ್ಲಾಸ್ ಜ್ಯೂಸ್).
ಶನಿವಾರ ಮಂಡ್ಯದ ಭಾಸ್ಕರ್ ಗೌಡ ಅವರು ಫಾರಂ ಗೆ ಬಂದು ಹಣ್ಣುಗಳನ್ನು ತೆಗೆದುಕೊಂಡು ಹೋಗಿ, ಮೇಲಿನಂತೆ ಜ್ಯೂಸ್ ಮಾಡಿ ಸೂಪರ್ ಆಗಿದೆ ಸರ್ ಎಂದು ಮೆಸೇಜ್ ಮಾಡಿದ್ದರು.
ಬಾಳೆ ಹಣ್ಣಿನ ಮೌಲ್ಯ ವರ್ಧನೆಯಲ್ಲಿ ನಿರತರಾಗಿರುವ ಅಭಯ್ ಫಾರ್ಮ್ ನವೀನ್ ತರದವರು ಅಥವಾ ನುಗ್ಗೆ ಸೊಪ್ಪಿನ ಮೌಲ್ಯ ವರ್ಧನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿರುವ ನಂದಿ ಆರ್ಗ್ಯಾನಿಕ್ ಫಾರ್ಮ್ ಹೌಸ್ ಬಸಯ್ಯ ಹಿರೇಮಠ್ ಅಂತವರುಗಳು ಸ್ಟಾರ್ ಫ್ರೂಟ್ ಹಣ್ಣಿನ ಮೌಲ್ಯ ವರ್ಧನೆಯಲ್ಲಿ ಆಸಕ್ತಿ ತೋರಿಸುವ ಅಗತ್ಯವಿದೆ.
ಇದರಿಂದ ಚೈನಾ , ಮೆಕ್ಸಿಕೋ, ಇಂಡೋನೇಷ್ಯಾ , ಕ್ಯಾಲಿಫೋರ್ನಿಯಾ ಅಥವಾ ಥೈಲ್ಯಾಂಡ್ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ಇದರ ಬೇಡಿಕೆ ಜಾಸ್ತಿಯಾಗಿ ರೈತರು ವಾಣಿಜ್ಯ ಮಟ್ಟದಲ್ಲಿ ಸ್ಟಾರ್ ಫ್ರೂಟ್ ಬೆಳೆಯಲು ಪ್ರಾರಂಭಿಸಬಹುದು ಮತ್ತು ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಇದರ ಪ್ರಯೋಜನ ಪಡೆಯಬಹುದು!