ಇದು ಮುಳಬಾಗಿಲು ತಾಲ್ಲೂಕು ತೊಂಡಹಳ್ಳಿಯ ತುಂಡು ನೆಲದ ಮಣ್ಣು. ಮುಂಗಾರು – ಹಿಂಗಾರು ಕೃಷಿ ಹಂಗಾಮಿನಲ್ಲಿ ಮಳೆನೀರನ್ನು ಕುಡಿದು ತನ್ನೊಡಲಿಂದ ಸರಿಸುಮಾರು 24 ವಿವಿಧ ಬೆಳೆಗಳನ್ನು ಬೆಳೆಸಿದ ಒಂದು ಎಕರೆಯಷ್ಟಿರುವ ಹೊಲದ ಮಣ್ಣು.
ತಾನು ಬೆಳೆಸಿದ ಬೆಳೆಗಳ ಕಟಾವು ಆದನಂತರ, ತನ್ನ ದಣಿವಾರಿಸಿಕೊಳ್ಳುತ್ತಾ , ತನ್ನ ಮೇಲೆ ಉಳಿದಿರುವ ಒಣಗಿದ ಎಲೆ – ಕಸ – ಕಡ್ಡಿಗಳನ್ನು ನಿಧಾನವಾಗಿ ನುಂಗುತ್ತಾ , ತನ್ನಲ್ಲಿನ ಉತ್ಪಾದನಾ ಕಸುವನ್ನು ಸುಧಾರಿಸಿಕೊಳ್ಳುತ್ತಾ ಮತ್ತೊಂದು ಬೆಳೆ ಬೆಳೆಸಲು ಸಿದ್ಧಗೊಳ್ಳುತ್ತಿರುವ ಮಣ್ಣು .
ಕಳೆದ ವರ್ಷ ಜೂನ್ ತಿಂಗಳಿನಿಂದ ಈ ವರ್ಷದ ಫೆಬ್ರವರಿ ತಿಂಗಳ ಕೊನೆಯ ದಿನಗಳಲ್ಲೂ ಒಂದಿಲ್ಲೊಂದು ಬೆಳೆಯನ್ನು ಬೆಳೆಸಿ, ತನ್ನ ಮೇಲೆ ನಿರಂತರವಾಗಿ ಸುಮಾರು ಒಂಭತ್ತು ತಿಂಗಳವರೆಗೂ ನೆರಳಿರುವಂತೆ ಮಾಡಿಕೊಂಡ ಮಣ್ಣು.
ತಾನು ಬೆಳೆಸಿದ 24 ಬೆಳೆಗಳ ಮೂಲಕ, ತನ್ನನ್ನು ನಂಬಿದ್ದ ರೈತ ಕುಟುಂಬ, ಕೃಷಿ ಕಾರ್ಮಿಕರು, ಜಾನುವಾರುಗಳು, ಬೆಳೆದ ಸಸ್ಯಗಳನ್ನೇ ಆಧರಿಸಿ ಬದುಕಿದ ಸಣ್ಣ ಪುಟ್ಟ ಕ್ರಿಮಿಕೀಟಗಳು, ಪಕ್ಷಿಗಳು , ಅವುಗಳನ್ನು ಆಹಾರಕ್ಕಾಗಿ ಅವಲಂಬಿಸಿದ್ದ ಇನ್ನಷ್ಟು ಪ್ರಕೃತಿ ಜೀವಿಗಳು ಇವೆಲ್ಲವೂ ಪರಸ್ಪರಾವಲಂಬನೆಯಿಂದ ಬದುಕಲು ಪೂರಕ ವಾತಾವರಣ ಸೃಷ್ಟಿಸಿದ ಮಣ್ಣು.
ತನ್ನನ್ನು ಸರಿಯಾಗಿ ನೋಡಿಕೊಂಡಲ್ಲಿ ತಾನು ನಂಬಿದವರ ಕೈಬಿಡುವುದಿಲ್ಲ ಎಂಬ ಮಾತನ್ನು ಸಾಬೀತು ಮಾಡಿದ ಮಣ್ಣು. ಒಂಭತ್ತು ತಿಂಗಳ ಬೆಳೆಗಾಲದ ಸಮಯದಲ್ಲಿ ತನ್ನನ್ನೇ ಆಸಕ್ತಿಯಿಂದ ಗಮನಿಸುತ್ತಿದ್ದ ನನ್ನಂತಹವರಿಗೆ ಹಲವು ವಿಸ್ಮಯಗಳನ್ನು, ತನ್ನಲ್ಲಿರುವ ನಿಜವಾದ ತಾಕತ್ತನ್ನು , ತನ್ನ ಹಾಗೂ ಕಳೆಗಿಡಗಳ ನಡುವಿನ ಅವಿನಾವಣಾ ಸಂಬಂಧವನ್ನು ತೋರಿಸಿದ ಮಣ್ಣು.
ನಿಜ. ” ಮಣ್ಣ ಬಿಟ್ಟವರಿಗೆ ಆಧಾರವಿಲ್ಲ ” ಎಂದ ಪುರಂದರ ದಾಸರ ನುಡಿ ಸತ್ಯ. ಓ ಮಣ್ಣೇ . . . . . . ನಿನಗೆ ಶರಣೆಂದೆ
ಮಣ್ಣಿನ ಧಾರಣಾ ಶಕ್ತಿ ಕುರಿತು ಸಾಯಿಲ್ ವಾಸು ಅವರು ಬರೆದ ಮೇಲಿನ ಲೇಖನಕ್ಕೆ ಎಲ್.ಸಿ. ನಾಗರಾಜ್ ಅವರು ನೀಡಿರುವ ಪ್ರತಿಕ್ರಿಯೆ ಮುಂದಿದೆ.
ಇದು ಮಣ್ಣನ್ನು ಅದರ ಎಲ್ಲ ಬಗೆಯ ಇರುವಿನೊಂದಿಗೆ ಕಾಪಿಟ್ಟುಕೊಳ್ಳುವ ಆದರ್ಶ ಮಾದರಿ, ಆದರೆ ಕುರಿಗಾಹಿಗಳು ದನಗಾಹಿಗಳು(Pastoralism) ದಂಡಿಯಾಗಿರುವ ಸನ್ನಿವೇಶದಲ್ಲಿ ಇಂಥ ಆದರ್ಶ ಸಾಧ್ಯವಾಗುತ್ತಿಲ್ಲ
ಈಗ ಒಬ್ಬ ಬೇಸಾಯಗಾರ ಅಕ್ಟೋಬರ್ ತಿಂಗಳ ಕೊನೆಯ ಭಾಗದಲ್ಲಿ ಹುರುಳಿಕಾಳು ಬಿತ್ತನೆ ಮಾಡಿ ಡಿಸೆಂಬರಿನಲ್ಲಿ ಕೊಯ್ಲು ಮಾಡಿಕೊಂಡು ಮುಂದಿನ ಮುಂಗಾರಿನ ರಾಗಿ ಅಥವಾ ಜೋಳ ಬಿತ್ತನೆಗೆ ಏಗಲು(ಹುರುಳಿ ಏಗಲು ಎಂದರೆ ರಾಗಿ/ ಜೋಳ ಬಿತ್ತನೆಗೆ ಮುಂಚೆ ದ್ವಿದಳ ಬಿತ್ತಿ ಸಾರಜನಕ ಕೂಡಿಸುವಿಕೆಯ ಪಾರಂಪರಿಕ ಮುಂಗಾಣ್ಕೆ) ಮಾಡಿಕೊಂಡಿದ್ದ ಅಂತಿಟ್ಕೊಳಿ.
ಡಿಸೆಂಬರಿನಲ್ಲಿ ಹುರುಳಿ ಕೊಯ್ಲು ಮಾಡಿಕೊಂಡ ಮೇಲೆ ಹುರುಳಿಯ ಒಣ ಎಲೆಗಳು ಆ ಹೊಲದ ಮೇಲೆ ಹಾಸಿಕೊಂಡಿರುತ್ತವಲ್ಲ ಅದನ್ನ ಕುರಿ ದನಗಳು ಆಯ್ದು ತಿನ್ನುತ್ತವೆ; ಯಾಕೆಂದರೆ ಈ ತರದ ಫಲವಂತಿಕೆ ಮಾದರಿ ಅನುಸರಿಸಲು ಬೇಸಗೆ ಕಾಲದಲ್ಲಿ ಕುರಿ ದನಗಳಿಗೆ ಮೇವಿನ ಲಭ್ಯತೆ ಕಡಿಮೆಯಾಗಿರುತ್ತದೆ; ನಮ್ಮಲ್ಲಿ Controlled grazing ಬದಲಿಗೆ free grazing ನ್ನು ದನಗಾಹಿ/ ಕುರಿಗಾಹಿಗಳು ಬಯಸುತ್ತಾರೆ.
ಈ ಫಲವಂತಿಕೆ ಧಾರಣ ಮಾದರಿಗೆ ಒಂದೋ ಭೌತ ರೂಪದ ಬೇಲಿ(Physical fencing) ಇರಬೇಕಾಗುತ್ತದೆ, ಅದಾಗದಿದ್ದಾಗ ಸಾಮಾಜಿಕ ನಿಯಂತ್ರಣ (Social fencing) ಇರಬೇಕಾಗುತ್ತದೆ. ಗ್ರಾಮಗಳ ಈಗಿನ ಸ್ತರವಿಸ್ತಾರ ಜೀವನಯಾಪನೆ ಪದ್ಧತಿಗಳಲ್ಲಿ ಈ ತರದ ಸಾಮಾಜಿಕ ನಿಯಂತ್ರಣ ಎಲ್ಲ ಭೂ ಹಿಡುವಳಿಗಳಲ್ಲೂ ಸಾಧ್ಯವಾಗುವುದೇ ?
ಭೌತರೂಪದ ಬೇಲಿ ಮತ್ತು ಸಾಮಾಜಿಕ ನಿಯಂತ್ರಣ ಎರಡೂ ಸಾಧ್ಯವಾಗದಿದ್ದಾಗ ಮರವಳಿಯ ಜೀವಂತ ಬೇಲಿ(Bio fencing) ಅತ್ತ ದನ/ ಕುರಿಗಳ ಮೇವಿನ ಕೊರತೆಯನ್ನೂ ನೀಗಬಲ್ಲವು ಇತ್ತ ಹೊಲದ ಮಣ್ಣನ್ನೂ ಕಾಪಿಡಬಲ್ಲವು. ಆದರೆ ಬೇಸಾಯಗಾರರು ತಮ್ಮ ಹೊಲಗಳ ಸುತ್ತಲೂ ಜೀವಂತ ಬೇಲಿ ಇದ್ದರೆ ಅದು ಉಳುಮೆ ಮಾಡಲು ಮತ್ತು ಎಡೆಕುಂಟೆ ಹೊಡೆಯಲು ತಡೆಯಾಗುತ್ತದೆಯೆಂದೇ ತಪ್ಪಾಗಿ ಲೆಕ್ಕಾಚಾರ ಹಾಕುತ್ತಾರೆ.
ಹೊಲದ ಸುತ್ತಲೂ ಜೀವಂತ ಬೇಲಿ ಇದ್ದಾಗ ಗಾಳಿಯ ಹೊಡೆತದಿಂದ ಮೇಲ್ಮಣ್ಣು ಧೂಳೇಳದಂತೆ ತಡೆಗಟ್ಟಬಹುದು ಎಂಬುದನ್ನು ಯಾವ ಬೇಸಾಯಗಾರನೂ ಒಪ್ಪುವುದಿಲ್ಲ; ಯಾಕೆಂದರೆ ಗಾಳಿಯ ಹೊಡೆತದಿಂದ ಧೂಳೇಳುವುದು ಬೇಸಾಯಗಾರನ ಇಂದ್ರಿಯ ಅನುಭವಕ್ಕೆ ದಕ್ಕಿರುವುದಿಲ್ಲ; ಭೂ ಮಟ್ಟದ ವಾಸ್ತವಿಕತೆಗಳು ಕಗ್ಗಂಟಿನಂತೆ ಕಾಣುತ್ತಿವೆ.
ಈಗ ಉತ್ತರ ಕರ್ನಾಟಕ ಭಾಗದ ಭೂ ಹಿಡುವಳಿಗಳ ವಿನ್ಯಾಸವನ್ನು ಉದಾಹರಣೆಯಾಗಿ ತಕ್ಕೊಳಿ; ಒಂದು ಜೋಡಿ ಎತ್ತು ಮತ್ತು ಒಬ್ಬ ಇಬ್ಬರು ಮನುಶರು ಒಂದು ದಿನದಲ್ಲಿ ಬಿತ್ತನೆ ಮಾಡಬಹುದಾದ ಹಿಡುವಳಿಯನ್ನು ‘ಒಂದು ಕೂರಿಗೆ ಭೂಮಿ’ ಅಂತಾ ಕರೆಯುತ್ತಾರೆ, ಇದು ಹೆಚ್ಚುಕಡಿಮೆ 4 ಎಕರೆಗಳ ವಿಸ್ತಾರ ಭೂ ಹಿಡುವಳಿ. ಇದರ ನಡುವೆ ಜೀವಂತ ಬೇಲಿ ಮಾಡಲು ಬೇಸಾಯಗಾರರು ಒಪ್ಪುವುದಿಲ್ಲ ಯಾಕಂದರೆ ಅದು, ಮರವಳಿಯ ಜೀವಂತ ಬೇಲಿ ಬಿತ್ತನೆ ಕಾರ್ಯಕ್ಕೆ ತೊಡಕು ಎಂದಷ್ಟೇ ನಮಗೆ ಗೊತ್ತಿದೆ, ಜೀವಂತ ಬೇಲಿಯು ಒದಗಿಸುವ ನೈಸರ್ಗಿಕ ಬಂಡವಾಳವನ್ನು(ಜಾನುವಾರುಗಳ ಮೇವು, ಸಾರಜನಕ ವರ್ತುಲ) ನಾವು ಲೆಕ್ಕಕ್ಕೇ ತೆಗೆದುಕೊಂಡಿಲ್ಲ.
ಉತ್ತರ ಕರ್ನಾಟಕದಲ್ಲಿ ಭಾರತ ಒಕ್ಕೂಟ ಸರ್ಕಾರದ ಬಂಜರು ಭೂಮಿ ಅಭಿವೃದ್ದಿ ಯೋಜನೆ(Desert Development Programme) ಯ ಒಂದು ಮುಖ್ಯ ಅಂಶ ಸಸ್ಯ ಮತ್ತು ಜೀವ ವೈವಿಧ್ಯತೆ ಏಳಿಗೆಯಾಗಿತ್ತು ; ಆದರೆ ಇದು ಸಾಧ್ಯವಾಗಿಲ್ಲ.
ಹರಪನಹಳ್ಳಿಯ ಜಿತ್ತಿನಕಟ್ಟೆ ಕಿರು ಜಲಾನಯನದಲ್ಲಿ ಮಾತ್ರ ಇದು ಕೊಂಚ ಮಟ್ಟಿಗೆ ಆದಂತಿತ್ತು ಅಷ್ಟೇ. ಸಸ್ಯ ಮತ್ತು ಜೀವ ವೈವಿಧ್ಯತೆಯ ಏಳಿಗೆ ಯಾವತ್ತಿಗೂ ನಮ್ಮ ಸಾಂಪ್ರದಾಯಿಕ ಜಲಾನಯನ ಅಭಿವೃದ್ಧಿಯ ಮೂಲ ಆಶಯವೇ ಆಗಿರಲಿಲ್ಲ.
ಇಷ್ಟೆಲ್ಲ ಇಲ್ಲಗಳ ನಡುವೆ ಇದೊಂದು ಅಪರೂಪದ ಯಶೋಗಾಥೆಯಂತೆ ಕಾಣುತ್ತಿದೆ