ತೋಟದ ವಿನ್ಯಾಸ ಹೇಗಿರಬೇಕು?

3
ಲೇಖಕರು: ಪ್ರಶಾಂತ್‌ ಜಯರಾಮ್

ಕೃಷಿ ಜಮೀನಿನಲ್ಲಿ ಹೊಸದಾಗಿ ತೋಟ ಕಟ್ಟುವವರಿಗೆ ಮತ್ತು ಹಾಲಿ ತೋಟ ಕಟ್ಟಿರುವವರಿಗೆ ಉಪಯುಕ್ತವಾಗುವ ಕೆಲವು ಮಾಹಿತಿಗಳನ್ನು ವಿವರಿಸುವ ಉದ್ದೇಶದಿಂದ ಮೇಲಿನ ಚಿತ್ರದಲ್ಲಿ 04 ಎಕರೆ ಜಮೀನನಲ್ಲಿ ಬೆಳೆ/ಗಿಡ/ಮರ ಆಯೋಜನೆ ಮುನ್ನ ಯಾವ ರೀತಿ ವಿನ್ಯಾಸ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಅವರ ಜಮೀನಿನ ಹಿಡುವಳಿಗೆ ಅನುಗುಣವಾಗಿ ಪ್ರತಿ ಎಕರೆ ಪ್ರದೇಶವನ್ನು ಒಂದು ಭಾಗ ಮಾಡಿ, ಪ್ರತಿ ಭಾಗದಲ್ಲಿ ಅವರು ಇಚ್ಛೆಪಟ್ಟ ಬೆಳೆಗಳನ್ನು ಆಯೋಜನೆ ಮಾಡಬಹುದು.

ಬೆಳೆ ಆಯೋಜನೆ ಮುನ್ನ ಜಮೀನಿನ ವಿನ್ಯಾಸ (ಲೇಔಟ್ ಪ್ಲಾನ್ ) ಕಡ್ಡಾಯವಾಗಿ ಮಾಡಿಕೊಳ್ಳಿ, ವಿನ್ಯಾಸ ಮಾಡದೇ ತೋಟ ಕಟ್ಟುವ ಉತ್ಸಹದಲ್ಲಿ ರಸ್ತೆ,ಟ್ರೆಂಚ್/ಇಂಗುಗುಂಡಿ ಮಾಡದೇ ಬೆಳೆ ಆಯೋಜನೆ, ನೀರಾವರಿ ಪೈಪ್ ಲೈನ್ ಎಲ್ಲಾ ಮಾಡಿದ ನಂತರ ಪುನಃ ಬದಲಾವಣೆ ಮಾಡುವುದರಿಂದ ಅಪಾರವಾದ ಆರ್ಥಿಕ ಮತ್ತು ಸಮಯ ನಷ್ಟವಾಗುತ್ತದೆ.ಜಮೀನಿನ ವಿನ್ಯಾಸ ಮಾಡಿದ ನಂತರ ನೀರಾವರಿಗೆ ಪೈಪ್ ಅಳವಡಿಸುವುದು ಮತ್ತು ಗಿಡಗಳ ಆಯೋಜನೆ ಮಾಡಬೇಕು.

ತೋಟದ ಸುತ್ತ ವಿನ್ಯಾಸದಲ್ಲಿ ತೋರಿಸಿರುವಂತೆ ರಸ್ತೆ ಮತ್ತು ಟ್ರೆಂಚ್/ಇಂಗುಗುಂಡಿ ಇರಲಿ. ರಸ್ತೆಯ ಅಗಲ 12 ಅಡಿ ಬಿಡುವುದರಿಂದ ಜಮೀನು ವ್ಯರ್ಥವಾಗುತ್ತದೆ ಎಂಬ ಕಲ್ಪನೆ ಬೇಡ,ರಸ್ತೆ ಅಕ್ಕಪಕ್ಕ ಸಾಕಷ್ಟು ಮೇವು/ಗೊಬ್ಬರ /ಹಣ್ಣು /ಕಟ್ಟಿಗೆ /ಔಷಧಿಯ/ಇತ್ಯಾದಿ ಗಿಡಗಳನ್ನು ಹಾಕುವುದರಿಂದ ಆರ್ಥಿಕವಾಗಿ ಸಾರ್ಥಕತೆ ಸಾಧಿಸುವುದರ ಜೊತೆಗೆ ಪ್ರತಿ ಭಾಗದಲ್ಲಿ ಬೆಳೆಯುವ ಬೆಳೆಗಳಿಗೆ ಸಮರ್ಪಕ ಗಾಳಿ, ಬೆಳಕು ದೊರೆಯುತ್ತದೆ. ಸಾಗಾಟಕ್ಕೆ ವಾಹನವನ್ನು ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆಯಿಂದ ಸಾಗಾಟ ಮಾಡಲು ಮಾನವ ಶ್ರಮ ಮತ್ತು ಕೂಲಿ ಉಳಿತಾಯವಾಗುತ್ತದೆ.

ಉಳುಮೆ ಮಾಡಲು ಟ್ರ್ಯಾಕ್ಟರ್ /ಟಿಲ್ಲರ್ ಇವುಗಳನ್ನು ಬೇರೆ ಭಾಗದಲ್ಲಿ ಬೆಳೆದಿರುವ ಬೆಳೆಗಳ ಮೇಲೆ ತೆಗೆದುಕೊಂಡು ಹೋಗದೇ ಬೇಕಾದ ಭಾಗಕ್ಕೆ ಯಾವ ಅಡಚಣೆಯಿಲ್ಲದೆ ತೆಗೆದುಕೊಂಡು ಹೋಗಬಹುದು.

ತೋಟ ನಿರ್ಮಾಣ ಮಾಡಿದ ಎಷ್ಟೋ ವರ್ಷಗಳ ನಂತರ ತೋಟದಲ್ಲಿ ನೀರಿನ ಕೊರತೆ ಉಂಟಾಗಬಹುದು ಅಥವಾ ಹೆಚ್ಚಿನ ನೀರಿನ ಬೇಡಿಕೆ ಬರಬಹುದು. ಹೊಸದಾಗಿ ಕೊಳವೆಬಾವಿ ಮಾಡಿಸಲು ತೋಟದ ಯಾವುದೋ ಭಾಗದಲ್ಲಿ ಬೋರ್ ಪಾಯಿಂಟ್ ಸಿಕ್ಕಾಗ ಆ ಜಾಗಕ್ಕೆ ಬೋರ್ವೆಲ್ ಲಾರಿ ತೆರಳಲು ರಸ್ತೆಯಿರುವುದಿಲ್ಲ, ಸಾಕಷ್ಟು ಗಿಡ/ಮರಗಳು ಬೆಳೆದು ನಿಂತಿರುತ್ತದೆ,ಅಷ್ಟು ವರ್ಷದ ಕಾಪಾಡಿಕೊಂಡು ಬಂದ ಮರ/ಗಿಡಗಳನ್ನು ಕಡಿಯಬೇಕಾದ ಪ್ರಸಂಗ ಬರಬುಹುದು. ಜಮೀನಿನ ಸುತ್ತ ರಸ್ತೆಯಿದ್ದರೆ ಯಾವುದೇ ಬೆಳೆ/ಮರ ನಷ್ಟ ಮಾಡಿಕೊಳ್ಳದೇ ನಮ್ಮಗೆ ಎಲ್ಲಿ ಅನುಕೂಲ ಅಲ್ಲಿ ಬೋರ್ವೆಲ್ ಮಾಡಬಹುದು.ತೋಟದಲ್ಲಿ ರಸ್ತೆ ಮಾಡುವುದರಿಂದ ಸಾಕಷ್ಟು ಅನುಕೂಲ ಮತ್ತು ತೋಟದ ಮೌಲ್ಯ ಎಲ್ಲಾ ರೀತಿಯಿಂದಲೂ ವೃದ್ಧಿಯಾಗುತ್ತದೆ.

ಒಂದು ಭಾಗದ ಸುತ್ತಾಳತೆ 800 ಅಡಿ, ಪ್ರತಿ 8 ಅಡಿಗೆ ಒಂದು ಅಡಿಕೆ ಗಿಡ ಹಾಕಿದಾಗ 100 ಅಡಿಕೆ ಗಿಡ,04 ಎಕರೆಯ 04 ಭಾಗದಲ್ಲಿ 400 ಅಡಿಕೆ ಅಂದರೆ ಒಂದು ಎಕರೆ ಪ್ರದೇಶದಲ್ಲಿ ಹಾಕುವ ಅಡಿಕೆಯನ್ನು ಹಾಕಬಹುದು, ಜೊತೆಗೆ ಮೆಣಸು ಹಬ್ಬಿಸುವುದರಿಂದ, ಅಡಿಕೆ ಗಿಡ ನಡುವೆ ಕಾಫಿ, ಕೊಕೊ, ಜಾಯಿಕಾಯಿ, ಇತರೆ ಹಣ್ಣಿನ ಗಿಡ ಹಾಕುವುದರಿಂದ ರಸ್ತೆಗೆ ಬಿಟ್ಟ ಜಾಗ ವ್ಯರ್ಥ ಅನ್ನುವುದಕ್ಕಿಂತ ಬಹು ರೀತಿಯ ಅರ್ಥವಿದೆ ಮತ್ತು ಆರ್ಥಿಕತೆಯಿದೆ.

*ಟ್ರೆಂಚ್ /ಇಂಗುಗುಂಡಿಗಳನ್ನು ನಿಮ್ಮ ಜಮೀನಿನ ಇಳಿಜಾರು/Slope ಗೆ ಅಡ್ಡಲಾಗಿ ಮಾಡಬೇಕು,2 ಅಡಿ ಅಗಲ ಮತ್ತು 1.5 ಅಡಿ ಅಳವಿರಲಿ.ಪ್ರತಿ ಟ್ರೆಂಚ್ ಉದ್ದ 10 ಅಡಿ ಇರಲಿ, ಪ್ರತಿ ಟ್ರೆಂಚ್ ನಡುವೆ 03 ಅಡಿ ಖಾಲಿ ಜಾಗ ಬಿಟ್ಟು ಮತ್ತೊಂದು ಟ್ರೆಂಚ್ ಮಾಡಬೇಕು.ಟ್ರೆಂಚ್ ಮಾಡಲು ತೆಗೆಯುವ ಮಣ್ಣನ್ನು ನೀರು ಹರಿದು ಬರುವ ಇಳಿಜಾರಿನ ಕಡೆ ಹಾಕಬೇಕು, ಹರಿದು ಬರುವ ನೀರನ್ನು ಮಣ್ಣು ತಡೆಯುವುದರಿಂದ ಹಳ್ಳಕ್ಕೆ ಮಣ್ಣು ತುಂಬಿಕೊಳ್ಳುವುದನ್ನು ತೆಡೆಯುತ್ತದೆ.ಮಳೆ ನೀರು ಇಂಗುಗುಂಡಿಯಲ್ಲಿ ತುಂಬುವುದರಿಂದ ಭೂಮಿಯಲ್ಲಿ ನೀರು ಇಂಗುವುದರಿಂದ ಬೋರ್ವೆಲ್ ನೀರಿನ ಇಳುವರಿ ಹೆಚ್ಚುತ್ತದೆ.

ಹೆಚ್ಚುವರಿ ನೀರು ಜಮೀನಿನ ಕಡೆ ಹರಿದು ಬಂದಾಗ ಇಂಗುಗುಂಡಿಗಳ ಮೂಲಕ ಬಸಿಯುವುದರ ಜೊತೆಗೆ ನೀರನ್ನು ಹೊರ ಹಾಕಲು ಅನುಕೂಲ, ನೀರು ನಿಂತು ಬೆಳೆ ನಷ್ಟ ಮತ್ತು ರೋಗಭಾದೆ ಆಗುವುದನ್ನು ತಡೆಯಬಹುದು. ಇಂಗುಗುಂಡಿಗಳಲ್ಲಿ ಸಹ ತಗ್ಗು ಪ್ರದೇಶದಲ್ಲಿ ಹಾಕುವ ಬೆಳೆಗಳನ್ನು ಹಾಕಬಹುದು.

ಬೇಲಿಗೆ ದೊಡ್ಡ ಹಣ್ಣಿನ /ಕಟ್ಟಿಗೆ ನೀಡುವ ಮರಗಳು ಬೇಡ,ಪಕ್ಕದ ಜಮೀನಿಗೆ ಹರಡುವುದರಿಂದ ಹಣ್ಣುಗಳನ್ನು ಕಟ್ಟಾವು ಮಾಡುವುದು ಮತ್ತು ಮರ ಕಡಿಯುವುದರಿಂದ ಪಕ್ಕದ ಜಮೀನನ ರೈತರಿಗೆ ತೊಂದರೆ ಜೊತೆಗೆ ಹಣ್ಣು ಮತ್ತು ಮರಗಳನ್ನು ಬೇಲಿ ಅಂಚಿನಲ್ಲಿ ಸುಲಭವಾಗಿ ಕಳ್ಳರು ಕದಿಯಲು ಅನುಕೂಲ.ಬೇಲಿ ಅಂಚಿನಲ್ಲಿ ಮೇವು/ಗೊಬ್ಬರ /ಔಷಧಿ /ಹೂವು ಬಿಡುವ ಮತ್ತು ಕಡಿದರು ಮತ್ತೆ ಚಿಗುರವ ಗಿಡಗಳನ್ನು ಹಾಕಿಕೊಳ್ಳಬೇಕು. ಗ್ಲಿರಿಸಿಡಿಯಾ, ಸೀಮೆತಂಗಡಿ, ನುಗ್ಗೆ, ಅಗಸೆ, ಬೇವು, ಹೊಂಗೆ, ದಾಸವಾಳ ಹೀಗೆ ಇತ್ಯಾದಿ.ಬೇಲಿ ಅಂಚಿನಲ್ಲಿ ದಟ್ಟವಾಗಿ ಮರಗಿಡಗಳನ್ನು ಹಾಕುವುದರಿಂದ ಧಾರಾಳವಾಗಿ ಮೇವು ಮತ್ತು ಗೊಬ್ಬರಕ್ಕೆ ಸೊಪ್ಪು ಸಿಗುತ್ತದೆ ಮತ್ತು ತೋಟಕ್ಕೆ ರಕ್ಷಣೆಯಾಗುತ್ತದೆ.

ಬೇಲಿಯ ಒಳಗೆ ಚಿತ್ರದಲ್ಲಿ ತೋರಿಸಿರುವಂತೆ ಹಣ್ಣು /ಕಟ್ಟಿಗೆ ನೀಡುವ ಮರಗಳನ್ನು ಹಾಕಬಹುದು.ಇಲ್ಲಿ ಕಾಡು ಪ್ರಾಣಿ /ಕಳ್ಳತನ ರಕ್ಷಣೆಗಾಗಿ ಸೋಲಾರ್ ಬೇಲಿ ಅಳವಡಿಸಬಹುದು. ತೋಟಗಾರಿಕೆ ಮರಗಳ ಜೊತಗೆ ಕೆಲವು ಅರಣ್ಯಾಧಾರಿತ ಮರಗಳನ್ನು ಹಾಕುವುದು ಸೂಕ್ತವಲ್ಲ, ಅರಣ್ಯ ಮರಗಳು ಬಹುಬೇಗ ವ್ಯಪಕವಾಗಿ ಬೆಳೆದು ತೋಟಗಾರಿಕೆ ಮರಗಳ ಬೆಳೆವಣಿಗೆ ಮತ್ತು ಇಳುವರಿ ಕುಂಠಿತಗೊಳ್ಳಿಸುತ್ತದೆ. ಕಟ್ಟಿಗೆ ನೀಡುವ ಸಿಲ್ವರ್, ಸರ್ವೇ ಇವುಗಳನ್ನು ಹಾಕಿ ಮೆಣಸು ಬಳ್ಳಿ ಹಬ್ಬಿಸಬಹುದು.ತೆಂಗು, ಅಡಿಕೆ, ಹಲಸು, ನೇರಳೆ,ನೆಲ್ಲಿ, ಸೀಬೆ, ದಾಳಿಂಬೆ, ಸಪೋಟ, ಕಿತ್ತಳೆ, ಮೂಸಂಬಿ, ನಿಂಬೆ, ರಾಮಫಲ, ಸೀತಾಫಲ, ಮಾವು, ಗೋಡಂಬಿ, ಬಟರ್ ಫ್ರೂಟ್,ಬೇಲದ ಹಣ್ಣು…… ಇತ್ಯಾದಿ ಅವರ ಜಮೀನಿನ ಹವಾಗುಣಕ್ಕೆ ಹೊಂದುವ ಹಣ್ಣಿನ ಬೆಳೆ ಹಾಕಬಹುದು.

ಬೋರ್ವೆಲ್ ನಲ್ಲಿ ಸಿಗುತ್ತಿರುವ ನೀರಿನ ಪ್ರಮಾಣವನ್ನು ಮೋಟಾರ್ ಚಾಲು ಆದ 10 ನಿಮಿಷಗಳ ನಂತರ 200 ಲೀಟರ್ ಡ್ರಮ್ ಇಟ್ಟು, ಅದು ತುಂಬಲು ತೆಗೆದುಕೊಳ್ಳುವ ಸಮಯ ನೋಡಿಕೊಂಡು ನೀರಿನ ಇಳುವರಿ ತಿಳಿಯಬಹುದು.ಉದಾರಣೆಗೆ 200 ಲೀಟರ್ ಡ್ರಮ್ ತುಂಬಲು 30 ಸೆಕೆಂಡ್ಸ್ ತೆಗೆದುಕೊಂಡರೆ 01 ನಿಮಿಷಕ್ಕೆ 400 ಲೀಟರ್,01 ಘಂಟೆಗೆ 24 ಸಾವಿರ ಲೀಟರ್.ಹನಿ(ಡ್ರಿಪ್ ) ತುಂತುರು(ಸ್ಪ್ರಿಂಕ್ಲೆರ್) ನೀರಾವರಿಗೆ ಕ್ರಮವಾಗಿ ನೀರಿನ ಇಳುವರಿಗೆ ಶೇ 75%ಮತ್ತು 60% ಪರಿಗಣಿಸಿ ನೀರಾವರಿ ವಿನ್ಯಾಸ ಮಾಡಿಕೊಳ್ಳಬೇಕು, ಈ ಬಗ್ಗೆ ಮುಂದೆ ಪ್ರತ್ಯೇಕವಾಗಿ ಚರ್ಚೆ ಮಾಡೋಣ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  9342434530

3 COMMENTS

  1. I’ve 20 acre single plot. Both side slope towards Middle. Middle in rainy season water floods through check dams. One borewell is there. Got water at 140 feet. 5inch water. Planning for sericulture and horticulture. Left job for this. Will you guide me?

LEAVE A REPLY

Please enter your comment!
Please enter your name here