ಕಳೆ / ಸತ್ತೆ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ಕೆಲವು ಗಿಡಗಳು ಕರೆಯದೆ ಬರುವ ನೆಂಟರಂತೆ ಕೃಷಿಭೂಮಿಗೆ ಹಾಗೆಯೇ ಬಂದು ಠಿಕಾಣಿ ಹಾಕುತ್ತವೆ. ಗೊಬ್ಬರ – ನೀರು ಕೊಡದಿದ್ದರೂ ಪರವಾಗಿಲ್ಲ – ತನಗೇನಾಗಲ್ಲ ಎಂಬಂತೆ ಬಿರುಬಿಸಿಲಿನಲ್ಲೂ ನಳನಳಿಸುತ್ತಾ ಓಲಾಡುತ್ತವೆ. ಮೂಲ ಬೆಳೆಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತವೆ. ಇವನ್ನು ನಿರ್ನಾಮ ಮಾಡಲು ರೈತರು ಕಾರ್ಕೋಟಕ ವಿಷವಾಗಿರುವ ಕಳೆನಾಶಕಗಳನ್ನು ಬಳಸುತ್ತಾರೆ. ಕಳೆಗಳು ಕಣ್ಮರೆಯಾಗುತ್ತವೋ – ಇಲ್ಲವೋ ಗೊತ್ತಿಲ್ಲ. ಆದರೆ ಕಳೆನಾಶಕದ ದುಷ್ಪರಿಣಾಮ ಮಣ್ಣಲ್ಲಿನ ಉಪಯುಕ್ತ ಜೀವಾಣುಗಳ ಮೇಲಂತೂ ನಿರಂತರವಾಗಿ ಆಗುತ್ತಿದೆ.
ಕಳೆಗಿಡಗಳು ಮಣ್ಣಿನ ಆರೋಗ್ಯದ ಸ್ಥಿತಿ – ಗತಿಗಳನ್ನು ತಿಳಿಸುವ ಸೂಚಕಗಳೆಂದು ಸಹಜ ಕೃಷಿಕರು ನಂಬುತ್ತಾರೆ. ನಮ್ಮಲ್ಲಿನ ಮಣ್ಣು ಆರೋಗ್ಯ ಮತ್ತು ಫಲವತ್ತತೆಯಿಂದ ಕೂಡಿದೆಯೆಂಬುದನ್ನೂ ಸಹ ಈ ಕಳೆಗಿಡಗಳು ತೋರಿಸುತ್ತವೆ. ಅಂದರೆ, ನಮ್ಮ ಹೊಲ – ತೋಟ – ಗದ್ದೆ – ತೋಪುಗಳಲ್ಲಿನ ಮಣ್ಣುಗಳಲ್ಲಿ ಏನಾಗುತ್ತಿದೆಯೆಂಬುದನ್ನು ನಮಗೆ ತಿಳಿಸುವ ಸಲುವಾಗಿಯೇ ಈ ಬಗೆಯ ಕಳೆಗಿಡಗಳು ಹುಟ್ಟುತ್ತವೆಯಂತೆ. ಆದ್ದರಿಂದ ಕಳೆಗಿಡಗಳನ್ನು ನೋಡಿದ ತಕ್ಷಣ ಅದನ್ನು ಬುಡಸಮೇತ ಕಿತ್ತೆಸೆಯುವತ್ತ ಚಿಂತಿಸದಿರಿ.
ಈ ಮಣ್ಣ ಮೇಲಿನ ಸಕಲ ಜೀವರಾಶಿಗೆ ಅನಗತ್ಯವಾದ ಯಾವುದನ್ನೂ ನಮ್ಮ ನಿಸರ್ಗ ಸೃಷ್ಟಿಸಿಲ್ಲ. ಇದನ್ನು ನಾವು ಒಪ್ಪುವುದಾದರೆ, ಈ ಬಗೆಯ ಗಿಡಗಳೂ ಸಹ ನಮಗೆ ಉಪಯುಕ್ತವೇ ಎಂಬುದನ್ನೂ ಒಪ್ಪಬೇಕಲ್ಲವೆ. ಹಾಗೆಯೇ ಈ ಗಿಡಗಳೂ ಸಹ ಮಣ್ಣಿಂದ ಪೋಷಕಾಂಶಗಳನ್ನು ಹೀರಿಯೇ ಬೆಳೆದಿವೆಯಲ್ಲವೇ. ಈ ಗಿಡಗಳ ಪ್ರತಿಯೊಂದು ಭಾಗದಲ್ಲೂ ಪೋಷಕಾಂಶಗಳು ಅಡಗಿರುವಾಗ, ಈ ಗಿಡಗಳನ್ನು ಕಿತ್ತು ಸುಡುವುದಾಗಲೀ – ಇದನ್ನು ನಿರ್ನಾಮ ಮಾಡುವ ಕಳೆನಾಶಕಗಳನ್ನು ಬಳಸುವುದಾಗಲೀ ಮಾಡಿದಾಗ, ಪೋಷಕಾಂಶಗಳೂ ಸಹ ನಾಶವಾಗುತ್ತವೆ.
ಕಳೆಗಿಡಗಳನ್ನು ಉಪಯುಕ್ತವಾಗಿ ಬಳಸಲು ಹಲವು ವಿಧಾನಗಳಿವೆ. ಅವುಗಳಲ್ಲಿ ಒಂದು ಕಳೆಗಿಡಗಳ ಚಹಾ ಅಂದರೆ ಕಳೆ ಚಹಾ. ಇದೊಂದು ದ್ರವರೂಪೀ ಗೊಬ್ಬರ.
- ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಕಳೆಗಿಡಗಳನ್ನು – ಅದರೆ ಎಲೆ ಮತ್ತು ಕಾಂಡ ಭಾಗವನ್ನು ಮಾತ್ರ ಕತ್ತರಿಸಿ.
- ಅದನ್ನು ಇನ್ನಷ್ಟು ಸಣ್ಣಗೆ ಕತ್ತರಿಸಿ, ಒಂದು ಗೋಣೀಚೀಲದಲ್ಲಿ ಹಾಕಿ.
- ಕಳೆಗಿಡಗಳಿಂದ ತುಂಬಿದ ಗೋಣೀಚೀಲವನ್ನು ಬಿಗಿಯಾಗಿ ಕಟ್ಟಿ , 200 ಲೀಟರ್ ಸಾಮರ್ಥ್ಯದ ಡ್ರಂ ಒಂದರಲ್ಲಿ ಇಡಿ. ಆ ಡ್ರಂ ನ ಮುಕ್ಕಾಲು ಭಾಗ ನೀರು ತುಂಬಿಸಿ.
- ಗೋಣೀಚೀಲದ ಮೇಲೆ ಭಾರವಾದ ಕಲ್ಲೊಂದನ್ನು ಇಡಿ. ಏಕೆಂದರೆ ನೀರಲ್ಲಿರುವ ಗೋಣೀಚೀಲ ಮೇಲಕ್ಕೆ ತೇಲತೊಡಗುತ್ತದೆ. ಅದನ್ನು ತಪ್ಪಿಸಲು ಭಾರವಾದ ಕಲ್ಲೊಂದನ್ನು ಇಡಬೇಕು.
- ಡ್ರಂ ಹಾಗೆಯೇ ತೆರೆದಿರಲಿ.
- ಪ್ರತಿದಿನಾ ಬೆಳಿಗ್ಗೆ ಮತ್ತು ಸಂಜೆ ಡ್ರಂನಲ್ಲಿನ ಕಳೆಗಿಡಗಳನ್ನು ತುಂಬಿರುವ ಗೋಣೀಚೀಲವನ್ನು ಕೋಲೊಂದರಿಂದ ಚುಚ್ಚಿ. ಹೀಗೆ ಮಾಡುವಾಗ, ಗೋಣೀಚೀಲದೊಳಗಿರುವ ಕಳೆಗಿಡಗಳಲ್ಲಿನ ಸಾರ ನೀರಲ್ಲಿ ನಿಧಾನವಾಗಿ ಬೆರೆಯುತ್ತದೆ. ನೀರಿನ ಬಣ್ನವೂ ಕ್ರಮೇಣ ಕಪ್ಪಾಗುತ್ತದೆ.
- 15 ದಿನಗಳ ನಂತರ ಈ ನೀರನ್ನು ಎಲ್ಲಿಂದ ಕಳೆಗಿಡಗಳನ್ನು ಸಂಗ್ರಹಿಸಿದೆವೋ, ಅಲ್ಲಿನ ಮಣ್ಣ ಮೇಲೆ ಹಾಕಿ. ಮಣ್ಣು ನೇರಬಿಸಿಲಿಗೆ ತಾಗದಂತೆ ಹೊದಿಕೆ ಮಾಡಿ.
- ಕಳೆಗಿಡಗಳಲ್ಲಿನ ಹಲವು ಬಗೆಯ ಪೋಷಕಾಂಶಗಳು ಮಣ್ಣಿಗೆ ಸೇರಿ ಮಣ್ಣಿನ ತಾಕತ್ತು ಹೆಚ್ಚುತ್ತದೆ. ಮಣ್ಣಲ್ಲಿ ಜೀವಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಆ ಮಣ್ಣಲ್ಲಿ ಬೆಳೆಯುವ ಗಿಡಗಳು ಆರೋಗ್ಯವಾಗಿರುತ್ತವೆ.