ಭಾಗ – 1
ದೇಶದ ಬೆನ್ನುಲಬು ಎನ್ನಲಾಗುವ ಬಹುತೇಕ ರೈತರ ಬದುಕು ಡೋಲಾಯಮಾನ ಸ್ಥಿತಿಯಲ್ಲಿರುವುದು ಪ್ರಸ್ಥುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಕೃಷಿ ಕಾರ್ಮಿಕ ಕೊರತೆ, ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದಿರುವುದು ಮುಂತಾದ ಆತಂಕಗಳ ಪಟ್ಟಿ ಕೃಷಿಯಲ್ಲಿ ಸದಾ ಇದೆ.
ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಕೃಷಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಬೇಸಾಯ ಮಾಡಿದರೆ ಭೂತಾಯಿ ಎಂದೂ ಕೈಬಿಡುವುದಿಲ್ಲ, ಮತ್ತೊಬ್ಬರ ಹಂಗಿನಲ್ಲಿ ಬಾಳುವುದಕ್ಕಿಂತ ಭೂಮಿಯಲ್ಲಿ ಕಷ್ಟಪಟ್ಟು ದುಡಿದರೆ ಕೈ ಕೆಸರು, ಬಾಯಿ ಮೊಸರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಟ್ಟಿನಲ್ಲಿ ಯಾವುದಕ್ಕೂ ಸಾಧಿಸುವ ಛಲ ಮತ್ತು ಪ್ರಾಮಾಣಿಕ ಪರಿಶ್ರಮಬೇಕು ಎಂಬುದಕ್ಕೆ ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ ರವಿಶಂಕರ್ ಉತ್ತಮ ಉದಾಹರಣೆ.
ದ್ವಿತೀಯ ಪಿ.ಯು.ಸಿ ರವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು ಮೊದಲು ಏಕ ಬೆಳೆ ಪದ್ಧತಿಯನ್ನು ಆಳವಡಿಸಿಕೊಂಡು ಅನೇಕ ಸಂಕಷ್ಟಗಳಿಗೆ ಒಳಗಾಗಿ ಅತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದರು. ಸಮಗ್ರ ಕೃಷಿಗೆ ಶರಣಾಗಿ ನಾನಾ ಹೊಸ ಹೊಸ ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಮ್ಮ 26 ಎಕರೆ ಜಮೀನಿನಲ್ಲಿ, 8 ಎಕರೆ ಕೃಷಿಗೆ, 12 ಎಕರೆ ತೋಟಗಾರಿಕೆಗೆ, ಒಂದು ಎಕರೆ ರೇಷ್ಮೆಗೆ, 3 ಎಕರೆ ಕೃಷಿ ಅರಣ್ಯಕ್ಕೆ, ಒಂದು ಎಕರೆ ಮೇವಿನ ಬೆಳೆಗಳಿಗೆ ಹಾಗೂ ಒಂದು ಎಕರೆ ಉಪ ಕಸುಬುಗಳಾದ ಮೇಕೆ, ಕೋಳಿ, ಮೀನು, ಹಂದಿ ಮತ್ತು ಜೇನು ಸಾಕಣೆಗೆ ಮೀಸಲಿರಿಸಿದ್ದಾರೆ. ಸಮಗ್ರ ಕೃಷಿ ಪದ್ಧತಿಯು ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನ ಮಟ್ಟ ಸುಧಾರಿಸಲು ತುಂಬ ಸಹಕಾರಿಯೆನ್ನುತ್ತಾರೆ.
ಕೇವಲ ಏಕ ಬೆಳೆ ಪದ್ಧತಿ ಆಳವಡಿಸಿಕೊಳ್ಳುವುದರಿಂದ ಆದಾಯ ಕುಂಠಿತವಾಗುತ್ತದೆ, ಅದುದರಿಂದ ಕೃಷಿ ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪ ಕಸುಬುಗಳ ವೈಜ್ಞಾನಿಕ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಮತ್ತು ಆದಾಯವನ್ನು ಉತ್ತಮ ಪಡಿಸುವುದರ ಜೊತೆಗೆ ವರ್ಷ ಪೂರ್ತಿ ಕುಟುಂಬಕ್ಕೆ ಉದ್ಯೋಗ ಕಲ್ಪಿಸಿ, ಸುಸ್ಥಿರ ಜೀವನೋಪಾಯ ಸಾಗಿಸಬಹುದು ಎಂದು ಅಭಿಪ್ರಾಯಪಡುತ್ತಾರೆ.
ನೂತನ ತಂತ್ರಜ್ಞಾನಗಳ ಪಾರುಪತ್ಯ:
ಕೃಷಿ ತಜ್ಞರ ಸಲಹೆ ಮೇರೆಗೆ ಮಣ್ಣು ಮತ್ತು ನೀರಿನ ಪರೀಕ್ಷೆ ಕೈಗೊಂಡಿದ್ದು ಶಿಪಾರಸ್ಸಿಗೆ ಅನುಗುಣವಾಗಿ ಪೋಷಕಾಂಶಗಳ ನಿರ್ವಹಣೆ ಕೈಗೊಂಡಿದ್ದಾರೆ. ಮಣ್ಣು ಪರೀಕ್ಷೆ ಮಾಡಿಸದೆ ರಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ಹಾಕುವುದರಿಂದ ಹಣ ದುಂದು ವೆಚ್ಚವಾಗುವುದಲ್ಲದೆ ಭೂಮಿಯ ಗುಣಮಟ್ಟ ಕೆಡುತ್ತದೆ.
ರಾಸಾಯನಿಕ ಗೊಬ್ಬರಗಳ ಕಪಿಮುಷ್ಠಿಯಿಂದ ಹೊರಬರಲು ಕೃಷಿ ತ್ಯಾಜ್ಯಗಳಾದ, ಕಳೆ, ಹಸಿರೆಲೆ, ಹಣ್ಣು ಮತ್ತು ತರಕಾರಿ ತ್ಯಾಜ್ಯವನ್ನು ಬಳಸಿ ವಾರ್ಷಿಕವಾಗಿ 20 ಟನ್ ಎರೆಹುಳುಗೊಬ್ಬರ ತಯಾರಿಸುತ್ತಿದ್ದಾರೆ. ಇದರ ಜೊತೆಗೆ ಜಪಾನ್ ಮಾದರಿಯಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಕಡಿಮೆ ಅವಧಿಯಲ್ಲಿ ಉತ್ಕೃಷ್ಟ ಗೊಬ್ಬರ ಪಡೆದು ಬೆಳೆಗಳಿಗೆ ನೀಡುತ್ತಿದ್ದಾರೆ. ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ, ಬೆಳೆಪದ್ಧತಿಗಳು, ಮಾಗಿ ಹುಳುಮೆ, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ.
ತುಂತುರು ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದರಿಂದ ಶೇಕಡಾ 50 ರಿಂದ 60 ರಷ್ಟು ನೀರಿನ ಉಳಿತಾಯವಾಗುತ್ತದೆ ಹಾಗೂ ಕಡಿಮೆ ನೀರಿನ ಲಭ್ಯತೆಯಲ್ಲಿ ಹೆಚ್ಚಿನ ಪ್ರದೇಶವನ್ನು ನೀರಾವರಿಗೆ ಅಳವಡಿಸಿಕೊಳ್ಳಬಹುದು ಎನ್ನುತ್ತಾರೆ. ಇದಲ್ಲದೆ ತಮ್ಮ ಜಮೀನಿನಲ್ಲಿ ವ್ಯರ್ಥವಾಗಿ ಪೋಲಾಗುತ್ತಿದ್ದ ನೀರಿಗೆ ಕೃಷಿ ಹೊಂಡ ಮತ್ತು ಇಂಗು ಗುಂಡಿ ನಿರ್ಮಿಸಿದ್ದಾರೆ. ಶಿಫಾರಸ್ಸು ಮಾಡಿರುವ ತಳಿಗಳ ಆಯ್ಕೆ, ಎರೆ ಗೊಬ್ಬರ ಬಳಕೆ, ಹಸಿರೆಲೆ ಗೊಬ್ಬರ ಬಳಕೆ, ಪಂಚಗವ್ಯ ಬಳಕೆ, ಸರಿಯಾದ ಪ್ರಮಾಣದಲ್ಲಿ ಸಸಿಗಳ ಸಂಖ್ಯೆ ಕಾಪಾಡುವುದು, ಕೆರೆಗೋಡು ಬಳಕೆ ಮತ್ತು ಪಳವಳಿಕೆಗಳನ್ನು ಸುಡದೆ ಭೂಮಿಗೆ ಸೇರಿಸುವುದು ಇವರ ಯಶಸ್ಸಿನ ಹಿಂದಿರುವ ಗುಟ್ಟು.
ಮುಂದುವರಿಯುತ್ತದೆ