ಇಂದು “ವಿಶ್ವ ಪಶುವೈದ್ಯಕೀಯ ದಿನಾಚರಣೆ. ಈ ಕ್ಷೇತ್ರದಲ್ಲಿರುವ ಎಲ್ಲರಿಗೂ “ಅಗ್ರಿಕಲ್ಚರ್ ಇಂಡಿಯಾ” ತಂಡ ಶುಭಾಶಯ ಕೋರುತ್ತದೆ. ಪಶುವೈದ್ಯರೆಂದರೆ ಸಾಮಾನ್ಯವಾಗಿ ಹಸು –ಕುರಿ – ಕೋಳಿ – ಕುದುರೆ ಇತ್ಯಾದಿ ಸಾಕುಪ್ರಾಣಿಗಳಿಗೆ ಕಾಯಿಲೆ – ಕಸಾಲೆ ಬಂದ್ರೆ ಚಿಕಿತ್ಸೆ ನೀಡುವವರು ಎಂಬ ಭಾವನೆ ಇದೆ. ಆದರೆ ಇವರು ವನ್ಯಪ್ರಾಣಿಗಳಿಗೂ ಚಿಕಿತ್ಸೆ ನೀಡುತ್ತಾರೆ. ಅಪಾಯಕಾರಿ ಕಾಳಿಂಗ ಸರ್ಪ, ನಾಗರಹಾವುಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ ಉದಾಹರಣೆಗಳಿವೆ. ಖ್ಯಾತ ಪಶುವೈದ್ಯ ಜೊತೆಗೆ ಈ ರಂಗದ ಅಪರೂಪದ ಸಾಹಿತಿ ಡಾ. ಶ್ರೀಧರ್ ಎನ್.ಬಿ. ಅವರು ಸಾವಿನ ಅಂಚಿನಲ್ಲಿದ್ದ ಹೆಬ್ಬಾವು ಬದುಕಿಸಿದ ಸಂಗತಿ ಹಂಚಿಕೊಂಡಿದ್ದಾರೆ. ಮೈ ಜುಮ್ ಎನ್ನಿಸುವ ಈ ವಿವರಣೆ ಓದಲು ಮುಂದಿನ ಲಿಂಕ್ ಕ್ಲಿಕ್ ಮಾಡಿ, ಆಸಕ್ತರಿಗೂ ಫಾರ್ವರ್ಡ್ ಮಾಡಿ
ಅನೇಕ ಸಲ ನಮಗೆ ಹೊಸ ರೀತಿಯ “ಪೇಶಂಟು”ಗಳು ಬಂದು ಅಚ್ಚರಿಗೊಳಿಸುವುದುಂಟು. ಅದರಲ್ಲೂ ಕಾಡಿನಿಂದ ಬರುವ “ರೋಗಿ” ಗಳ ಚಿಕಿತ್ಸೆ ಒಂದು ಸವಾಲು. ಪಶುವೈದ್ಯಕೀಯ ಓದುವಾಗ ಈ ರೀತಿಯ ಯಕ:ಶ್ಚಿತ್ ಹುಳ ಹುಪ್ಪಟೆಗಳಂತ ಪ್ರಾಣಿಗಳನ್ನು ಚಿಕಿತ್ಸೆ ಮಾಡಬೇಕಾದ ಸಂದರ್ಭವೆಂದೂ ಬಾರದು ಎಂದು “ವೈಲ್ಡ್ ಲೈಫ಼್ ಚಿಕಿತ್ಸೆ”ಯ ಪಾಠ ಮಾಡುವಾಗ ದಿವ್ಯ ನಿರ್ಲಕ್ಷ್ಯದಿಂದಿರುವುದು ನಮ್ಮಲ್ಲಿ ಅನೇಕರಿಗೆ ಸಾಮಾನ್ಯವಾಗಿತ್ತು. ಒಂದಿಬ್ಬರು ಸಹೋದ್ಯೋಗಿ ವಿದ್ಯಾರ್ಥಿಗಳು ಈ ರೀತಿಯ ತರಹೇವಾರಿ ಪ್ರಾಣಿಗಳ ಕ್ರಿಮಿಕೀಟಗಳ ಚಿಕಿತ್ಸೆಯಲ್ಲಿ ಆಸಕ್ತಿ ವಹಿಸುವುದು ಬಿಟ್ಟರೆ ಉಳಿದವರ ಆಸಕ್ತಿ ಅಷ್ಟಕ್ಕಷ್ಟೇ. ನಮ್ಮದೇನಿದ್ದರೂ ದನ, ಎಮ್ಮೆ, ಬೆಕ್ಕು, ನಾಯಿ, ಕುದುರೆ, ಕೋಳಿ, ಹಂದಿ ಎಂಬಿತ್ಯಾದಿ ಹಲವು ಹತ್ತು ಸಾಕು ಪ್ರಾಣಿ ಕುಲಕೋಟಿಗಳ ಚಿಕಿತ್ಸೆ ಬಿಟ್ಟರೆ ಉಳಿದ ಪ್ರಾಣಿಗಳ ಗೊಡವೆ ನಮಗ್ಯಾಕೆ ಎಂಬ ದಿವ್ಯ ನಿರ್ಲಕ್ಷ್ಯವಿತ್ತು.
ಆದರೆ ಕೆಲವೊಮ್ಮೆ ಆಮೆ, ಮೊಸಳೆ, ಉಡ, ಕರಡಿ, ಚಿರತೆ, ಕಾಡುಕೋಣ ಇವುಗಳ ಚಿಕಿತ್ಸೆ ಧುತ್ತನೇ ಬಂದು ತಲೆ ಕೆರೆದುಕೊಂಡ ಘಟನೆಗಳು ಅನೇಕ. ಆಮೆಯಂತ ಪ್ರಾಣಿಗಳನ್ನು ಸಾಕಿ “ಡಾಕ್ಟ್ರೇ. ನಮ್ಮನೆ ’ಕಣ್ವ’ (ಆಮೆಯ ಹೆಸರು) ಯಾಕೋ ಫುಡ್ಡೇ ತಿಂತಿಲ್ಲ. ಜ್ವರಾ ಬಂದಿದೆ ಅನ್ಸತ್ತೆ. ಸ್ವಲ್ಪ ನೋಡಿ” ಎಂದಾಗ “ಎಲಾ..ಈ ಆಮೆಗೆ ಹ್ಯಾಗೆ ಜ್ವರ ಪರೀಕ್ಷೆ ಮಾಡೋದು?” ಪಾಠ ಮಾಡುವಾಗ ಸ್ವಲ್ಪ ಆಸಕ್ತಿ ವಹಿಸಬೇಕಿತ್ತು” ಎಂದುಕೊಳ್ಳುತ್ತಾ ಇಂಜೆಕ್ಷನ್ ಕೊಡಬೇಕೆಂದು ಅದರ ಕಾಲನ್ನು ಎಳೆದು ಹಿಡಿದು ಸೂಜಿ ಚುಚ್ಚಬೇಕೆಂದುಕೊಂಡರೆ ಇದ್ದಕ್ಕಿದ್ದಂತೆ ಲಬಕ್ಕೆಂದು ತಲೆ ಕಾಲುಗಳನ್ನು ಒಳಗೆಳೆದುಕೊಂಡು ಕೂರ್ಮಾವತಾರ ತಳೆದು ಪಶುವೈದ್ಯ ಜ್ಞಾನ ಅಣಕಿಸಿದ್ದಿದೆ.
ಬಹುಶ: ತೊಂಬತ್ತರ ದಶಕದ ದಿನಗಳಿರಬಹುದು. ಎಂದಿನಂತೆ ಪಶುಚಿಕಿತ್ಸೆಯಲ್ಲಿ ತೊಡಗಿದ್ದೆ. ಸಾಗರದ ಉರಗತಜ್ಞ ಮನ್ಮಥಕುಮಾರ್ ಸ್ಥಿರ ದೂರವಾಣಿಗೆ ಕರೆ ಮಾಡಿ “ಡಾಕ್ಟ್ರೇ. ಹೆಬ್ಬಾವಿಗೊಂದು ಚಿಕಿತ್ಸೆ ಆಗಬೇಕಿತ್ತು. ಆಸ್ಪತ್ರೆಯಲ್ಲಿರ್ತಿರಲ್ಲ, ಬರ್ತಾ ಇರುವೆ” ಎಂದು ಅರ್ಧ ಘಂಟೆಯಲ್ಲಿ ಪ್ರತ್ಯಕ್ಷರಾದರು. ಜೊತೆಯಲ್ಲಿ ಅರಣ್ಯ ಇಲಾಖೆಯ ಖಾಕಿ ಪಡೆಯ ಸಾತ್ ಬೇರೆ. ನನ್ನ ಪೇಶಂಟ್ ಅವರ ಜೀಪಿನಲ್ಲಿಟ್ಟಿದ್ದ ಗೋಣಿಚೀಲದಲ್ಲಿತ್ತು.
ಬೆಳಿಗ್ಗೆ ಸೋಮಾರಿತನದಿಂದ ಏಳುವ ಹುಡುಗರಿಗೆ “ಏಯ್. ಹೆಬ್ಬಾವಿನಂತೆ ಬಿದ್ದುಕೊಂಡಿದ್ದೆಯಲ್ಲೋ.. ಎಂದು ಬಯ್ಯುವವರು ನಿಜವಾಗಲೂ ಹೆಬ್ಬಾವಿನ ಸೋಮಾರಿತನ ಗಮನಿಸಬೇಕು. ಈ ಹೆಬ್ಬಾವು ಯಾರದೋ ಮನೆಯಲ್ಲಿ ದೊಡ್ಡ ಹೆಗ್ಗಣ ನುಂಗಿ ಹೊಟ್ಟೆ ಭಾರ ಆಗಿ ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಎಂದು ಯಾರದೋ ಮನೆಯ ಒಳಗೆ ಸೇರಿ ಮಂಚದ ಅಡಿಗೆ ಸೇರಿಕೊಂಡು ಬಿಟ್ಟಿತ್ತಂತೆ. ಮೊದಲೇ ಸೋಮಾರಿ. ಹೆಗ್ಗಣ ಹೊಟ್ಟೆಯಲ್ಲಿರುವುದರಿಂದ ಇನ್ನೂ ಸೋಮಾರಿಯಾಗಿ ಮಂಚದಡಿ ನಿದ್ದೆ ಹೊಡೆದಿದೆ. ಮನೆಯೊಡತಿ ಸೌತೆಕಾಯಿಯ ಜಾತಿಯ ಮೊಗೆ ಕಾಯಿಯ ಜ್ಯೂಸ್ ಮಾಡೋಣ ಎಂದು ಮಂಚದಡಿ ಒಂದೆರಡು ಹಣ್ಣಾದ ಮೊಗೆಕಾಯಿ(?)ಗಳಿಗಾಗಿ ಹುಡುಕಲು ತಡಕಾಡಿದಾಗ ನಿಧಾನವಾಗಿ ಮಿಸುಕಾಡುವ “ತಣ್ಣನೆ”ಯ ಜೀವಿ ಕೈಗೆ ತಾಗಿ ನಂತರ ಅದು ಹೆಬ್ಬಾವು ಎಂದು ಅರಿವಾದೊಡನೆ ಗಾಬರಿಗೊಂಡಿದ್ದಾರೆ. ಮನೆಯವರು ಮತ್ತು ಸುತ್ತಲೂ ಇರುವ ಜನ ಈ ವಿಶೇಷ ಅತಿಥಿಯ ಬೀಳ್ಕೊಡುಗೆಯ ಸಮಾರಂಭವೇರ್ಪಡಿಸಲು ಪ್ರಯತ್ನ ಪಟ್ಟಿದ್ದಾರೆ. ಹೆಬ್ಬಾವೂ ಸಹ ಗಾಬರಿಗೊಂಡು ಪೆಟ್ಟಿಗೆಯಾಕಾರದ ಮಂಚದ ಗೂಡಿನಲ್ಲಿ ಸೇರಿಕೊಂಡು ಬಿಟ್ಟಿದೆ. ಕಿರಿದಾದ ಗ್ಯಾಪಿನಿಂದ ಅದನ್ನು ಹೊರತರಲು ಅದರ ಉದ್ದನೆಯ ಬಾಲ ಹಿಡಿದು ಜನರೆಲ್ಲಾ ಸೇರಿ ಎಳೆದಾಗ ಹೆಗ್ಗಣ ಹೊಟ್ಟೆಯೊಳಗಿರುವುದರಿಂದ “ಹೊಟ್ಟೆ ಡುಮ್ಮಣ್ಣ”ನಾಗಿದ್ದರಿಂದ ಮಂಚದ ಸಣ್ಣ ಗ್ಯಾಪಿನಲ್ಲಿ ಸಿಕ್ಕಿ ಹಾಕಿಕೊಂಡು ಅದರ ಚರ್ಮ ಸುಲಿದು ಬಿಡಿಸಿದ ಹಲಸಿನ ಹಣ್ಣಿನ ಪರಿಸ್ಥಿತಿಯಾಗಿದೆ. ಚೀನಾದಲ್ಲಾದರೆ ನಮಗೆ “ಹೋಳಿಗೆಯೇ ಜಾರಿ ತುಪ್ಪಕ್ಕೆ ಬಿದ್ದಹಾಗೇ” ಎಂಬ ಗಾದೆಯ ಹಾಗೇ “ಹಾವು ಅಡಿಗೆ ಮನೆಗೆ ಬಂದಹಾಗೆ” ಎಂಬ ಗಾಧೆ ಅನ್ವರ್ಥವಾಗಿ ಎಲ್ಲರಿಗೂ ಇದೊಂದು ವಿಶೇಷ “ಹೆಬ್ಬಾವಿನ ಹಬ್ಬ”ವಾಗಿ ಅದಕ್ಕೆ ತರತರದ ಮಸಾಲೆ ಹಾಕಿ ವಿವಿಧ ಖಾದ್ಯ ಮಾಡಿ ಹುರಿದು ಮುಕ್ಕುತ್ತಿದ್ದರೇನೋ?. ಅಷ್ಟೊತ್ತಿಗೆ ಜನ ಮನ್ಮಥಕುಮಾರನ್ನು ಕರೆಸಿದಾಗ ಹೆಬ್ಬಾವಿಗೆ ಆದ ಗಾಯ ನೋಡಿ ಅವರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆ ಮಾಡಿದರು.
ಹೆಬ್ಬಾವು ತುಂಬಾ ಗಾಯಗೊಂಡಿತ್ತು. ಐದಾರು ಜನ ಹಿಡಿದು ಎಳೆದ ಹೊಡೆತಕ್ಕೆ ಹೊಟ್ಟೆಯ ಭಾಗದ ಚರ್ಮದ ಮೇಲ್ಪದರ ಹಿಸಿದು ಹೋಗಿ ಅಂಗಾಂಗಗಳೆಲ್ಲಾ ಹೊರಚೆಲ್ಲಿಕೊಂಡು ವಿಕಾರವಾಗಿ ಕಾಣುತ್ತಿದ್ದವು. ಅವೆಲ್ಲಾ ಕೆಸರುಮಯವಾಗಿ ಮೂಲ ಬಣ್ಣವೇನು ಎಂಬುದೇ ಗೊತ್ತಾಗುತ್ತಿರಲಿಲ್ಲ. ಇಷ್ಟಿದ್ದರೂ ಸಹ ಸಹ ಹೆಬ್ಬಾವು ಪಿಳಿ ಪಿಳಿ ಎಂದು ಉದ್ದನೆಯ ನಾಲಿಗೆಯನ್ನು ಹೊರಹಾಕಿ ಒಳಗೆಳೆದುಕೊಂಡು ತನ್ನ ಬದುಕಿರುವಿಕೆಯನ್ನು ನಿರ್ವಿಕಾರವಾಗಿ ತೋರಿಸುತ್ತಿತ್ತು.
ಇದರ ಚಿಕಿತ್ಸೆಗೆ ಸುಮಾರು ಎರಡು ತಾಸು ಸಮಯ ಬೇಕು. ನಮ್ಮ ಆಸ್ಪತ್ರೆಯಲ್ಲಿ ಆಗ ಅಪರೇಷನ್ ಟೇಬಲ್ಲು ಇರಲಿಲ್ಲ. ಎರಡು ಗಂಟೆಗಳ ಕಾಲ ಕುಳಿತು ಈ ಕೈಂಕರ್ಯ ಮಾಡಿದರೆ ಬೆನ್ನು ಸೊಂಟ ಬಿದ್ದು ಹೋಗುತ್ತಿತ್ತು. ಈ ಜೀವಿಯ ಚಿಕಿತ್ಸೆಗೆ ಯಾರನ್ನೇನು ಕೇಳುವುದು ಎಂದು ನನ್ನ ಮನೆಯಲ್ಲಿದ್ದ ಟೀಪಾಯಿಯನ್ನು ತರಿಸಿ ಅದನ್ನೇ ಅಪರೇಷನ್ ಟೇಬಲ್ ಮಾಡಿಕೊಂಡೆ. ಈಗಿನಂತೆ ಮೊಬೈಲು, ವಾಟ್ಸಾಪ್ಪುಗಳಿರದೇ ಇರುವುದರಿಂದ ಯಾರನ್ನು ಕೇಳುವುದು?. ನನ್ನ ಬಳಿಯಿರುವ ಪಶುವೈದ್ಯಕೀಯ ಗ್ರಂಥಗಳನ್ನು ಕೆದಕಿ ಅಧ್ಯಯನ ಮಾಡಿ ಅವಶ್ಯವಿರುವ ಅರಿವಳಿಕೆಗಳು, ಜೀವನಿರೋಧಕಗಳು, ಹೊಲಿಗೆ ದಾರ, ಸೂಜಿ ಇವನ್ನೆಲ್ಲ್ಲಾ ಸಾಗರದ ಮೆಡಿಕಲ್ಲಿನಿಂದ ತರಿಸಿದೆ.
ಮನ್ಮಥಕುಮಾರ್ ಹೆಬ್ಬಾವಿನ ನಿಯಂತ್ರಣ ಸಾಧಿಸಿಕೊಟ್ಟರು. ಯಾವುದೋ ಕಚೇರಿ ಕೆಲಸಕ್ಕೆಂದು ಕಾರ್ಗಲ್ಲಿನಿಂದ ಬಂದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಶ್ರೀ ಪ್ರಭಯ್ಯಮಠ (ಅವರು ಈಗಿಲ್ಲ) ಮತ್ತು ಕೆರೆಯಪ್ಪ ಇವರೂ ಕೈಜೋಡಿಸಿದರು. ಅರಿವಳಿಕೆ ನೀಡಿದ ನಂತರ ಹೆಬ್ಬಾವಿನ ಹೊಟ್ಟೆಯಲ್ಲಿನ ವಿವಿಧ ಜೀವಜಠರಸಾಮ್ಲಗಳ ಸ್ನಾನದಿಂದ ಮಿಂದು ಇನ್ನೇನು ಜೀರ್ಣವಾಗಿ ಹಾವಿನ ರಕ್ತ ಸೇರಬೇಕಾಗಿದ್ದ ಅರೆ ಜೀವವಾಗಿದ್ದ ಹೆಗ್ಗಣವನ್ನು ಹೊರತೆಗೆದು, ಕರುಳಿನಂತಿರುವ ಅನೇಕ ಅಂಗಗಳನ್ನು ಸ್ವಚ್ಚಗೊಳಿಸಿ ಒಳಗೆ ಹಾಕಿ ವಿವಿಧ ಪದರಗಳಿಗೆ ಹೊಲಿಗೆ ಹಾಕಿ ಒಂದೆರಡು ಗಂಟೆಗಳ ಕಾಲದ ಪ್ರಯತ್ನದ ನಂತರ ಶಸ್ತ್ರಚಿಕಿತ್ಸೆ ಮುಗಿಯಿತು.
ಇದಾದ ನಂತರವೇ ಬಂದಿದ್ದು ನಿಜವಾದ ಪಜೀತಿ. ಈ ಉರಗಕ್ಕೆ ದಿನಾ ಜೀವ ನಿರೋಧಕ, ನಂಜುನಿವಾರಕ ಚುಚ್ಚು ಮದ್ದು ಒಂದು ವಾರ ನೀಡಬೇಕಲ್ಲ? ಯಾರು ನೀಡುವವರು? ಎಂಬ ಪ್ರಶ್ನೆ ಬಂತು. ಇಲ್ಲದಿದ್ದರೆ ಹೆಬ್ಬಾವು ನಂಜಾಗಿ ಸತ್ತು ಹೋಗುವ ಸಾಧ್ಯತೆ ಇತ್ತು. ಈ ಜೀವ ಜಂತಿಗೆ ಇಂಜೆಕ್ಷನ್ ಕೊಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ದಿನಾಲೂ ನಮ್ಮ ಆಸ್ಪತ್ರೆಯ ದರ್ಶನ ಮಾಡಲು ಹೇಳಿದೆ. ಅವರು ಅವರಿಗೆ ಇಂತಹ ಸಹಸ್ರ ಕೆಲಸ ಕಾರ್ಯಗಳಿವೆಯೆಂದೂ, ಕಾಡಿನ ಸಮಸ್ಥ ಜೀವಜಲಚರ ರಕ್ಷಣೆಯ ಭಾರ ಅವರ ಮೇಲಿದೆಯೆಂದೂ, ಸಾಗವಾನಿ, ಬೀಟೆ, ಶ್ರಿಗಂಧ ಇತ್ಯಾದಿ ದುಬಾರಿ ಮರಗಳನ್ನು ಮರಗಳ್ಳರಿಂದ ರಕ್ಷಣೆ ಮಾಡಬೇಕಾದ ಗುರುತರ ಜವಾಬ್ಧಾರಿಯಿರುವದರಿಂದ ನಮ್ಮ ಆಸ್ಪತ್ರೆಯಲ್ಲಿಯೇ ಇದನ್ನು “ಒಳರೋಗಿ”ಯಾಗಿ ಸೇರಿಸಿಕೊಂಡು ಚಿಕಿತ್ಸೆ ಮಾಡಬೇಕೆಂದು ಹಾಗೂ ಅವರು ದಿನಾ ಬಂದು ನಮಗೆ ಪೂರ್ಣ ಸಹಕಾರ ಕೊಡುವುದಾಗಿ ಕೋರಿಕೊಂಡರು.
ಆಸ್ಪತ್ರೆಗೆ ಹೊಂದಿಕೊಂಡ ಮೊಲ ಸಾಕಣೆ ಕೇಂದ್ರವನ್ನು ಹೆಬ್ಬಾವಿಗೆ “ಒಳರೋಗಿ ಚಿಕಿತ್ಸಾ ಕೇಂದ್ರ” ಮಾಡಿ ಅಲ್ಲೊಂದು ಗೋಣಿಚೀಲ ಹಾಕಿ ಅದರ ಮೇಲಿಟ್ಟೆವು. ಮೊದ ಮೊದಲು ತಣ್ಣಗೇ ಇರುವ ಈ ಶೀತರಕ್ತದ ಪ್ರಾಣಿಯನ್ನು ಮುಟ್ಟಲೂ ಅಸಹ್ಯಮಾಡಿಕೊಂಡು ಬೇಸರ ಪಟ್ಟುಕೊಂಡ ಕೆರಿಯಪ್ಪ ನಿಧಾನವಾಗಿ ಅದರ ಮೇಲೆ ಮಮತೆ ಬೆಳೆಸಿಕೊಂಡ. ಅದರ ಹಸಿವು ನೀಗಲು ಒಂದೆರಡು ಕಪ್ಪೆಗಳನ್ನು ಹಿಡಿದು ಆ ರೂಮಿನಲ್ಲಿ ಬಿಟ್ಟ. ಈ ಸೋಮಾರಿ ಹೆಬ್ಬಾವು ಚುರುಕಾಗಿರುವ ಕಪ್ಪೆಗಳನ್ನು ಬೆನ್ನು ಹತ್ತಿ ಬೇಟೆ ಮಾಡುವ ಬಗ್ಗೆ ಸಂಪೂರ್ಣ ಸಂಶಯವಿತ್ತು. ಈ ಕಪ್ಪೆಗಳೋ ಅವುಗಳ ಎಂದಿನ ಹುಟ್ಟುಗುಣದಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಎಗರಾಡಿ ಇಡೀ ರೂಮಿನಲ್ಲಿ ಕುಣಿದು ಕುಪ್ಪಳಿಸಿ ಹೆಬ್ಬಾವಿನ ಮೈಮೇಲೆಯೂ ಸವಾರಿ ಮಾಡಿ ಅವು ಅದರ ಆಹಾರವಾಗುವ ನಮ್ಮ ಬಯಕೆಯನ್ನೇ ನಿವಾಳಿಸಿ ಒಗೆದವು.
ಹೆಬ್ಬಾವಿನ ಜಾತಿಯ ಹಾವುಗಳು ಆಹಾರವಿಲ್ಲದೆಯೂ ಅನೇಕ ದಿನ ಬದುಕಬಲ್ಲವು ಮತ್ತು ಇದಕ್ಕೆ ಆಹಾರ ಹಾಕುವ ವ್ಯರ್ಥ ಪ್ರಯತ್ನ ಬೇಡವೆಂದರೂ ಸಹ ಅದರ ನೈಸರ್ಗಿಕ ಅಹಾರವಾದ ಇಲಿಗಳು, ಮೊಟ್ಟೆ ಇತ್ಯಾದಿಗಳನ್ನು ಅದಕ್ಕೆ ತಿನ್ನಿಸುವ ನಿರಂತರ ಪ್ರಯತ್ನ ಕೆರಿಯಪ್ಪನಿಂದ ನಡೆದೇ ಇತ್ತು. ಆಗಾಗ ತನ್ನ ನಾಲಿಗೆಯನ್ನು ಹೊರಚಾಚಿ ಒಳಗೆಳೆದುಕೊಂಡು ತಾನು ಬದುಕಿರುವಿಕೆಯನ್ನು ಹೆಬ್ಬಾವು ಖಚಿತಪಡಿಸುತ್ತಿತ್ತು.
ಈಗಾಗಲೇ ಅದು ವಿಷರಹಿತ ಮತ್ತು ಅಪಾಯರಹಿತ ಎಂದು ಗೊತ್ತಾಗಿರುವುದರಿಂದ ಆರಾಮವಾಗಿ ಅದಕ್ಕೆ ಒಂದೈದಾರು ದಿನ ಅವಶ್ಯಕ ಚುಚ್ಚುಮದ್ದು ನೀಡಿದೆವು. ಚುಚ್ಚು ಮದ್ದಿನ ಮೂಲಕ ಔಷಧಿ ನೀಡದೆಯೇ ಇದಕ್ಕೆ ಗುಳಿಗೆ ತಿನ್ನಿಸಲಾದೀತೇ?. ಹತ್ತು ದಿನಗಳ ನಂತರ ಗಾಯ ವಾಸಿಯಾಗಿದ್ದರಿಂದ ಹಾಕಿದ ಹೊಲಿಗೆಯನ್ನೂ ಬಿಡಿಸಿಯಾಯ್ತು. ಇಷ್ಟಾದರೂ ಕಾಡುಕಾಯುವ ಗುರುತರ ಜವಾಬ್ದಾರಿ ಹೊಂದಿದ ಅರಣ್ಯ ಮತ್ತು ಹೆಬ್ಬಾವು ಹಿಡಿದು ಅದಕ್ಕೆ ಚುಚ್ಚುಮದ್ದು ನೀಡಲು ನಮಗೆ ಸಹಕಾರದ ಮಹಾನ್ ಆಶ್ವಾಸನೆ ನೀಡಿದ ಇಲಾಖೆಯ ಸಿಬ್ಬಂದಿಯ ಪತ್ತೆಯೇ ಇರಲಿಲ್ಲ.
ಹೆಬ್ಬಾವಿಗೆ ಅಪರೇಷನ್ ಮಾಡಿದ ಈ ಸುದ್ಧಿ ಮಾಧ್ಯಮದವರಿಗೆ ಹೇಗೋ ತಿಳಿದು ಅದು ಅನೇಕ ಪೇಪರ್ರುಗಳಲ್ಲಿ ಬಂದು ಸುತ್ತ ಮುತ್ತಲಿನ ಜನ ನಮ್ಮ ವಿಶೇಷ ಒಳರೋಗಿಯನ್ನು ನೋಡಲು ತಂಡೋಪ ತಂಡವಾಗಿ ಬರತೊಡಗಿದರು. ನಮ್ಮ ದಿನ ನಿತ್ಯದ ಕಾಯಕ ಬದಿಗೊತ್ತಿ ಹೆಬ್ಬಾವಿನ ಅಪರೇಶನ್ನಿನ ಕಥೆಯನ್ನೇ ಪ್ರಾರಂಭದಿಂದ ಹೇಳಿ ಹೇಳಿ ಸಾಕಾಗಿ ಹೋಯಿತು. ಶಾಲಾ ಮಕ್ಕಳು ಅಧ್ಯಯನ ಶಿಬಿರದಂತೆ ಬೇಟಿಕೊಡಲಾರಂಭಿಸಿದ್ದರಿಂದ ಹೆಬ್ಬಾವಿಗೂ ಕಿರಿ ಪ್ರಾರಂಭವಾಯಿತೇನೋ? ಇದು ಪ್ರಾಣ ಬಿಟ್ಟರೆ ಹೆಬ್ಬಾವನ್ನು ಸ್ವರ್ಗಕ್ಕಟ್ಟಿದ ಪಶುವೈದ್ಯ ಸಿಬ್ಬಂದಿ ಇತ್ಯಾದಿ ಚಿತ್ರ ವಿಚಿತ್ರ ತಲೆಬರಹದಲ್ಲಿ ಸುದ್ಧಿ ಬರಬಹುದಾದ ಸಾಧ್ಯತೆ ನೆನೆದು ಅರಣ್ಯ ಇಲಾಖೆಯವರಿಗೆ ಈ ಹೆಬ್ಬಾವನ್ನು ಕೂಡಲೇ ಕಾಡಿಗೆ ಸೇರಿಸಬೇಕೆಂದು ಮೊರೆಯಿಟ್ಟೆ. ನನ್ನ ನಿರಂತರ ಮೊರೆ ಕೇಳಿ ಅವರು ಒಂದು ಶುಭ ದಿನದಂದು ಬಂದು ಅದನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸಮೀಪದ ಅಭಯಾರಣ್ಯದಲ್ಲಿ ಬಿಟ್ಟ ಕೂಡಲೇ ಒಮ್ಮೆಯೂ ತಿರುಗಿ ನೋಡದೇ ಸರಸರನೇ ಹರಿದು ದಟ್ಟ ಕಾಡಿನಲ್ಲಿ ಕಣ್ಮರೆಯಾಯ್ತು.