ಪದೇ ಪದೇ ಕುಸಿಯುವ ಈರುಳ್ಳಿ ಬೆಲೆ ರೈತರನ್ನು ಕಂಗೆಡಿಸಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಏರುಪೇರಿಗೆ ಸಿಕ್ಕು, ಹೆಚ್ಚು ದಿನ ಬಾಳಿಕೆ ಬರದ ಈರುಳ್ಳಿಯನ್ನು ದೀರ್ಘಾವಧಿ ಕಾಪಾಡುವುದು ಒಂದು ಕಲೆಯೇ. ಇಂತಹ ಕಲೆಯನ್ನು ಕರಗತ ಮಾಡಿಕೊಂಡು ದರ ಕುಸಿತಕ್ಕೆ ಸೂಕ್ತ ಪ್ರತಿತಂತ್ರ ಎಣೆದು, ದಿಢೀರ್ ನಷ್ಟದಿಂದ ಪಾರಾಗುವ ಇಲ್ಲವೇ ನಷ್ಟವನ್ನು ಮಂದೂಡುವ, ತಗ್ಗಿಸಿಕೊಳ್ಳುವ ರೈತರ ಪ್ರಯತ್ನಗಳು ಅಲ್ಲಲ್ಲಿ ಕೈ ಹಿಡಿದಿವೆ. ಬೆಲೆ ಕುಸಿತದ ಬಿಕ್ಕಟ್ಟಿಗೆ ಬಳ್ಳಾರಿ ಜಿಲ್ಲೆಯ ಸಂಡೂರಿನ ಈರುಳ್ಳಿ ರೈತರ ಸಮಯ ಪ್ರಜ್ಞೆ, ಕೌಶಲ್ಯ ಮತ್ತು ಜಾಣ್ಮೆ ಕುರಿತು ಸ್ವರೂಪಾನಂದ ಎಂ. ಕೊಟ್ಟೂರು ಬೆಳಕು ಚೆಲ್ಲಿದ್ದಾರೆ.
`ಸದ್ಯಕ್ಕೆ ಈರುಳ್ಳಿಗೆ ರೇಟ್ ಇಲ್ಲ, ಹಾಗಾಗಿ ನಾವೆಲ್ಲಾ ಈರುಳ್ಳಿನ ಪುಟ್‍ಪಾತ್‍ನಲ್ಲಿ ಸುರುವಿ ನಿಶ್ಚಿಂತೆಯಿಂದ ಇದ್ದೇವೆ…’ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಹೊಸಳ್ಳಿಯ ಬೊಮ್ಮನಗೌಡ್ರು ಪ್ರಕಾಶ್ ಹೇಳಿದರು. `ಸಿಕ್ಕಾಪಟ್ಟೆ ರೊಕ್ಕ ಖರ್ಚು ಮಾಡಿ ಬೆಳೆದ ಈರುಳ್ಳಿಯನ್ನು ಪುಟ್‍ಬಾತ್‍ಗೆ ಸುರುವಿ ಅದ್ಹೇಗೆ ನಿಶ್ವಿಂತೆ ಆಗಿದ್ದೀರಿ..?’ ಎಂದೆ. ` ನಾನಷ್ಟೇ ಅಲ್ಲ, ನನ್ನಂತ ನೂರಾರು ಈರುಳ್ಳಿ ರೈತರು ಈರುಳ್ಳಿ ಬೆಲೆ ಬಿದ್ದರೂ ನೆಮ್ಮದಿ ಆಗಿದ್ದೇವೆ ಎಂದರೆ ಪುಟ್‍ಪಾತ್‍ಗಳೇ ಕಾರಣ, ತೋರುಸ್ತೀನಿ ಬನ್ನಿ..’ ಎಂದು ಕರೆದ್ಯೊಯ್ದದ್ದು ಅವರ ಹೊಲದೆಡೆಗೆ!. ` ಇದೇ ನೋಡಿ ಪುಟ್‍ಪಾತ್. ನಮ್ಮ ಅಪತ್ಬಾಂದವ, ಇದರ ಒಡಲಲ್ಲಿ ಈರುಳ್ಳಿ ಸುರಕ್ಷಿತ ಇದಾವೆ..’ ಎನ್ನೋದೇ!.
ಪುಟಪಾತ್ ನಿರ್ಮಾಣ ಹೀಗೆ..
ಮೆಲ್ನೋಟಕ್ಕೆ ಗುಡಿಸಲು ರೀತಿ ಕಾಣುವ ಇವು ಈರುಳ್ಳಿ ರಕ್ಷಣೆಗೆಂದೇ ಕಟ್ಟಿರುತ್ತಾರೆ. ಗಾಳಿ ಚೆನ್ನಾಗಿ ಆಡಲು ಹೊಲದ ಎತ್ತರ ಸ್ಥಳ ಗುರುತಿಸಲಾಗುತ್ತೆ. ಈರುಳ್ಳಿ ಉತ್ಪಾದನೆಯ ಮೇಲೆ ಅಳತೆ ನಿಗದಿ ಆಗುತ್ತೆ. ಗೂಟ ಉಗಿಯಲಾಗುತ್ತೆ. ಸುತ್ತಲೂ ತೊಗರಿ ಕಡ್ಡಿ, ಲಕ್ಕಿ, ಬಂದ್ರಿಕೆ ಗಿಡ, ತೆಂಗಿನ ಗರಿ, ಬಾಳೆ ಗೆಜ್ಜೆ… ಇತ್ಯಾದಿಗಳಿಂದ ವ್ಯವಸ್ಥಿತವಾಗಿ ಕಟ್ಟಿ, ಒಳಗೆ ಈರುಳ್ಳಿ ಸುರುವಲಾಗುತ್ತೆ. ನಂತರ ಮೇಲೆ ಗರಿ ಹಾಕಿ ಪ್ಲಾಸ್ಟಿಕ್ ತಾಡಪಾಲ್‍ನಿಂದ ಭದ್ರಪಡಿಸುತ್ತಾರೆ.
ಬೆಲೆ ಕುಸಿತದ ತಲೆಬಿಸಿ ಇಲ್ಲ..
ಕುಸಿದ ಅಂತರ್ಜಲ, ಹವಮಾನ ವೈಪರಿತ್ಯ… ಈರುಳ್ಳಿ ಬೆಳೆಗೆ ಪ್ರತಿಕೂಲ ಅಂಶಗಳು. ಅದು ಬಿಟ್ಟರೆ ಬೆಲೆ ಏರಿಳಿತ. ಈರುಳ್ಳಿ ಧಾರಣೆ ಕುಸಿತದಿಂದ ರೈತರು ಧೃತಿಗೆಡುತ್ತಲೇ ಇದ್ದಾರೆ. ಇನ್ನು ಮುಂಗಾರಿನಲ್ಲಿ ನಾಸಿಕ್, ಸಾಂಗ್ಲಿಯಲ್ಲಿ ಈರುಳ್ಳಿ ಅತ್ಯಧಿಕವಾಗಿ ಬೆಳೆಯಲಿದ್ದು, ಇದು ನಮ್ಮ ರಾಜ್ಯದ ಮಾರುಕಟ್ಟೆಯ ಮೇಲೂ ಕೆಲವೊಮ್ಮೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಈ ಕಾರಣಕ್ಕೆ ಈ ಭಾಗದ ರೈತರು ಈರುಳ್ಳಿಯನ್ನು ಹಿಂಗಾರಿನಲ್ಲಿ ಅತಿಹೆಚ್ಚು ಬೆಳೆಯುತ್ತಾರೆ. ಹೀಗೆ ಮಾರುಕಟ್ಟೆ ತಂತ್ರ ಅನುಸರಿಸಿದರೂ ಒಮ್ಮೊಮ್ಮೆ ಬೆಲೆ ನೆಲಕಚ್ಚಲಿದ್ದು, ಆಗ ಇವರು ಪುಟ್‍ಪಾತ್ ನೆಚ್ಚಿಕೊಳ್ಳುತ್ತಾರೆ!.
ಪುಟ್‍ಪಾತ್ ಸ್ಪೆಷಾಲಿಟಿ..
ಸಣ್ಣ ರೈತರಿಗೆ ವರದಾನವೇ ಸರಿ. ಭಾಗಶಃ ಶೂನ್ಯ ಬಂಡವಾಳ. ಒಮ್ಮೆ ನಿರ್ಮಿಸಿ, ಚೆನ್ನಾಗಿ ನಿರ್ವಹಣೆ ಮಾಡಿದರೆ 3-4 ವರ್ಷ ತಾಳಿಕೆ ಬರುತ್ತೆ. ವರ್ಷದಿಂದ ವರ್ಷಕ್ಕೆ ಆಯಕಟ್ಟಿನ ಸ್ಥಳ ಗುರುತಿಸಿ, ಜಾಗ ಬದಲಿಸಬಹುದು. ಕನಿಷ್ಟ 6-7 ತಿಂಗಳು ಈರುಳ್ಳಿ ಕೊಳೆಯದೇ, ಸಂರಕ್ಷಿಸಬಹುದು. ಈ ಕಾರಣಕ್ಕೆ ಸರಾಸರಿ ಎಕರೆಗೊಂದು, ಕಣ, ಹಿತ್ತಲಿನಲ್ಲಿ ಪುಟ್‍ಬಾತ್‍ಗಳು ಇಲ್ಲಿ ಕಡ್ಡಾಯ!. ಆದರೆ ಕೆಲವೊಮ್ಮೆ ಮಳೆ ಜಾಸ್ತಿ ಆಗಿ ತೇವಾಂಶ ಹೆಚ್ಚಾದರೆ ಈರುಳ್ಳಿಗೆ ಆಪತ್ತು ಬರುತ್ತದೆ. ಅದೇನೆ ಇರಲಿ, ಈ ಭಾಗದ ಮುಕ್ಕಾಲು ಭಾಗ ರೈತರು ಇದನ್ನೇ ಆಶ್ರಯಿಸಿದ್ದಾರೆ.
ಕೈ ಹಿಡಿಯುವ ಪುಟ್‍ಪಾತ್..
ಈರುಳ್ಳಿ ರೇಟ್ ಪಾತಾಳ ಕಂಡರೆ ಸಣ್ಣ ರೈತರೆಲ್ಲಾ ಪುಟ್‍ಪಾತ್‍ಗಳನ್ನು ಆಶ್ರಯಿಸುತ್ತಾರೆ. ಇನ್ನು ಮಧ್ಯಮ ಮತ್ತು ದೊಡ್ಡ ರೈತರು ಬೆಳೆಯ ಅರ್ಧ ಭಾಗವನ್ನು ಸಮಯ ನೋಡಿ, ರಾಜ್ಯ ಮತ್ತು ಹೊರ ರಾಜ್ಯದ ದೊಡ್ಡ ಮಾರುಕಟ್ಟೆ ಸಾಗಿಸಿದರೆ ಉಳಿದರ್ಧ ಮಾಲನ್ನು ಕೊಟ್ಟಿಗೆ, ಪುಟ್‍ಪಾತ್‍ಗಳಲ್ಲಿಡುತ್ತಾರೆ. ಕಾಲಕ್ರಮೇಣ ಧರದಲ್ಲಿ ಚೇತರಿಕೆ ಕಂಡರೆ ಮಾರುಕಟ್ಟೆಗೆ ಪೂರ್ತಿ ಮಾಲು ಬಿಡುತ್ತಾರೆ. ಇಲ್ಲದಿದ್ದರೆ ಮತ್ತೊಂದು ಈರುಳ್ಳಿ ಸೀಜನ್ ಬರುವವರೆಗೆ ಸಣ್ಣ ಪ್ರಮಾಣದಲ್ಲಿ ಸುತ್ತಮುತ್ತಲು ನಡೆಯುವ ಸಂತೆಗೆ ಮಾಲು ಬಿಡುತ್ತಾರೆ. ಹೀಗಾಗಿ ಇಲ್ಲಿಯ ರೈತರು ಸಂಪೂರ್ಣ ನಷ್ಠ ಅನುಭವಿಸುವುದು ವಿರಳ.
ಪುಟ್‍ಪಾತ್‍ನಲ್ಲಿ ಸುಧಾರಣೆ..!
ಈಗ ಪುಟ್‍ಪಾತ್‍ಗಳಲ್ಲಿ ಕೆಲವೊಂದು ಮಾರ್ಪಾಡು ಮಾಡಿದ್ದು, ಇವು ಉಳ್ಳಾಗಡ್ಡೆ ಕೊಟ್ಟಿಗೆ ಎಂದೇ ಜನಪ್ರಿಯ. ಇವುಗಳನ್ನು ಸ್ವಲ್ಪ ಸ್ಥಿತಿವಂತರು ನಿರ್ಮಿಸಲಿದ್ದು, ಇದಕ್ಕೆ ಕಲ್ಲುಕಂಬ, ಪುಟಪಾತ್ ಜಾಲರಿ, ನಿರುಪಯುಕ್ತ ಡ್ರಿಪ್ ವಯರ್, ತಗಡು, ಬಾದೆ ಹಲ್ಲು, ನೆಲಕ್ಕೆ ಕಾಂಕ್ರೀಟ್.. ಬಳಸುತ್ತಾರೆ. ಪುಟಪಾತ್‍ಗಿಂತ ಹೆಚ್ಚು ಲೈಫ್ ಇರುತ್ತೆ. ಇಲ್ಲಿ ಈರುಳ್ಳಿಯನ್ನು ಚೀಲದಲ್ಲಿ ತುಂಬಿ ವೈಜ್ಞಾನಿಕವಾಗಿ ಸಂಗ್ರಹಿಸಲಾಗುತ್ತೆ.
ಯೋಜನೆಗೆ ತಿದ್ದುಪಡಿ ಬಂತು..!
ಈ ಪುಟ್‍ಪಾತ್‍ಗಳೇ ಸರಕಾರದ ಯೋಜನೆಗೆ ತಿದ್ದುಪಡಿ ತರಲು ಪ್ರೇರಣೆ ಆಗಿದ್ದು ವಿಶೇಷ. ಈ ಮೊದಲು ನಾಸಿಕ್ ಮಾದರಿಯಲ್ಲಿ ಇಲ್ಲಿನ ರೈತರು ಈರುಳ್ಳಿ ಸಂಗ್ರಹಣ ಘಟಕಗಳನ್ನು ನಿರ್ಮಿಸಬೇಕೆಂಬ ನಿಯಮವಿತ್ತು. ಅತ್ಯಧಿಕ ವೆಚ್ಚ ಹಾಗೂ ತ್ರಾಸದಾಯಕ ಈ ಯೋಜನೆಯನ್ನು ರೈತರು ಅಳವಡಿಸಿಕೊಳ್ಳಲು ಹಿಂದೇಟು ಹಾಕಿ, ಪುಟ್‍ಪಾತ್‍ನ್ನೇ ಬಳಸಿದರು!. ಈ ಕಾರಣಕ್ಕೆ ರಾಜ್ಯದ ಅದರಲ್ಲೂ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಯ ಈರುಳ್ಳಿ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ತೋಟಗಾರಿಕೆ ಇಲಾಖೆಯ ವತಿಯಿಂದ ಜಿಲ್ಲಾ ತಾಂತ್ರಿಕ ಸಮಿತಿ ರಚಿಸಲಾಗಿತು. ಸದರಿ ಸಮಿತಿಯು `ಮಳೆಗಾಲದಲ್ಲಿ ಈರುಳ್ಳಿ ಬೆಳೆದರೆ ಮಾತ್ರ ನಾಸಿಕ್ ಮಾದರಿಯ ಅವಶ್ಯಕತೆ ಇದ್ದು, ಬೇಸಿಗೆ ಈರುಳ್ಳಿಗೆ ಅವಶ್ಯಕತೆ ಇಲ್ಲ..’ ಎಂದು ಸರಕಾರಕ್ಕೆ ವರದಿ ಸಲ್ಲಿಸಿ, ಯೋಜನೆಗೆ ತಿದ್ದುಪಡಿ ತಂದಿತು.
ಶಾಶ್ವತ ಸಂಗ್ರಹ ಘಟಕಗಳು..
ತಿದ್ದುಪಡಿಯ ಪರಿಣಾಮ ಗರಿಷ್ಟ ಮತ್ತು ಶಾಶ್ವತ ಲಾಭಗಳಿರುವ ಈ ಯೋಜನೆಯ ಸದುಪಯೋಗಕ್ಕೆ ರೈತರು ಮುಂದಾಗಿದ್ದಾರೆ. 25 ಮೆಟ್ರಿಕ್ ಟನ್ ಈರುಳ್ಳಿಯನ್ನು ಸಂಗ್ರಹಿಸಲು ರೈತರು 1 ಲಕ್ಷದ 75 ಸಾವಿರ ರೂ ಮೌಲ್ಯದ ಶಾಶ್ವತ ಈರುಳ್ಳಿ ಸಂಗ್ರಹಣ ಘಟಕ ನಿರ್ಮಿಸಿಕೊಳ್ಳಲು ಸರಕಾರ ಸೌಲಭ್ಯ ನೀಡುತ್ತಿದೆ. ಎಸ್‍ಸಿ/ಎಸ್‍ಟಿಗೆ 90% ಮತ್ತು ಸಾಮಾನ್ಯ ರೈತರಿಗೆ 50% ಸಬ್ಸಿಡಿ ಸೌಲಭ್ಯವಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಅಯ್ಕೆ ಮಾಡಲಾಗುತ್ತೆ. ಆದರೆ ರೈತರ ಬೇಡಿಕೆಗೆ ತಕ್ಕಂತೆ ಇಲಾಖೆಯಲ್ಲಿ ಸಹಾಯಧನ ಗುರಿ ಇಲ್ಲ!. `ಪ್ರತಿ ವರ್ಷ ನೂರಾರು ರೈತರು ಅರ್ಜಿ ಹಾಕುತ್ತಾರೆ. ಆದರೆ 10-15 ಜನರಿಗೆ ಮಾತ್ರ ಈ ಸೌಲಭ್ಯ ಸಿಗುತ್ತೆ. ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಸಬ್ಸಿಡಿ ನೀಡುವಂತೆ ಸರಕಾರದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ…’ ಎನ್ನುತ್ತಾರೆ ಹೊಸಳ್ಳಿಯ ಯುವ ಕೃಷಿಕ ಓಂಕಾರ ಗೌಡ.
ಹೊಸಳ್ಳಿ ಈರುಳ್ಳಿ ಹೆಸರುವಾಸಿ..
ಸಂಡೂರು ಭಾಗ ಅದರಲ್ಲೂ ಹೊಸಳ್ಳಿ ಈರುಳ್ಳಿ ಹೆಸರುವಾಸಿ. ಇಲ್ಲಿನ ಹವಾಗುಣ, ಕೆಂಪು ಕೆನೆ ಮಣ್ಣಿನಲ್ಲಿರುವ ವಿಫುಲ ಖನಿಜಾಂಶ, ಮ್ಯಾಗ್ನಿಶಿಯಂ, ಸಮೃದ್ಧ ನೀರಾವರಿ.. ಈರುಳ್ಳಿ ಬೆಳೆಗೆ ಪೂರಕವಾಗಿದ್ದು, ಪ್ರಮುಖ ಬೆಳೆ ಆಗಿದೆ. ಲಕ್ಷ್ಮೀಪುರ, ಕೃಷ್ಣನಗರ, ನರಸಾಪುರ, ಧರ್ಮಾಪುರ, ಹೊಸಳ್ಳಿ [ಭುಜಂಗನಗರ]… ಪ್ರತಿ ವರ್ಷ ಸರಿಸುಮಾರು 300-350 ಹೆಕ್ಟೇರ್‍ನಲ್ಲಿ ಗರಿಷ್ಟ 10 ಸಾವಿರ ಟನ್‍ವರೆಗೆ ಈರುಳ್ಳಿ ಬೆಳೆಯುತ್ತಾರೆ!. ತೆಳುವಾದ ಪೊರೆ, ಹದವಾದ ಬಣ್ಣ, ಹೆಚ್ಚು ಹೊಳಪು, ದೀರ್ಘ ಬಾಳಿಕೆ, ತುಂಬಾ ಕಾಕು, ಸವಿ… ಇಲ್ಲಿನ ಈರುಳ್ಳಿ ವಿಶೇಷತೆ. ರಾಜ್ಯ, ಹೊರ ರಾಜ್ಯಗಳಲ್ಲೂ ಪ್ರಖ್ಯಾತಿ ಹೊಂದಿದ್ದು, ಸಹಜವಾಗಿ ಸಿಕ್ಕಾಪಟ್ಟೆ ಬೇಡಿಕೆ ಇದೆ. `ಮಾಜಿ ಪ್ರಧಾನಿ ದಿವಂಗತ ವಿ.ಪಿ ಸಿಂಗ್ ಹೊಸಳ್ಳಿ ಈರುಳ್ಳಿಗೆ ಮನಸೋತಿದ್ದರು. ಬಳ್ಳಾರಿಗೆ ಬಂದಾಗಲೆಲ್ಲಾ ತಪ್ಪದೇ ಈರುಳ್ಳಿ ಹೊಯ್ಯುತ್ತಿದ್ದರು..’ ಎನ್ನುತ್ತಾರೆ ಪರಿಸರ ಹೋರಾಟಗಾರ ಮೂಲಿಮನೆ ಈರಣ್ಣ.
ಬೇರೆಡೆಯೂ ತಂತ್ರಗಳಿವೆ..
ಸಂಡೂರಿನಲ್ಲಿ ಪುಟ್‍ಪಾತ್‍ಗಳಿದ್ದರೆ, ವಿಜಯಪುರದಲ್ಲಿ ಅದರಲ್ಲೂ ಬಸವನ ಬಾಗೇವಾಡಿ ಸುತ್ತಮುತ್ತ ಪುಟ್‍ಪಾತ್ ಮಾದರಿಗಳಿವೆ. ಇವುಗಳಿಗೆ ಇಲಾರಿಗಳೆಂದು ಸ್ಥಳೀಯವಾಗಿ ಕರೆಯುತ್ತಾರೆ. ಇನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತಾಡಪಾಲ್‍ನಿಂದ ಟೆಂಟ್‍ಗಳನ್ನು ನಿರ್ಮಿಸಿ, ಅದರಲ್ಲಿ ಈರುಳ್ಳಿ ಸಂರಕ್ಷಿಸುತ್ತಾರೆ. ಅದು ಬಿಟ್ಟರೆ ನಾಸಿಕ್ ಮಾಡಲ್ ಚಾಲ್ತಿಯಲ್ಲಿದೆ. ಉಳಿದಂತೆ ಅಲ್ಲಿಯೂ ತೋಟಗಾರಿಕೆಯ ಸಹಾಯ ಧನ ಬಳಸಿಕೊಂಡು ಈರುಳ್ಳಿ ಸಂಗ್ರಹ ಘಟಕಗಳನ್ನು ನಿರ್ಮಿಸಿಕೊಳ್ಳುತ್ತಾರೆ.
Super swarup
ನನಗೆ ತಿಳಿದ ಹಾಗೆ ಈ ಪದ್ಧತಿಯು ವಿಜಯಪುರ ಜಿಲ್ಲೆಯಲ್ಲಿ ಸುಮಾರು 30 ವರ್ಷಗಳ ಹಿಂದೆಯೆ ಜಾರಿಯಲ್ಲಿದೆ