ಕರ್ನಾಟಕದ ವೊಳ್ಳೂರು ಗ್ರಾಮದ ಮುತ್ಯಾಲ್ಲಪ್ಪ ವೆಂಕಟೇಶ್ ಹಾಗೂ ಇತರ ಗ್ರಾಮಸ್ಥರು 2015 ರಲ್ಲಿ ಅನಿರೀಕ್ಷಿತವಾಗಿ ಲಾಭದಾಯಕ ಕೊಡುಗೆ ಸ್ವೀಕರಿಸಿದರು. ಅದೇನೆಂದರೆ ಅವರು ತಮ್ಮ ಕೃಷಿಭೂಮಿಯಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲು ಸ್ಥಳಾವಕಾಶ ನೀಡಿರುವುದಕ್ಕೆ ಪ್ರತಿಯಾಗಿ ಪ್ರತಿ ವರ್ಷ ಪ್ರತಿ ಎಕರೆಗೆ 21,000 ರೂ ಗಳಿಸಬಹುದು ಎಂಬುದಾಗಿತ್ತು !
ಶ್ರೀಮಂತ ರೈತರ ಜಮೀನುಗಳಲ್ಲಿ ಕೃಷಿ ಕಾರ್ಮಿಕರಾಗಿ ತಮ್ಮ ಜೀವನದ ದೀರ್ಘಕಾಲದವರೆಗೆ ಕೆಲಸ ಮಾಡುತ್ತಿದ್ದ ವೆಂಕಟೇಶ್ ಯಾವುದಾದರೊಂದು ಪರಿಹಾರಕ್ಕಾಗಿ ನಿರೀಕ್ಷಿಸುತ್ತಿದ್ದರು. ಈ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಬರಗಾಲಗಳ ಕಾರಣದಿಂದ ಅವರ ಮೂರು ಎಕರೆ ಕೃಷಿಭೂಮಿಯಲ್ಲಿ ಅವರ 17 ಸದಸ್ಯರ ಕುಟುಂಬವನ್ನು ಪೋಷಿಸಲು ಸಾಕಾಗುವಷ್ಟನ್ನು ಕೃಷಿ ಉತ್ಪನ್ನ ಉತ್ಪಾದನೆ ಆಗುತ್ತಿರಲಿಲ್ಲ.
ಗ್ರಾಮದಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ ಅಂದರೆ ಅವರಿಗೆ ಅನ್ನಿಸಿದ್ದು ಎರಡು ವಿಷಯಗಳು: ಉದ್ಯೋಗಗಳು ಮತ್ತು ನ್ಯಾಯ “ನಮ್ಮ ಮೇಲ್ಜಾತಿಯ ಗೌಡ ನೆರೆಹೊರೆಯವರಿಗೆ ಆ ಸಂಬಳ ಯಾವ ರೀತಿಯ ಅನುಕೂಲ ಮಾಡಿದೆ ಎಂಬುದನ್ನು ನೋಡಿದ್ದೇವೆ” ಎಂದು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ 49 ವರ್ಷದ ವೆಂಕಟೇಶ್ ಹೇಳಿದರು. “ಈ ಸಂಗತಿ, ಬಡತನದಿಂದ ಹೊರಬರಲು ಸ್ಥಿರ ಆದಾಯದ ಜೊತೆಗೆ ಸ್ಥಿರವಾದ ಕೆಲಸವೂ ಇರಬೇಕು ಅನ್ನುವ ಪ್ರಾಮುಖ್ಯತೆಯನ್ನು ನಾವು ಅರಿತುಕೊಳ್ಳುವಂತೆ ಮಾಡಿತ್ತು.” ಎಂದವರು ಮತ್ತೆ ಹೇಳಿದರು. ಆದರೆ ಏಳು ವರ್ಷಗಳಲ್ಲಿ ಪಾರ್ಕ್ ಕೊಟ್ಟದ್ದು ಅತ್ಯಲ್ಪ.
2,000 ಮೆಗಾವ್ಯಾಟ್ ಸೋಲಾರ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ತಮ್ಮ ಭೂಮಿಯನ್ನು ನೀಡಿದ ಪಾವಗಡ ತಾಲ್ಲೂಕಿನ ಐದು ಕಂದಾಯ ಗ್ರಾಮಗಳ (ಆಡಳಿತ ಘಟಕ) ಸುಮಾರು 2,000 ಕುಟುಂಬಗಳಲ್ಲಿ ವೆಂಕಟೇಶ್ ಅವರೂ ಒಬ್ಬರು. ಆಗ ಭಾರತದ ಅತಿದೊಡ್ಡ ಮತ್ತು ವಿಶ್ವದ ಅತಿದೊಡ್ಡ ಸೋಲಾರ್ ಪ್ಯಾನಲ್ ಘಟಕ ಎಂದು ಪರಿಗಣಿಸಲ್ಪಟ್ಟ ಪಾರ್ಕ್ 13,000 ಎಕರೆ ಕೃಷಿಭೂಮಿಯಲ್ಲಿ ಹರಡಿತ್ತು.
ಇದರ ಬದಲಾಗಿ, ಗ್ರಾಮಸ್ಥರಿಗೆ ವಾರ್ಷಿಕ ಬಾಡಿಗೆ ಹಾಗು ಉದ್ಯೋಗಗಳು ಮತ್ತು ಸ್ಥಳೀಯ ಮೂಲಸೌಕರ್ಯಗಳಂತಹ ಅವಕಾಶಗಳ ಭರವಸೆ ನೀಡಲಾಯಿತು. ಬಾಡಿಗೆ ನಿಯಮಿತವಾಗಿ ಬರುತ್ತಿದ್ದರೂ, ಒಂದು ಕಾಲದಲ್ಲಿ ಕೃಷಿಯನ್ನೇ ನೆಚ್ಚಿಕೊಂಡಿದ್ದ ಹಲವರು, ಸೋಲಾರ್ ಪಾರ್ಕ್ ಕಾರಣದಿಂದ ತಮ್ಮ ಮೂಲ ಜೀವನಾಧಾರವನ್ನೇ ಕಳೆದುಕೊಂಡಿದ್ದರು.
ನಾವು ಮಾತನಾಡಿದ ಪಾವಗಡದ ಗ್ರಾಮಸ್ಥರಲ್ಲಿ ಸುಮಾರು 12,000 ಜನರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಸುಮಾರು 2,000 ಜನರು ಮಾತ್ರ ಪಾರ್ಕ್‌ನಲ್ಲಿ ಉದ್ಯೋಗವನ್ನು ಪಡೆದಿದ್ದಾರೆ, ಇದು ಜಾತಿ ಮತ್ತು ಲಿಂಗ ಕಾರಣಗಳಿಂದ ಮತ್ತಷ್ಟು ಬಿಗಡಾಯಿಸಿದೆ.
ಭಾರತವು ಪ್ರಸ್ತುತ. 64.38 ಗಿಗಾವ್ಯಾಟ್‌ಗಳ ಸೌರ ಸಾಮರ್ಥ್ಯವನ್ನು ಹೊಂದಿದೆ. ದೊಡ್ಡ ಪ್ರಮಾಣದ ಸೌರ ಪಾರ್ಕ್‌ಗಳನ್ನು ಸ್ಥಾಪಿಸುವುದು ಭಾರತ ಸರ್ಕಾರದ ಪ್ರಮುಖ ಪ್ರಯತ್ನವಾಗಿ ಹೊರಹೊಮ್ಮಿದೆ. ಈ ಉದ್ಯಮವು ಆರ್ಥಿಕ ಸಾಧ್ಯತೆ ಮತ್ತು ಉದ್ಯೋಗ ಸೃಷ್ಟಿಯ ಮಹತ್ವದ ಮೂಲವಾಗಿದೆ ಎಂದೂ ಪ್ರಚಾರ ಮಾಡಲಾಗಿದೆ.
ವಿಭಿನ್ನ ಚಿತ್ರಣ
ಇವೆಲ್ಲದರ ನಡುವೆಯೂ ಪಾವಗಡ ಸೌರ ಪಾರ್ಕ್ ಭಾರತದ ಸೌರಶಕ್ತಿ ಕ್ಷೇತ್ರವು ಹೇಗೆ ಪ್ರಮುಖ ಭರವಸೆಯಿಂದ ದೂರವಿದೆ ಎಂಬುದಕ್ಕೆ ಒಂದು ಉದಾಹರಣೆ. ಸೌರ ವಲಯವು 2020-21 ರ ಆರ್ಥಿಕ ವರ್ಷದಲ್ಲಿ 85,900 ಕಾರ್ಮಿಕರನ್ನು ನೇಮಿಸಿಕೊಂಡಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ವಿಭಿನ್ನ ಚಿತ್ರಣವೇ ದೊರಕುತ್ತದೆ. “ಸೌರ ಕ್ಷೇತ್ರವು ತೀವ್ರ ಉದ್ಯೋಗ ವಲಯವಾಗಿರಬಹುದು, ಆದರೆ ಇಲ್ಲಿನ ಉದ್ಯೋಗಗಳು ಕೆಳಮಟ್ಟದ್ದಾಗಿವೆ. ಮುಖ್ಯವಾಗಿ ನಿರ್ಮಾಣ ಅಥವಾ ಅನೌಪಚಾರಿಕ ಉದ್ಯೋಗಗಳಿಗೆ ಸಂಬಂಧಿಸಿದೆ” ಎಂದು ಮ್ಯಾಸಾಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿನ ರಾಜಕೀಯ ಆರ್ಥಿಕ ಸಂಶೋಧನಾ ಸಂಸ್ಥೆಯ ಸಹಾಯಕ ಸಂಶೋಧನಾ ಪ್ರಾಧ್ಯಾಪಕರಾಗಿರುವ ಶೌವಿಕ್ ಚಕ್ರಬರ್ತಿ ಹೇಳಿದರು.
ಉದ್ಯೋಗಗಳು ಎಲ್ಲಿವೆ?
2016 ಮತ್ತು 2019 ರ ನಡುವೆ, ಕೆಎಸ್‌ಪಿಡಿಸಿಎಲ್ ಕೃಷಿ ಭೂಮಿಯನ್ನು ಕಾಂಕ್ರೀಟ್ ಜಾಗಗಳಾಗಿ ಪರಿವರ್ತಿಸುತ್ತಿದ್ದಂತೆ, ಪಾವಗಡ ಗ್ರಾಮದಿಂದ ಬೇರೆಡೆ ವಲಸೆ ಹೋಗಿದ್ದ ಸ್ಥಳೀಯರು ಈಗ ಮನೆಗೆ ಹತ್ತಿರವಿರುವ ಸೌರ ಆರ್ಥಿಕತೆಯಲ್ಲಿ ಉದ್ಯೋಗಗಳನ್ನು ಪಡೆಯುವ ಭರವಸೆಯಿಂದ ಮರಳಿ ಬಂದಿದ್ದರು.
“ಅವರು ನಮಗೆ ಪಾರ್ಕ್‌ನಲ್ಲಿ 8,000 ಉದ್ಯೋಗಗಳ ಭರವಸೆ ನೀಡಿದ್ದರು, ಇದು ಎಕರೆಗೆ ಒಂದು ಕೆಲಸಕ್ಕಿಂತ ಕಡಿಮೆ” ಎಂದು ತಿರುಮಣಿ ಹಳ್ಳಿಯಿಂದ ಬಂದ ಮತ್ತು ಪಾರ್ಕ್ ಯೋಜನೆ ಘೋಷಿಸಿದಾಗ ಬೆಂಗಳೂರಿನಲ್ಲಿನ ಬ್ಯಾಂಕಿಂಗ್ ಕೆಲಸವನ್ನು ತೊರೆದಿದ್ದ, 30 ರ ಹರೆಯದ ಎಂಬಿಎ ಪದವೀಧರ ಕೋನಪ್ಪ ಹೇಳಿದರು. ಆರಂಭದಲ್ಲಿ, ಸ್ಥಳೀಯರು ತಮ್ಮ ಜಮೀನು ಬಿಟ್ಟುಕೊಡಲು ಮತ್ತು ಪಾರ್ಕ್‌ನಲ್ಲಿ ಕೆಲಸ ಹುಡುಕಲು ಇತರರಿಗೆ ಆಮಿಷ ಒಡ್ಡಲು ನಿರ್ಮಾಣದ ಸ್ಥಳಗಳಲ್ಲಿ ಬಿಡಿ ಕೆಲಸಗಳನ್ನು ನೀಡಲಾಯಿತು ಎಂದು ಕೋನಪ್ಪ ಹೇಳಿದರು.
ಪಾವಗಡದ ಯುವ ಪದವೀಧರರನೇಕರು ಇನ್ನೂ ಸೋಲಾರ್ ಪಾರ್ಕ್‌ನಲ್ಲಿ ಕೆಲಸ ಹುಡುಕಲು ಉತ್ಸುಕರಾಗಿದ್ದಾರೆ. 32 ವರ್ಷದ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವೀಧರ ಚಂದ್ರ ಬಾಬು ನಾಯ್ಡು, ಸ್ಥಳೀಯ ಉದ್ಯೋಗ ಮಾರುಕಟ್ಟೆಯಲ್ಲಿ ಮೌಲ್ಯಯುತವಾಗಿರುವ ಕೈಗಾರಿಕಾ ತರಬೇತಿ ಡಿಪ್ಲೊಮಾಗಳನ್ನು ಹೆಚ್ಚಿನ ಜನರು ಆರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಆದರೂ, ಕೆಎಸ್‌ಪಿಡಿಸಿಎಲ್ ನಲ್ಲಿ ನೇಮಕಾತಿ ಸ್ಪರ್ಧಾತ್ಮಕವಾಗಿದೆ ಮತ್ತು ಕೈಗಾರಿಕಾ ತರಬೇತಿ ಹೊಂದಿರುವವರು ಹೆಚ್ಚಿನ ತಾಂತ್ರಿಕ ಉದ್ಯೋಗಗಳಿಗೆ ಅರ್ಹತೆ ಗಳಿಸುವುದಿಲ್ಲ. ಸೋಲಾರ್ ಪಾರ್ಕ್ ನಿರ್ವಹಣೆ ಮಾಡುವವರು ಎಂಜಿನಿಯರಿಂಗ್ ಪದವಿ ಹೊಂದಿರುವ ಅರ್ಜಿದಾರಿಗೆ ಆದ್ಯತೆ ನೀಡುತ್ತಾರೆ ಎಂದು ಹೆಸರನ್ನು ಪ್ರಕಟಿಸಲು ಇಚ್ಚಿಸದ ಉದ್ಯೋಗಿಯೊಬ್ಬರು ಹೇಳಿದರು.
“ನಾವು ಕೇವಲ ಖಾಸಗಿ ಉದ್ಯಮಿಗಳಿಂದ ಗುತ್ತಿಗೆ ಶುಲ್ಕವನ್ನು ಸಂಗ್ರಹಿಸುವ ಮತ್ತು ಅದನ್ನು ಭೂಮಾಲೀಕರಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದೇವೆ” ಎಂದು ಕೆಎಸ್‌ಪಿಡಿಸಿಎಲ್ ನ ಜನರಲ್ ಮ್ಯಾನೇಜರ್ ಎನ್ ಅಮರನಾಥ್ ಹೇಳಿದರು.
“ಪಾರ್ಕ್‌ನ ಬಹುತೇಕ ಕೆಲಸಗಳು ಮತ್ತು ಸಬ್‌ಸ್ಟೇಷನ್ ಕಾರ್ಯಾಚರಣೆಯು ಮಾನವರಹಿತವಾಗಿದೆ ಎಂಬುದು ನಮ್ಮ ಗಮನದಲ್ಲಿದೆ. ಈ ನಡುವೆಯೂ ನಾವು ಕೆಲಸವನ್ನು ಸೃಷ್ಟಿಸಲು ಬಯಸುತ್ತೇವೆ, ಅದಕ್ಕಾಗಿಯೇ ನಾವು ಇನ್ನೂ ಜನರನ್ನು ನೇಮಿಸಿಕೊಳ್ಳುತ್ತೇವೆ” ಎಂದು ಕೆಎಸ್‌ಪಿಡಿಸಿಎಲ್ ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಆರ್ ಹೇಳಿದರು. ಅನಾಮಧೇಯತೆಯ ಷರತ್ತಿನ ಮೇಲೆ ಸಹಾಯಕ ಇಂಜಿನಿಯರ್ ಓರ್ವರು “ಸೋಲಾರ್ ಪಾರ್ಕ್‌ನಲ್ಲಿರುವ ಬ್ಲಾಕ್‌ಗಳಿಗೆ ಕನಿಷ್ಠ ಮಾನವ ಸಂವಹನದ ಅಗತ್ಯವಿರುವಂತೆ ಖಚಿತಪಡಿಸಿಕೊಳ್ಳಲು ಯೋಜನೆಗಳನ್ನು ಮಾಡಲಾಗಿದೆ” ಎಂದು ಹೇಳಿದರು.
ಆದಾಯದ ಮೂಲವೂ ಲಭಿಸಿದೆ
ಎಲ್ಲರೂ ಸೋಲಾರ್ ಪಾರ್ಕ್ ಬಗ್ಗೆ ದೂರುವುದಿಲ್ಲ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ 29 ವರ್ಷದ ಅಶೋಕ್ ನಾಯ್ಡುಗೆ, ಅವರ ಸೀಮಿತ ಶಿಕ್ಷಣವು ಹಣ ಸಂಪಾದಿಸಲು ಅಡ್ಡಿಯಾಗಿಲ್ಲ. ಪಾರ್ಕ್‌ನ ನಿರ್ಮಾಣದ ಘೋಷಣೆಯಾದ ಕೂಡಲೇ ಅವರು ಲಾರಿ ಮತ್ತು ಅಗೆಯುವ ಯಂತ್ರಗಳನ್ನು ಖರೀದಿಸಿದರು. ಶ್ರೀಮಂತ ನಾಯ್ಡು ಸಮುದಾಯದ ಸದಸ್ಯರಾದಅವರು ಪ್ರಸ್ತುತ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ, “ಹಸಿರು” ಅವಕಾಶವನ್ನು ನಗದೀಕರಿಸುತ್ತಿದ್ದಾರೆ.
ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹೊಸ ಹಸಿರು ಆರ್ಥಿಕತೆಯು ಅದೇ ವ್ಯವಸ್ಥಿತ ಅಸಮಾನತೆಗಳಿಂದ ಪೀಡಿತವಾಗಿದೆ ಎಂದು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದ ಚಕ್ರಬರ್ತಿ ಹೇಳುತ್ತಾರೆ. “ಇದನ್ನು ಪರಿಹರಿಸಲು ಯಾವುದೇ ಪ್ರಯತ್ನವೂ ಆಗಿಲ್ಲ.”
ಅಸಮಾನತೆಯನ್ನು ಬಲಪಡಿಸುವುದು
“ಸೌರ ಆರ್ಥಿಕತೆಯಲ್ಲಿ ಒಬ್ಬರು ಹೇಗೆ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ ಅಥವಾ ಯಾವ ರೀತಿಯ ಒಪ್ಪಂದಗಳನ್ನು ಅಂಗೀಕರಿಸಬೇಕು ಎಂದು ನಮಗೆ ತಿಳಿದಿರಲಿಲ್ಲ” ಎಂದು ವೆಂಕಟೇಶ್ ಹೇಳಿದರು. ಅವರು ಮತ್ತು ಇತರರು ತಮ್ಮ ಜಮೀನುಗಳನ್ನು ಕಡಿಮೆ ಮೌಲ್ಯಕ್ಕೆ ಮಾತುಕತೆ ನಡೆಸಿದ್ದರು ಎಂದು ಅರಿತುಕೊಳ್ಳುವಷ್ಟರಲ್ಲಿ ಕಾಲ ಮಿಂಚಿತ್ತು. ಅಷ್ಟರಲ್ಲೇ ಕೆಎಸ್‌ಪಿಡಿಸಿಎಲ್ ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು” ಎಂದು ಅವರು ಹೇಳಿದರು. 2017ರಲ್ಲಿ ಸೋಲಾರ್ ಡೆವಲಪರ್‌ಗಳಿಗೆ ಟೆಂಡರ್ ನೀಡಲಾಗಿತ್ತು. ಅದಾನಿ ಗ್ರೂಪ್, ಟಾಟಾ ಗ್ರೂಪ್ ಮತ್ತು ಫಿನ್ನಿಶ್ ಪವರ್ ಕಂಪನಿ ಫೋರ್ಟಮ್ ಒಪ್ಪಂದಗಳನ್ನು ಪಡೆದ ಡೆವಲಪರ್‌ಗಳಲ್ಲಿ ಸೇರಿತ್ತು.
2016 ರ ಆರಂಭದಲ್ಲಿ ಕೆಎಸ್‌ಪಿಡಿಸಿಎಲ್ ಅಧಿಕಾರಿಗಳು ಮತ್ತು ರೈತರ ನಡುವೆ ನಡೆದ ಕೆಲವು ಸಭೆಗಳಲ್ಲಿ ಭಾಗವಹಿಸಿದ್ದ 50 ವರ್ಷದ ಅಕಲಪ್ಪ ಅವರು ತಿರುಮಣಿಯ ರೈತ. “ ಅಂದಿನ ಸಚಿವ ಡಿ.ಕೆ.ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಮೊದಲ ಸಭೆಯಲ್ಲಿ, ರೈತರಿಗೆ ವಾರ್ಷಿಕ ಗುತ್ತಿಗೆ ಬಾಡಿಗೆ ಸಾಕಾಗುವುದಿಲ್ಲ ಎಂದು ಹೇಳಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಕೆಎಸ್‌ಪಿಡಿಸಿಎಲ್ ಅಧಿಕಾರಿಗಳು ಈ ವಾದವನ್ನು ಅಲ್ಲಗಳೆದಿದ್ದಾರೆ. “ಸೋಲಾರ್ ಪಾರ್ಕ್ ಗಾಗಿ ನೀಡಿದವರು ತಮ್ಮ ಕೃಷಿ ಭೂಮಿಯಲ್ಲಿ ಒಪ್ಪಿದ ಬಾಡಿಗೆಗಿಂತ ಹೆಚ್ಚಿನ ಲಾಭವನ್ನು ಗಳಿಸುತ್ತಿದ್ದರು ಎಂಬುದನ್ನು ಸಾಬೀತುಪಡಿಸಲು ಹೇಳಿದರು. ಆದರೆ ನಮ್ಮ ಬಳಿ ಯಾವುದೇ ಪುರಾವೆ ಇರಲಿಲ್ಲ” ಎಂದು ಅಕಲಪ್ಪ ಹೇಳಿದರು.
ವೆಂಕಟೇಶ್ ಅವರಂತಹ ಹಿಂದುಳಿದ ಜಾತಿಗಳಿಗೆ ಸೇರಿದ ಜನರಿಗೆ ಸೋಲಾರ್ ಪಾರ್ಕ್ ಫಲಿತಾಂಶಗಳು ನಕಾರಾತ್ಮಕವಾಗಿವೆ. “ಶ್ರೀಮಂತ ಭೂಮಾಲೀಕರು ಪಾರ್ಕ್‌ಗಾಗಿ ಭೂಮಿಯನ್ನು ಗುತ್ತಿಗೆಗೆ ನೀಡಿದ್ದರೆ, ಅವರಿಗೆ ಮೊದಲು ಉದ್ಯೋಗ ನೀಡಬೇಕೆಂದು ಅವರು ಒತ್ತಾಯಿಸುತ್ತಾರೆ” ಎಂದು ಅವರು ಹೇಳಿದರು.. ಅವರ ನೆರೆಹೊರೆಯಲ್ಲಿ ವಾಸಿಸುವ 150 ಕುಟುಂಬಗಳು-ಹೆಚ್ಚಾಗಿ ಪರಿಶಿಷ್ಟ ಜಾತಿ ಸಮುದಾಯವಾಗಿದ್ದು ಒಟ್ಟು 30 ಎಕರೆ ಭೂಮಿಯನ್ನು ಪಾರ್ಕ್‌ಗೆ ನೀಡಿದ್ದಾರೆ. ಸ್ಥಳೀಯ ಪ್ರಬಲ ಜಾತಿಯ ಒಂದು ಕುಟುಂಬವೇ ಸಾಮಾನ್ಯವಾಗಿ ಈ ವಿಸ್ತೀರ್ಣದ ಪ್ರದೇಶವನ್ನು ಗುತ್ತಿಗೆಗೆ ನೀಡುತ್ತದೆ.
“ನುರಿತ ಮತ್ತು ಹೆಚ್ಚಿನ ಆದಾಯದ ಉದ್ಯೋಗಗಳು, “ಹೊಸ” ಆರ್ಥಿಕತೆಯಲ್ಲಿ ಪ್ರಬಲ ಜಾತಿಗಳ ಪ್ರಾಬಲ್ಯವನ್ನು ಮುಂದುವರಿಸುತ್ತದೆ ಎಂದು ಚಕ್ರಬರ್ತಿ ಹೇಳಿದರು. ಅಂತಹ ಒಂದು ಕೆಲಸ ಗುತ್ತಿಗೆದಾರರದ್ದು. ದೊಡ್ಡ ಭೂಮಾಲೀಕ ರೈತರು ತಮ್ಮ ಜಮೀನಿನಲ್ಲಿ ಹುಲ್ಲು ತುಂಡರಿಸುವ ಮತ್ತು ಪ್ಯಾನಲ್ ಕ್ಲೀನರ್‌ಗಳಾಗಿ ಕೆಲಸ ಮಾಡುವ ಕಾರ್ಮಿಕರಿಗೆ ವ್ಯವಸ್ಥೆ ಮಾಡಲು ಕೆಎಸ್‌ಪಿಡಿಸಿಎಲ್‌ನಿಂದ ಗುತ್ತಿಗೆ ಪಡೆದಿರುವುದು ಅಸಾಮಾನ್ಯವೇನಲ್ಲ ಎಂದು ವೆಂಕಟೇಶ್ ಹೇಳುತ್ತಾರೆ.
ನಿಯಮಿತ ಸಂಬಳದ ಕೊರತೆಯು ಕಡೆಗಣಿಸಲ್ಪಟ್ಟ ಸಮುದಾಯಗಳ ಗ್ರಾಮಸ್ಥರಿಗೆ ಸಾಲದ ವಿಷ ವರ್ತುಲಕ್ಕೆ ಕಾರಣವಾಗಿದೆ. ಗುತ್ತಿಗೆ ಬಾಡಿಗೆಯು ವಾರ್ಷಿಕವಾಗಿ ಠೇವಣಿಯಾಗಲು ಅವರು ಕಾಯಬೇಕಾಗಿರುವುದರಿಂದ, ಅವರು ಸ್ಥಳೀಯ ಭೂಮಾಲೀಕರಿಂದ ಅಲ್ಪಾವಧಿಯ ಸಾಲವನ್ನು ತೆಗೆದುಕೊಳ್ಳುತ್ತಾರೆ.
ಕರಾಳ ಭವಿಷ್ಯ
ಪ್ರಬಲವಾದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೋನಪ್ಪ ಅವರಂತಹ ಜನರು ಕಡಿಮೆ ಕೌಶಲ್ಯದ ಉದ್ಯೋಗಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ಕಡೆಗಣಿಸಲ್ಪಟ್ಟ ವರ್ಗದವರಿಗೆ ಅದನ್ನು ಮಾಡಲು ಸಾಧ್ಯವಿಲ್ಲ. ಪ್ರಬಲ ಜಾತಿಯ ಸದಸ್ಯರು “ತಮ್ಮದೇ ಆದ ಉದ್ಯೋಗವನ್ನು ಹೊರತುಪಡಿಸಿ ಬೇರೆ ಉದ್ಯೋಗಗಳಲ್ಲಿ ಹೇಗೆ ಕೆಲಸ ಮಾಡುವುದನ್ನು ನಿರಾಕರಿಸುತ್ತಾರೆ ಮತ್ತು ಸ್ವಯಂಪ್ರೇರಣೆಯಿಂದ ನಿರುದ್ಯೋಗವನ್ನು ಎದುರಿಸುತ್ತಾರೆ” ಎಂಬುದನ್ನು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.
“ನಾವು ಹೊಲಗಳಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡುತ್ತಿದ್ದೆವೋ, ನಮ್ಮ ಜನರು ಈಗ ಪಾರ್ಕ್‌ಗಳಲ್ಲಿ ಹುಲ್ಲು ತುಂಡರಿಸುವವರಾಗಿ ಮತ್ತು ಪ್ಯಾನಲ್ ಕ್ಲೀನರ್ ಳಾಗಿ ಕೆಲಸ ಮಾಡುತ್ತಾರೆ” ಎಂದು ವೆಂಕಟೇಶ್ ಹೇಳಿದರು.
“ನಮ್ಮ ಮಕ್ಕಳು ನಮ್ಮ ಹೆಜ್ಜೆಗಳನ್ನು ಅನುಸರಿಸಲು ನಾವು ಬಯಸುವುದಿಲ್ಲ, ಆದರೆ ಈ ಪರಿಸ್ಥಿತಿಗಳು ಮುಂದುವರಿದರೆ, ಅವರಿಗೆ ಬೇರೆ ಆಯ್ಕೆಗಳಿರುವುದಿಲ್ಲ” ಎಂದು, ಸೌರ ಫಲಕಗಳ ವಿರುದ್ಧ ಸೂರ್ಯನು ಅಸ್ತಮಿಸುವುದನ್ನು ನೋಡುತ್ತಾ ಅವರು ಹೇಳಿದರು. “ನಾವು ಬಡತನದಲ್ಲಿ ಹುಟ್ಟಿದ್ದೇವೆ; ನಾವು ಅದರಲ್ಲೇ ಸಾಯುತ್ತೇವೆ.”
ಲೇಖಕರು: ಪ್ರಗತಿ ರವಿ, ಫ್ಲಾವಿಯಾ ಲೋಪ್ಸ್
ಅನುವಾದ: ರೂಪಾ ಡಿಪಿ
ಈ ಲೇಖನ ಪುಲಿಟ್ಜರ್ ಸೆಂಟರ್ ಸಹಾಯದಿಂದ ರೂಪುಗೊಂಡಿದೆ