ಮಂಗಳೂರಿನಲ್ಲಿರುವ ನಮ್ಮ ಮನೆಯ ಹಲಸಿನ ಗಿಡದಲ್ಲಿ ಕೆಲ ತಿಂಗಳ ಹಿಂದೆ ಸಣ್ಣ ಜೇನ್ನೊಣಗಳು ಗೂಡುಕಟ್ಟಿ ಸಂಸಾರ ಆರಂಭಿಸಿದ್ದವು. ಹಲಸಿನ ಎಲೆಗಳ ಮರೆಯಲ್ಲಿ ರಸ್ತೆಗೆ ಕಾಣಿಸುತ್ತಿರಲಿಲ್ಲವಾದರೂ ಕೆಲವರು ಇಣುಕಿ ಪತ್ತೆಹಚ್ಚಿದ್ದರು. ನನ್ನವಳಿಗೆ ಸಲಹೆಯನ್ನೂ ಕೊಟ್ಟರು.
ಅದು ಕಚ್ಚುತ್ತದೆ; ಅದನ್ನು ತೆಗೆಯಿರಿ, ಸೂಟೆಯಲ್ಲಿ ಬೆಂಕಿ ಇಟ್ಟರೆ ಹೋಗುತ್ತದೆ; ನಮಗೆ ಜೇನು ತೆಗೆಯಲು ಗೊತ್ತುಂಟು, ತೆಗೆದುಕೊಡುತ್ತೇವೆ; ಅದು ಮದ್ದಿಗೆ ಆಗುತ್ತದೆ, ಅದು ತಿಂದು ಮುಗಿಸುವ ಮೊದಲು ತೆಗೆಯಿರಿ – ಹೀಗೆ ಅನೇಕ ಬಿಟ್ಟಿ ಸಲಹೆಗಳು
ಬಂದ ಸಲಹೆಗಳನ್ನು ಅನುಸರಿಸಿ ಬಾಲ್ಯದಿಂದಲೂ ನಗರವಾಸಿಯೇ ಆಗಿದ್ದ ನನ್ನ ಮಡದಿ ಅದನ್ನು ತೆಗೆಯುವುದೊಳ್ಳೆಯದೆಂದು ನನಗೆ ಉಪದೇಶ ಮಾಡಿದಳು. ಹಲಸಿನ ಗಿಡ ಬೆಳೆಯುವಾಗಲೂ ಈ ಮಂದಿ ನನ್ನವಳಲ್ಲಿ ” ಅದರ ಬೇರು ಬೆಳೆದು ಮನೆಯೊಳಗೆಲ್ಲ ಬಂದು ಮನೆ ಅಡಿಮೇಲಾದೀತೆಂದು ಹೆದರಿಸಿದ್ದರು. ನನ್ನವಳೂ ಇದರಿಂದ ವಿಚಲಿತಳಾಗಿದ್ದಳು. ಇವರೆಲ್ಲರ ಈ ಪರಿಯ “ಕಾಳಜಿ” ಯಿಂದ ಅದನ್ನು ಉಳಿಸಿ ಈಗ ಸಣ್ಣ ಮರವಾಗುವಷ್ಟು ಬೆಳೆಸಬೇಕಾದರೆ ನನಗೆ ಕುತ್ತಿಗೆಗೆ ಬಂದಿತ್ತು.
ಕುಂಟಪದವು ಗುಡ್ಡೆಯ ಮತ್ತಡಿಯ ಮಗ ಬಾಬು ನನ್ನ ಬಾಲ್ಯದ ಗೆಳೆಯ. ಅವನೊಂದಿಗೆ ಹಳ್ಳಿಯ ಕಾಡಿನಲ್ಲಿ ಅಲೆದಾಡಿ ಬಟ್ಟಿ ಹೆಣೆಯುವ ಬಿಳಲು ಕಡಿಯುತ್ತ, ಮರವೇರಿ ಹಣ್ಣುದುರಿಸುತ್ತ, ಜೇನು ತೆಗೆಯುತ್ತ, ತಿನ್ನುತ್ತ ಬೆಳೆದವ. ಪರಿಸರದ ಸ್ವಲ್ಪ ಸಂಗತಿಗಳೆಲ್ಲ ಗೊತ್ತಿದ್ದರಿಂದ ಸುಮ್ಮನಿದ್ದೆ. ಅವು ತನ್ನ ಸಂತಾನೋತ್ಪತ್ತಿ, ಸಂಸಾರಕ್ಕಾಗಿ ಆಹಾರ ಸಂಗ್ರಹಿಸಿಡುತ್ತವೆ. ಅದರ ಮರಿಗಳಗೇ ಆಹಾರವಾಗಲಿ ಎಂಬ ಉದ್ದೇಶವೂ ಇರುತ್ತದೆ; ನಾವು ನೋಯಿಸದೆ ಅವು ಕಚ್ಚುವುದಿಲ್ಲವೆಂದೆಲ್ಲ ನನ್ನ ಮಡದಿಗೆ ವಿವರಿಸಿದ್ದೆ.
ನನಗೂ ಕುತೂಹಲವಾಗಿತ್ತು. ನಗರದಲ್ಲಿ ನನ್ನ ಮನೆಯ ಹಲಸಿನ ಗಿಡವನ್ನೇ ಸಂಸಾರ ಹೂಡಲು ಅವು ಆಯ್ದುಕೊಂಡ ಬಗ್ಗೆ ಹೆಮ್ಮೆಯೂ ಅನಿಸಿತ್ತು. ನಮ್ಮ ಸುತ್ತುಮುತ್ತಲೆಲ್ಲ ಇದ್ದ ಖಾಲಿಜಾಗಗಳಲ್ಲಿ ಅರಳುವ ಹೂಗಳಿಂದ ಮಕರಂದ ಹೀರುತ್ತ ಜೇನು ತಟ್ಟಿ ದೊಡ್ಡದಾಗುತ್ತಿತ್ತು. 15 ದಿನಗಳ ಹಿಂದೆ ನೋಡಿದೆ. ಜೇನುತಟ್ಟಿಯಲ್ಲಿ ಜೇನು ಹೊಳೆಯುತ್ತಿದೆ. ಮೊನ್ನೆ ಮಗಳು ಬಂದವಳು ಒಂದು ತುಂಡು ತೆಗೆದು ತಿನ್ನೋಣವೆಂದಳು.
ಒಂದು ತುಂಡು ತೆಗೆದರೆ ಅದಕ್ಕೆ ಅಂಥಾ ನಷ್ಟವೇನೂ ಆಗದು. ಆದರೆ ಮತ್ತೆ ಅಲ್ಲಿ ಜೇನು ತೊಟ್ಟಿಕ್ಕಿ ನೆಲಕ್ಕೆ ಬಿದ್ದು ವ್ಯರ್ಥವಾಗುವುದನ್ನು ಮಗಳಿಗೆ ವಿವರಿಸಿದಾಗ ಬೇಡವಂದಳು. ಜೇನು ಔಷಧವಾದರೂ ಅದನ್ನು ತಿಂದು ವಾಸಿಯಾಗಬೇಕಾದ ಕಾಯಿಲೆ ನಮಗೇನೂ ಇಲ್ಲ! ನಾನೆಣಿಸಿದಂತೆ ಪತ್ತನಾಜೆಯ ಎರಡು ದಿನಗಳ ಹಿಂದೆ ಜೇನ್ನೊಣಗಳು ಜೇನು ಸವಿದು ಖಾಲಿಯಾಗತೊಡಗಿದುವು. ನಿನ್ನೆ ಎಲ್ಲವೂ ಹಾರಿಹೋಗಿವೆ. ಈಗ ಜೇನುಮನೆ ಖಾಲಿ.
ಪತ್ತನಾಜೆ
ತುಳು ತಿಂಗಳು ಬೇಷದ 10 ನೆಯ ದಿನ. ಈ ದಿನದಿಂದ ಕೃಷಿಕರ ಆಚರಣೆ, ಹಬ್ಬ, ಜಾತ್ರೆಗಳೆಲ್ಲ ಮುಕ್ತಾಯವಾಗಿ ಕೃಷಿ ಚಟುವಟಿಕೆಗಳು ಆರಂಭಗೊಳ್ಳುವ ಸಮಯ.