ಹದಿನೈದು ವರ್ಷದ ಹಿಂದಿನ ಸಂದರ್ಶನ ಬರಹವಿದು. ಕೃಷಿ ಸಾಧಕ ಎಲ್. ನಾರಾಯಣರೆಡ್ಡಿ ಅವರ ಗ್ರಾಮಕ್ಕೆ ಹೋಗಿ ಮಾತನಾಡಿಸಿದ್ದೆ. ಸಾವಯವ ಕೃಷಿಕ್ಷೇತ್ರಕ್ಕೆ ಪುನಶ್ಚೇತನ ತಂದುಕೊಂಡುವಲ್ಲಿ ಅಪಾರವಾಗಿ ಶ್ರಮಿಸಿದ ಇವರು ಭೌತಿಕವಾಗಿ ನಮ್ಮನ್ನೆಲ್ಲ ಅಗಲಿದರೂ ಮಾಡಿರುವ ಅನುಪಮ ಕಾರ್ಯಗಳ ಮೂಲಕ ಅವರ ಚೇತನ ಎಂದಿಗೂ ಪ್ರಕಾಶಿಸುತ್ತದೆ.

“ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ” ಎಂಬುದನ್ನು ಚೆನ್ನಾಗಿ ಅರಿತವರು ಬೆಂಗಳೂರು ನಗರ ಜಿಲ್ಲೆ. ವರ್ತೂರು ಹೋಬಳಿ ಸೋರಹುಣಿಸೆ ಗ್ರಾಮದ ನಾರಾಯಣರೆಡ್ಡಿ.  “ಕೈ ಕೆಸರಾದರೆ ಬಾಯಿ ಮೊಸರು” ಎಂಬ ತತ್ವವನ್ನು ಪಾಲಿಸಿಕೊಂಡು ಬರುತ್ತಿರುವವರು. ಈಗ 69 ವರ್ಷ ವಯಸ್ಸಿನ ಇವರಿಗೆ ಮೆಟ್ರಿಕ್ ಪರೀಕ್ಷೆ (ಈಗಿನ ಎಸ್.ಎಸ್.ಎಲ್.ಸಿ.) ಉತ್ತೀರ್ಣವಾದ ಬಳಿಕ ಮುಂದೇನು ಮಾಡುವುದು ಎಂಬ ಪ್ರಶ್ನೆ ಎದುರಾಗಿತ್ತು. ಮುಂದೆ ಓದಬೇಕೆಂಬ ಹಂಬಲವಿದ್ದರೂ ಮನೆಯ ಪರಿಸ್ಥಿತಿ ಅದಕ್ಕೆ ಅನುಕೂಲವಾಗಿರಲಿಲ್ಲ.

ತಂದೆ ಲಕ್ಷ್ಮಯ್ಯರೆಡ್ಡಿ ಅವರಿಗೆ ಇದ್ದಿದ್ದು ಒಂದೂವರೆ ಎಕರೆ ಜಮೀನು ಮಾತ್ರ. ಅದೂ ಒಣಭೂಮಿ. ಮಳೆ ಬಂದರಷ್ಟೆ ಬೇಸಾಯ. ಇಂಥ ಪರಿಸ್ಥಿತಿಯಲ್ಲಿ ನಾರಾಯಣರೆಡ್ಡಿ ಅವರು ಉದ್ಯೋಗಕ್ಕೆ ಸೇರಬೇಕಾಯಿತು. ಲಾರಿ ಸಾರಿಗೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಸ್ವಲ್ಪ ಸಮಯದ ನಂತರ ಮನಸ್ಸು ಕೃಷಿಯತ್ತ ಸೆಳೆಯತೊಡಗಿತು. ಅಂದಿನಿಂದ ಕೃಷಿಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಎನ್ನುವುದಕ್ಕಿಂತ ಅರ್ಪಿಸಿಕೊಂಡರು ಎನ್ನುವುದು ಹೆಚ್ಚು ಸೂಕ್ತ.

ಇದ್ದ ಒಂದೂವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಆರಂಭಿಸಿದರು. ಆರಂಭದಲ್ಲಿ ರಾಗಿ ಬೆಳೆಯಲಾರಂಭಿಸಿದರು. ಇಳುವರಿ ಸಾಧಾರಣವಾಗಿಯೇ ಇತ್ತು. ಅನುಭವ ಪಾಠ ಕಲಿಸಲಾರಂಭಿಸಿತು. ರಾಗಿಕೃಷಿಯನ್ನು ಕ್ರಮಬದ್ಧವಾಗಿ ಮಾಡಿದರೆ ಅಧಿಕ ಫಸಲನ್ನು ಪಡೆಯಬಹುದು ಎಂದು ಅರ್ಥವಾಯಿತು. ಕೃಷಿಕಾರ್ಯಕ್ಕೆ ಮಳೆಯನ್ನೇ ಅವಲಂಬಿಸಿದರೆ ಆಗುವುದಿಲ್ಲವೆಂದು ಕೊಳವೆಬಾಯಿ ಕೊರೆಸಿದರು. ನೀರು ಸಮೃದ್ಧವಾಗಿಯೇ ದೊರೆಯಿತು.

OLYMPUS DIGITAL CAMERA

ಟೊಮ್ಯಾಟೋ: ಕೊಳವೆಬಾಯಿ ಹಾಕಿಸಿದ ನಂತರ ಮೊದಲಿಗೆ ಬೆಳೆದಿದ್ದು ಟೊಮ್ಯಾಟೋ. ನಂತರ ಇದರ ಜೊತೆಗೆ ಇತರ ತರಕಾರಿಗಳನ್ನು ಬೆಳೆಯತೊಡಗಿದರು. ರಾಗಿ ಬೆಳೆಯುವುದನ್ನೂ ಬಿಡಲಿಲ್ಲ. ಇಷ್ಟೆಲ್ಲ ಕೃಷಿ ಸಾಗಿದ್ದು ಅದೇ ಒಂದೂವರೆ ಎಕರೆಯಲ್ಲಿ. ಇದೇ ಸಂದರ್ಭದಲ್ಲಿ ರೆಡ್ಡಿ ಅವರು ಕೇವಲ ಒಂದೇ ಎಕರೆಯಲ್ಲಿ 18 ಕ್ವಿಂಟಾಲ್ ರಾಗಿ ಇಳುವರಿ ಪಡೆದರು. ಇದರಿಂದ ಸುತ್ತಲಿನ ಕೃಷಿಕರು ಆಶ್ವರ್ಯದಿಂದ ಇತ್ತ ನೋಡುವಂತಾಯಿತು. ಕೃಷಿ ಇಲಾಖೆ ಗಮನವೂ ಇತ್ತ ತಿರುಗಿತು.

ರಾಸಾಯನಿಕ ಕೃಷಿ ತ್ಯಜಿಸಿದರು: ರಾಸಾಯನಿಕ ಗೊಬ್ಬರ, ಕೀಟನಾಶಕಗಳ ದುಷ್ಪರಿಣಾಮವನ್ನು ಅರಿಯದಿದ್ದ ರೆಡ್ಡಿ ಅವರು ಅವುಗಳನ್ನು ನಿರಂತರವಾಗಿ ಬಳಸುತ್ತಿದ್ದರು. ಆರಂಭದಲ್ಲಿ ಇವುಗಳ ಬಳಕೆಯಿಂದ ಉತ್ತಮ ಇಳುವರಿಯೇನೂ ಬಂತು. ಆದರೆ ಕ್ರಮೇಣ ಇಳುವರಿ ಕುಸಿಯಲಾರಂಭಿಸಿತು. ಇವರ ಜಮೀನು ಫಲವತ್ತತೆ ಕಳೆದುಕೊಂಡಿತು. ತೀವ್ರ ಆರ್ಥಿಕ ಸಂಕಷ್ಟವೂ ಎದುರಾಯಿತು. ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದ ದುಸ್ಥಿತಿ ಎದುರಾಯಿತು.  ಜೀವನೋಪಾಯಕ್ಕಾಗಿ ಮತ್ತೆ ಲಾರಿ ಸಾರಿಗೆ ಕಂಪನಿ ಸೇರಿದರು. ಆದರೆ ಮಣ್ಣಿನ ಸೆಳೆತ ಬಿಡಲಿಲ್ಲ. ಮತ್ತೆ ಕೃಷಿಭೂಮಿಯತ್ತ ಹಿಂದಿರುಗಿದರು.

ಅಮರಿಕಾ ಪುಸ್ತಕ: ಇಷ್ಟರಲ್ಲಾಗಲೇ ಕೃಷಿಯಲ್ಲಿ ಕಹಿ ಅನುಭವ ಉಂಡಿದ್ದ ರೆಡ್ಡಿ ಅವರು ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆ ಇಡಲಾರಂಭಿಸಿದರು.  ಅಮೆರಿಕಾದಿಂದ ‘ಸಿಕ್ರೇಟ್ ಆಫ್ ಪ್ಲಾಂಟ್’ ‘ಸಿಕ್ರೇಟ್ ಆಫ್ ಸಾಯಿಲ್’ (ಗಿಡದ ರಹಸ್ಯ, ಮಣ್ಣಿನ ರಹಸ್ಯ) ಪುಸ್ತಕಗಳನ್ನು ತರಿಸಿದರು. ಈ ಎರಡೂ ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಇದರಲ್ಲಿನ ಮಾರ್ಗದರ್ಶನದಂತೆ ವ್ಯವಸಾಯ ಮಾಡಲಾರಂಭಿಸಿದರು. ಇದಕ್ಕೆಲ್ಲ ತಮ್ಮ ಸ್ಥಳೀಯ ಜ್ಞಾನವನ್ನೂ ಬೆರೆಸಿದರು. ಕೃಷಿಪ್ರಯೋಗಗಳಲ್ಲಿ ತೊಡಗಿಸಿಕೊಂಡರು.

ಸಹಜಕೃಷಿ: ಯಾವುದೇ ಕಾರಣಕ್ಕೂ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಬಾರದೆಂದು ನಿಶ್ಚಯಿಸಿದರು. ಬಿತ್ತನೆಬೀಜ ಹೊರತುಪಡಿಸಿ ಬೇರಾವುದೇ ಕೃಷಿ ಒಳಸುರಿಗಳನ್ನು ಹೊರಗಡೆಯಿಂದ ತರಿಸದೇ ಕೆಲಸ ಆರಂಭಿಸಿದರು. ಎರೆಗೊಬ್ಬರದ ತೊಟ್ಟಿಗಳನ್ನು ಮಾಡಿದರು. ಸುತ್ತಮುತ್ತಲಿನ ಮರಗಳಿಂದ ಉದರಿದ ಎಲೆಗಳು ಮತ್ತು ಸೆಗಣಿ ಮಿಶ್ರಣ ಮಾಡಿ; ಕಳಿಸಿ ಸಹಜ ಗೊಬ್ಬರ ಸಿದ್ಧಪಡಿಸಿದರು.ಸೆಗಣಿಯನ್ನು ಶೇಕಡ 10ರಷ್ಟು ಪ್ರಮಾಣದಲ್ಲಿ ಮಾತ್ರ ಬಳಸಿದರು. ಎಲೆ, ತೆಂಗಿನಗರಿ, ಸಗಣಿಯೊಂದಿಗೆ ಕೆರೆಮಣ್ಣು ಬೆರೆಸಿ ಭೂಮಿಗೆ ನೀಡತೊಡಗಿದರು. ಈ ರೀತಿ ಸಹಜ ಗೊಬ್ಬರ ಹಾಕತೊಡಗಿದ ಮೂರು ವರ್ಷದ ನಂತರ ಭೂಮಿ, ಫಲವತ್ತತೆ ಪಡೆಯಿತು.

ಸಾವಯವ ಕೀಟನಾಶಕ: ರೋಗಬಾಧೆಗಳಿಂದ ಬೆಳೆಗಳನ್ನು ರಕ್ಷಿಸುವ ಸಲುವಾಗಿ ಸಾವಯವ ಕೀಟನಾಶಕ ಸಿದ್ಧಪಡಿಸಿದರು. ಗೋ ಮೂತ್ರಕ್ಕೆ ಬೇವಿನರಸ, ಮರಗುಣಿಕೆ ರಸ, ಬೆಳ್ಳುಳ್ಳಿ ರಸ, ಕತ್ತಾಳೆ ಎಲೆರಸಗಳ್ನನು ಮಿಶ್ರಣದಿಂದ ತಯಾರಿಸಿದ ಕೀಟನಾಶಕ ಸಿಂಪಡಿಸತೊಗಿದರು. ಇದರಿಂದ ಬೆಳೆಗಳಿಗೆ ಬಾಧೆ ನೀಡುವ ಕೀಟಗಳ ಹಾವಳಿ ನಿಯಂತ್ರಣವಾಯಿತು. ಬೆಳೆಗಳಿಗೆ ಕೀಟಬಾಧೆ ಶುರುವಾಗುವುದಕ್ಕಿಂತ ಮುಂಚಿತವಾಗಿ ಈ ಕೀಟ ನಿಯಂತ್ರಕ ದ್ರಾವಣ ಸಿಂಪಡಿಸುತ್ತಿದ್ದರು. ಇದು ಮತ್ತಷ್ಟೂ ಉತ್ತಮ ಪರಿಣಾಮ ಬೀರಿತು.

ಉತ್ತಮ ಫಸಲು: ಸಾವಯವ ಗೊಬ್ಬರ, ದ್ರಾವಣದ ಬಳಕೆಯಿಂದ ಬೆಳೆ ಇಳುವರಿ ಸಮೃದ್ಧವಾಗಿ ಬರತೊಡಗಿತು. ಅರಿಶಿನ ಮತ್ತು ತರಕಾರಿ ಬೆಳೆಗಳಲ್ಲಿ ಅತ್ಯುತ್ತಮ ಇಳುವರಿ ದೊರಕಿತು.ಸಪೋಟಾ, ತೆಂಗಿನ ಮರಗಳು ಉತ್ತಮ ಫಲ ನೀಡಲಾರಂಭಿಸಿದವು. ಇವೆಲ್ಲದರಿಂದ ಕೃಷಿಜಗತ್ತು ಇವರತ್ತ ಅಭಿಮಾನದಿಂದ ನೋಡತೊಗಿತು.

ಹನಿ ನೀರಾವರಿ:: ತಮ್ಮ ಜಮೀನಲ್ಲಿ ಹೊಸಹೊಸ ಬೆಳೆಗಳನ್ನು ಬೆಳೆಯಲಾರಂಭಿಸಿದರು. ರೇಷ್ನೆ ಬೆಳೆದು ಅದ್ಬುತ ಯಶಸ್ಸು ಕಂಡರು. 1982ರಲ್ಲಿಯೇ ಹನಿ ನೀರಾವರಿ ಪದ್ಧತಿ ಅಳವಡಿಸಿದರು. ಇದರ ಮೂಲಕ ವಿಧವಿಧವಾದ ಬೆಳೆಗಳನ್ನು ಬೆಳೆದು ಯಶಸ್ಸು ಗಳಿಸತೊಡಗಿದರು. ಇವೆಲ್ಲದರಿಂದ ಆದಾಯವೂ ಹೆಚ್ಚತೊಡಗಿತು. ಹತ್ತು ಎಕರೆ ಜಮೀನು ಖರೀದಿಸಿದರು. ಇದರಿಂದ ಜಮೀನಿನ ವಿಸ್ತಾರ ಹನ್ನೊಂದುವರೆ ಎಕರೆಗೇರಿತು. ಇಲ್ಲಿಯ ಒಂದು ಇಂಚು ಜಾಗವನ್ನೂ ವ್ಯರ್ಥ ಮಾಡದೇ ಸಮರ್ಪಕವಾಗಿ ಬಳಸತೊಡಗಿದರು

ಜನಪ್ರಿಯತೆ: ಇಷ್ಟರಲ್ಲಾಗಲೇ ನಾರಾಯಣರೆಡ್ಡಿ ಅವರ ಕೃಷಿ ಸಾಧನೆ ಸಾಕಷ್ಟು ಮಂದಿಗೆ ಪರಿಚಯವಾಗಿತ್ತು. ಇವರನ್ನು ಕಾಣಬರುವ ಸಂದರ್ಶಕರ ಸಂಖ್ಯೆ ಹೆಚ್ಚಾಗತೊಡಗಿತು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಇವರ ಕೃಷಿಸಾಧನೆಗಳು ಪ್ರಚಾರವಾಗತೊಡಗಿತು. ಕ್ಯಾಲಿಪೋರ್ನಿಯಾ. ಡೆನ್ಮಾರ್ಕ್, ಬ್ರೆಜಿಲ್ ದೇಶಗಳ ಕೃಷಿ ವಿಶ್ವವಿದ್ಯಾಲಯಗಳವರು ರೆಡ್ಡಿ ಅವರ ಸಾಧನೆ ಅಧ್ಯಯನ ಮಾಡತೊಡಗಿದರು.

ಮತ್ತೆ ಜಮೀನು ಖರೀದಿ: ಕೃಷಿಯಶಸ್ಸಿನ ಹಾದಿಯಲ್ಲಿ ನಡೆಯತೊಡಗಿದ ನಾರಾಯಣ ರೆಡ್ಡಿ ಅವರು ದೊಡ್ಡಬಳ್ಳಾಪುರ ಸಮೀಪದ ಮರಳೇನಹಳ್ಳಿಯಲ್ಲಿಯೂ ಜಮೀನು ಖರೀದಿಸಿ ತಮ್ಮ ಕಾರ್ಯಕ್ಷೇತ್ರವನ್ನು ಅಲ್ಲಿಗೆ ಸ್ಥಳಾಂತರಿಸಿದರು. ಇದಕ್ಕೆ ಕಾರಣವೂ ಇತ್ತು. ಬಹು ರಭಸದಿಂದ ನಡೆಯುತ್ತಿದ್ದ ನಗರೀಕರಣ ಪ್ರಕ್ರಿಯೆ ಪ್ರಭಾವ ವರ್ತೂರಿನ ಮೇಲೆಯೂ ಆಗಿತ್ತು.

ತಪೋಭೂಮಿ: ಮರಳೇನಹಳ್ಳಿಯಲ್ಲಿರುವ ರೆಡ್ಡಿ ಅವರ ಜಮೀನು ಒಂದು ಕೃಷಿ ತಪೋಭೂಮಿ. ಇಲ್ಲಿ ತಮ್ಮ ಪತ್ನಿ ಸರೋಜಮ್ಮ, ಕಿರಿಯ ಮಗ ಸಾಯಿರಾಮ್ ಜೊತೆ ನೆಲೆಸಿ ನಿರಂತರ ಕೃಷಿಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಇನ್ನಿಬ್ಬರು ಗಂಡು ಮಕ್ಕಳಾದ ಮಂಜುನಾಥ್ ಮತ್ತು ನಿತ್ಯಾನಂದ ಅವರು ಸೋರಹುಣಿಸೆ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರಲ್ಲಿ ನಿತ್ಯಾನಂದ ಅವರು ಪಂಜಾಬಿನ ಜಲಂಧರ್ ಕೃಷಿ ವಿವಿಯಲ್ಲಿ ಹನಿ ನೀರಾವರಿ ಪದ್ಧತಿ ಅಧ್ಯಯನ ಮಾಡಿ ಪದವಿ ಪಡೆದಿದ್ದಾರೆ.

ಮಾರ್ಗದರ್ಶನ: ಸಹಜ ಮತ್ತು ಸಾವಯವ ಕೃಷಿಯಲ್ಲಿ ಅಪಾರ ಸಾಧನೆ ಮಾಡಿರುವ ನಾರಾಯಣರೆಡ್ಡಿ ಅವರು ಕೃಷಿಯಲ್ಲಿ ಆಸಕ್ತಿ ಇರುವ ಯುವಕರಿಗೆ ತಮ್ಮ ಅನುಭವ ಧಾರೆಯೆರುತ್ತಿದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕೃಷಿಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಾವಯವ ಕೃಷಿ ಪ್ರಾಮುಖ್ಯತೆ ತಿಳಿಸುತ್ತಿದ್ದಾರೆ.

ಲೇಖನ: ಕುಮಾರ ರೈತ,   ಚಿತ್ರಕೃಪೆ: ಮಹೇಶ್ ಭಟ್

LEAVE A REPLY

Please enter your comment!
Please enter your name here