ಬಸವರಾಜು, ಪತ್ರಕರ್ತರು

ಸಾವಿರದೊಂಬೈನೂರ ಅರವತ್ತೇಳು ಅರವತ್ತೆಂಟರಲ್ಲಿ, ನಾನು ರಾಗಿ ಬೆಳೀತಿದ್ದ ಕಾಲದಲ್ಲಿ, ಒಂದು ಕ್ವಿಂಟಾಲ್ ರಾಗಿಗೆ ಇನ್ನೂರೈವತ್ತು ರೂಪಾಯಿತ್ತು. ಅದೇ ಟೈಮಲ್ಲಿ ರೈತ್ರು ಉಪಯೋಗಿಸುವ ಪವರ್ ಟಿಲ್ಲರ್ರಿಗೆ ನಾಲ್ಕೂವರೆ ಸಾವಿರ ರೂಪಾಯಿತ್ತು. ಈಗ, ಅಂದರೆ ಸುಮಾರು ನಲವತ್ಮೂರು ವರ್ಷಗಳ ನಂತರ ರಾಗಿ ಬೆಲೆ ಕ್ವಿಂಟಾಲ್ ಗೆ ಒಂಬೈನೂರು ಚಿಲ್ಲರೆ ಆಗಿದೆ. ಅದೇ ಪವರ್ ಟಿಲ್ಲರ್ ಬೆಲೆ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಆಗಿದೆ. ರೈತ ಬೆಳೆದ ಫಸಲಿಗೆ ಅಂದು ಸಿಗುತ್ತಿದ್ದ ಬೆಲೆಗೂ, ಇಂದು ಸಿಗುತ್ತಿರುವ ಬೆಲೆಗೂ ಅಂತ ವ್ಯತ್ಯಾಸ ಕಾಣುತ್ತಿಲ್ಲ. ಆದರೆ ಕೃಷಿ ಪರಿಕರದ ಬೆಲೆ ಮಾತ್ರ ಗಗನಕ್ಕೇರಿದೆ. ಇದೇ ರೀತಿ ರೈತರ ಬೆಳೆಗ್ಯಾಕೆ ಬೆಲೆ ಏರಿಕೆಯಾಗಿಲ್ಲ. ರೈತ ಏನು ಪಾಪ ಮಾಡಿದ್ದಾನೆ. ಅವನು ಉದ್ಧಾರವಾಗುವುದಾದರೂ ಹೇಗೆ ನೀವೇ ಹೇಳಿ ಸ್ವಾಮಿ.

ಇವತ್ತಿನ ಕೃಷಿ ಇಲಾಖೆ, ಅದು ಪ್ರತಿಪಾದಿಸುತ್ತಿರುವ ಕೃಷಿ ವಿಜ್ಞಾನ ಸಂಪೂರ್ಣವಾಗಿ ಬೊಗಳೆ. ಅದು ಬರೀ ಮೋಸ. ರೈತನಿಗೆ ಕೊಡುವ ಬೀಜದ ಭತ್ತ ಎಕೆರೆಗೆ ಮೂವತ್ತು ಕೆಜಿಯಲ್ಲಿ ಕೇವಲ ಐನೂರು ಗ್ರಾಂ ಮಾತ್ರ ನಿಜವಾದ ಮೊಳಕೆಯೊಡೆಯುವ ಬೀಜವಿರುತ್ತದೆ. ಉಳಿದದ್ದೆಲ್ಲ ಜೊಳ್ಳು. ವೇಸ್ಟು. ಇದ್ನ ಯಾರ್ ಕೇಳ್ತರೆ? ಇದು ಹೋಗ್ಲಿ… ಭತ್ತದ ಸಸಿ ನಾಟಿ ಮಾಡುವ ಪದ್ಧತಿಯಿದೆಯಲ್ಲ, ಕೃಷಿ ಇಲಾಖೆ ಹೇಳುವ ಸೂತ್ರ ಇದೆಯಲ್ಲ ಸಂಪೂರ್ಣ ಅವೈಜ್ಞಾನಿಕ. ಒಂದು ಸಸಿಗೂ ಇನ್ನೊಂದು ಸಸಿಗೂ ಅಂತರ ಇರಬೇಕು, ಗಾಳಿಯಾಡಬೇಕು, ಬೆಳಕು ಬೀಳಬೇಕು, ಏಡಿ ತನ್ನ ಕೋಡು ಕಿಸ್ಕೊಂಡು ಓಡಾಡಬೇಕು. ಎಲ್ಲಿದೆ ಇದೆಲ್ಲ ಇವತ್ತು? ನಮ್ ರೈತ್ರಿಗೆ ಸಡನ್ನಾಗಿ ಸಿಕ್ಕಾಪಟ್ಟೆ ಇಳುವರಿ ಬರಬೇಕು. ಅದಕ್ಕೇನು ಮಾಡ್ತರೆ ರಾಸಾಯನಿಕ ಗೊಬ್ಬರ ತಂದು ಸುರಿತರೆ, ಭತ್ತ ಬೆಳಿತದೆ, ತೆನೆ ಕಟ್ತದೆ. ಆದರೆ ಬುಡವೇ ಭದ್ರ ಇರದಿಲ್ಲ. ಗಾಳಿ ಬೆಳಕು ಆಡಕ್ಕೆ ಅವಕಾಶವೇ ಇಲ್ಲ. ಕ್ರಿಮಿ ಕೀಟಗಳ ಆವಾಸಸ್ಥಾನ ಆಯ್ತದೆ. ಮತ್ತೆ ಕ್ರಿಮಿನಾಶಕ ಹೊಡಿ. ದುಡ್ಡು ತಂದು ಸುರಿ… ಇದನ್ನ ಹೇಳಿ ಕೊಡೋ ಕೃಷಿ ವಿಜ್ಞಾನದ ಪುಸ್ತಕಗಳನ್ನೆಲ್ಲ ಸುಟ್ಟಾಕಬೇಕು. ಅವೆಲ್ಲ ವ್ಯರ್ಥ….

ಇಂತಹ ನೇರ ನಿಷ್ಠುರ ಮಾತುಗಳನ್ನಾಡುತ್ತಿದ್ದ; ರೈತರ ಬಗ್ಗೆ, ಕೃಷಿಯ ಬಗ್ಗೆ ಕಕ್ಕುಲಾತಿ ತೋರುತ್ತಿದ್ದ ಸಾವಯವ ಕೃಷಿಕ ನಾರಾಯಣ ರೆಡ್ಡಿ(84)ಯವರು ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಅವರು ಇಲ್ಲವಾಗಿರುವುದರಿಂದ ಕೃಷಿ ಕ್ಷೇತ್ರಕ್ಕಾಗುವ ನಷ್ಟ ಅಷ್ಟಿಷ್ಟಲ್ಲ. ಅದು ಅಂಕಿ ಸಂಖ್ಯೆಗೆ ನಿಲುಕುವುದಲ್ಲ. ಬೆಲೆ ಕಟ್ಟಲೂ ಆಗುವುದಿಲ್ಲ.

ಹತ್ತು ವರ್ಷಗಳ ಹಿಂದೆ… ಎಸ್.ಎಂ. ಪೆಜತ್ತಾಯ ಎಂಬ ಸಹೃದಯರು, ತಾವು ಕಂಡ ಕೃಷಿಯನ್ನು ‘ರೈತನಾಗುವ ಹಾದಿಯಲ್ಲಿ’ ಎಂಬ ಕೃತಿಯ ಮೂಲಕ ಬರಹಕ್ಕಿಳಿಸಿದ್ದರು. ಕೃಷಿ ಕುರಿತ ಪುಸ್ತಕವಾದ್ದರಿಂದ, ಆ ಪುಸ್ತಕ ಲೋಕಾರ್ಪಣೆಗೆ ರೈತ ರೆಡ್ಡಿಯವರೇ ಸೂಕ್ತ ವ್ಯಕ್ತಿ ಎನ್ನುವ ಕಾರಣಕ್ಕೆ, ಅವರನ್ನೇ ಮುಖ್ಯ ಅತಿಥಿಗಳನ್ನಾಗಿ ಕರೆಸಲಾಗಿತ್ತು. ಅಲ್ಲಿಯವರೆಗೆ ಅವರ ಬಗ್ಗೆ ಹಲವಾರು ಕತೆಗಳನ್ನು ಕೇಳಿದ್ದ; ಅವರ ಸಾಧನೆಯ ಹಾದಿಯನ್ನು ಓದಿ ತಿಳಿದಿದ್ದ; ದೇಶ-ವಿದೇಶಗಳ ಭಾಷಣಗಳ ಮೂಲಕ ಪ್ರಪಂಚದಾದ್ಯಂತ ಪರಿಚಿತರಾಗಿದ್ದ ಅವರನ್ನು ಖುದ್ದು ಕಾಣಲು, ಅವರ ಅನುಭವಾಮೃತವನ್ನು ಸವಿಯಲು ಆ ಕಾರ್ಯಕ್ರಮಕ್ಕೆ ಹೋಗಿದ್ದೆ.

ನೂರೈವತ್ತರಿಂದ ಇನ್ನೂರು ಜನರಿದ್ದ ಆಪ್ತ ಕಾರ್ಯಕ್ರಮವದು. ಯಥಾಪ್ರಕಾರ ಬೆಂಗಳೂರೆಂಬ ರಾಜಧಾನಿಯಲ್ಲಿ, ಡಿಸೆಂಬರ್-ಜನವರಿ ತಿಂಗಳುಗಳ ಸುಗ್ಗಿ ಕಾಲ- ಲೈಬ್ರರಿಗೆ ತುಂಬುವ ಕಾಲದಲ್ಲಿ ನಡೆಯುವಂತಹ ಪುಸ್ತಕ ಬಿಡುಗಡೆ ಸಮಾರಂಭವಾದರೂ, ಪಾಪದ ಪ್ರೇಕ್ಷಕರ ಮೇಲೆ ಪಾರಿಭಾಷಕ ಶಬ್ದಸಂಪತ್ತಿನ ಬಾಣ ಬಿಡುವ ಭಯಂಕರ ಸಾಹಿತಿಗಳಾರೂ ಅಲ್ಲಿರಲಿಲ್ಲ. ಅಕ್ಷರಗಳನ್ನು ಅಡ್ಡಡ್ಡ ಸೀಳಿ ಸಂಸ್ಕೃತಿಯ ಸವಿಯುಣ್ಣಿಸುವ ಉಗ್ರ ವಿಮರ್ಶಕರೂ ಇರಲಿಲ್ಲ. ಘನ ಗಾಂಭೀರ್ಯದ ಸಂಸ್ಕೃತಿ ಚಿಂತಕರು, ಬುದ್ಧಿಜೀವಿಗಳಂತೂ ಇರಲೇ ಇಲ್ಲ.
ಬದಲಿಗೆ ಈ ನಮ್ಮ ನಾರಾಯಣ ರೆಡ್ಡಿಯವರು, ಆಗತಾನೆ ಹೊಲಗೆಲಸ ಮುಗಿಸಿ ಕೈ ಕಾಲು ಮುಖ ತೊಳೆದುಕೊಂಡು ಬಿಳಿ ಅಂಗಿ, ಬಿಳಿ ಪಂಚೆ, ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಸಿಟಿಗೆ ಬಂದಂಗಿತ್ತು.

ಎಪ್ಪತ್ತೈದು ವರ್ಷಗಳ ಇಪ್ಪತೈದು ಕೇಜಿ ತೂಗುವ, ಗಣ್ಯರ ಮುಂದೆ ಗುಬ್ಬಿ ಮರಿಯಂತೆ ಕಾಣುವ ನಾರಾಯಣ ರೆಡ್ಡಿಯವರದು ಅಂಜಿಕೆ ಅಳುಕುಗಳ- ಸಹಜ ಸಂಕೋಚಗಳ ವ್ಯಕ್ತಿತ್ವ. ಅಳುಕುತ್ತಳುಕುತ್ತಲೇ ವೇದಿಕೆ ಮೇಲೆ ಮುದುಡಿ ಕೂತಿದ್ದ ರೆಡ್ಡಿಯವರು ಅಪ್ಪಟ ಹಳ್ಳಿಗನಂತೆ, ಗಾಂಧಿ ತಾತನಂತೆ, ಭವಿಷ್ಯದ ಬೆಳಕಿನಂತೆ ಕಾಣುತ್ತಿದ್ದರು. ಕಳೆದ ನಲವತ್ತು ವರ್ಷಗಳಿಂದ ದೇಸಿ ಗೋವುಗಳನ್ನು ಮತ್ತು ಭೂಮಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಅದಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ನಾರಾಯಣ ರೆಡ್ಡಿಯವರ ಬೇಸಾಯದ ಬದುಕೇ ಬೆರಗುಟ್ಟಿಸುವಂಥದ್ದು. ಬೇಸಾಯ ಅಂದರೆ ಮನೆಮಂದಿಯೆಲ್ಲ ಸಾಯ ಎನ್ನುವ ಕಾಲದಲ್ಲಿ, ಕೃಷಿಯನ್ನು ತಪಸ್ಸಿನಂತೆ ಸ್ವೀಕರಿಸಿದ್ದ ರೆಡ್ಡಿಯವರು ದೊಡ್ಡಬಳ್ಳಾಪುರದ ಬಳಿಯ ಶ್ರೀನಿವಾಸಪುರದಲ್ಲಿ ತಮ್ಮ ನಾಲ್ಕೂವರೆಕರೆ ಭೂಮಿಯಲ್ಲಿ ಸಾವಯವ ಪದ್ಧತಿಯ ಬೇಸಾಯವನ್ನು ಅಳವಡಿಸಿಕೊಂಡು ಅದ್ಭುತವನ್ನೇ ಮಾಡಿ ತೋರಿಸಿದವರು. ತಮ್ಮ ಅಪೂರ್ವ ಸಾಧನೆಗಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿ ಖ್ಯಾತ ಕೃಷಿತಜ್ಞ, ಪ್ರಗತಿಪರ ರೈತ, ನಾಡೋಜನೆಂಬ ಗೌರವಕ್ಕೆ ಪಾತ್ರರಾದವರು.

ಇಷ್ಟೆಲ್ಲಾ ಸಾಧನೆಗೈದು ಉತ್ತುಂಗಕ್ಕೇರಿದ್ದರೂ, ದುಡಿದು ದೇಹ ದಣಿದಿದ್ದರೂ, ದುಪ್ಪಟ್ಟು ದುಡ್ಡಿದ್ದರೂ, ಈ ವಯಸ್ಸಿನಲ್ಲೂ ಅದೇ ಉತ್ಸಾಹದಿಂದ ಊರಿನ ತುಂಬಾ ಸೈಕಲ್ ನಲ್ಲಿಯೇ ಓಡಾಡುತ್ತಿದ್ದರು. ಸಮಯ ಸಿಕ್ಕಾಗ ದೇಶ ವಿದೇಶ ಸುತ್ತುತ್ತ, ತಮ್ಮ ಸಾಧನೆಯನ್ನು ಸಾರುತ್ತ, ಜಗತ್ತಿನ ರೈತರನ್ನು ಪ್ರೇರೇಪಿಸುತ್ತ ಇಡೀ ಒಕ್ಕಲು ಕುಲಕ್ಕೇ ಮಾದರಿಯಾಗಿದ್ದವರು.

ಇಂತಹವರ ಇರುವಿಕೆಯೇ ಸಮಾರಂಭಕ್ಕೊಂದು ಬೆಲೆಯನ್ನು, ಕಳೆಯನ್ನು ತಂದುಕೊಡುತ್ತದೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರೆಡ್ಡಿಯವರ ಮನಸ್ಸು ಅವತ್ತು ಇನ್ನೆಲ್ಲೋ ಹಾರಾಡುತ್ತಿತ್ತು. ಅವರ ಮನದ ಕುಲುಮೆಯಲ್ಲಿ ಮತ್ತೇನೋ ಕುದಿಯುತ್ತಿತ್ತು. ಆಳುವ ಸರ್ಕಾರಗಳ ದುರಾಡಳಿತ, ಮಿತಿ ಮೀರಿದ ಭ್ರಷ್ಟಾಚಾರ, ಅಧಿಕಾರಿಗಳ ಹದ್ದುಮೀರಿದ ವರ್ತನೆ, ಸರಿಪಡಿಸಲಾಗದಷ್ಟು ಕೆಟ್ಟ ವ್ಯವಸ್ಥೆ- ಇದೆಲ್ಲ ಅತಿಯಾದಾಗ ಜನಸಾಮಾನ್ಯರ ಅತೃಪ್ತಿಗೆ ಕಾರಣವಾಗುವುದುಂಟು. ಈ ಅತೃಪ್ತಿ, ಅಸಹನೆ, ಆಕ್ರೋಶ ನಾರಾಯಣ ರೆಡ್ಡಿಯವರ ಮಾತಿನ ಮೂಲಕ ಅಂದು ಸ್ಫೋಟಗೊಂಡಿತ್ತು.

ಶ್ರೀಸಾಮಾನ್ಯರ ನೋವು ಸಂಕಟಗಳಿಗೆ ದನಿಯಾದ ರೆಡ್ಡಿಯವರು ಇಂದಿನ ರೈತನ ಸ್ಥಿತಿಯನ್ನು, ನರಕದಂತಹ ಹಳ್ಳಿಗಳನ್ನು, ರಸಗೊಬ್ಬರದ ಅತಿಯಾದ ಬಳಕೆಯನ್ನು, ಬೆಳೆದ ಬೆಳೆಗೆ ಸಿಗದ ಬೆಲೆಯನ್ನು, ಹೊಸ ಬೀಜನೀತಿಯನ್ನು, ಆಳುವ ಸರ್ಕಾರಗಳ ಅಂದಾದುಂದಿಯನ್ನು, ಕೃಷಿ ಮರೆತ ಕೃಷಿ ವಿಶ್ವವಿದ್ಯಾಲಯಗಳನ್ನು, ಅವುಗಳಿಂದ ತಯಾರಾಗಿ ಬರುತ್ತಿರುವ ನಿಷ್ಪ್ರಯೋಜಕ ಪದವೀಧರರನ್ನು.  ಹೀಗೆ ಎಲ್ಲರನ್ನು, ಎಲ್ಲವನ್ನು ಕೊಂಚ ಕೋಪದಿಂದಲೇ ತರಾಟೆಗೆ ತೆಗೆದುಕೊಂಡಿದ್ದರು. ಅವು ಕಪಟವಿಲ್ಲದ ನೇರ, ಸರಳ, ಸ್ಪಷ್ಟ ಮಾತುಗಳು. ಅವು ಸಾತ್ವಿಕನ ಸಿಟ್ಟಿನ ಮಾತಾಗಿದ್ದವು. ಕೇಳುಗರ ಕರುಳಿಗೆ ಇಳಿಯುವಂತಿದ್ದವು. ಜಡಗೊಂಡ ಸಮಾಜಕ್ಕೆ ಚುಚ್ಚುಮದ್ದಾಗಿದ್ದವು.
“ನಮ್ಮ ದೇಶದಲ್ಲಿ ಅರವತ್ತ ದಶಕದಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯೇ ಇರಲಿಲ್ಲ. ನಮ್ಮ ತಿಪ್ಪೆ ಗೊಬ್ಬರ ಹಾಕಿ ಮಾಡ್ತಿದ್ದ ಕೃಷಿ ಚೆನ್ನಾಗೇ ಇತ್ತು. ಆವಾಗ ಆಹಾರ ಕೊರತೇನೂ ಇರಲಿಲ್ಲ. ಈ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕ ಇವೆಲ್ಲ ಬ್ರಿಟಿಷರು ನಮಗೆ ಬಿಟ್ಟು ಹೋದ ಅನಿಷ್ಟ ಬಳುವಳಿಗಳು. ಅವನ್ನು ಬಳಸಿ ಭೂಮಿಯ ಸಾರ ಕೆಡಿಸಿಕೊಂಡಿದ್ದೇವೆ. ಈ ಸಭೇಲಿ ನನ್ನ ಮಿತ್ರರಾದ ನಾರಾಯಣಗೌಡ, ಕೃಷಿ ವಿವಿ ಮಾಜಿ ಕುಲಪತಿಗಳು- ಇದ್ದಾರೆ. ಆದ್ರೂ ನಾನೇನ್ ಹೇಳ್ಬೇಕೋ ಅದನ್ನು ಹೇಳಿಬಿಡುತ್ತೇನೆ. ಈ ಕೃಷಿ ವಿಶ್ವವಿದ್ಯಾಲಯಗಳಿದಾವಲ್ಲ; ಅವು ಕೊಡೋ ಬಿ.ಎಸ್ಸಿ(ಅಗ್ರಿ) ಡಿಗ್ರಿಗಳಿದಾವಲ್ಲ… ಇವುಗಳಿಂದ ನಮ್ಮ ರೈತರಿಗೆ, ಕೃಷಿಗೆ ಏನಾದರೂ ಉಪಯೋಗವಿದೆಯೇ”

“ಈ ಡಿಗ್ರಿ ಮಾಡಿದ ಎಷ್ಟು ಜನ ರೈತರಾಗಿದ್ದಾರೆ. ಇವತ್ತು ಜೋಳದ ತೆನೆಗೂ ಗೋಧಿಯ ತೆನೆಗೂ ವ್ಯತ್ಯಾಸವೇ ಗೊತ್ತಿಲ್ಲದ ಕೃಷಿ ಪದವೀಧರರು ನಮ್ಮ ನಡುವೆ ಇದ್ದಾರೆ. ಅವರಿಗೆ ಕೃಷಿ ಅನುಭವ ಇಲ್ಲ, ಮಣ್ಣಿನ ವಾಸನೆಯೇ ಗೊತ್ತಿಲ್ಲ. ಕೃಷಿ ಪದವಿ ಪಡೆದವರಿಗೆ ಅವರ ಅಂಕಗಳ ಮೇಲೆ ನೌಕರಿ ನೀಡುವ ಬದಲು ಸರಕಾರದ ಭೂಮಿಯಲ್ಲಿ ತಲಾ ಎರಡೆರಡು ಎಕರೆ ಜಾಗ ಕೊಟ್ಟು, ಹಾರೆ, ಗುದ್ದಲಿ, ಪಿಕಾಸಿ ಕೊಟ್ಟು, ಬಿತ್ತನೆಗೆ ಬೀಜಾನು ಕೊಟ್ಟು ಉಳುಮೆ ಮಾಡಕ್ಕಚ್ಚಿ. ತಿಂಗಳಿಗೆ ಮೂರು ಸಾವಿರ ಸಂಬಳಾನು ಕೊಡಿ. ಅಲ್ಲಿ ಆತ ಬೆವರು ಸುರಿಸಿ ದುಡಿಮೆ ಮಾಡಿ ಬೆಳೆದು ತೋರಿಸುವ ಫಸಲಿನ ಆಧಾರದ ಮೇಲೆ ಆತನಿಗೆ ಪದವಿ ಕೊಡಿ. ಪುಸ್ತಕದ ಬದನೇಕಾಯಿ ಪರೀಕ್ಷೆಗಳ ಆಧಾರದಲ್ಲಿ ಡಿಗ್ರಿ ಕೊಡಬೇಡಿ. ಇವತ್ತು ಕೃಷಿ ವಿವಿಯಲ್ಲಿ ಪದವಿ ಪಡೆದಾಕ್ಷಣ ಅವರು ಕೃಷಿಕರಾಗುವುದಿಲ್ಲ. ಅವರಲ್ಲಿ ಬಹುತೇಕರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕ್ರಿಮಿನಾಶಕ ಮಾರುವ ಏಜಂಟರು. ಇದು ಇವತ್ತು ಕೃಷಿ ವಿವಿಗಳು ಮಾಡುತ್ತಿರುವ ಕೆಲಸ”

 ಇವತ್ತು ಹಳ್ಳಿಗಳು ವೃದ್ಧಾಶ್ರಮಗಳಾಗಿವೆ. ಕೈಲಾಗದಿದ್ದ ಮುದುಕ್ರು ಸಾಯಕು ಆಗದೆ, ಬದುಕೋಕು ಆಗದೆ ನರಳ್ತಾವ್ರೆ. ಯುವಕರ್ಯಾರು ಹಳ್ಳೀಲಿಲ್ಲ. ಅವರಿಗೆ ತಮ್ಮ ಜಮೀನಿನಲ್ಲಿ ಉತ್ಪತ್ತಿ ಮಾಡುವ ವಿಧಾನ ಗೊತ್ತಿಲ್ಲ. ಹೇಳಿಕೊಡೋರು ಇಲ್ಲ. ಅವರಿಗೆ ಸಿಟಿ ಆಕರ್ಷಕವಾಗಿ ಕಾಣ್ತಿದೆ. ಕಷ್ಟಪಡದೆ ಕಾಸು ದುಡಿಯೋ ಮಾರ್ಗ ಬೇಕಾಗಿದೆ. ಅದಕ್ಕೆ ಸರಿಯಾಗಿ ನಮ್ಮ ರಾಜಕಾರಣಿಗಳು… ಒಬ್ಬ ಐನೂರು ಕೊಟ್ರೆ, ಇನ್ನೊಬ್ಬ ಸಾವ್ರ ಕೊಡ್ತನೆ, ಇನ್ನೊಬ್ಬ ಒಂದೂವರ್ಸಾವ್ರ- ಎಲ್ರೂ ಕೈಯಲ್ಲೂ ನೋಟುಗಳೆ. ಹಿಂಗಿದ್ದಾಗ ಕಷ್ಟಪಟ್ಟು ಕೆಲಸ ಮಾಡು ಅಂದ್ರೆ ಕೇಳ್ತರ. ಇದೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತೆ.?

“ನಾನೀಗ್ಲು ಮಂಕ್ರಿ ಹೊರ್ತಿನಿ. ಕಷ್ಟಪಟ್ಟು ದುಡಿತೀನಿ. ಭೂಮಿತಾಯಿ ನನ್ನ ಕೈ ಬಿಟ್ಟಿಲ್ಲ. ನನಗೆ ಮೂರು ಮಕ್ಳು. ಆ ಮೂವರಲ್ಲೊಬ್ಬ ಎರಡು ಮುದ್ದೆ ತಿಂದು, ಅದರ ಮೇಲೆ ಇಷ್ಟನ್ನ ತಿಂತನೆ. ಚೆನ್ನಾಗಿ ದುಡಿತನೆ. ಅವ್ನು ಓದ್ಲಿಲ್ಲ, ಓದಿ, ಅದೆಂಥದೋ ಅಡ್ಕಸ್ಬಿ ಎಂಎಸ್, ಎಂಬಿಎ ಅಂತೈತಲ್ಲ ಆ ಡಿಗ್ರಿ ಪಗ್ರಿ ಪಡ್ದು ಊರ್ಬುಟ್ಟು ಹೋಗ್ಲಿಲ್ಲ. ಅವನ್ನ ನೋಡುದ್ರೆ ನನಗೆ ಖುಷಿಯಾಯ್ತದೆ… ಆ ಡಿಗ್ರಿಗಳನ್ನ ಕಂಡ್ರೆ ನಂಗಾಗಲ್ಲ. ವಂಚಕರನ್ನು ಸೃಷ್ಟಿಸೋ ಡಿಗ್ರಿ ಅವು”

ದೇಶದ ಪ್ರತಿಯೊಬ್ಬರೂ ದೇಶಕ್ಕಾಗಿ ನಾವೇನು ಮಾಡಿದ್ದೀವಿ ಅಂತ ಯೋಚಿಸ್ಬೇಕು. ಕೇವಲ ಜನಸಂಖ್ಯೆ ಹೆಚ್ಚಿಸಿದರೆ ಸಾಲದು, ಉಪಯುಕ್ತ ನಾಗರಿಕರನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು. ನಮ್ಮ ದೇಶದ ಕಾಲುಭಾಗದ ಜನ ನಾಗರಿಕರಾಗಿದ್ದರೆ ನಮ್ಮ ದೇಶ ಇಂದು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ನಮ್ಮ ಯುವಕರ ಶ್ರಮ ಬಸ್ ಗಳಿಗೆ ಕಲ್ಲು ಹೊಡೆಯುವುದರಲ್ಲಿ, ಟೈರ್ ಗಳಿಗೆ ಬೆಂಕಿ ಹಚ್ಚುವುದರಲ್ಲಿ ವ್ಯಯವಾಗುತ್ತಿರಲಿಲ್ಲ.


“ನನ್ಗೆ ಓದೋ ಅಭ್ಯಾಸವಿಲ್ಲ. ಇದು ನನ್ನ ದುರಾದೃಷ್ಟ, ಇಲ್ಲ ಅದೃಷ್ಟವೆ ಅಂತನ್ನಿ. ಯಾಕಂದ್ರೆ ನನ್ಗೆ ಓದಕ್ಕೆ ಟೈಮೇ ಇಲ್ಲ, ಆ ಬಗ್ಗೆ ವಿಷಾದವೂ ಇಲ್ಲ. ಪೆಜತ್ತಾಯರ ಪುಸ್ತಕದ ಕೆಲವು ಲೇಖನಗಳನ್ನು ಓದಿದೀನಿ. ಸರಳವಾಗಿ ಬರೆದಿದಾರೆ. ಯಾವುದೇ ಉತ್ಪ್ರೇಕ್ಷೆ ಇಲ್ಲ. ಅವರ ಅನುಭವಗಳು ನನ್ನವೂ ಕೂಡ. ಅವರು ಸಗಣಿ ಹೊತ್ತೆ, ಸಗಣಿ ನೀರು ಕಣ್ಣಿಗೆ ಇಳೀತಿತ್ತು ಅಂತೆಲ್ಲ ಬರ್ದಿದಾರೆ. ನಾನು ಸಗಣಿ ಇರ್ಲಿ, ಮನುಷ್ಯರ ಸಗಣೀನ ತಲೆ ಮೇಲೆ ಹೊತ್ತಾಕ್ತಿದ್ರೆ, ಅದರ ನೀರು ಬಾಯಿಗಿಳೀತಿತ್ತು. ಅದ್ನೇಳಕ್ಕೆ ನನ್ಗೆ ಅಸಹ್ಯ ಅನಸಲ್ಲ. ಭೂಮ್ತಾಯಿಗೋಸ್ಕರ ಮಾಡಿದ್ದದು. ಆ ತಾಯಿ ನನ್ನ ಕೈ ಹಿಡಿದವ್ಳೆ. ಈಗಲೂ ದಿನದ ಹದಿನಾರು ಗಂಟೆ ದುಡಿಮೆ ಮಾಡ್ತಿನಿ. ಯಾವುದೇ ಕ್ಷೇತ್ರವಿರಲಿ, ಶ್ರಮಪಟ್ಟು ದುಡಿದರೆ ಫಲ ಸಿಕ್ಕೆ ಸಿಗ್ತದೆ, ಅದಕ್ಕೆ ಕೃಷಿ ಕ್ಷೇತ್ರವೂ ಹೊರತಲ್ಲ. ನಾನು ಸಾವಯವ ಗೊಬ್ಬರ ಬಳಸಿ ಒಂದು ಎಕರೆಗೆ ಇಪ್ಪತ್ತೆಂಟು ಕ್ವಿಂಟಾಲ್ ರಾಗಿ ಬೆಳೆದೆ. ಅದು ನನ್ನ ಶ್ರಮದ ಫಲ. ಅದು ಎಲ್ಲರಿಗೂ ಯಾಕೆ ಸಾಧ್ಯವಿಲ್ಲ”
ನಾರಾಯಣ ರೆಡ್ಡಿಯವರು ಹೀಗೆ ಮಾತನಾಡುತ್ತಿದ್ದಾಗ… ನಾನೂ ಸಗಣಿ ಬಾಚಿ, ದನಕರ ಕಟ್ಟಿ, ನೇಗಿಲಿಡಿದು ಹೊಲ ಉತ್ತಿದ್ದರಿಂದ; ರಾಗಿ ಬೆಳೆವ ಕಷ್ಟಸುಖವನ್ನು ಕಂಡುಂಡ ಕಾರಣದಿಂದ; ರೆಡ್ಡಿಯವರು ಥೇಟ್ ನಮ್ಮಪ್ಪನ ಥರವೇ ಕಾಣುತ್ತಿದ್ದರಿಂದ ಅವತ್ತಿನ ಅವರ ಮಾತುಗಳಿಂದ, ಅವರ ಬಗೆಗಿನ ಪ್ರೀತಿ, ಗೌರವ ಇನ್ನಷ್ಟು ಹೆಚ್ಚಾಗಿತ್ತು. ಜೊತೆಗೆ ರೈತನ ಮಗನಾಗಿ ಹುಟ್ಟಿ ಕೃಷಿ ಕಡೆಗಣಿಸಿ, ಬದುಕನರಸಿ ನಗರವಾಸಿಯಾದ ಬಗ್ಗೆ ಪಾಪಪ್ರಜ್ಞೆ ಕಾಡತೊಡಗಿತ್ತು. ಅದರಿಂದ ಹೊರಬರುವ ಮಾರ್ಗವಾಗಿ- ಅವರೊಂದಿಗೆ ಇಡೀ ದಿನ ಕಾಲ ಕಳೆದು, ಅವರ ಕೃಷಿ ತಪಸ್ಸನ್ನು ಕಣ್ಣಾರೆ ಕಾಣಬೇಕೆಂಬ ಆಸೆ ಇತ್ತು. ಅದನ್ನು ಬರಹಕ್ಕಿಳಿಸಿ ನನ್ನ ಪಾಪಪ್ರಜ್ಞೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸಿತ್ತು. ಆದರೆ ರೆಡ್ಡಿಯವರು ‘ನಾನು ಮಾಡುವ ಕೆಲಸ ಮಾಡಿಯಾಗಿದೆ, ಇನ್ನು ನಿಮ್ಮದು…’ ಎಂದು ಹೇಳಿ ಹೊರಟುಹೋಗಿಯೇಬಿಟ್ಟರು.

ಚಿತ್ರಕೃಪೆ: ಮಹೇಶ್ ಭಟ್

3 COMMENTS

  1. I am very big fan of Narayana reddy sir, becoz of him I started natural farming in my garden near shimoga its very satisfying me
    Thanku Narayana reddy sir
    I am very unlucky that I didn’t met him in my life I literally very sad of his death….

LEAVE A REPLY

Please enter your comment!
Please enter your name here