ಬೆಂಗಳೂರು: ಸೆಪ್ಟೆಂಬರ್ 02 (ಅಗ್ರಿಕಲ್ಚರ್ ಇಂಡಿಯಾ) ಕರ್ನಾಟಕ ರಾಜ್ಯ ಪಶು ಸಂಗೋಪನಾ ಇಲಾಖೆ ಜಾನುವಾರು ರಕ್ಷಣೆ, ಹೈನುಗಾರಿಕೆ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಫಲಾನುಭವಿಗಳಿಗೆ ತಲುಪಿಲು ಖ್ಯಾತ ನಟ ಕಿಚ್ಚ ಸುದೀಪ್ ರಾಯಭಾರಿಯಾಗಿ ನೇಮಕ ಗೊಂಡಿದ್ದಾರೆ.
ಈ ಸಂಬಂಧ ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಬಿ. ಚವ್ಹಾಣ್ ಅವರು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿದ್ದಾರೆ. ಅದರ ಪೂರ್ಣಪಠ್ಯ ಮುಂದಿದೆ. ಪಶು ಸಂಗೋಪನಾ ಇಲಾಖೆಯ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚುರಪಡಿಸಿ, ಹೈನುಗಾರಿಕೆಗೆ ಉತ್ತೇಜನ ನೀಡಿ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈ ಜೋಡಿಸಿ ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು, ತಮ್ಮ ಜನ್ಮದಿನದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ ಗೋ ಮಾತಾ ಸಂರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಇಚ್ಚಿಸುತ್ತೇನೆ.