ಲೇಖಕರು: ಪ್ರಶಾಂತ್ ಜಯರಾಮ್

ಭಾರತದ ವಿವಿಧ ರಾಜ್ಯಗಳ ಸರಾಸರಿ ಕೃಷಿ ಭೂಮಿಯ ಹಿಡುವಳಿ ಮತ್ತು ಕೃಷಿ ಕುಟುಂಬದ ಆದಾಯದ ಮಾಹಿತಿಯ ಪ್ರಕಾರ ಶೇ 76% ಕ್ಕೂ ಹೆಚ್ಚು ಕೃಷಿಕರು 2.5 ಎಕರೆ ಜಮೀನಿಗಿಂತ ಕಡಿಮೆ ಜಮೀನು ಹೊಂದಿದವರಾಗಿರುತ್ತಾರೆ.ಕೃಷಿ ಕುಟುಂಬದ ಆದಾಯದಲ್ಲಿ ಶೇ 35% ಬೆಳೆ ಬೆಳೆಯುವುದರ ಮೂಲಕ, ಶೇ15% ಪ್ರಾಣಿ ಸಾಕಣೆ ಮೂಲಕ(ಹಸು/ಎಮ್ಮೆ/ಕುರಿ/ಕೋಳಿ /ಹಂದಿ), ಶೇ 40% ಕೂಲಿ/ಸಂಬಳಗಳ ಮೂಲಕ ಹಾಗು ಶೇ 5-10% ಇನ್ನಿತರೆ ಚಟುವಟಿಕೆ ಮೂಲಕ(ಕುಲ ಕಸಬು, ವ್ಯಪಾರ, ಪಿಂಚಣಿ, ಬಡ್ಡಿ ಇತ್ಯಾದಿ ) ಪಡೆಯಲಾಗುತ್ತಿದೆ. ಈ ಪ್ರಕಾರ ಕೃಷಿ ಕುಟುಂಬದ ಆದಾಯದಲ್ಲಿ ಶೇ 50% ಬೆಳೆ ಬೆಳೆಯುವುದು ಮತ್ತು ಪಶುಪಾಲನೆ ಮೂಲಕ ಪಡೆಯಲಾಗುತ್ತಿದ್ದು,ಉಳಿದ ಶೇ 50% ಆದಾಯವನ್ನು ಕೂಲಿ/ಸಂಬಳ ಮತ್ತು ಇನ್ನಿತರೇ ಕೃಷಿಯೇತರ ಚಟುವಟಿಕೆಯಿಂದ ಪಡೆಯಲಾಗುತ್ತಿದೆ.

ಒಟ್ಟಾರೆ ಈ ಮಾಹಿತಿಯ ಅನುಸಾರ ಕೃಷಿ ಮತ್ತು ಪಶುಪಾಲನೆ ಮೂಲಕ ಶೇ 50% ಆದಾಯ ಪಡೆಯಲು ಶಕ್ತವಾಗಿದ್ದರೂ, ಉಳಿಕೆ ಶೇ 50% ಆದಾಯಕ್ಕೆ ಬೇರೆ ಮೂಲ ಅವಲಂಭಿಸಬೇಕಿದೆ.ಕೃಷಿಯನ್ನು ಪೂರ್ಣಕಾಲಿಕ ವೃತ್ತಿಯಾಗಿ ಮತ್ತು ಅದರಲ್ಲಿ ಕುಟುಂಬ ನಿರ್ವಹಣೆಗೆ ಬೇಕಿರುವ ಪೂರ್ಣ ಪ್ರಮಾಣದ ಆದಾಯವನ್ನು ಪಡೆಯುವ ಖಾತ್ರಿಯಿಲ್ಲದೆ ಇರುವುದರಿಂದ ಕೃಷಿ ಜೊತೆಗೆ ಕೃಷಿ ಸಂಬಂಧಿತ ಚಟುವಟಿಕೆ ಅಥವಾ ಕೃಷಿಯೇತರ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಬಗ್ಗೆ ಮನಗಾಣಬೇಕಿದೆ.

ನಮ್ಮ ದೇಶದಲ್ಲಿ ಬೆಳೆ ಬೆಳೆಯುತ್ತಿರುವ ಭೂಮಿಯ ವಿಸ್ತೀರ್ಣ 159 million Hectare (MH), ಇದರಲ್ಲಿ ಕಾಲುವೆ ಮೂಲಕ ನೀರಾವರಿ ಇರುವ ಪ್ರದೇಶ 22 MH ಮತ್ತು ಅಂತರ್ಜಲದ ಮೂಲಕ ನೀರಾವರಿ ಮಾಡಿಕೊಂಡಿರುವ(ಬೋರ್ವೆಲ್, ಬಾವಿ) ಪ್ರದೇಶ 39 MH. ಒಟ್ಟು ನೀರಾವರಿ ಪ್ರದೇಶ ಸುಮಾರು 61 MH, ಉಳಿದ ಸುಮಾರು 100 MH ಒಣ ಬೇಸಾಯ/ಮಳೆಯಾಶ್ರಿತ ಪ್ರದೇಶವಾಗಿರುತ್ತದೆ. ಅಂದರೆ ಒಟ್ಟು ಬೆಳೆ ಬೆಳೆಯುವ ಭೂಮಿಯಲ್ಲಿ 2/3 ಒಣಬೇಸಾಯ,1/3 ನೀರಾವರಿ ಬೇಸಾಯಕ್ಕೆ ಒಳಪಟ್ಟಿರುತ್ತದೆ.

ನಮ್ಮ ದೇಶದಲ್ಲಿ 159 MH ಪ್ರದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಉತ್ಪನ್ನಗಳ ಪ್ರಮಾಣ ಮತ್ತು ಅಂದಾಜು ಮೌಲ್ಯ ರೂ ಲಕ್ಷ ಕೋಟಿಗಳಲ್ಲಿ:

1)ಆಹಾರ ಧಾನ್ಯಗಳು(Food Grains)ಭತ್ತ, ಗೋಧಿ, ಜೋಳ,ರಾಗಿ, ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಇತರೆ: 300 ಮಿಲಿಯನ್ ಟನ್(MT):

#05 ಲಕ್ಷ ಕೋಟಿ ರೂ

2)ಎಣ್ಣೆ ಕಾಳುಗಳು(Oil Seeds):36 MT:

1.30 ಲಕ್ಷ ಕೋಟಿ ರೂ

3)ಕಬ್ಬು :400 MT:

1.0 ಲಕ್ಷ ಕೋಟಿ ರೂ

4)ತರಕಾರಿಗಳು :200 MT 5)ಹಣ್ಣುಗಳು :100 MT
ತರಕಾರಿ +ಹಣ್ಣು :

4.50 ಲಕ್ಷ ಕೋಟಿ ರೂ

6)ಹಾಲು :200 MT:

05 ಲಕ್ಷ ಕೋಟಿ ರೂ

7)ಸಾಂಬಾರ್ ಪದಾರ್ಥ:10 MT:

0.75 ಲಕ್ಷ ಕೋಟಿ ರೂ

8)ಹತ್ತಿ :35 MT:

0.75 ಲಕ್ಷ ಕೋಟಿ ರೂ

9)ಮಾಂಸ +ಮೀನು

03 ಲಕ್ಷ ಕೋಟಿ ರೂ

ಹೀಗೆ ಒಟ್ಟು ಸುಮಾರು 1500 MT ಉತ್ಪಾದನೆ ಮಾಡಲಾಗುತ್ತಿದೆ, ಇದರ ಮಾರುಕಟ್ಟೆ ಮೌಲ್ಯ ಅಂದಾಜು ಸುಮಾರು 25 ಲಕ್ಷ ಕೋಟಿ ರೂಪಾಯಿಗಳು. ವೈಜ್ಞಾನಿಕ/ನ್ಯಾಯಯುತ್ತ ಬೆಲೆ ಪ್ರಕಾರ ಇದರ ಮೌಲ್ಯ 35 ಲಕ್ಷ ಕೋಟಿ ರೂಪಾಯಿಗಳಾಗಿರಬೇಕಿತ್ತು, ರೈತರಿಗೆ ಪ್ರತಿ ವರ್ಷ ಕನಿಷ್ಠ 10 ಲಕ್ಷ ಕೋಟಿ ರೂಪಾಯಿಗಳು ವಂಚನೆಯಾಗುತ್ತಿದೆ.

25 ಲಕ್ಷ ಕೋಟಿ ರೂಗಳಲ್ಲಿ ಹಾಲಿನ ಪಾಲು 1/5 ರಷ್ಟು, ಈಗಾಗಲೇ ಹಾಲಿನ ಉತ್ಪಾದನೆ ಜಾಸ್ತಿಯಾಗಿದ್ದು ಮತ್ತಷ್ಟು ಹೆಚ್ಚಳ ಸಾಧ್ಯವಿಲ್ಲ.ಹಣ್ಣು ಮತ್ತು ತರಕಾರಿ ಬೆಳೆ ಬೋರ್ವೆಲ್ ಅಶ್ರಿತವಾಗಿದ್ದು ಶೇ 20% ಹೆಚ್ಚು ಕೃಷಿ ಭೂಮಿ ಬೋರ್ವೆಲ್ ಹೊಂದಿಲ್ಲ ಹಾಗು ಈಗ ಬೆಳೆಯುತ್ತಿರುವ 300 MT ಹಣ್ಣು ಮತ್ತು ತರಕಾರಿಗಳು ಸೂಕ್ತವಾದ ಸಾಗಾಟ ಮತ್ತು ಶೇಖರಣೆ ವ್ಯವಸ್ಥೆ ಇಲ್ಲದೇ ಶೇ 25-30% ನಾಶವಾಗುತ್ತಿದೆ.

ನೀರಾವರಿ ಹೊಂದಿರುವ ರೈತರಿಗೆ ಬೇರೆ ಬೆಳೆಗಿಂತ ಕಬ್ಬಿಗೆ ಸೂಕ್ತ ಮಾರುಕಟ್ಟೆ (ಕಾರ್ಖಾನೆ ) ಮತ್ತು ನಿಶ್ಚಿತ ದರವಿರುವುದರಿಂದ ಕಬ್ಬಿನ ಬೇಸಾಯ ಲಾಭದಾಯಕವಾಗಿ ಕಾಣುತ್ತಿದೆ, ಆಹಾರಕ್ಕಿಂತ ಹೆಚ್ಚಾಗಿ ಕಬ್ಬು ಅಲ್ಕೋಹಾಲ್ ತಯಾರಿಗೆ ಹೋಗುತ್ತಿದೆ, ಅಪಾರ ಪ್ರಮಾಣದ ಸಕ್ಕರೆ ಗೋದಾಮುಗಳಲ್ಲಿ ಕೊಳೆಯುತ್ತಿದೆ. ಈ ಸ್ಥಿತಿ ಇರುವಾಗ ಕಬ್ಬು ಬೆಳೆಗಾರರ ಮುಂದಿನ ಪರಿಸ್ಥಿತಿ?
ಇನ್ನೂ ಶೇ 70% ರಷ್ಟು ಕೃಷಿ ಹಿಡುವಳಿಯಲ್ಲಿ ಬೆಳೆಯುತ್ತಿರುವ ಆಹಾರ ಧಾನ್ಯಗಳು,ಬೇಳೆಕಾಳು, ಎಣ್ಣೆಕಾಳು ಬೆಳೆಗಳಿಂದ ರೈತರಿಗೆ ಹೆಚ್ಚಿನ ಆದಾಯ ತಂದುಕೊಡುತ್ತಿಲ್ಲ.

ಕೃಷಿ ಹಿಂದಿನಿಂದಲೂ ಜೀವನಾಧಾರಿತ ವೃತ್ತಿಯಾಗಿತ್ತು,ಕುಟುಂಬಕ್ಕೆ ಬೇಕಾಗುವ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಿತ್ತು,ಹಣದ ಬದಲಾಗಿ ಕೂಲಿ ಇನ್ನಿತರೇ ಕೆಲಸಗಳಿಗೆ ಆಹಾರ ಧಾನ್ಯ ಕೊಡಲಾಗುತ್ತಿತ್ತು.ಹೆಚ್ಚಿನ ಹಣಕಾಸಿನ ವಹಿವಾಟು ಇರುತ್ತಿರಲಿಲ್ಲ ಹಾಗು ಕೃಷಿ ಹಣ ಕೊಡುವ ವೃತ್ತಿಯಾಗಿರಲಿಲ್ಲ,ಜೀವನ ಸಾಗಿಸುವ ವೃತ್ತಿಯಾಗಿತ್ತು.ಬದಲಾದ ಕಾಲಮಾನದಲ್ಲಿ ಜಾಗತಿಕರಣದ ಪ್ರಭಾವದಲ್ಲಿ ಹಣದ ವಹಿವಾಟು ಹೆಚ್ಚಾಯಿತ್ತು,ಖಾಸಗಿಕರಣಕ್ಕೆ ತೆರೆದುಕೊಂಡ ನಂತರ ಶಿಕ್ಷಣ, ಆರೋಗ್ಯ ಹೀಗೆ ಬಹುಪಾಲು ಕ್ಷೇತ್ರ ಖಾಸಗಿಕರಣಗೊಂಡು ಉದ್ಯೋಗವಕಾಶಗಳು ಬಂದವು,ಮಾರುಕಟ್ಟೆ ಆಧಾರಿತ ಜೀವನದಲ್ಲಿ ಹಣ ಪ್ರಮುಖ ಸ್ಥಾನ ಪಡೆದುಕೊಂಡು ಎಲ್ಲವನ್ನೂ ಹಣದ ರೂಪದಲ್ಲಿ ಲೆಕ್ಕಾಚಾರ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು.ಇವುಗಳ ಮುಂದೆ ಕೃಷಿ ಲಾಭದಾಯಕವಾಗಿ ಪರಿವರ್ತನೆಯಾಗದೆ ಇರುವುದರಿಂದ ಕೃಷಿ ಲಾಭದಾಯಕ ವೃತ್ತಿಯಾಗಿ ಬದಲಾಗಲಿಲ್ಲ.

ಕೃಷಿ ಲಾಭದಾಯಕವಾಗಿದ್ರೆ ಅಮೇರಿಕ,ಯುರೋಪ್, ಜಪಾನ್,ಕೆನಾಡ ಇವು ತಮ್ಮ ದೇಶದ ರೈತರಿಗೆ ಅಷ್ಟೊಂದು ಸಬ್ಸಿಡಿ ಕೊಟ್ಟು ಏಕೆ ಕೃಷಿ ಮಾಡಿಸುತ್ತಿವೆ?
ಕೃಷಿ ಮೂಲದ ಆದಾಯದಿಂದ ಕೃಷಿ ಕುಟುಂಬದ ಸಂಪೂರ್ಣ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬ ಸ್ಪಷ್ಟತೆಯಿದೆ. ಕೃಷಿ ಮೂಲದ ಆದಾಯದಲ್ಲಿ ಬದುಕು ಕಟ್ಟಿಕೊಂಡಿರುವ ಹಲವು ಮಂದಿಗಳು ಇದ್ದರೂ ಅದು ಒಟ್ಟಾರೆ ಅಂಕಿಅಂಶಕ್ಕೆ ಹೋಲಿಕೆ ಮಾಡಿದಾಗ ಅದು ಶೇ 0.1% ಮೀರಿಲ್ಲ.ದೇಶದ ಆಹಾರ ಭದ್ರತೆಗೆ ಕೃಷಿ ಮಾಡುವುದರ ಜೊತೆಗೆ ಕುಟುಂಬದ ಆರ್ಥಿಕ ಭದ್ರತೆಗೆ ಕೃಷಿಯೇತರ ಆದಾಯದ ಮಹತ್ವ ಬಹಳವಿದೆ.

ಈ ನಿಟ್ಟಿನಲ್ಲಿ ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಅಥವಾ ಕೃಷಿಯೇತರ ಚಟುವಟಿಕೆಗಳ ಮೂಲಕ ಆದಾಯ ಕೊಡುವ ವೃತ್ತಿ ಕೌಶಲ್ಯ ಕಲಿಸುವುದು/ಯೋಜನೆಗಳನ್ನು ರೂಪಿಸುವುದರಿಂದ ಮಾತ್ರ ಕೃಷಿ ಕ್ಷೇತ್ರದ ಬೆಳವಣಿಗೆ ಸಾಧ್ಯ, ಕೃಷಿಯನ್ನು ಸಹಾಯಕ ಆದಾಯದ (Subsidiary Income) ದೃಷ್ಟಿಯಲ್ಲಿ ನೋಡುವುದು ಮತ್ತು ಮುಂದುವರೆಸುವುದು ಅನಿವಾರ್ಯವಾಗಲಿದೆ.

LEAVE A REPLY

Please enter your comment!
Please enter your name here