ಲೇಖಕರು: ಸಚಿನ್ ಎಲ್.ಎಸ್.

ಸೌರ ತಂತ್ರಜ್ಞಾನ ಕೃಷಿಗೆ ಪೂರಕವಾಗಿರುವುದನ್ನು ನಾವು ಹಲವೆಡೆ ಕಂಡೆದ್ದೇವೆ. ಸೌರಚಾಲಿತ ಹಾಲು ಕರೆಯುವ ಯಂತ್ರದಂತಹ ತಂತ್ರಜ್ಞಾನವು ಹೈನುಗಾರಿಕೆಯಲ್ಲೂ ಸಹಕಾರಿಯಾಗಿವೆ. ಮಂಜುನಾಥ್ ದೇಗಾವಿ ಇದರ ಜೊತೆ ಮೌಲ್ಯವರ್ಧನೆಗೂ ಮುಂದಾಗಿದ್ದಾರೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಿಂದ ಸುಮಾರು 20 ಕಿಮೀ. ದೂರದ ಬೆಳವಾಡಿ ಗ್ರಾಮದಲ್ಲಿರುವ ಮಂಜುನಾಥ್ ದೇಗಾವಿಯವರು ಖೋವಾ ತಯಾರಿಸುವಲ್ಲಿ ನಿಷ್ಣಾತರು. ಅವರು ಖೋವಾ ತಯಾರಿಸುವ ಹಿಂದೆ ಒಂದು ಕಥೆಯಿದೆ. 10 ಎಕರೆ ಭೂಮಿ ಹೊಂದಿದ್ದು ಪ್ರಸ್ತುತ 24 ಹಸುಗಳನ್ನು ಸಾಕಣೆ ಮಾಡುತ್ತಿರುವ ಅವರು ಈ ಹಿಂದೆ ಹತ್ತಿಯನ್ನು ಪ್ರಧಾನವಾಗಿ ಬೆಳೆಯುತ್ತಿದ್ದರು.

ಪರಿಸರ ಬದಲಾವಣೆ, ನೀರಿನ ಕೊರತೆ, ಅಕಾಲಿಕ ಮಳೆಯಿಂದಾಗಿ ಕೃಷಿಯ ಉತ್ಪನ್ನ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಆಗ ಅವರು ಹೈನುಗಾರಿಕೆಯನ್ನು ಪ್ರಧಾನವಾಗಿಸಿಕೊಂಡು, ತಮ್ಮ ಹಸುಗಳಿಗೆ ಬೇಕಾದ ಆಹಾರವನ್ನು ಬೆಳೆಯುತ್ತ, ಜೊತೆಜೊತೆಗೆ ಮೆಕ್ಕೆ ಜೋಳವನ್ನೂ ಬೆಳೆಯಲು ತೊಡಗಿದರು.

ಸುಮಾರು ಎರಡು ವರ್ಷದ ಹಿಂದೆ ಕೆಲಸಗಾರರ ಕೊರತೆಯಿಂದಾಗಿ ಹೈನುಗಾರಿಕೆ ಕಷ್ಟವಾದಾಗ, ಅವರಿಗೆ ಸೆಲ್ಕೋದ ಸೌರಚಾಲಿತ ಹಾಲು ಕರೆಯುವ ಯಂತ್ರ ನೆರವಿಗೆ ಬಂದಿತ್ತು. ದಿನಕ್ಕೆ 180 – 200 ಲೀಟರ್ ಹಾಲನ್ನು ಸರಾಗವಾಗಿ ಕರೆಯಲಾರಂಭಿಸಿದರು. ಹಾಲನ್ನು ನೇರ ಮಾರಾಟ ಮಾಡುವುದರ ಜೊತೆಗೆ ಮೌಲ್ಯವರ್ಧನೆಯನ್ನೂ ಮಾಡುವ ತೀರ್ಮಾನಕ್ಕೆ ಬಂದರು.

ಅವರ ಪಾಲಿನ ಶ್ರೀರಕ್ಷೆಯಾಗಿ ಕಂಡಿದ್ದು ಖೋವಾ. ಹಾಲಿನದೇ ಪದಾರ್ಥವಾದ ಖೋವಾವನ್ನು ಕುಂದ, ಪೇಡ, ಜಾಮೂನು ಮುಂತಾದ ಸಿಹಿ ತಯಾರಿಕೆಗೆ ಬಳಸುತ್ತಾರೆ. ಅಲ್ಲಿನ ಸ್ಥಳೀಯ ಬೇಕರಿಗಳಲ್ಲಿ ಒಳ್ಳೆಯ ಬೇಡಿಕೆಯಲ್ಲಿದ್ದ  ಖೋವಾ ತಯಾರಿಸಿದರೆ ಆದಾಯ ಹೆಚ್ಚುತ್ತದೆ ಎಂದು ದೇಗಾವಿಯವರು ತಿಳಿದಿದ್ದರು. ಅಲ್ಲಿಂದ ಶುರುವಾದದ್ದೇ ಖೋವಾ ಕರಾಮತ್ತು.

ಖೋವಾ ಕರಾಮತ್ತು: ಹಾಲನ್ನು ಡೈರಿಗೆ ನೀಡಿದರೆ ಸಿಗುತ್ತಿದ್ದುದು ಲೀಟರಿಗೆ ಸುಮಾರು 20 ರುಪಾಯಿಗಳು, ಖೋವಾ ಮಾಡುವವರು ಅದೇ ಒಂದು ಲೀಟರ್ ಹಾಲಿಗೆ ಸುಮಾರು 28 ರುಪಾಯಿ ನೀಡುತ್ತಿದ್ದರು. 1 ಕೇಜಿ ಖೋವಾ ಮಾಡಲು ಸುಮಾರು 5 ಲೀಟರ್ ಹಾಲು ಬೇಕಾಗುತ್ತಿತ್ತು. ಆದರೆ ಒಂದು ಕೇಜಿ ಖೋವಾಗೆ ಸಿಗುತ್ತಿದ್ದ ಬೆಲೆ ಎಷ್ಟು ಗೊತ್ತೇ? ಸರಾಸರಿ 200ರಿಂದ 250 ರುಪಾಯಿಗಳು!

ಖೋವಾಗೆ ಹೆಚ್ಚು ಬೆಲೆಯೇನೋ ಸಿಗುತ್ತಿತ್ತು ಆದರೆ ಅದನ್ನು ತಯಾರಿಸುವುದು ಸುಲಭವಲ್ಲ. ದೊಡ್ಡದಾದ ಕಡಾಯಿಯಲ್ಲಿ ಸ್ವಲ್ಪ ಹಾಲನ್ನು ಹಾಕಿ, ಸಣ್ಣ ಉರಿಯಲ್ಲಿ ಅದನ್ನು ತೊಳೆಸುತ್ತಾ ತೊಳೆಸುತ್ತ ಕುದಿಸಬೇಕು. ಒಮ್ಮೆಗೇ ಅಷ್ಟೂ ಹಾಲನ್ನು ಹಾಕದೆ, 5 ನಿಮಿಷಕ್ಕೊಮ್ಮೆ ಸಣ್ಣ ಸಣ್ಣ ಪ್ರಮಾಣದಲ್ಲಿ ಹಾಲನ್ನು ಸೇರಿಸಿ ಒಂದೇ ಹದದಲ್ಲಿ ಕುದಿಸಬೇಕು. ಬಹಳಷ್ಟು ಸಮಯದ ಜೊತೆ ದೈಹಿಕ ಶ್ರಮವೂ ಇಲ್ಲಿ ಅತ್ಯವಶ್ಯಕ.

ದೇಗಾವಿಯವರು ಹೈನುಗಾರಿಕೆಯ ಕಡೆ ತಿರುಗಿದ್ದೇ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ. ಆದರೆ ಈಗ ಮತ್ತೆ ಕೆಲಸಗಾರರ ಮೇಲೆ ಅವರು ಅವಲಂಭಿಸುವ ಪರಿಸ್ಥಿತಿ ಎದುರಾಯಿತು. ಒಂದು ವೇಳೆ ಕೆಲಸಗಾರರು ಸಿಕ್ಕರೂ ಅವರು ಖೋವಾ ಮಾಡುವಲ್ಲಿ ನುರಿತವಾಗಿರಬೇಕು. ಏಕೆಂದರೆ, ಖೋವಾವನ್ನು ಒಂದೇ ಹದದಲ್ಲಿ ತಯಾರಿಸಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಯಾರಿಸಿದ್ದ ಖೋವಾ ವೇಸ್ಟ್, ಶ್ರಮ ವ್ಯರ್ಥ, ಕೆಲಸಗಾರರಿಗೆ ವೇತನವನ್ನೂ ಕೈಯಿಂದ ತೆರಬೇಕಾಗುತ್ತದೆ. ದೇಗಾವಿಯವರಿಗೆ ಈ ಪರಿಸ್ಥಿತಿ ಕಾಡತೊಡಗಿತು.

ಸೌರಚಾಲಿತ ಖೋವಾ ಯಂತ್ರ: ಅದೇ ಸಮಯಕ್ಕೆ ಸೌರಚಾಲಿತ ಖೋವಾ ಯಂತ್ರದ ಕುರಿತು ಸೆಲ್ಕೋ ಯೋಚನೆ ನಡೆಸಿತ್ತು. ಇದನ್ನು ತಿಳಿದ ಮಂಜುನಾಥ್ ದೇಗಾವಿಯವರು ಅದನ್ನು ಅಳವಡಿಸಲು ಮುಂದಾದರು. ಪೈಲೆಟ್ ಯೋಜನೆಯಾಗಿ ದೇಗಾವಿಯವರ ಮನೆಯಲ್ಲಿ ಸೌರಚಾಲಿತ ಖೋವಾ ಮಾಡುವ ಯಂತ್ರವನ್ನು ಸೆಲ್ಕೋ ಅಳವಡಿಸಿತು.

ದೇಗಾವಿಯವರು ಸೌರಚಾಲಿತ ಖೋವಾ ಯಂತ್ರವನ್ನು ಅಳವಡಿಸಿದ ಮೊದಲ ಖೋವಾ ಮೇಕರ್. 200 ಡಬ್ಲ್ಯುಪಿ  12 ಪ್ಯಾನಲ್ಗಳು, 8 ಬ್ಯಾಟರಿ ಒಳಗೊಂಡ ಈ ಸಿಸ್ಟಮ್ನ ಒಟ್ಟು ಕ್ಯಪಾಸಿಟಿ 1.2 ಕೆಡಬ್ಲ್ಯುಪಿ 120 ಲೀಟರ್ ಸಾಮರ್ಥ್ಯದ ಒಂದು ಬಾಯ್ಲರ್ ಇದ್ದು, ಎಲ್.ಪಿ.ಜಿ ಸಿಲೆಂಡರ್ ಸಹಾಯದಿಂದ ಕಾಯಿಸಬೇಕು. ಅದರಲ್ಲಿ 35 ಕೇಜಿಯಷ್ಟು ಖೋವಾ ಮಾಡಬಹುದಾಗಿದೆ.

ಮೊದಲು 2 ಕೇಜಿ ಖೋವಾ ತಯಾರಿಸಲು ಅರ್ಧ ಗಂಟೆ ಬೇಕಾದರೆ, ನಂತರದಲ್ಲಿ 20 ನಿಮಿಷದಲ್ಲಿ ಖೋವಾ ರೆಡಿ. ಈ ಯಂತ್ರದ ಒಂದು ದೊಡ್ಡ ಅನುಕೂಲತೆ ಏನೆಂದರೆ ಒಬ್ಬ ಕೆಲಸಗಾರ ಕೂತು ಅದನ್ನು ತೊಳೆಸುತ್ತಾ ಕೂರುವ ಅಗತ್ಯವಿಲ್ಲ, ದೈಹಿಕ ಶ್ರಮವಿಲ್ಲ, ಸಮಯ ಕೂಡ ಉಳಿಯುತ್ತದೆ. ಸ್ವತಃ ದೇಗಾವಿಯವರು ಅಥವಾ ಅವರ ಹೆಂಡತಿ ಇದನ್ನು ನೋಡಿಕೊಳ್ಳಬಹುದು. ಯಾವುದೇ ಕೆಲಸಗಾರರ ಅಗತ್ಯವಿಲ್ಲ, ಅವರಿಗೆ ಕೊಡಬೇಕಾದ ವೇತನವೂ ಉಳಿತಾಯವಾಗುತ್ತದೆ.

ಹೈನುಗಾರಿಕೆಯಿಂದ ದಿನಕ್ಕೆ ಸುಮಾರು 2000 ರುಪಾಯಿ ಉಳಿಸುತ್ತಿದ್ದ ದೇಗಾವಿಯವರು ಇಂದು ಸುಮಾರು 4000 ರುಪಾಯಿ ಉಳಿಸುತ್ತಿದ್ದೇನೆ ಎಂದು ಹೇಳುತ್ತಾರೆ.. ಇಲ್ಲಿ ಕೆಲಸಗಾರರು ಸಿಗುವುದು ಬಹಳ ಕಷ್ಟ, ಅಂತಹ ಸಂದರ್ಭದಲ್ಲಿ ನಮಗೆ ನೆರವಾಗಿದ್ದು ಸೆಲ್ಕೋ. ಹಾಲು ಕರೆಯಲು ಮತ್ತು ಈಗ ಅದನ್ನು ಖೋವಾ ಮಾಡಲು ನಾವು ಯಾರ ಮೇಲೂ ಅವಲಂಬಿತರಾಗಬೇಕಿಲ್ಲ. ನಾನು ಇಲ್ಲದಿದ್ದಾಗ, ನನ್ನ ಪತ್ನಿಯೇ ಇದನ್ನು ನೋಡಿಕೊಳ್ಳಬಹುದು. ಬಯೋ ಗ್ಯಾಸ್ ಅಳವಡಿಸಿ ಕ್ರಮೇಣವಾಗಿ ನಾನೇ ಒಂದು ಬೇಕರಿ ತೆರೆಯಬೇಕು ಎಂಬುದು ನನ್ನ ಕನಸು ಮತ್ತು ಗುರಿ ಎನ್ನುವ ಮಂಜುನಾಥ್ ದೇಗಾವಿ ಸೌರಶಕ್ತಿಯಿಂದ ಹೈನುಗಾರಿಕೆಯನ್ನು ಸುಸ್ಥಿರವಾಗಿ, ಸಮೃದ್ಧವಾಗಿ ಕಟ್ಟಬಹುದು ಎಂದು ನಿರೂಪಿಸುವಲ್ಲಿ ಒಂದು ದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ.

LEAVE A REPLY

Please enter your comment!
Please enter your name here