ಇರುವೆ , ಸಕಲ ಜನರಿಗೆ ಅತ್ಯಂತ ಪರಿಚಿತವಾಗಿರುವ ಕೀಟ. ಅತಿ ಯಶಸ್ವೀ ಸಹಬಾಳ್ವೆ, ವಿಸ್ಮಯದ ಸಂಪರ್ಕ, ವ್ಯವಸ್ಥಿತ , ಅತ್ಯಂತ ಸಮರ್ಥ ಜೀವನ ಕೌಶಲ ಈ ಮೂರೂ ಗುಣಗಳಿಗೆ ಪ್ರತಿಮಾ ಸ್ವರೂಪಿ ಕೂಡ. ಆದ್ದರಿಂದಲೇ ಕೋಟ್ಯಂತರ ವರ್ಷಗಳಿಂದ ಬಾಳುತ್ತ ಬಂದಿರುವ ಈ ಅಲ್ಪಗಾತ್ರದ ಜೀವಿ ಭಾರೀ ವೈವಿಧ್ಯ ಪಡೆದಿದೆ.ಮನುಷ್ಯರಿಗೆ ಹೋಲಿಸಿದರೆ ಲಕ್ಷಾಂತರ ಪಟ್ಟು ಚಿಕ್ಕಗಿರುವ ಈ ಜೀವಿಯ ಬದುಕು ಬೆರಗು ಹುಟ್ಟಿಸುವ ಕೌತುಕಗಳಿಂದ ಕೂಡಿದೆ.
ಇತ್ತೀಚಿನ ಶೋಧಗಳ ಪ್ರಕಾರ ಪ್ರಸ್ತುತ ಧರೆಯಲ್ಲಿ ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ. ಅವುಗಳ ಸಂಖ್ಯೆ ಒಂದು ಅಂದಾಜಿನ ಪ್ರಕಾರ ಸುಮಾರು 20 ಕ್ವಾಡ್ರಿಲಿಯನ್! ಅಂದರೆ ೨೦ ರ ಮುಂದೆ ೧೫ ಶೂನ್ಯಗಳನ್ನು ಹಾಕಿದರೆ ಎಷ್ಟಾಗುತ್ತೋ ಅಷ್ಟು. ಅಥವಾ 801 ಕೋಟಿ ಜನರ ಪ್ರತಿ ಮನುಷ್ಯರಿಗೂ ಸರಾಸರಿ ಹನ್ನೆರಡು ವರೆ ಲಕ್ಷ ಇರುವೆಗಳು! ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ ಧರೆಯ ಇಡೀ ಇರುವೆ ತೂಕ’ ಒಂದು ಲಕ್ಷ ಟನ್ ಮೀರುವುದಿಲ್ಲ.
ಇರುವೆಗಳ ಜೀವನ ಕ್ರಮ ಎಷ್ಟು ಕುತೂಹಲಕರ, ವಿಸ್ಮಯಕರ ಎಂದರೆ ಆ ಕಾರಣದಿಂದಲೇ ‘ಇರುವೆ ವಿಜ್ಞಾನ’ (ಮರ್ಮಕಾಲಜಿ) ಎಂಬೊಂದು ವಿಶಿಷ್ಟ ವಿಜ್ಞಾನ ಶಾಖೆಯೇ ಅಸ್ತಿತ್ವದಲ್ಲಿದೆ. ಗ್ರೀನ್‍ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾ ದೇಶಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ದೇಶಗಳಲ್ಲಿ ಒಂದಲ್ಲ ಒಂದು ಇರುವೆಗಳ ಪ್ರಬೇಧ ಇದ್ದೇ ಇದೆ.ಇರುವೆಗಳ ಜೀವಿತಾವಧಿ ಒಂದು ದಿನದಿಂದ ಹಿಡಿದು ೩೦ ವರ್ಷಗಳ ವರೆಗೆ ಇರುತ್ತದೆ.
ಇರುವೆಗಳ ಜೀವನ ಚಕ್ರ ಮೊಟ್ಟೆ, ಲಾರ್ವಾ,ಪ್ಯೂಪ ಮತ್ತು ವಯಸ್ಕ ಇರುವೆ ಎಂಬ ನಾಲ್ಕು ಹಂತಗಳಲ್ಲಿದೆ. ಮೊದಲು ಮರಿಗಳಾಗಿ ಮೊಟ್ಟೆಯಿಂದ ಹೊರಬಂದು ಲಾರ್ವ ಹಂತದಲ್ಲಿ ಇರುವ ಈ ಕೀಟಗಳಿಗೆ ಹೊಟ್ಟೆಬಾಕತನ ಎಷ್ಟಿರುತ್ತೆಂದರೆ, ಮೊಟ್ಟೆಯಿಂದ ಇನ್ನೂ ಹೊರಬರದ ತಮ್ಮ ಸಹೋದರ-ಸಹೋದರಿಯರನ್ನೇ ಮುಕ್ಕಿಮುಗಿಸುತ್ತವೆ.
ಒಂದೇ ತಾಯಿಯ ಮರಿಗಳಾದರೂ, ಈ ಹಂತದಲ್ಲಿ ಮೂರು ಜಾತಿಗಳಾಗಿ ಅಂದರೆ ರಾಣಿ ಇರುವೆ, ಗಂಡು ಇರುವೆ ಮತ್ತು ಕೆಲಸಗಾರ ಇರುವೆ ಎಂದು ಗುರುತಿಸಿಕೊಳ್ಳುತ್ತವೆ. ರಾಣಿ ಇರುವೆ ಬೇರೆಲ್ಲಾ ಇರುವೆಗಿಂತ ಸ್ವಲ್ಪ ದೊಡ್ಡದಿದ್ದು , ರೆಕ್ಕೆಗಳನ್ನು ಹೊಂದಿರುತ್ತದೆ. ರಾಣಿ ಇರುವೆ ಇರುವುದೇ ಸಂತಾನಾಭಿವೃದ್ಧಿಗಾಗಿ. ಇದು ತನ್ನ ರೆಕ್ಕೆಗಳ ಸಹಾಯದಿಂದ ಹಾರಾಡಿ, ಗಂಡು ಇರುವೆಗಳ ಜೊತೆಗೂಡುತ್ತದೆ. ನಂತರ ಅದು ಮೊಟ್ಟೆ ಇಡುವ ಕಾಲಕ್ಕೆ ಕೆಲಸಗಾರ ಇರುವೆಗಳು ಕಟ್ಟಿದ ಗೂಡು ಸೇರುತ್ತದೆ.
ಇಷ್ಟರಲ್ಲಿ ಅದರ ರೆಕ್ಕೆಗಳು ಬಿದ್ದು ಹೋಗಿ, ಗೂಡು ಸೇರಿದ ರಾಣಿ ಇರುವೆ, ಕೆಲಸಗಾರ ಇರುವೆಗಳ ಸೇವೆಯಿಂದ ಹೆಚ್ಚುಕಾಲ ಬದುಕುತ್ತದೆ. ಗಂಡು ಇರುವೆಗಳಿಗೂ ರೆಕ್ಕೆ ಇದ್ದು , ಮಾಮೂಲಿ ಗಾತ್ರದಲ್ಲಿ ಇರುತ್ತವೆ. ಇವುಗಳ ಉದ್ದೇಶ ಮುಗಿದ ದಿನದಿಂದಲ್ಲೆ ರೆಕ್ಕೆಗಳು ಮುರಿದು ಹೋಗುತ್ತದೆ ಮತ್ತು ಇವು ಹೆಚ್ಚ ದಿನ ಬದುಕುವುದಿಲ್ಲ ಮತ್ತು ಬದುಕಿದರೂ ಅದನ್ನು ಕೆಲಸಗಾರ ಇರುವೆಗಳು ಸಾಯಿಸಿ ಮುಲಾಜಿಲ್ಲದೇ ಗೂಡಿನಿಂದ ನಿರ್ದಯವಾಗಿ ಹೊರಗೆ ದಬ್ಬುತ್ತವೆ.
ಕೆಲಸಗಾರ ಇರುವೆಗಳು ನಪುಂಸಕವಾಗಿದ್ದು, ಸಂತಾನದ ಭಾಗ್ಯ ಇರುವುದಿಲ್ಲ. ಇವುಗಳ ಮೂಲ ಉದ್ದೇಶ ಅವುಗಳ ಸಂಕುಲದ ಸಂತಾನ ಮುಂದುವರೆಯಲು ಸಹಾಯ ಮಾಡುವ ಕಾರ್ಯ. ಇದಕ್ಕೋಸ್ಕರ ಅವು ಗೂಡುಕಟ್ಟುವುದು, ಗೂಡಿನ ಸ್ವಚ್ಚತೆ, ಆಹಾರ ಸಂಗ್ರಹಣೆ, ಮರಿಗಳ ಲಾಲನೆಪಾಲನೆ, ವೈರಿಗಳ ಜೊತೆ ಯುದ್ಧ ಇವೆಲ್ಲಾ ಕಾರ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತವೆ. ಇದನ್ನು ಮನುಷ್ಯಲೋಕದಲ್ಲಿ “ಗುಲಾಮಗಿರಿ” ಎಂದು ಕರೆಯಬಹುದು. ಆದರೆ ಕೆಲಸಗಾರ ಇರುವೆಗಳು ಹುಟ್ಟಿರುವುದೇ ಗುಲಾಮಗಿರಿ ಮಾಡುವುದಕ್ಕಾಗಿ. ಆದರೆ ಅವೆಂದೂ ಆ ಬಗ್ಗೆ ಚಿಂತೆ ಮಾಡಿದಂತೆ ಕಾಣಿಸಿಲ್ಲ. ಅವು ಸದಾ ಕಾರ್ಯನಿರತ.
ಇರುವೆಗಳಲ್ಲಿ ೦.೧ ಮಿಮಿ ಗಾತ್ರದ ಪಾರೋ ಇರುವೆಯಿಂದ ಹಿಡಿದು ೬ ಸೆಂಮೀ ಉದ್ದದ ಟೈಟಾನೋಮಿರ್ಮಾ ಇರುವೆಗಳಿವೆ.ಇರುವೆಗಳಿಗೆ ಕಿವಿಗಳಿಲ್ಲ. ಅವು ಶಬ್ಧವನ್ನು ಗ್ರಹಿಸುವುದು ಅವುಗಳ ಕಾಲುಗಳು ಮತ್ತು ಅಂಟೆನಾದಂತೆ ಚಾಚಿದ ಮೀಸೆಗಳಿಂದ !.
ಪ್ರಕೃತಿಗೆ ಇರುವೆಗಳಿಂದ ಮಹತ್ತರ ಕೊಡುಗೆ ಇದೆ. ಇವು ಭೂಮಿಯಲ್ಲಿ ಕೊರೆಯುವ ರಂಧ್ರಗಳಿಂದ ಸದಾ ಗಾಳಿ ಆಡಿ ಮಣ್ಣು ಸಡಿಲಗೊಳ್ಳುತ್ತದೆ. ಇವು ಲಕ್ಷಾಂತರ ಕ್ರಿಮಿಕೀಟಗಳಿಗೆ, ದುಂಬಿಗಳಿಗೆ ಮತ್ತು ಹಕ್ಕಿಗಳಿಗೆ ಆಹಾರವಾಗುವುದರ ಮೂಲಕ ಜೈವಿಕ ಆಹಾರ ಚಕ್ರದಲ್ಲಿ ನಿರಂತವಾಗಿ ಪಾಲ್ಗೊಳ್ಳುತ್ತವೆ. ಆದರೆ ಕೆಲವು ಕೀಟನಾಶಕಗಳು, ಕಾಡಿಗೆ ಬೀಳುವ ಬೆಂಕಿ, ಅತಿಯಾದ ಮಳೆ, ಮಾನವರ ಅನೇಕ ನಿರ್ಮಾಣಗಳು ಇವುಗಳನ್ನು ವಿನಾಶದತ್ತ ತಳ್ಳಿವೆ.
ಇಡೀ ಜೀವಲೋಕದಲ್ಲಿ ಕೃಷಿ ಕೆಲಸ ಕೈಗೊಳ್ಳುವ ಏಕೈಕ ಮನುಷ್ಯತರ ಪ್ರಭೇದ ಇರುವೆ ಲೋಕದಲ್ಲಿದೆ. ‘ರೈತ ಇರುವೆ’ ಎಂದೇ ಹೆಸರಾಗಿರುವ ಈ ಪ್ರಭೇದದ ಇರುವೆಗಳು ನಿರ್ದಿಷ್ಟ ಸಸ್ಯಗಳ ಎಲೆಗಳನ್ನು ಕತ್ತರಿಸಿ ಸಾಗಿಸಿ ಗೂಡಿನಲ್ಲಿ ರಾಶಿ ಹಾಕುತ್ತವೆ. ಆ ಎಲೆ ರಾಶಿಯ ಮೇಲೆ ವಿಶಿಷ್ಟ ಶಿಲೀಂಧ್ರಗಳನ್ನು ಬೆಳೆಯಲು ಬಿಟ್ಟು ಆಹಾರ ತಯಾರಿಸಿಕೊಳ್ಳುತ್ತವೆ. ಆಹಾರ ಸಾಗಿಸುವ ಕೆಲಸಗಾರರಿಗೆ ರಕ್ಷಣೆ ನೀಡಲು ಸೈನಿಕ ಇರುವೆಗಳು ಎಲೆ ಚೂರುಗಳನ್ನೇ ಏರಿ ಕುಳಿತು ಕಾಯುತ್ತವೆ. ಕೆಲವು ಜಾತಿಯ ಶಿಲೀಂದ್ರಗಳು ಇರುವೆಯ ಬೆನ್ನು ಹತ್ತಿ ಅದನ್ನು ಗುಂಪಿನಿಂದ ಪ್ರತ್ಯೇಕಗೊಳ್ಳುವಂತೆ ಮಾಡಿದಾಗ ಅದು ಎಲೆಯೊಂದನ್ನು ಕಚ್ಚಿ ಹಿಡಿದು ಪ್ರಾಣ ತ್ಯಜಿಸುತ್ತದೆ.
ಬಲಿಷ್ಠ ಕೋರೆದಾಡೆಗಳ ಕೆಲ ಇರುವೆ ಪ್ರಭೇದಗಳು ಇತರ ಕೆಲ ನಿರ್ದಿಷ್ಟ ಇರುವೆ ಪ್ರಭೇದಗಳ ಗೂಡುಗಳ ಮೇಲೆ ಗುಂಪಾಗಿ ಅನಿರೀಕ್ಷಿತ ದಾಳಿ ನಡೆಸಿ ಅಲ್ಲಿನ ಮರಿ ಇರುವೆಗಳನ್ನು ಸೆರೆ ಹಿಡಿದು ತಮ್ಮ ಗೂಡಿಗೆ ಸಾಗಿಸಿ ತರುತ್ತವೆ. ಸ್ವಲ್ಪ ದಿನಗಳಲ್ಲೇ ಪ್ರಬುದ್ಧ ಕೆಲಸಗಾರರಾಗಿ ಬೆಳೆವ ಆ ಹೊಸ ಇರುವೆಗಳು ತಮ್ಮ ಒಡೆಯರಿಗೆ ಗುಲಾಮರಾಗಿ ಸೇವೆ ಮಾಡುತ್ತವೆ. ಹೀಗೆ ತಮ್ಮ ಸೇವೆಗಾಗಿ ಜೀತದಾಳುಗಳನ್ನು ಎಳೆದು ತಂದು ಇರಿಸಿಕೊಳ್ಳುವ ಪದ್ಧತಿ ಕೀಟಲೋಕದಲ್ಲಿ ಬೇರಾವ ಪ್ರಭೇದದಲ್ಲೂ ಇಲ್ಲವೆನ್ನಬಹುದು. ಮನುಷ್ಯರಲ್ಲಿರುವ ಈ ಗುಲಾಮ ಪದ್ಧತಿಯು ಇರುವೆಗಳಲ್ಲಿ ಅನೇಕ ಲಕ್ಷ ವರ್ಷಳಿಂದಲೇ ಇದೆ.
ಜೇನುಕುಡಿಕೆ ಇರುವೆ
“ಜೇನು ಕುಡಿಕೆ” (ಹನೀ ಪಾಟ್) ಇರುವೆಗಳದು ಮತ್ತೊಂದು ಅಸದೃಶ ಕ್ರಮ. ಸಮೃದ್ಧವಾಗಿ ಮಕರಂದ ಲಭಿಸುವ ಕಾಲದಲ್ಲಿ ಈ ಗುಂಪಿನ ಕೆಲಸಗಾರರು ತಮ್ಮ ಕುಟುಂಬದ್ದೇ ಸಾವಿರಾರು ಆಯ್ದ ಇರುವೆಗಳಿಗೆ ಮಕರಂದ ತಂದು ತಂದು ಒತ್ತಾಯದಿಂದ ಬಾಯಿಗೆ ತುರುಕಿ ತುರಕಿ ಉಣಿಸುತ್ತವೆ. ಕಡೆಗೆ ಆ ಕೆಲಸಗಾರರ ಹೊಟ್ಟೆ ಮಕರಂದ ತುಂಬಿ ತುಂಬಿ ಉಬ್ಬಿದ ಬಲೂನಿನಂತಾಗುತ್ತದೆ. ಬಂಗಾರ ಹಳದಿಯ ಕುಡಿಕೆಗಳಂತಾಗುವ ಆ ಜೀವಂತ ಜೇನಿನ ಗುಡಾಣಗಳನ್ನು ಕೆಲಸಗಾರರೇ ಹಿಡಿದೆತ್ತಿ ಗೂಡಿನ ಚಾವಣಿಗೆ ಗುಂಪಾಗಿ ತಗಲಿಸಿ ನಿಲ್ಲಿಸುತ್ತವೆ. ಮುಂದೆ ಆಹಾರಕ್ಕೆ ಅಭಾವ ಬಂದಾಗ ಅಥವಾ ಮಳೆಗಾಲದಲ್ಲ ಈ “ಜೇನುಕುಡಿಕೆ”ಗಳನ್ನು ಕೆಳಕ್ಕಿಳಿಸಿ ಅವುಗಳಿಂದ ಮಕರಂದವನ್ನು ಕಕ್ಕಿಸಿ ಎಲ್ಲ ಇರುವೆಗಳೂ ಸೇವಿಸುತ್ತವೆ. ಮನುಷ್ಯರು ಒಂಥರಾ ಕುರಿಗಳನ್ನು ಕೊಬ್ಬಿಸಿ ಕೊಬ್ಬಿಸಿ ಕಡಿದು ತಿಂದಂತೆ ಎನ್ನಬಹುದೆ?
ನೇಕಾರ ಇರುವೆ
“ನೇಕಾರ ಇರುವೆ” ಗಳ ಗೂಡು ನಿರ್ಮಾಣ ವಿಧಾನ ಇನ್ನೊಂದು ಪರಮ ಸೋಜಿಗ. ಗಿಡ ಮರಗಳ ವಿಶಾಲ ಎಲೆಗಳನ್ನೇ ಅಲ್ಲೇ ಜೋಡಿಸಿ ಬಂಧಿಸಿ ನೀರಿಳಿಯದ ಸುಭದ್ರ ಪೊಟ್ಟಣಗಳಂಥ ಗೂಡುಗಳನ್ನು ನಿರ್ಮಿಸುವ ಕೆಂಬಣ್ಣದ ಈ ಉಗ್ರ ಇರುವೆಗಳ ಕೆಲಸಗಾರರು ಸೂಕ್ತ ಜೀವಂತ ಎದುರು ಬದುರು ಎಲೆಗಳನ್ನು ಹತ್ತಿರ ಹತ್ತಿರ ಎಳೆದು ಜೋಡಿಸಿ ಹಿಡಿಯುತ್ತವೆ. ಹಾಗಾದೊಡನೆ ಇನ್ನಷ್ಟು ಕೆಲಸಗಾರರು ತಮ್ಮ ಕುಟುಂಬದ್ದೇ “ಮರಿಇರುವೆ”ಗಳನ್ನು ಹಿಡಿದು ತಂದು ಎಲೆಗಳನ್ನು ಒಳಗಿನಿಂದ ಬಂಧಿಸುತ್ತವೆ; ಮರಿಹುಳುಗಳು ಹರಿಸುವ “ರೇಷ್ಮೆದ್ರವ”ದ ದಾರಗಳನ್ನು ಬಳಸಿ ಹಾಗೆ ಒಳಗಿನಿಂದಲೇ ಬಲೆ ನೇಯುತ್ತವೆ.ಭದ್ರವಾಗಿ ಎಲೆಗಳು ಅಂಟಿ ನಿಲ್ಲುತ್ತವೆ. ಗೂಡಿಗೆ ಅಪಾಯ ಒದಗಿಸಿದರೆ ನೂರಾರು ಕೆಲಸಗಾರರು “ರಾಣಿ”ಯನ್ನು ಸುತ್ತುವರಿದು ಸುರಕ್ಷಿತ ನೆಲೆಗೆ ಒಯ್ಯುತ್ತವೆ. ಈ ಚಿಗಳಿ ಇರುವೆಗಳನ್ನು ಹದವಾಗಿ ಹುರಿದು, ಉಪ್ಪುಕಾರ ಹಾಕಿ ತಿನ್ನುವ ಅನೇಕ ಜನಾಂಗಗಳಿವೆ.
ದಂಡಿರುವೆ
“ದಂಡಿರುವೆ”ಗಳ (ಆರ್ಮಿ ಆ್ಯಂಟ್, ಕಟ್ಟೆ ಇರುವೆ ಅಥವಾ ಸೈನಿಕ ಇರುವೆ) ನಿತ್ಯ ದಂಡಯಾತ್ರೆ ಅತ್ಯಂತ ಭಯಂಕರ, ವಿಸ್ಮಯಕರ ದೃಶ್ಯ, ಲಕ್ಷಾಂತರ ಸಂಖ್ಯೆಯಲ್ಲಿ, ನೂರಾರು ಅಡಿ ಉದ್ದದಲ್ಲಿ, ನದೀ ಪ್ರವಾಹದಂತೆ ಸಾಗುವ ಈ ಇರುವೆ ಸೇನೆ ಕಾನನದ ಮಂದಗಾಮೀ ಪ್ರಾಣಿಗಳಿಗೆ ಸಿಂಹಸ್ವಪ್ನ. ತಮ್ಮ ಹಾದಿಯಲ್ಲಿ ಸಿಗುವ ಯಾವುದೇ ಎರೆಹುಳದಂತ ಜೀವಿಗಳನ್ನು ಕ್ಷಣಾರ್ಧದಲ್ಲಿ ಆವರಿಸಿ, ವಿಷ ಚುಚ್ಚಿ, ನಿಶ್ವೇಷ್ಟಿತಗೊಳಿಸಿ, ಅಷ್ಟೇ ಕ್ಷಿಪ್ರವಾಗಿ ತಿಂದು ಮುಗಿಸಿ ಮುನ್ನಡೆವ ದಂಡಿರುವೆಗಳು ನಿತ್ಯವೂ ಪ್ರಯಾಣ ನಿರತ. ಆದ್ದರಿಂದಲೇ ಈ ಇರುವೆಗಳ ಪ್ರತಿ ಕುಟುಂಬದಲ್ಲೂ ಹಲವಾರು ಸಾವಿರ ಕೆಲಸಗಾರರು ತಮ್ಮ ಶರೀರಗಳನ್ನೇ ಜೋಡಣೆಗೊಳಿಸಿ ಬಹು ಕೊಠಡಿಗಳ ಗೂಡು ನಿರ್ಮಿಸುತ್ತವೆ. ಇವುಗಳು ಮೊಟ್ಟೆಗಳು, ಮರಿಹುಳುಗಳು ಮತ್ತು ರಾಣಿಹುಳ ಎಲ್ಲವನ್ನೂ ಒಳಗೊಂಡ ಈ `ಜೀವಂತ ಗೂಡು’ ದಂಡಿನ ಜೊತೆಗೇ ಹೊತ್ತೊಯ್ಯುತ್ತವೆ.
ಇರುವೆಗಳ ಶರೀರ ಶಕ್ತಿ ಅಸಾಮಾನ್ಯ. ಭಾರ ಎಳೆಯುವ, ಎತ್ತುವ ಸಾಮರ್ಥ್ಯ ಅವಕ್ಕೆ ವಿಪರೀತ. ತಮ್ಮ ಶರೀರಕ್ಕಿಂತ ಬಹುದೊಡ್ಡ ಗಾತ್ರದ ತಮ್ಮ ಶರೀರದ ಐವತ್ತು ಪಟ್ಟು ತೂಕದ ವಸ್ತುಗಳನ್ನು ಅವು ಸಲೀಸಾಗಿ, ವೇಗವಾಗಿ ಸಾಗಿಸುತ್ತವೆ. ತಮ್ಮ ದೇಹದ ನೂರಾರು ಪಟ್ಟು ತೂಕದ ವಸ್ತುಗಳನ್ನು ಹೊರುವ ಪ್ರಭೇದಗಳೂ ಇವೆ.ಮನುಷ್ಯನಿಗೆ ಅವನ ಭಾರದ ವಸ್ತುಗಳನ್ನು ಸಾಗಿಸುವ ಶಕ್ತಿಯೂ ಸಹ ಇಲ್ಲ.
ಪಾತರಗಿತ್ತಿಗಳಂತಹ ಉಪಯುಕ್ತ ಕೀಟಗಳ ಮೊಟ್ಟೆಗಳನ್ನು ಬಹುತೇಕ ಇರುವೆಗಳು ಕಬಳಿಸುತ್ತವೆ. ಆದರೆ ಇವುಗಳನ್ನು ಕಾವಲು ನಿಂತು ರಕ್ಷಿಸುವ ಇರುವೆಗಳೂ ಇವೆ. ಅದಕ್ಕೆ ಪ್ರತಿಯಾಗಿ ಮರಿಹುಳುಗಳು ಸ್ರವಿಸುವ ಸಿಹಿ ದ್ರವವನ್ನು ಅಂಥ ಇರುವೆಗಳು ಆಹಾರವನ್ನಾಗಿ ಸೇವಿಸುತ್ತವೆ. ಈ ರೀತಿಯ ಕೊಟ್ಟು ಕೊಡುವ ಪದ್ಧತಿ ಮನುಷ್ಯರನ್ನು ಬಿಟ್ಟರೆ ಇರುವೆಗಳಲ್ಲಿ ಮಾತ್ರ ಇರುವುದು.
ಬುಲ್ಲೆಟ್ ಇರುವೆ
ಬುಲ್ಲೆಟ್ ಇರುವೆಗಳ ಕಡಿತ ಅತ್ಯಂತ ನೋವಿನಿಂದ ಕೂಡಿದ್ದು ಇಂತಹ ೧೦ ಇರುವೆಗಳ ಕಡಿತ ಒಬ್ಬ ಮನುಷ್ಯನ ಸಾವಿಗೆ ಕಾರಣವಾಗಬಹುದು. ಬೆಂಕಿ ಇರುವೆಗಳು ಪ್ರಪಂಚದಾದ್ಯಂತ ಇರುತ್ತಿದ್ದು ಪಶುಗಳು ಮನುಷ್ಯನಿಗೆ ಕಡಿತದ ಮೂಲಕ ೩ ಬಿಲಿಯನ್ ಯುರೋದಷ್ಟು ಔಷಧಿಯ ಚಿಕಿತ್ಸಾ ಖರ್ಚಿನ ನಷ್ಟವನ್ನುಂಟುಮಾಡುತ್ತವೆ.ಅನೇಕ ಜಾತಿಯ ಇರುವೆಗಳು ವಿವಿಧ ಬೆಳೆಗಳ ಹೂವು, ಕಾಂಡ, ಮಕರಂದ ಇತ್ಯಾದಿಗಳನ್ನು ತಿಂದು ಬೆಳೆ ನಾಶಮಾಡುತ್ತವೆ.
ನಿರ್ದಿಷ್ಟ ಪ್ರಭೇದಗಳ ಕೆಲವು ಇರುವೆಗಳು ಕೆಲ ಜಾತಿಯ ಕೀಟಗಳನ್ನು ತನ್ನ ಗೂಡಿನಲ್ಲಿರಿಸಿಕೊಂಡು ಪ್ರತಿದಿನ ಗೂಡಿನ ಹೊರಗೆ ಕರೆತಂದು “ಮೇಯಲು” ಬಿಟ್ಟು ಅವು ಆಹಾರ ಸೇವಿಸಿದ ನಂತರ ಸಂಜೆ ಪುನ: ಗೂಡಿಗೇ ಕರೆದೊಯ್ಯುತ್ತವೆ. ಆ ಕೀಟಗಳು ಸ್ರವಿಸುವ “ಸಿಹಿದ್ರವ” ಇರುವೆಗೆ ಆಹಾರ. ಇದು ಒಂಥರಾ ನಾವು ಗೋ ಸಾಕಣೆ ಮಾಡಿದಂತೆ. ಬೇರಾವ ಮಾನವೇತರ ಪ್ರಾಣಿಯೂ ಹೀಗೆ “ಪಶು ಸಾಕಣಾ ತಂತ್ರ’ವನ್ನು ಕಲಿತಿಲ್ಲ!. ಹೀಗೆಯೆ ಇರುವೆಗಳ ವಿಸ್ಮಯ ಪ್ರಪಂಚದ ಬಗ್ಗೆ ಬರೆಯುತ್ತಾ ಹೋದರೆ ಈ ಲೇಖನ ಮುಗಿಯಲಿಕ್ಕಿಲ್ಲ. ಸಧ್ಯಕ್ಕೆ ಇಷ್ಟು ಸಾಕು.
ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204