ಸೂಬಾಬುಲ್,ಇದನ್ನು ಮೆಕ್ಸಿಕೋದ ಮಾಯಾ ಮತ್ತು ಜಾಪೋಟೆಕ್ ಎಂಬ ಗುಡ್ಡಗಾಡು ಜನರು ಬೆಳೆಯುತ್ತಿದ್ದರು. ಇದೊಂದು ಬಹುಪಯೋಗಿ. ಇದು ಹೆಚ್ಚು ಪ್ರೋಟೀನು ಒಳಗೊಂಡ ಮೇವು, ಸಾವಯವ ಗೊಬ್ಬರವಾಗಿ, ಮರವಾಗಿ, ಉರುವಲಾಗಿ, ಪ್ಲಾಂಟೇಷನುಗಳಲ್ಲಿ, ಕೋಕೋ, ಕ್ವಿನೈನ್, ಕಾಫಿ, ಟೀ, ವೆನಿಲ್ಲಾಗಳಿಗೆ ನೆರಳು ಕೊಡುವ ಮರ.

ಸೂಬಾಬುಲ್ (ಲ್ಯುಸೇನಾ ಲ್ಯೂಕೋಸೆಫಲಾ) ಮುಳ್ಳಿಲ್ಲದ ಗರಿಯೋಪಾದಿಯ ಎಲೆಗಳುಳ್ಳ, ಸಣ್ಣ ಆಕರ್ಷಕ ಹೂವುಗಳುಳ್ಳ, ಹಚ್ಚ ಹಸಿರಾದ ಕಾಯಿಗಳಿಂದ ಕೂಡಿದ ಮರ.ಕಾಯಿ ಬಲಿಯುತ್ತಿದ್ದಂತೆ ಕಂದು ಬಣ್ಣಕ್ಕೆ ತಿರುಗುತ್ತವೆ. ಇದರ ಬೇರುಗಳು ಗಟ್ಟಿಯಾದ ಮಣ್ಣಿನಲ್ಲೂ ಬಹು ಆಳಕ್ಕೆ ಇಳಿಯುತ್ತವೆ. ವಾತಾವರಣದಲ್ಲಿನ ಸಾರಜನಕವನ್ನು ನೇರವಾಗಿ ಬಳಸುವ ಸಾಮಥ್ರ್ಯವುಳ್ಳ ವೃಕ್ಷ. ವರ್ಷಕ್ಕೆ ಹೆಕ್ಟೇರಿಗೆ 500ರಿಂದ 55 ಕಿ.ಗ್ರಾಂ.ಸಾರಜನಕವನ್ನು ಭೂಮಿಗೆ ಒದಗುವಂತೆ ಮಾಡಿ, ಫಲವತ್ತತೆ ವೃದ್ಧಿಗೊಳ್ಳುವಲ್ಲಿ ಸಹಕಾರಿಯಾಗುತ್ತದೆ.

ಸೂಬಾಬುಲ್ ಬೆಳೆಯನ್ನು ವಿವಿಧ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ಫಿಲಿಪೈನ್ಸ್ನಲ್ಲಿ ಇಪಿಲ್-ಇಪಿಲ್ ಎಂದೂ, ಇಂಡೋನೇಷ್ಯಾದಲ್ಲಿ ಲಾಂಟೋರೋ ಎಂದೂ, ಹವಾಯ್ನಲ್ಲಿ ಕೋವಾ ಹಾವೋಲ್ ಎಂಬುದಾಗಿಯೂ, ಆಸ್ಟ್ರೇಲಿಯಾದಲ್ಲಿ ಹಾಸರ್ಟ್ಯಾಮರಿಂಡ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಭಾರತಕ್ಕೆ ಬಂದ ಇದನ್ನು ಇತ್ತೀಚಿನತನಕ ಕೂಬಾಬುಲ್ ಎಂದು ಕರೆಯಲಾಗುತ್ತಿತ್ತು.

ಈ ಮರದ ಉಪಯುಕ್ತತೆಗಳನ್ನು ಗಮನಿಸಿ, 1981ರ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರದ ಉರುಳಿಕಾಂಚನದಲ್ಲಿ ಈ ವೃಕ್ಷದ ಬಗ್ಗೆ ನಡೆದ ಎರಡನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಇಷ್ಟು ಒಳ್ಳೆಯ ಮರವನ್ನು ಕು (ಕೆಟ್ಟ) ಬಾಬುಲ್ಎಂದು ಕರೆಯದೆ ಸು (ಒಳ್ಳೆಯ) ಬಾಬುಲ್ಎಂದು ಬದಲಾಯಿಸಬೇಕೆಂಬ ನಿರ್ಧಾರಕ್ಕೆ ಬರಲಾಯಿತು. ಅಂದಿನಿಂದ, ಭಾರತದಲ್ಲಿ ಇದು `ಸುಬಾಬುಲ್’ ಎಂದೇ ಪ್ರಸಿದ್ಧಿಯಾಗಿದೆ.ಇದರಲ್ಲಿ ನೂರಾರು ಬಗೆಯ ತಳಿಗಳು ಇದ್ದು, ಮುಖ್ಯವಾದವು ಹವಾಯಿಯನ್, ಸಾಲ್ವಡಾರ್ ಮತ್ತು ಪೆರು ತಳಿಗಳು.

ಸಣ್ಣ ಸಣ್ಣ, 15 ರಿಂದ 25 ಸೆಂ. ಮೀ ಉದ್ದದ ಎಲೆಗಳುಳ್ಳ, ಬಿಳೀ ಬಣ್ಣದ ಹೂವುಗಳನ್ನು ಬಿಡುವ ಮರ ಸೂಬಾಬುಲ್. ಅಂಡಾಕಾರದ, ಚಪ್ಪಟೆಯಾದ, ಕಂದು ಬಣ್ಣದ, ಸದಾ ಹೊಳೆಯುವ ಎರಡು ಮಿ.ಮೀ ದಪ್ಪದ ಬೀಜಗಳಿರುತ್ತವೆ.ಒಂದುಗೊಂಡೆಯಲ್ಲಿ 100-180 ಸಣ್ಣ ಸಣ್ಣ ಹೂವುಗಳಿರುತ್ತವೆ.

ಸೂಬಾಬುಲ್ (ಲ್ಯೂಸೇನಾ ಲ್ಯೂಕೋಸೆಫಲಾ) ಮೈಮೋಸಿಯೇಸೀ ಕುಟುಂಬಕ್ಕೆ ಸೇರಿದೆ.ಇದರಲ್ಲಿ ಸುಮಾರು 51 ಬಗೆಯ ತಳಿಗಳಿವೆ. ಇವುಗಳಲ್ಲಿ ಹತ್ತು ಮುಖ್ಯವಾದ ತಳಿಗಳಿವೆ. ಈ ಹತ್ತರಲ್ಲಿ ಏಳು ಮೆಕ್ಸಿಕೋದಲ್ಲಿ ಮೂಲದವು. ಈ ಏಳರಲ್ಲಿ, ಲ್ಯುಸೇನಾ ದೈವಸರ್ಫಿಲೋಯಾ, ಲ್ಯುಸೆನಾ ಪೆಲ್ವರುಲೆಂಟಾ, ಲ್ಯುಸೇನಾ ಎಸ್ಕ್ಯುಲೆಂಟಾ ಮತ್ತು ಲ್ಯುಸೇನಾ ಲ್ಯೂಕೋಸೆಫಲಾ- ಈ ನಾಲ್ಕು ನೆರಳಿಗೆ ಮತ್ತು ಪ್ರಾಣಿಗಳ ಮೇವಿನ ಉಷ್ಣವಲಯಗಳಲ್ಲಿ ಬಳಸಲಾಗುತ್ತಿರುವ ತಳಿಗಳು.ಇವು ಹದಿನೈದು ಮೀಟರುಗಳಿಗೂ ಎತ್ತರ ಬೆಳಯುತ್ತದೆ.ಉಳಿದ ತಳಿಗಳು 5 ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ.

ಸೂಬಾಬುಲ್ ವೃಕ್ಷದ ಪ್ರಮುಖವಾದ ಹತ್ತು ತಳಿಗಳು ಕ್ರಮವಾಗಿ 1783, 1842 (3 ತಳಿಗಳು), 1844, 1852, 1875, 1886, 1974 ಮತ್ತು 1928ನೇ ಇಸವಿಗಳಲ್ಲೇ ಬಳಕೆಗೆ ಬಂದಿದೆ.ಪೆರೂವಿಯನ್ ಸಾಲ್ವಡಾರ್, ಹೈಬ್ರೀಡ್ ಮತ್ತು ಹವಾಯಿಯನ್ ತಳಿಗಳು ದೈತ್ಯಾಕಾರವಾಗಿ ಬೆಳೆಯುತ್ತವೆ. ಬೀಜ ಬಿತ್ತನೆ ಮಾಡಿಯೇ ಸೂಬಾಬುಲ್ ಅನ್ನು ಬೆಳೆಯಲಾಗುತ್ತದೆ,

ಸೂಬಾಬುಲ್ ಬೀಜೋತ್ಪಾದನೆ: ಸೂಬಾಬುಲ್ ಬೀಜಗಳು ಅವುಗಳ ಕಾಯಿಗಳೊಳಗೇ ಇರುತ್ತವೆ. ಕಪ್ಪುಬಣ್ಣಕ್ಕೆ ತಿರುಗಿದ ಕೆಲವು ವಾರಗಳಲ್ಲಿ ಕಾಯಿ ಬಾಯಿ ತೆರೆದುಕೊಳ್ಳುತ್ತವೆ. ಅವು ಹಾಗೆ ಬಾಯಿ ತೆರೆದುಕೊಳ್ಳುವುದಕ್ಕೆ ಮುಂಚೆ ಕಾಯಿಗಳನ್ನು ವ್ಯವಸ್ಥಿತವಾಗಿ ಗೋಣಿಚೀಲಗಳಲ್ಲಿ ಸಂಗ್ರಹಿಸಿಡಬೇಕು.ಕಾಯಿಗಳಿಂದ ಬೀಜಗಳನ್ನು ಹೊರತೆಗೆಯಲು ಸಾಮಾನ್ಯವಾಗಿ ಕಾಯಿಗಳನ್ನು ಕಾಂಕ್ರೀಟು ಛಾವಣಿಗಳ ಮೇಲೆ ಒಣಗಿ ಹಾಕಲಾಗುತ್ತದೆ.ಚೆನ್ನಾಗಿ ಒಣಗಿದ ಮೇಲೆ ಬೀಜಗಳನ್ನು ಬಿಡಿಸಿಕೊಳ್ಳಲಾಗುತ್ತದೆ.ಕಾಯಿಗಳಿಂದ ಬೀಜಗಳನ್ನು ಬೇರ್ಪಡಿಸುವಲ್ಲಿ ಹಲವು ವಿಧಾನಗಳಿವೆ.

ಸಂಗ್ರಹಿಸುವುದಕ್ಕೂ ಮುಂಚೆ, ಬೀಜಗಳನ್ನು ಗಾಳಿಯಲ್ಲಿ ಅಥವಾ ಉಷ್ಣ ನಿಯಂತ್ರಿತ ಕೊಠಡಿಗಳಲ್ಲಿ ಒಣಗಿಸಬೇಕು.ಚೆನ್ನಾಗಿ ಒಣಗಿಸದೆ ಸಂಗ್ರಹಿಸಿದಲ್ಲಿ ಬೀಜಗಳಿಗೆ ಕೀಟಗಳು ಹತ್ತುತ್ತವೆ. ಬೀಜ ಸಂಗ್ರಾಹಕಗಳಲ್ಲಿ ಶೇಖರಿಸಿಡುವುದಕ್ಕೆ ಮುಂಚೆ ಬೀಜಗಳನ್ನು ಮ್ಯಾಲಾಥಿಯಾನ್ ಅಥವಾ ಮೆಟಾಕ್ಸಿಕ್ಲೋ ಕೀಟನಾಶಕದಿಂದ ಉಪಚರಿಸಬೇಕು.

ವೈಜ್ಞಾನಿಕವಾಗಿ ಶೇಖರಣೆ ಮಾಡದಿದ್ದಲ್ಲಿ ಬೀಜಗಳ ಶಕ್ತಿ ಕುಂದುತ್ತದೆ.ಡ್ರಮ್ಮುಗಳಲ್ಲಿ ಶೇಖರಿಸಿಡುವ ಮೊದಲು ಬೀಜದ ತೇವಾಂಶ ಶೇ.14 ಇರಬೇಕಾಗುತ್ತದೆ. ಹದವಾದ ಉಷ್ಣತೆ 10 ಡಿಗ್ರಿ ಸೆಂಟಿಗ್ರೇಡ್ಇರಬೇಕು. ಶೇ.12 ತೇವಾಂಶವುಳ್ಳ ಬೀಜಗಳನ್ನು ಸಂಗ್ರಹಿಸಿದಾಗ ಅವು ನಾಲ್ಕು ವರ್ಷಗಳಿಗೂ ಮಿಕ್ಕು ಚೆನ್ನಾಗಿದ್ದ ಉದಾಹರಣೆಗಳಿವೆ.

ಸೂಬಾಬುಲ್ ಬಿತ್ತನೆ ಬೀಜಗಳು : ಹವಾಯಿಯನ್ಜೆಯಂಟ್ಸ್ ಕೆ-8, ಎನ್.ಜಿ.ಆರ್. 8, ಸಿ. ಬಿ. 81 ಇತ್ಯಾದಿ ಜಾತಿಯ ಸೂಬಾಬುಲ್ ಬಿತ್ತನೆ ಬೀಜಗಳು, ರಾಜ್ಯದ ಕೃಷಿ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

– ಲಕ್ಷ್ಮೀಪತಿ

LEAVE A REPLY

Please enter your comment!
Please enter your name here