
ಕರ್ನಾಟಕ ಸರ್ಕಾರದ ಕೆಲವು ಸಂಸ್ಥೆಗಳು ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುತ್ತವೆ. ರಾಜ್ಯ ಸರ್ಕಾರ ಕೈಗೊಳ್ಳುವ ನೀತಿ – ನಿರೂಪಣೆಗಳ ಹಿಂದೆ ಇಂಥ ಸಂಸ್ಥೆಗಳ ಶ್ರಮ ಅಡಗಿರುತ್ತದೆ. ವಿಶೇಷವಾಗಿ ಪರಿಸರ – ಅರಣ್ಯ – ಜೀವಿ ಪರಿಸ್ಥಿತಿ ವಿಷಯಗಳ ಕುರಿತು ಕರ್ನಾಟಕ ಸರ್ಕಾರ ಮಹತ್ವದ ನೀತಿಗಳನ್ನು ರೂಪಿಸಿದೆ. ರೂಪಿಸಲಿದೆ. ಅಂಥವುಗಳ ಹಿಂದೆ ನಿರಂತರ ಸಂಶೋಧನೆ ಅಡಕವಾಗಿರುತ್ತದೆ. ಹೀಗೆ ಎಲೆ ಮರೆಕಾಯಿಯಂತೆ ಎನ್ನುವುದರ ಬದಲು ಪಕ್ವವಾದ ಹಣ್ಣಿನಂತೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪರಿಸರ ವಲಯಗಳಲ್ಲಿ ಈ ಸಂಸ್ಥೆ ಸಂಕ್ಷಿಪ್ತವಾಗಿ ಎಂಪ್ರಿ (EMPRI) ಎಂದೇ ಹೆಸರುವಾಸಿ.
ಕ್ರಿಯಾಶೀಲ ರಾಜಕಾರಣಿಯಾಗಿದ್ದ ಎಸ್. ಕೃಷ್ಣ ಅವರು ಕರ್ನಾಟಕ ರಾಜ್ಯದಲ್ಲಿ ಅಕ್ಟೋಬರ್ 11, 1999 ರಿಂದ May 28, 2004 ರ ತನಕ ರಚನೆಯಾಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಇವರ ದೂರದೃಷ್ಟಿತ್ವದ ಪರಿಣಾಮವಾಗಿ ಸೆಪ್ಟೆಂಬರ್ 17, 2002 ರಂದು ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆ ಅಧೀನದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ರಚನೆಯಾಯಿತು.
ಈ ಸಂಸ್ಥೆಯು ಮುಖ್ಯವಾಗಿ ಅನ್ವಯಿಕ ಮತ್ತು ನೀತಿ ಸಂಶೋಧನೆಯನ್ನು ಕೈಗೊಳ್ಳುತ್ತಿದೆ. ರಾಜ್ಯದ ಪರಿಸರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೀತಿಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಈ ದಿಶೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಅಂದರೆ ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳು ಸ್ಥಳೀಯ ಪರಿಸರಕ್ಕೆ ಅಂದರೆ ಕಸ ವಿಂಗಡಣೆ, ವಿಲೇವಾರಿ, ಸಂಸ್ಕರಣೆ ಇತ್ಯಾದಿ ವಿಷಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅರಣ್ಯ, ಪರಿಸರಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಮಾಡುವುದರ ಹಿಂದೆ ಸಂಸ್ಥೆ ಪಾತ್ರ ಅಗಾಧ.

ಇವೆಲ್ಲದರ ಜೊತೆಗೆ ಸಾಮರ್ಥ್ಯ ವೃದ್ಧಿ ತರಬೇತಿಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಸಂಸ್ಥೆಯು ಒದಗಿಸುತ್ತಿರುವ ಸೇವೆಗಳು ರಾಜ್ಯ ಸರ್ಕಾರ, ಕೈಗಾರಿಕೆಗಳು ಮತ್ತು ನಾಗರಿಕ ಸಮಾಜವು ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ಸಹಕಾರಿಯಾಗಿವೆ.
ಗ್ರಾಮ ಪಂಚಾಯಿತ್ ಗಳಿಂದ ಆರಂಭಿಸಿ ರಾಜ್ಯ ಸರ್ಕಾರದ ಹಂತದವರೆಗೆ ಆಡಳಿತ ವ್ಯವಸ್ಥೆಗಳು ಗಾಳಿ, ನೀರು, ಮಣ್ಣು, ಖನಿಜಗಳು, ಕಾಡುಗಳು, ಜೀವವೈವಿಧ್ಯತೆ ಕುರಿತು ಸಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿದೆ.
ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗೆ ಕಾರಣಗಳನ್ನು ಗುರುತಿಸುವುದರ ಜೊತೆಜೊತೆಗೆ ಅವುಗಳಿಗೆ ಪರಿಹಾರವನ್ನೂ ಸೂಚಿಸುತ್ತಿದೆ. ಸಂಸ್ಥೆಯು ಕೈಗೊಳ್ಳುತ್ತಿರುವ ಸಂಶೋಧನಾ ಪ್ರಕ್ರಿಯೆಯ ಗುಣಮಟ್ಟವನ್ನು ಹೆಚ್ಚಿಸಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳೊಂದಿಗೆ ಸಹ ಸಂಬಂಧ ಹೊಂದಿದೆ.
“ಎಂಪ್ರಿ” ಕಚೇರಿಯಿರುವ “ಹಸಿರು ಭವನ” ಕಟ್ಟಡ ರಚನೆಯೇ ಅದರ ಧೈಯೋದ್ದೇಶಗಳಿಗೆ ಪೂರಕವಾಗಿದೆ. ʼಹಸಿರು ಕಟ್ಟಡ ಪರಿಕಲ್ಪನೆ’ಯನ್ನು ಒಳಗೊಂಡಂತೆ ನಿರ್ಮಿಸಲಾಗಿದೆ. ಇಲ್ಲಿ ಮಳೆನೀರು ಕೊಯ್ಲು ತಂತ್ರಗಳ ಅಳವಡಿಕೆ, ನವೀಕರಿಸಬಹುದಾದ ಅಂದರೆ ಸೌರಶಕ್ತಿ ಸೇರಿದಂತೆ ಇತರ ಶಕ್ತಿಮೂಲಗಳ ಬಳಕೆ, ಹೊಂದಾಣಿಕೆಯ ಹವಾಮಾನ ವಿನ್ಯಾಸ ಹೊಂದಿದೆ. ಇವೆಲ್ಲದರಿಂದ ಇಂಗಾಲದ ಹೆಜ್ಜೆಗುರುತುಗಳು ಗಣನೀಯವಾಗಿ ಕಡಿಮೆಯಾಗಿದೆ.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ – ಎಂಪ್ರಿ (EMPRI) ದೃಷ್ಟಿಕೋನ :
ನಾಗರಿಕ ಸಮಾಜವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಪ್ರೇರೇಪಿಸುವ ಮತ್ತು ಅನುವು ಮಾಡಿಕೊಡುವ ಜ್ಞಾನ ಕೇಂದ್ರ.ಈ ನಿಟ್ಟಿನಲ್ಲಿ ಸಂಸ್ಥೆಯ ಹೆಜ್ಜೆಗಳು 2002ರಿಂದ ಸಾಗುತ್ತಾ ಬಂದಿದೆ.
1. ಅಗತ್ಯ ಆಧಾರಿತ ತರಬೇತಿಗಳನ್ನು ಆಯೋಜಿಸುವುದು, ಬೇಡಿಕೆ ಆಧಾರಿತ ಸಂಶೋಧನೆ ಕೈಗೊಳ್ಳುವುದು. ಪರಿಸರ ಸಮಸ್ಯೆಗಳ ಕುರಿತು ಸಲಹಾ ಸೇವೆಗಳನ್ನು ಒದಗಿಸುವುದು.
2. ನಾಗರಿಕ ಸಮಾಜ ಮತ್ತು ಸರ್ಕಾರವು ಪರಿಸರವನ್ನು ರಕ್ಷಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ನಿರ್ವಹಿಸಲು ಸೂಕ್ತವಾದ ನೀತಿಗಳನ್ನು ರಚಿಸಲು ಸಹಾಯ ಮಾಡುವುದು
ಉದ್ದೇಶಗಳು :
1. ಪರಿಸರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀತಿ – ನಿರೂಪಣೆ ರಚಿಸಲು ಸರ್ಕಾರ, ಸರ್ಕಾರೇತರ ಮತ್ತು ಇತರ ಸಂಸ್ಥೆಗಳಿಗೆ ಸಾಮರ್ಥ್ಯ ವೃದ್ಧಿ ಮತ್ತು ತಾಂತ್ರಿಕ ಸಹಾಯ ಒದಗಿಸುವುದು
2. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಕ್ಷೇತ್ರದಲ್ಲಿ ಕೈಗಾರಿಕೆಗಳು, ಸರ್ಕಾರಿ ಇಲಾಖೆಗಳು ಮತ್ತು ಇತರ ಸಂಸ್ಥೆಗಳಿಗೆ ಸಲಹಾ ಸೇವೆಗಳನ್ನು ಒದಗಿಸುವುದು.
3. ವಿವಿಧ ಪರಿಸರ ಅಂಶಗಳ ಕುರಿತು ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ನೀತಿ ದಾಖಲೆಗಳನ್ನು ಅಭಿವೃದ್ಧಿಪಡಿಸಲು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)
“ಹಸಿರು ಭವನ”, ದೊರೆಸಾನಿಪಾಳ್ಯ ಅರಣ್ಯ ಆವರಣ
ವಿನಾಯಕನಗರ ವೃತ್ತ, ಜೆ.ಪಿ. ನಗರ 5ನೇ ಹಂತ
ಬೆಂಗಳೂರು 560 078, ಭಾರತ
ದೂರವಾಣಿ 080–2649 0747 ಇಮೈಲ್: [email protected]
































