‘ಹಿತಮಿತ ನೀರು, ಪೋಷಕಾಂಶ ಮತ್ತು ಕೀಟ ನಿರ್ವಹಣೆಗೆ ಜೈವಿಕ ವಿಧಾನ ಅಳವಡಿಸಿಕೊಂಡರೆ ಅತ್ಯುತ್ತಮವಾಗಿ ಮಾವು ಬೆಳೆಯಬಹುದು. ಈ ಮೂರು ತತ್ವಗಳನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುತ್ತಿದ್ದೇನೆ. ಫಸಲು ಬರುತ್ತಿದ್ದಂತೆಯೇ ಬೇಡಿಕೆ ಹೆಚ್ಚುತ್ತದೆ’ ಎಂದು ಆತ್ಮವಿಶ್ವಾಸದಿಂದ ಗಂಗಾಧರಯ್ಯ ಸ್ವಾಮಿ ಹೇಳುತ್ತಾರೆ. ಇವರು ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಗಿಡದಪಾಳ್ಯ ಗ್ರಾಮದ ತೋಟಗಾರಿಕೆ ಬೆಳೆಗಾರರು.
ಹದಿನೈದು ಎಕರೆ ಜಮೀನಿನಲ್ಲಿ ಮಾವು ತೋಟ ಇದೆ. ರಸಪೂರಿ, ಬಾದಾಮಿ, ಮಲ್ಲಿಕಾ, ದಶೇರಿ ಇತ್ಯಾದಿ ತಳಿ ಮರಗಳಿವೆ. ಗಂಗಾಧರಯ್ಯ ಸ್ವಾಮಿ ಅವರ ತಂದೆ ಸಸಿಯಿಂದ ಸಸಿಗೆ 30 ಅಡಿ ಅಂತರ ಕೊಟ್ಟು ಬೆಳೆಸಿದ ನೆಟ್ಟು ಬೆಳೆಸಿದ ಮರಗಳೂ ಇವೆ. ‘ಈಗ ಇಪ್ಪತ್ತು ಅಡಿ ದಾಯ ಕೊಟ್ಟರೂ ಸಾಕು. ಮುವತ್ತು ಅಡಿ ಅಂತರ ಕೊಟ್ಟರೆ ಸಾಕಷ್ಟು ಜಾಗ ಖಾಲಿ ಉಳಿಯುತ್ತದೆ. ಇದು ವ್ಯರ್ಥ ಆಗುತ್ತದೆ. ಆದ್ದರಿಂದ ಗಿಡದಿಂದ ಗಿಡಕ್ಕೆ 20 ಅಡಿ ಅಂತರ ಕೊಟ್ಟರೆ ಹೆಚ್ಚು ಗಿಡಗಳನ್ನು ಕೂರಿಸಬಹುದು. ಇಳುವರಿಯೂ ಹೆಚ್ಚು ಬರುತ್ತದೆ. ಲಾಭವೂ ಹೆಚ್ಚಾಗುತ್ತದೆ. ಈ ಮರಗಳು 50 ವರ್ಷದ ತನಕ ಚೆನ್ನಾಗಿ ಇಳುವರಿ ಕೊಡುತ್ತವೆ’ ಎಂದು ಹೇಳುತ್ತಾರೆ.
ಸಾವಯವ ಮಾವಿಗೆ ಬೇಡಿಕೆ ನೆಮ್ಮದಿ ಬದುಕಿಗೆ ಹೂಡಿಕೆ: ಹಣ್ಣಿನ ನೊಣಗಳಿಂದ ಮಾವು ರಕ್ಷಿಸುವುದು ಬಹಳ ಕಷ್ಟ. ರಾಸಾಯನಿಕ ಕೀಟನಾಶಕ ಸಿಂಪಡಿಸಿದರೂ ಪ್ರಯೋಜನ ಇಲ್ಲ. ಒಮ್ಮೆ ನೊಣ ಹೊಡೆದರೆ ಹಣ್ಣು ಒಳಗೆ ಕೊಳೆಯಲು ಆರಂಭ ಆಗುತ್ತದೆ. ಮೇಲ್ನೋಟಕ್ಕೆ ಇದು ಗೊತ್ತೇ ಆಗುವುದಿಲ್ಲ. ಇದೇ ರೀತಿ ಸಾವಿರಾರು ಸಂಖ್ಯೆಯಲ್ಲಿ ಹಣ್ಣುಗಳು ಹಾಳಾಗುತ್ತವೆ. ‘ಜೈವಿಕ ವಿಧಾನದಿಂದ ಹಣ್ಣಿನ ನೊಣಗಳನ್ನು ನಿಯಂತ್ರಿಸುವ ಬಗ್ಗೆ ವಿಚಾರಿಸಿದಾಗ ಬ್ಯಾರಿಕ್ಸ್ ಫೆರಮೋನ್ ಟ್ರ್ಯಾಪ್-ಲ್ಯೂರ್ ಮತ್ತು ಸ್ಟಿಕ್ಕಿ ಟ್ರಾಪ್ಗಳ ಬಗ್ಗೆ ತಿಳಿಯಿತು. ಒಂದು ಎಕರೆ ತೋಟಕ್ಕೆ ಎಂಟರಿಂದ ಹತ್ತು ಫೆರಮೋನ್ ಟ್ರ್ಯಾಪ್ ಹಾಕಿದರೂ ಸಾಕು. ಇವುಗಳನ್ನು ನೇತು ಹಾಕಿದ ಕೆಲವೇ ನಿಮಿಷಗಳಲ್ಲಿ ಹಣ್ಣಿನ ನೊಣಗಳು ಆಕಷರ್ಿತವಾಗಿ ಬಂದು ಬೀಳುತ್ತವೆ. ನಮ್ಮ ಕಣ್ಣಿಗೂ ಕಾಣದ ಸಣ್ಣಸಣ್ಣ ಕೀಟಗಳು ಸ್ಟಿಕ್ಕಿ ಟ್ರ್ಯಾಪ್ಗೆ ಬಂದು ಅಂಟಿಕೊಳ್ಳುತ್ತವೆ. ಇವೆರಡು ಕೀಟ ನಿಯಂತ್ರಕಗಳಿಂದ ಪ್ರತಿವರ್ಷ ಅಪಾರ ಹಣ, ಸಮಯ, ಶ್ರಮ ಉಳಿತಾಯ ಆಗಿದೆ’ ಎಂದು ವಿವರಿಸುತ್ತಾರೆ.
ಗಂಗಾಧರಯ್ಯ ಸ್ವಾಮಿ ಅವರ ಇಷ್ಟೆಲ್ಲ ಶ್ರಮ ಫಲ ನೀಡಿದೆ. ಇವರು ಬೆಳೆಯುತ್ತಿರುವ ಮಾವಿಗೆ ವಿಶೇಷವಾಗಿ ಬೆಂಗಳೂರಿನ ಸಾವಯವ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ‘ಮೊದಲು ಸ್ಥಳಕ್ಕೆ ಬಂದ ವ್ಯಾಪಾರಿಗಳಿಗೆ ಮಾರಿ ಬಿಡುತ್ತಿದ್ದೆವು. ದೊರೆಯುತ್ತಿದ್ದ ಲಾಭಾಂಶ ತುಂಬ ಕಡಿಮೆ ಇರುತ್ತಿತ್ತು. ಒಮ್ಮೆ ನಮ್ಮ ತೋಟಕ್ಕೆ ಭೇಟಿ ನೀಡಿದ ಪರಿಚಿತರೊಬ್ಬರು ನೀವೇ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಎಂದರು. ಆನಂತರ ಅದೇ ರೀತಿ ಮಾರಾಟ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ಮುಂಚಿತವಾಗಿ ಮಾವಿಗೆ ಬುಕ್ ಮಾಡುತ್ತಾರೆ. ಬುಟ್ಟಿಗಳಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಿ ಕೊಡುತ್ತೇವೆ. ತಕ್ಷಣವೇ ಹಣ ದೊರೆಯುತ್ತದೆ. ಜೈವಿಕ ರೀತಿ ಮಾವು ಸಾಗುವಳಿ ಮಾಡುತ್ತಿರುವುದರಿಂದ ನಮ್ಮ ಶ್ರಮಕ್ಕೆ, ತೋಟಗಾರಿಕೆ ಉತ್ಪನ್ನಕ್ಕೆ ಒಳ್ಳೆಯ ಬೆಲೆ ದೊರೆಯುತ್ತಿದೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.
ಮಾವಿನಗಿಡಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವುದರಿಂದ ಉತ್ತಮ ಇಳುವರಿಯಿದೆ. ಪ್ರತಿವರ್ಷವೂ ಬೇಡಿಕೆ ಪ್ರಮಾಣ ಹೆಚ್ಚುತ್ತಲೇ ಇದೆ. ಇದರಿಂದ “ಸಾವಯವ ಮಾವಿಗೆ ಬೇಡಿಕೆ ನೆಮ್ಮದಿ ಬದುಕಿಗೆ ಹೂಡಿಕೆ” ಎನ್ನುವುದು ಸೂಕ್ತ ಎನ್ನುತ್ತಾರೆ. ಆಸಕ್ತ ರೈತರು ಇವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದು. ದೂ: 91413 17295 / 87220 65215