ಮಂಡ್ಯ. ಸೆ.3 (ಅಗ್ರಿಕಲ್ಚರ್ ಇಂಡಿಯಾ) ಮಳೆಯಿಂದ ಆದ ಹಾನಿಗೆ ತಕ್ಷಣವೇ ಪರಿಹಾರ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಳೆಯಿಂದ ಹಾನಿಗೊಳಗಾಗಿರುವ ಮೈಸೂರು- ಬೆಂಗಳೂರು ದಶಪಥ ರಸ್ತೆ ಕಾಮಗಾರಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆಹಾನಿ, ಜಾನುವಾರು ಸಾವು, ಮನೆಗಳ ಹಾನಿಗಳಿಗೆ ತಕ್ಷಣವೇ ಹಣ ಬಿಡುಗಡೆಮಾಡಿಸಲಾಗುತ್ತಿದೆ ಎಂದರು.
ರಸ್ತೆ ಹಾಳಾಗಿರುವುದು, ಕೆರೆ ಒಡೆದುಹೋಗಿರುವುದು ಇತ್ಯಾದಿ ಹಾನಿಯ ಅಂದಾಜನ್ನು ಮಳೆ ನಿಂತಮೇಲೆ ಮಾಡಲು ಸಾಧ್ಯ. ಕೆ.ಆರ್.ಪೇಟೆ, ಮದ್ದೂರುಗಳಲ್ಲಿ ಸಾಕಷ್ಟು ಹಾನಿಯಾಗಿದೆ.ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಜಿಲ್ಲೆಯ ಜನರ ಜೀವನಾಡಿ ಮೈ ಶುಗರ್ ಸಕ್ಕರೆ ಕಾರ್ಖಾನೆ ಆರಂಭ ವಿಚಾರದಲ್ಲಿ ಸರ್ಕಾರ ನುಡಿದಂತೆ ನಡೆದಿದೆ. ಕಾರ್ಖಾನೆ ಆರಂಭ ಕುರಿತು ಸಂಸದರಾದ ಸುಮಲತಾ ಅಂಬರೀಶ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.ಇದಕ್ಕೆ ಸರ್ಕಾರ ಸ್ಪಂದಿಸಿದೆ. ಮುಖ್ಯಮಂತ್ರಿಗಳಿಗೆ ಮಂಡ್ಯ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ.ಜಿಲ್ಲೆಗೆ ಅಗತ್ಯವಾದ ಅನುದಾನ ಬಿಡುಗಡೆಯಾಗುವ ಭರವಸೆ ಇದೆ ಎಂದರು.
ಹಾನಿಯ ವರದಿಯನ್ನು ಅಧಿಕಾರಿಗಳಿಂದ ತರಿಸಿಕೊಂಡು ಸರ್ಕಾರಕ್ಕೆ ನೀಡಿ ಅನುದಾನ ತರಿಸಿಕೊಡುವ ಕೆಲಸ ಮಾಡಲಾಗುವುದು ಎಂದರು.