ವರಮಾನದ ಲೆಕ್ಕಕ್ಕೆ ಇದು ಪ್ಲಸ್ಸಾಯಿತಲ್ಲ !

0
ಚಿತ್ರ-ಲೇಖನ: ನಾಗೇಂದ್ರ ಸಾಗರ್‌, ಪ್ರಗತಿಪರ ಕೃಷಿಕರು

ನಗರ ಸಮೀಪ ಇರುವ ಪರಿಸರ ಕಾರ್ಯಕರ್ತ ಚಕ್ರವಾಕ ಸುಬ್ರಹ್ಮಣ್ಯ ಅವರಿಗೆ ಮನೆಬಳಕೆಗೆಂದು ಡ್ರೈಯರ್ ಡೆಲಿವರಿ ಕೊಟ್ಟು ಬರುವಾಗ ಹೊಸನಗರದಲ್ಲಿನ ರೈತ ಉತ್ಪಾದಕ ಕಂಪನಿಯ ಮಳಿಗೆಗೊಂದು ಭೇಟಿ ನೀಡಿದೆ.

ದೇವಾನಂದ್, ಹೊಸನಗರದ ಈ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾಗಿದ್ದು ಸಾಕಷ್ಟು ಶ್ರಮವಹಿಸಿ ಕಂಪನಿಯನ್ನು ಗೆಲುವಿನ ಹಳಿಗೆ ತರುತ್ತಿದ್ದಾರೆ.. ಈ ಕಂಪನಿಗೆ ಅದೂ ಇದೂ ಕೊಟ್ಟು ತರುವ ಪದ್ಧತಿಯನ್ನು ನಾನು ಇರಿಸಿ ಕೊಂಡಿದ್ದೇನೆ.

ಅದೀಗ ತಾನೇ ಚಕ್ರವಾಕ ಸುಬ್ರಹ್ಮಣ್ಯ ಅವರಿಗೆ ಡ್ರೈಯರ್ ಕೊಟ್ಟವನು, ಒಂದು ಡ್ರೈಯರ್ ಕೃಷಿಕನೊಬ್ಬನ ಮನೆಯಲ್ಲಿ ಇತ್ತು ಎಂದಾದರೆ ಏನೇನಕ್ಕೆಲ್ಲ ಅದನ್ನು ಬಳಸಿಕೊಳ್ಳಬಹುದು ಎಂದು ಲೆಕ್ಕಾಚಾರದ ಲೆಕ್ಚರ್ ಕೊಟ್ಟು ಬಂದಿದ್ದೆ.. ಕೊಳೆ ಬಂದು ಉದುರಿ ಬಿದ್ದ ಅಡಿಕೆಯನ್ನು ಡ್ರೈಯರ್ರಲ್ಲಿ ಜೋಪಾನ ಒಣಗಿಸಿಟ್ಟುಕೊಂಡರೂ ಸಾಕು ನಿಮ್ಮ ದುಡ್ಡು ವಾಪಸ್ ಬಂತು ಅಂತಿಟ್ಟುಕೊಳ್ಳಿ ಎಂದಿದ್ದೆ.. ಮತ್ತು ಒಲೆ ಹೆಡದ ಮೇಲೆ ಕಸರತ್ತು ಮಾಡಿ ಒಣಗಿಸುವ ಜಾಯಿಕಾಯಿ ಜಾಪತ್ರೆ, ಮೆಣಸು, ಏಲಕ್ಕಿ, ಸೂಜು ಮೆಣಸು ಮತ್ತು ತೆಂಗಿನಕಾಯಿ ಇವನ್ನೆಲ್ಲಾ ಡ್ರೈಯರ್ರಲ್ಲಿ ಒಣಗಿಸಿದರೆ ಬೆಲೆ ಇದೆ.

ಹೊಸನಗರ ರೈತ ಉತ್ಪಾದಕ ಕಂಪನಿಯ ಮಳಿಗೆಯಲ್ಲಿ ತನ್ನ ಷೇರುದಾರರಿಂದ ನೇರವಾಗಿ ಖರೀದಿಸಿದ ತೆಂಗಿನಕಾಯಿಯ ರಾಶಿ ಕಂಡವನಿಗೆ ಹೇಗೂ ನಮ್ಮಲ್ಲೂ ಒಂದು ಡ್ರೈಯರ್ ಇದೆ. ಲಾಭದ ಲೆಕ್ಕಾಚಾರದ ಪ್ರಯೋಗ ನಾನೇ ಏಕೆ ಮಾಡಬಾರದು ಎಂದು ಲೆಕ್ಕ ಹಾಕಿದೆ.. ನಗರದ ತನಕದ ನನ್ನ ಪ್ರಯಾಣ ವೆಚ್ಚ ಗಿಟ್ಟಿದರೂ ಗಿಟ್ಟಬಹುದು ನೋಡಿಯೇ ಬಿಡೋಣ ಎಂದು ಕೊಂಡೆ.

ಎಪ್ಪತ್ತು ಕೆಜಿ.. ನೀರಿದ್ದದ್ದು ಇಲ್ಲದ್ದು ಸೇರಿ ಕೊಂಡೆ. ಎರಡು ಮೂಟೆ ನಾನೇ ಎತ್ತಿಳಿಸಲು ಆಯಿತು. ಮನೆಗೆ ಬಂದವ ಬಿಸಿ ಕಾಫಿ ಕುಡಿದು ಸ್ವಲ್ಪ ಸುಧಾರಿಸಿಕೊಂಡವ ಡ್ರೈಯರ್ ಎದುರು ಪ್ರತಿಷ್ಠಾಪಿತನಾದೆ. ಎಪ್ಪತ್ತು ಕೆಜಿ,  ನೂರಾ ಮೂವತ್ತೈದು ಕಾಯಿ.. ಅದರಲ್ಲಿ ಆರು ಹಾಳೂ ಮೂಳು. ಅದು ಒಲೆಗೇ ಸೈ.

ನನ್ನ ಹತ್ತಿರ ಇದ್ದದ್ದು ಹತ್ತು ಟ್ರೇ ಅಂದರೆ ಐವತ್ತು ಕೆಜಿ ಇನ್ಪುಟ್ ಡ್ರೈಯರ್. ಒಂದೊಂದು ಟ್ರೇಯಲ್ಲಿ ಇಪ್ಪತ್ತು ಕಾಯಿ ಹಿಡಿಯಿತು. ಗೆರಟೆಯ ಸಮೇತದ ಹೋಳುಗಳು. ಉಷ್ಣಾಂಶವನ್ನು ಐವತ್ತು ಡಿಗ್ರಿಗೆ ಸೆಟ್ ಮಾಡಿಟ್ಟು ಗಂಟೆ ಎಷ್ಟಾಯಿತೆಂದು ನೋಡಿದೆ. ರಾತ್ರಿಯ ಎಂಟೂ ಕಾಲು.. ಮತ್ತೇನಿದ್ದರೂ ನಾಳೆಯ ಸಂಜೆಯ ಮಾತು…

ಮಾರನೆ ಸಂಜೆ ಒಂದೊಂದೇ ಟ್ರೇ ಕೆಳಗಿಳಿಸಿ ಗೆರೆಟೆಯನ್ನು ಬೇರ್ಪಡಿಸಿದೆ…ನಿನ್ನೆ ಇಟ್ಟ ಹಸಿ ತೆಂಗಿನಕಾಯಿ ಕೊಬ್ಬರಿ ವರ್ಣಕ್ಕೆ ತಿರುಗಿದ್ದವು.. ಕಾಯಲ್ಲಿರುವ ನೀರಿನಾಂಶ ಪೂರ್ತಿ ಆರಲು ಹೆಚ್ಚು ಕಡಿಮೆ ಮತ್ತೆ ಇಪ್ಪತ್ನಾಲ್ಕು ತಾಸು ಬೇಕು.

ಗೆರಟೆಯನ್ನು ಚೀಲಕ್ಕೆ ತುಂಬುತ್ತಾ ಬಚ್ಚಲೊಲೆ ಬೆಂಕಿ ಹಾಕುವಾಗ ದಿನಾ ಎರಡು ಇಟ್ಟರೆ ಬೇಗ ಬೆಂಕಿ ಕಚ್ಚುತ್ತೆ. ಕಾವೂ ಸಿಗುತ್ತೆ ಎಂದು ಮಾಮೂಲಿ ಎಣಿಕೆ, ಮೊದಲು ಮನಸ್ಸಿಗೆ ಬಂತು. ತಕ್ಷಣವೇ ಅರೆ ನಮ್ಮ ಸಾಗರ ಸೌಹಾರ್ದ ಸಹಕಾರ ಸಂಘದಲ್ಲಿ ಈ ತೆಂಗಿನ ಚಿಪ್ಪನ್ನು ಹನ್ನೆರಡು ರೂಪಾಯಿ ದರದಲ್ಲಿ ಖರೀದಿ ಮಾಡುತ್ತಿದ್ದಾರೆ. ಸಾಗರಕ್ಕೆ ಹೋಗುವಾಗ ಕೊಂಡೊಯ್ದರೆ ನಾಲ್ಕು ಕಾಸು ಸಿಗುತ್ತದೆ. ಲಾಭ ನಷ್ಟದ ಲೆಕ್ಕಾಚಾರ ಬಂದಾಗ ವರಮಾನದ ಲೆಕ್ಕಕ್ಕೆ ಇದು ಪ್ಲಸ್ಸಾಯಿತಲ್ಲ ಎಂದು ಕೊಂಡೆ.

ಸಂಘದಲ್ಲಿ ಯಾವ ಉದ್ದೇಶದಿಂದ ತೆಂಗಿನ ಚಿಪ್ಪಿನ ಖರೀದಿ,  ಅದನ್ನು ಮುಂದೇನು ಮಾಡುತ್ತೀರಿ ಎಂದು ವಿಚಾರಿಸಿದ್ದೆ. ತಿಪಟೂರು ಅರಸೀಕೆರೆ ಕಡೆ ಬೇಡಿಕೆ ಇದೆ. ಅಲ್ಲಿ ಇದರಿಂದ ಬಯೋಚಾರ್ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿತು. ಬಳಿಕ ಬಯೋಚಾರನ್ನು ಹ್ಯೂಮಿಕ್ ಆಸಿಡ್ ಮಾಡುತ್ತಾರೆ..  ಮತ್ತೆ ಅದು ನಮ್ಮಂತಹ ರೈತರ ಮನೆಗೆ ಕೃಷಿ ಬಳಕೆಗೆ ಬರುತ್ತದೆ.. ಇದನ್ನೇ ನಾವು ದುಡ್ಡು ಕೊಟ್ಟು ಕೊಂಡು ಕೃಷಿಗೆ ಬಳಸಿ ಹೊಸ ಜಮಾನದ ರೈತರು ನಾವೆಂದು ಬೀಗುತ್ತೇವೆ…

ಗೆಳೆಯ ಕವಲುಕೋಡು ವೆಂಕಟೇಶ್ ಮೊನ್ನೆ ಮೊನ್ನೆಯಷ್ಟೇ ಇದೇ ಚಾರ್ಕೋಲು ವಿಷಯ ಹೇಳಿದ್ದ. ತಿಪಟೂರಿಗೆ ಹೋಗಿ ಕಂಡು ಬರೋಣ ಎಂದಿದ್ದ. ಹೀಗೆ ಸಿಗುವ ಗೆರಟೆ ಚಿಪ್ಪೂ ಅಲ್ಲದೇ ಕಟಾವಿಗೆ ಬಂದಿರುವ ಬಿದರನ್ನೂ ಬಯೋ ಚಾರಾಗಿ ಬದಲಿಸಬಹುದು.. ಮುಂದೆ ಒಂದು ಕೈ ನೋಡಿಯೇ ಬಿಡೋಣ ಎಂದು ಅಂದುಕೊಂಡೆ… ತಮಾಷೆ ವಿಷಯ ಅಲ್ಲ.. ಇಂತಹದೊಂದು ತಿರುಗಾಟ, ಅಲ್ಲಿ ನೋಡೋಣ ಒಂದು ಪ್ರಯೋಗ ಇರಲಿ ಎಂದು ಹಸಿ ಕಾಯಿ ತಂದದ್ದು, ತದನಂತರದ ಈ ಗೆರೆಟೆ ಚಿಪ್ಪು, ಕೇವಲ ಇದೊಂದು ಗೆರಟೆ ಚಿಪ್ಪು ಮನುಷ್ಯನ ಅದೃಷ್ಟ ರೇಖೆಯನ್ನೇ ಬದಲಾಯಿಸಿಯೂ ಬಿಡಬಹುದು.

ಮಾರನೇ ದಿನ.. ಅಂದರೆ ಹಸಿ ಕಾಯನ್ನು ಡ್ರೈಯರ್ರಿಗೆ ಹಾಕಿ ಸುಮಾರು ನಲವತ್ತು ತಾಸಿನ ಬಳಿಕ ಎಣ್ಣೆ ತೆಗೆಯುವ ಹಂತಕ್ಕೆ ಕೊಬ್ಬರಿ ಬದಲಾಗಿತ್ತು… ಮೂಟೆ ಕಟ್ಟಿ ಇಟ್ಟೆ…

ಮಾರನೇ ದಿನ ಕೊಬ್ಬರಿಯನ್ನು ಎಣ್ಣೆ ಗಾಣಕ್ಕೆ ಒಯ್ದೆ. ಹತ್ತಿರತ್ತಿರ ಇಪ್ಪತ್ತೈದು ಕೆಜಿ ತೂಗಿತ್ತು.. ಎಣ್ಣೆಯ ಉತಾರ ಹದಿನೇಳು ಕೆಜಿ ಬಂತು.. ಇಪ್ಪತ್ತು ರೂಪಾಯಿಯಂತೆ ಇಪ್ಪತ್ತೈದು ಕೆಜಿ ಕೊಬ್ಬರಿ ನುರಿಯಲು ಐನೂರು. ರೂಪಾಯಿ ಕೊಟ್ಟಂತಾಯಿತು..

ತೆಂಗಿನಕಾಯಿಗೆ ನಾಲ್ಕು ಸಾವಿರದ ಇನ್ನೂರು ರೂಪಾಯಿ, ಎಣ್ಣೆ ಮಾಡಿಸುವ ಖರ್ಚು ಐನೂರು ಮತ್ತು ಇತರೆ ಖರ್ಚು ಮುನ್ನೂರು ಅಂತ ಇಟ್ಟು ಕೊಂಡರೂ ಐದು ಸಾವಿರ ಖರ್ಚು ಬಂತು.. ಬಾಟ್ಲಿಂಗ್ ಛಾರ್ಜು ವಗೈರೆ ಕಳೆದು ಕೆಜಿ ಎಣ್ಣೆಗೆ ನಾನೂರಿಪ್ಪತ್ತು ರೂಪಾಯಿಗೆ ಮಾರಾಟ ಮಾಡಿ ಏಳು ಸಾವಿರದ ನೂರಾ ನಲವತ್ತು ರೂಪಾಯಿ ಎಣಿಸಿದೆ.. ಜಾನುವಾರಿಗೆ ಕೊಡಲು ಎಂಟು ಕೆಜಿ. ಕೊಬ್ಬರಿ ಹಿಂಡಿ ಸಿಕ್ಕಿತು..

ಅಲ್ಲಿಗೆ ಒಂದು ತಿರುಗಾಟಕ್ಕೆ ಹೋದವನಿಗೆ ಬರೀಗೈಯಲ್ಲಿ ಬರುವಾತ ಕೊಂಚ ಹೆಚ್ಚಿನ ಕಸರತ್ತು ಮಾಡಿದ್ದಕ್ಕೆ ಎರಡರಿಂದ ಎರಡೂವರೆ ಸಾವಿರ ರೂಪಾಯಿ ಹೆಚ್ಚುವರಿ ದುಡಿಮೆ ಆಯಿತು.. ಮೇಲು ನೋಟಕ್ಕೆ ಮೈ ತುಂಬಾ ರಗಳೆ ಕೆಲಸ,ಆದಾಯ ದೊಡ್ಡದಲ್ಲ ಅಂತ ಕಂಡರೂ ನನಗೆ ಇದೊಂದು ಹೆಚ್ಚುವರಿ ಆದಾಯ.. ಹಾಗೆ ನೋಡಿದರೆ ಸಣ್ಣದೂ ಅಲ್ಲ ಅಲ್ಲವೇ?

ಮನಸ್ಸು ಮಾಡಿದರೆ ಒಬ್ಬ ವ್ಯಕ್ತಿ ಅನಾಯಾಸವಾಗಿ ಬದುಕು ಕಟ್ಟಿಕೊಳ್ಳಲು ಗಟ್ಟಿ ಆದಾಯದ ದಾರಿ ಆಗುತ್ತದೆ ಕೂಡ.

LEAVE A REPLY

Please enter your comment!
Please enter your name here