ಸಿದ್ಧಾರ್ಥ ಹೆಗ್ಡೆ ಬಹುದೊಡ್ಡ ಕನಸುಗಾರರು. ಬಹುದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದವರು. ಕಾಫಿಯನ್ನೇ ಮೆಟ್ಟಿಲು ಮಾಡಿಕೊಂಡು ಬಹುದೊಡ್ಡ ಕಾಫಿಸೌಧ ಕಟ್ಟಿದವರು. ಭಾರತೀಯ ಕಾಫಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಲು ಯತ್ನಿಸಿ ಅದಕ್ಕೆ ಅತ್ಯುತ್ತಮ ಬೆಲೆ ತಂದುಕೊಟ್ಟವರು. 50 ಸಾವಿರ ಜನರಿಗೆ ಪ್ರತ್ಯಕ್ಷ, ಲಕ್ಷಾಂತರ ಜನರಿಗೆ ಪರೋಕ್ಷ ಉದ್ಯೋಗ ಕಲ್ಪಿಸಿಕೊಟ್ಟವರು. ಇವರ ಸಾವು ಕಾಫಿ ಬೆಳೆಗಾರರಿಗೆ, ಕಾಫಿಪ್ರಿಯರಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಇಂಥ ವ್ಯಕ್ತಿಯ ಬಗ್ಗೆ ನಂದಿನಿ ವಿಶ್ವನಾಥ ಹೆದ್ದುರ್ಗ ಅವರು ಬರೆದ ನುಡಿನಮನ ನಿಮ್ಮ ಮುಂದಿದೆ.

ಏಳುವಾಗಲೇ ಎಂಥ ಅನ್ಯಮನಸ್ಕತೆ. ಯಾಕೆಂತ ಗೊತ್ತಾಗದಿದ್ದರೂ ಬೆಳಗಿನ ಜಾವದ ಕನಸು ಮತ್ತೆ ನೆನಪಿಗೆ ಬಂತು. ನಾನು ನೀರೊಲೆಗೆ ಹಾಕಿದ್ದ ದೊಡ್ಡದೊಡ್ಡ ಉರಿದ ದಿಮ್ಮಿಗಳನ್ನುಒಳಕ್ಕೆ ತಳ್ಳುತ್ತಿದ್ದೇನೆ. ಇದಕ್ಕೆ ಮಲೆನಾಡ ಭಾಷೆಯಲ್ಲಿ ‘ಉರಿ ನೂಕೋದು’ ಅನ್ನೋದೂ ಇದೆ. ಆದರೆ ಹಿರಿಯರು ಹೇಳೋ ಪ್ರಕಾರ ಹೀಗೆ ಉರಿಯುವ ನೀರೊಲೆ ಕನಸಿಗೆ ಕಾಣುವುದು ಸಾವಿನ ಸಮಾಚಾರ ಕೇಳುವ ಸೂಚನೆಯಂತೆ. ನಂಗ್ಯಾಕೋ ಅದೇ ಕನಸು ಮತ್ತೆಮತ್ತೆ ಕಣ್ಮುಂದೆ ಬಂದು ಎಂಥದ್ದೊ ಕಸಿವಿಸಿ ಶುರುವಾಯ್ತು..

ಎದ್ದವಳು ಬೆಳಗಿನ ಕೆಲಸಗಳನ್ನು ಶುರು ಹಚ್ಚಿ ದೇವರ ಪೂಜೆಗೆ ಹೂವ ತರೋದಿಕ್ಕೆ ಹೋದವಳ ಮನಸ್ಸು ಅದೆಷ್ಟು ಗೊಂದಲದ ಗೂಡಾಗಿತ್ತೆಂದರೆ ಹೂವಿನ ಬುಟ್ಟಿ ಹಿಡಿದು ಏನಾಕ್ಕಾಗಿ ಓಡಾಡ್ತಿದ್ದೀನಿ ಅನ್ನುವುದು ಮರೆತು ಹೋಗಿ ಬಹಳ ಹೊತ್ತು ಓಡಾಡಿದ ಮೇಲೆ ನೆನಪಾಯ್ತು.

ಯಾಕೋ ಇವತ್ತು ಯಾವ ಗಿಡದಲ್ಲೂ ಹೂವಿಲ್ಲ. ಆದರೆ ಅದೋ, ಆ ಹಳದಿ ದಾಸವಾಳ ಮಾತ್ರ ತಾನು ಅರಳಿಸಿದ ಒಂದೇ ಒಂದು ಹೂವನ್ನು ತೀರಾ ಬಾಗಿಸಿಕೊಂಡು ನಿಂತಿದೆ..ಇದೇನಾಯ್ತು ಅಂತ ನೋಡಿದವಳಿಗೆ ಹೂವಿನ ಅಗಲ,ಅದರ ದಳಗಳ ದಟ್ಟತೆ,ಶಲಾಕೆಯ ಗಾತ್ರವನ್ನು ಆ ಪುಟಾಣಿ ತೊಟ್ಟು ತಡೆಯಲಾರದೆ ಹೂವು ಬಾಗಿ ನಿಂತಿದೆ. ಹೌದು; ತಾನೇ ಅರಳಿಸಿಕೊಂಡ ಹೂವಿನ ಗಾತ್ರ,ತೂಕವನ್ನು ಗಿಡ ಭರಿಸಲಾಗುತ್ತಿಲ್ಲ. ಬೇಸರ ಅನಿಸ್ತು.

ಹೂವಿಗೆ ಒಂದು ಪುಟ್ಟ ರೆಂಬೆಯ ಆಸರೆ ಕೊಟ್ಟು ಅದನ್ನು ನೆಟ್ಟಗಿಟ್ಟವಳು ಸಿಕ್ಕ ನಾಲ್ಕು ಹೂವುಗಳನ್ನೇ ಬಿಡಿಸಿ ಬುಟ್ಟಿ ದೇವರ  ಮನೆಯಲಿಟ್ಟು ನೀರೊಲೆ ಉರಿ ನೂಕೋದಿಕ್ಕೆ ಅಂತ ಹಿಂದುಗಡೆಗೆ ಹೋದೆ.ಅದೇ ದಪ್ಪ ದಿಮ್ಮಿಗಳು ರವರವ ಉರೀತಾ ಹೊರಬರತಿದ್ದವು.ನಾನು ಅವುಗಳನ್ನು ಒಳಕ್ಕೆ ತಳ್ಳುವಾಗಲೇ ಮತ್ತೆ ಆ ಕನಸಿನ ನೆನಪಾಯ್ತು.

ಹೌದು ಕನಸಲ್ಲಿ ನೋಡಿದ್ದೂ ಇದೇ ದೃಶ್ಯ.  ಸಾವು ಯಾರ ಮನೆ ಹೊಕ್ಕಿರಬಹುದು, ಮತ್ತೆ ಸಂಕಟ. ನಾನಲ್ಲಿಂದ ಎದ್ದು ಬರುವಾಗಲೇ ಮನೆಯವರು”ಬಾಡಿ ಸಿಕ್ಕಿದೆ”ಅಂದರು. ಹೌದು ಮೊನ್ನೆ ರಾತ್ರಿಯಿಂದ ಕಾಣೆಯಾದ ಕಾಫಿನಾಡಿನ ದೊರೆಯ ಶರೀರ. ಮೊಬೈಲಿನ ಸ್ಕ್ರೀನಿನ ಮೇಲೆ. ಮುಖದ ಮೇಲೆಲ್ಲಾ ರಕ್ತದ ಕಲೆಗಳಿವೆ. ಕಪ್ಪು ಪ್ಯಾಂಟ್,ಕಪ್ಪು ಬೆಲ್ಟ್,ಕಪ್ಪು ಶೂ,ಕಪ್ಪು ಮೊಬೈಲ್. ಅಂಗಿ ಇರಲಿಲ್ಲ ‌ಮೈಮೇಲೆ.

ಕನಸು ಕೊಟ್ಟ ಸೂಚನೆ. ಸಾವು ಹೊಕ್ಕ ವಿಳಾಸ  ಎರಡೂ ತಿಳಿಯಿತು. ಗೊತ್ತಿಲ್ಲ. ಎಂದೋ ನೋಡಿದ ಒಬ್ಬ ಜನಪ್ರಿಯ ವ್ಯಕ್ತಿಯ ಮರಣ ಒಂದು ನಿಮಿಷದ ನೋವು ತರಬಹುದು. ಆದರೆ ಸಿದ್ದಾರ್ಥ ರ ಸಾವು. ಯಾಕಿಷ್ಟು ಯಾತನಾಮಯವಾಗಿ ನನ್ನೊಳಗೆ ಆವರಿಸ್ತಿದೆ ತಿಳಿಯುತ್ತಿಲ್ಲ. ಕಾಫಿ ನಾಡಿನ ಅನಭಿಷಿಕ್ತ ದೊರೆ, ಸಾವಿರಾರು ಜನರಿಗೆ ಉದ್ಯೋಗ ಕೊಟ್ಟು ನೆಮ್ಮದಿಯ ಬದುಕು ಕಲ್ಪಿಸಿದ ಧಣಿ.

ಲಾಟ್ ಕ್ಯಾನ್ ಹ್ಯಾಪೆನ್ ಓವರ್ ಎ ಕಾಫಿ ಎನ್ನುವ ಟ್ಯಾಗ್ ಲೈನಿನೊಂದಿಗೆ ಇಡೀ ಜಗತ್ತಿಗೇ ನಮ್ಮ ಕರ್ನಾಟಕದ ಕಾಫಿಯನ್ನು ಕೆಫೆ ಕಾಫಿಡೇ ಮೂಲಕ ಪರಿಚಯಿಸಿದ ಧೀಮಂತ, ಬಿಲಿಯನ್ನುಗಟ್ಟಲೇ ಆಸ್ತಿಯ ಒಡೆಯನಾಗಿದ್ದ ಸರಳ ಸಜ್ಜನ, ರಾಜಕೀಯದಲ್ಲಿ, ಸಾಹಿತ್ಯದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ, ಕ್ರೀಡಾ ಚಟುವಟಿಕೆಗಳಲ್ಲಿ, ಸಾಮಾಜಿಕ ಕೆಲಸಕಾರ್ಯಗಳಲ್ಲಿ ಪೂರ್ಣ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೇಷ್ಠ, ಕೊಡುಗೈ ದಾನಿ.

ಸಿದ್ದಾರ್ಥ ನ ಹೊರತಾಗಿ ಕಾಫಿ ನಾಡಿನಲ್ಲಿ ಮಾರುಕಟ್ಟೆ ನಿರ್ಮಿಸುವವರು ಯಾರಿದ್ದಾರೆ ಎನಿಸಿಕೊಂಡ ಅಗ್ರ, ಅರ್ಧ ಎಕರೆ ತೋಟದವರೂ ಕೂಡ ಸಿದ್ದಾರ್ಥನಾ; ಎನ್ನುವ ಏಕವಚನದ ಮನೆಮಗ. ಕಾಫಿ ‌ಮುಕ್ತ ಮಾರುಕಟ್ಟೆ ಆದಾಗ ಎಬಿಸಿ ಕಂಪೆನಿಯ ಮೂಲಕ ಪುಟ್ಟ ಪಟ್ಟಣಗಳಲ್ಲೂ ಕಾಫಿ ಡೇ ಶಾಖೆ ತೆರೆದ ಮಹನೀಯ. ಷೇರು ಲೋಕದ ಬುದ್ದಿವಂತ, ವಿದೇಶದ ಕಾಡುಗಳನ್ನು ಲೀಸಿಗೆ ಪಡೆದಿದ್ದ ಕನಸಿಗ, ಫರ್ನಿಚರ್,ಷೇರು,ಕಂಪೆನಿ,ಕಾಫಿ ಪೌಡರ್,ಬ್ರ್ಯೂಯಿಂಗ್, ಬೇವರೇಜ್ ಗಳಲ್ಲಿ ಹೊಸತನ್ನು ಪರಿಚಯಿಸಿದವ.

ಚಿಕ್ಕಮಗಳೂರಿನಲ್ಲಿ 12 ಸಾವಿರ ಎಕರೆ ಕಾಫಿತೋಟ. 209 ನಗರಗಳಲ್ಲಿ 1423 ಕಾಫಿಡೇ ಶಾಪುಗಳು. 25 ಬಿಲಿಯನ್ ಕಾಫಿ ಮಾರುಕಟ್ಟೆ, ಷೇರು ಇನ್ವೆಸ್ಟ್ ಮೆಂಟ್ , ಮೂರು ಸಾವಿರ ಎಕರೆ ಬಾಳೆತೋಟದಿಂದ ಬಾಳೆಹಣ್ಣಿನ ರಫ್ತು ವಹಿವಾಟು, ಹೋಟೇಲು,ರೆಸಾರ್ಟ್, ಫರ್ನಿಚರ್ ಉದ್ಯಮ, ದಕ್ಷಿಣ ಅಮೇರಿಕಾದ ಗಯಾನಾ ದೇಶದಲ್ಲಿ 1.85 ಮಿಲಿಯನ್ ಹೆಕ್ಟೇರ್ ಅಮೆಜಾನ್ ಕಾಡು ಲೀಸ್ ಗೆ. ಇದು ಸಿದ್ದಾರ್ಥ. ತನ್ನ ಭಾರಕ್ಕೆ ತಾನೇ ನಲುಗಿ ಹೋದವ.

ಯಾವುದನ್ನೇ ಹೇಳಿದರೂ ಇನ್ನೂ ಅಷ್ಟೊಂದು ಉಳಿದುಹೋಗುತ್ತದೆ. ಬಹುಶಃ ಕಾಫಿನಾಡಿನ ಯಾವ ಬೆಳೆಗಾರನೂ ಎರಡು ಹನಿ ಕಣ್ಣೀರು ಹಾಕದ ಈ ಬೆಳಗು ಇಲ್ಲ. ಕಾಫಿ ಡೇಯಲ್ಲಿ ಮೊಳೆತ ಬೆಳೆದ ಪ್ರೇಮಗಳೆಷ್ಟೊ, ಕಾಫಿ ಡೇಗೆ ಅಪರೂಪಕ್ಕೆ ಹೋದ ಮದ್ಯಮ ವರ್ಗದ ಬೆಳೆಗಾರನೊಬ್ಬನಿಗೆ ತಾನೂ ಸಮೃದ್ಧ ವಾದೆ ಎನ್ನುವ ಭಾವದೊಂದಿಗೆ ಆತ್ಮವಿಶ್ವಾಸ ಕೊಟ್ಟ  ಘಟನೆಗಳೆಷ್ಟೊ. ಕೆಫೆ ಕಾಫಿ ಡೆಯ ಗೋಡೆ ಕಿಟಿಕಿಗಳೂ ಮಾಲೀಕನಿಲ್ಲದ ಈ ಬೆಳಗಿಗೆ ಶಾಪ ಹಾಕುತ್ತಿರಬಹುದಾ…?

ನೋಡಿದರೆ ಮತ್ತೊಮ್ಮೆ ತಿರುಗಿ ನೋಡಬೇಕೆನಿಸುತ್ತಿದ್ದ ಸಿದ್ದಾರ್ಥ ‘ಬಾಡಿ’ಯಾಗಿದ್ದಾರೆ. ಯಾವ ಕ್ರೂರ ಘಳಿಗೆ ಅವರನ್ನು ಹಾಗೊಂದು ಕೆಟ್ಟ ನಿರ್ಧಾರಕ್ಕೆ ಪ್ರೇರೆಪಿಸಿತೋ. ಬಹಳ ಸುಲಭವಾಗಿ ಹೇಳಬಹುದು. ಬೆನ್ನು ತೋರಿ ನಡೆದ. ಆದರೆ ಈ ‘ಆತ್ಮಹತ್ಯೆ’ ಎನುವುದು ಕೇವಲ ಒಂದು ಕ್ಷಣದ ಸತ್ಯ.ಅದನ್ನು ಮೀರಿದರೆ ಬದುಕು ಸ್ವಸ್ಥ. ಮೀರಲಾಗಲಿಲ್ಲ ದೊರೆಗೆ.

ಹರಿವ ನದಿ ನೋಡಿದವನೆದೆಯಲ್ಲಿ ಯಾವ ವೈರಾಗ್ಯ ಮೂಡಿಸಿತೋ. ಹಾರಿಕೊಂಡ..ಮತ್ತೆಂದೂ ಬಾರದ ಲೋಕಕ್ಕೆ ಪಯಣಿಸಿದ. ಸಾವಿರ ಜನ ಸಾವಿರ ಬಗೆಯಲ್ಲಿ ಮಾತಡುತ್ತಿದ್ದಾರೆ. ಸರಿತಪ್ಪುಗಳ ವಿಶ್ಲೇಷಣೆ ಇಲ್ಲಿ ಅಗತ್ಯವೇ ಇಲ್ಲ. ಮೂರು ಕಾಸಿನ ಜನಪ್ರಿಯತೆಗೇ ಕುತ್ತಿಗೆ ತಲೆ ಮೇಲೆ ನಿಲ್ಲದ ಕಲಿಕಾಲದಲ್ಲಿ  ಹಣವಿರುವವನಿಗೆ ಆತ್ಮವೂ ಇರುತ್ತದೆಯೆಂಬುದನ್ನು ಸಾಬೀತುಪಡಿಸಿದವರು.

ಸಿದ್ದಾರ್ಥ.ನೀವು ಭೌತಿಕವಾಗಿ ನಮ್ಮನ್ನು ಅಗಲಿದ್ದೀರಾ ಅಷ್ಟೇ. ನೀವು ಕಟ್ಟಿದ ಸಾಮ್ರಾಜ್ಯ ಕಾಫಿ ನಾಡಿಗೆ,ಯುವ ಸಮುದಾಯಕ್ಕೆ ಸ್ಪೂರ್ತಿ. ನೀವಂದುಕೊಂಡಂತೆ ನೀವು ಸೋಲಲಿಲ್ಲ. ಕೋಟ್ಯಾಂತರ ಜನರ ಮನೆಮಗನಾಗಿ ಗೆದ್ದಿದ್ದೀರಿ. ಪ್ರತಿ ಹೆಣ್ಣೂ ಇಂತಹ ಒಬ್ಬ ಮಗ ನನ್ನ ಮಗನಾಗಿ ಹುಟ್ಟಿಬರಲಿ ಎನುವಂತೆ ಬದುಕಿದ್ದೀರಿ ಮತ್ತು ಸದಾ ಕಾಫಿನಾಡಿನ ಸರ್ವರ ಎದೆಯಲ್ಲಿ  ಬದುಕುತ್ತೀರಿ. ಹೀಗೊಬ್ಬರಿದ್ದರಂತೆ ಎನ್ನುವ ಕಥೆ ಜನಮಾನಸದಲ್ಲಿ ಉಳಿಯುವಂತೆ ಇರುತ್ತೀರಿ.

-ನಂದಿನಿ ವಿಶ್ವನಾಥ ಹೆದ್ದುರ್ಗ

LEAVE A REPLY

Please enter your comment!
Please enter your name here