ಸಸ್ಯತ್ಯಾಜ್ಯ, ಪ್ರಾಣಿತ್ಯಾಜ್ಯ ಮಾಗಿಸಲು ವಿಧವಿಧ ವಿಧಾನ

1

ಸಾವಯವ ಪೋಷಕಾಂಶಗಳು

ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಎರೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿಗಳು, ಪ್ರೆಸ್‌ಮಡ್, ಜೈವಿಕ ಅನಿಲದ ಬಗ್ಗಡ, ಜೈವಿಕ ಗೊಬ್ಬರಗಳು, ದ್ರವರೂಪದ ಗೊಬ್ಬರಗಳು ಪ್ರಮುಖವಾದವುಗಳು.

ಕಾಂಪೋಸ್ಟ್‌ ಗೊಬ್ಬರ

ಸಸ್ಯ ಹಾಗೂ ಪ್ರಾಣಿಗಳ ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸುವ ಸಾವಯವ ಗೊಬ್ಬರವೇ ಕಾಂಪೋಸ್ಟ್. ಇದನ್ನು ತಯಾರು ಮಾಡುವ ವಿಧಾನಕ್ಕೆ ಕಾಂಪೋಸ್ಟೀಕರಣ ಎಂದು ಕರೆಯುತ್ತಾರೆ.  ಇದು ಅನೇಕ ಗುಂಪುಗಳ ಸೂಕ್ಷ್ಮಜೀವಿಗಳ ಕ್ರಿಯೆಯಿಂದ ನಡೆಯುವ ಸಾವಯವ ಪದಾರ್ಥಗಳ ಕಳಿಯುವಿಕೆಯಾಗಿದೆ. ಈ ತರಹದ ಕಳಿಯುವಿಕೆಯಿಂದ ಸಾವಯವ ಪದಾರ್ಥಗಳು ವಿಭಜನೆಯಾಗಿ ಸರಳ ರೂಪಕ್ಕೆ ಬರುತ್ತವೆ, ಹಾಗೂ ಈ ರೀತಿಯ ಸರಳಗೊಂಡ ಕಾಂಪೋಸ್ಟ್ ಗೊಬ್ಬರದ ಇಂಗಾಲ ಮತ್ತು ಸಾರಜನಕದ ಅನುಪಾತವು 10:1 ರಿಂದ 12:1 ರಷ್ಟಿರುತ್ತದೆ.

ಕಾಂಪೋಸ್ಟ್ ಬೇಗ ಕಳಿಯಬೇಕಾದರೆ ಇಂಗಾಲ ಹಾಗೂ ಸಾರಜನಕದ ಅನುಪಾತವು 25:1 ರಿಂದ 40:1 ರಷ್ಟು ಇದ್ದರೆ ಒಳ್ಳೆಯದು. ಇದಕ್ಕೆ ಒಣಹುಲ್ಲು, ಒಣಗಿದ ಕಸಕಡ್ಡಿಗಳು, ತರಗೆಲೆ, ಹೊಟ್ಟು ಮುಂತಾದವುಗಳನ್ನು ಬಳಸಿದಾಗ ಇಂಗಾಲ – ಸಾರಜನಕದ ಪ್ರಮಾಣ 50:1 ಕ್ಕಿಂತ ಹೆಚ್ಚಾಗಿರುತ್ತದೆ. ಆದ್ದರಿಂದ ಇಂಗಾಲ- ಸಾರಜನಕ ಅಂಶವನ್ನು ಹೆಚ್ಚಾಗಿ ಹೊಂದಿರುವ ಕೋಳಿಗೊಬ್ಬರ, ಹಸಿರೆಲೆ ಗೊಬ್ಬರಗಳು, ಹಂದಿಗೊಬ್ಬರಗಳಮ್ಮು  ಶೇಕಡ 20 ರಷ್ಟನ್ನು ಸೇರಿಸುವುದರಿಂದ ಇಂಗಾಲ – ಸಾರಜನಕದ ಪ್ರಮಾಣವನ್ನು ಸಮತೋಲನ ಮಾಡಬಹುದು. ಏಕೆಂದರೆ ತ್ಯಾಜ್ಯವಸ್ತುಗಳನ್ನು ಕರಗಿಸುವಲ್ಲಿ ಜೈವಿಕ ಕ್ರಿಯೆ ಪರಿಣಾಮಕಾರಿ.

ಕೃಷಿತ್ಯಾಜ್ಯ ವಸ್ತುಗಳಿಂದ ಬೆಳೆಗಳ ಉಳಿಕೆ, ಅರಣ್ಯದ ತ್ಯಾಜ್ಯ, ಕಬ್ಬು ಬೆಳೆಯ ತರಗು /ಸೋಗೆ, ಶೇಂಗಾದ ಹೊಟ್ಟು, ಹೈನುಗಾರಿಕಾ ತ್ಯಾಜ್ಯ, ಕೋಳಿ ಹಾಗೂ ರೇಷ್ಮೆ ತ್ಯಾಜ್ಯ ವಸ್ತುಗಳು, ಕಳೆಗಳಾದ ವಾಟರ್‌ಹಯಾಸಿಂತ್, ಐಪೋಮಿಯಾ, ಪಾರ್ಥೇನಿಯಂ, ಯುಪಟೋರಿಯಂ (ಕಮ್ಯೂನಿಸ್ಟ್ ಕಳೆ) ಮುಂತಾದ ಕಳೆಗಳ ಹಾಗೂ ಹಸಿರೆಲೆಗಳನ್ನು  ಬಳಸಬೇಕು.

ಕೃಷಿ ತ್ಯಾಜ್ಯಗಳ ಹಾಗೆ ಕೃಷಿ ಕೈಗಾರಿಕಾ ತ್ಯಾಜ್ಯ ವಸ್ತುಗಳಾದ ಸಕ್ಕರೆ ಕಾರ್ಖಾನೆ ಮಡ್ಡಿ, ತೆಂಗಿನನಾರಿನ ಪುಡಿ, ನಾರು ಹಾಗೂ ಹತ್ತಿ ಜಿನ್‌ಗಳ ತ್ಯಾಜ್ಯ, ಅಡಿಕೆ ಸಿಪ್ಪೆ,  ಕಟ್ಟಿಗೆ ಹೊಟ್ಟು, ಕಾಗದ ಕಾರ್ಖಾನೆಯ ತ್ಯಾಜ್ಯ, ಹಣ್ಣು,  ತರಕಾರಿಗಳ ಕೈಗಾರಿಕಾ ತ್ಯಾಜ್ಯ, ಎಣ್ಣೆಹಿಂಡಿಗಳು ಮುಂತಾದವುಗಳನ್ನು ಸಹ ಬಳಸಬಹುದು.

ಇದೇ ರೀತಿ ನಗರ ತ್ಯಾಜ್ಯ ವಸ್ತುಗಳಾದ ನಗರ ಘನ ತ್ಯಾಜ್ಯ, ಕೊಳಚೆ ಘನ ತ್ಯಾಜ್ಯ, ರಕ್ತದ ಗೊಬ್ಬರ, ಮೂಳೆಗೊಬ್ಬರ, ಮೀನುಗೊಬ್ಬರ, ಚರ್ಮದ ತ್ಯಾಜ್ಯಗಳನ್ನು ಸಹ ಕಾಂಪೋಸ್ಟ್ ಮಾಡಲು ಬಳಸಬಹುದು. ಈ ಎಲ್ಲ ತ್ಯಾಜ್ಯ ವಸ್ತುಗಳು ಸಾವಯವ ಇಲ್ಲವೆ ನಿರಾವಯವ ವಸ್ತುಗಳಾಗಿದ್ದು ಅನುಕೂಲಕರವಾದ ಪ್ರಾರಂಭಿಕ ವಸ್ತುಗಳನ್ನು ಕಾಂಪೋಸ್ಟ್ ಗುಂಡಿಗೆ ಹಾಕಿದಾಗ ಕಳಿಯುವಿಕೆಯನ್ನು ಪ್ರಚೋದಿಸುತ್ತವೆ. ಅವುಗಳೆಂದರೆ, ದನಕರುಗಳ ಸಗಣಿ ಇಲ್ಲವೇ ಮೂತ್ರ ಹಾಗೂ ಕೊಳಚೆ ಘನ ತ್ಯಾಜ್ಯಗಳನ್ನು ಬಳಸಬೇಕು.

Compost

ಕಾಂಪೋಸ್ಟ್ ಪರಿವರ್ತನೆಗೆ ವಿವಿಧ ರೀತಿಯ ಸೂಕ್ಷ್ಮಜೀವಿಗಳು ಹಾಗೂ ಜೈವಿಕ ಗೊಬ್ಬರಗಳನ್ನು ಸಾವಯವ ವಸ್ತುಗಳ ಬಳಕೆಗೆ ಅನುಗುಣವಾಗಿ ಉಪಯೋಗಿಸಬೇಕು. ಸೂಕ್ಷ್ಮಜೀವಿಗಳಿಂದ ಕೂಡಿದ ಪ್ಲೊರೋಟಸ್, ಆಸ್ಪರ್ಜಿಲ್ಲಸ್, ಟ್ರೆöÊಕೋಡರ್ಮ, ಪ್ಯಾಸಿಲೋಮೇಸಿಸ್ ಮುಂತಾದ ಶಿಲೀಂಧ್ರಗಳನ್ನು ಬಳಸಬಹುದು. ಈ ಶಿಲೀಂಧ್ರಗಳು ಲಿಗ್ನಿನ್ ಮತ್ತು ಸೆಲ್ಯೂಲೋಸ್ ಎಂಬ ಸಂಯುಕ್ತಗಳನ್ನು ವಿಭಜಿಸಿ ಸರಳ ರೂಪಕ್ಕೆ ತರುತ್ತವೆ.

ಇದೇ ರೀತಿ ರಂಜಕ ಕರಗಿಸುವ ಸೂಕ್ಷ್ಮಜೀವಿಗಳಾದ ಅಗ್ರೋಬ್ಯಾಕ್ಟೀರಿಯಮ್ ರೇಡಿಯೋಬ್ಯಾಕ್ಟರ್, ಬ್ಯಾಸಿಸ್ ಮೆಗಟೇರಿಯಮ್ ಮತ್ತು ಆಸ್ಪರ್ಜಿಲ್ಲಸ್ ಅವಮೋರಿಗಳ ಬಳಕೆಯಿಂದ ರಂಜಕದ ಅಂಶವು ಅಧಿಕಗೊಳ್ಳುತ್ತದೆ. ಜೈವಿಕಗೊಬ್ಬರಗಳಾದ ಅಜೊಟೋಬ್ಯಾಕ್ಟ್ರನ್ನು ಸಾವಯವ ಗೊಬ್ಬರದಲ್ಲಿ ಸೇರಿಸುವುದರಿಂದ ಸಾರಜನಕದ ಅಂಶವನ್ನು ಹೆಚ್ಚಿಸಬಹುದು.

ತೇವಾಂಶ ಮತ್ತು ಗಾಳಿ

ಸಾವಯವ ವಸ್ತುಗಳು ಕಳಿಯುವ ಮೊದಲನೆಯ ಹಂತದಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಾಗುವುದರಿಂದ ಶೇಕಡ 60 ರಷ್ಟು ತೇವಾಂಶ ಇರುವಂತೆ ಎಚ್ಚರವಹಿಸಬೇಕು. ಕಳಿಯುವಿಕೆಯ ಮೊದಲ ಹಂತದಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗಿದ್ದು ಈ ಹಂತದಲ್ಲಿ ತೇವಾಂಶ ಶೇ. 30 ರಿಂದ 40 ಕ್ಕಿಂತ ಕಡಿಮೆ ಇದ್ದರೆ ಅವುಗಳ ಚಟುವಟಿಕೆ ಕ್ಷೀಣಿಸಿ, ಕಳಿಯುವಿಕೆ ಮಂದಗತಿಯಲ್ಲಿ ಸಾಗಿ ಕಾಂಪೋಸ್ಟ್ ತಯಾರಾಗಲು ಹೆಚ್ಚಿನ ಕಾಲ ಬೇಕಾಗುತ್ತದೆ. ಹಾಗೆಯೇ ಕಳಿಯುವಿಕೆಯ ಕೊನೆ ಹಂತದಲ್ಲಿ ಆಕ್ಟಿನೋಮೈಸಿಟಿಸ್ ಮತ್ತು ಶಿಲಿಂಧ್ರಗಳ ಚಟುವಟಿಕೆ ಹೆಚ್ಚಾಗುವುದರಿಂದ ತೇವಾಂಶದ ಅವಶ್ಯಕತೆ ಇರುವುದಿಲ್ಲ.

ಏರೋಬಿಕ್ ಪದ್ಧತಿಯಲ್ಲಿ ಕೃಷಿತ್ಯಾಜ್ಯಗಳು ಶೇ. 60 ರಿಂದ 80 ರಷ್ಟು ತೇವಾಂಶವನ್ನು ಹಿಡಿದಿಟ್ಟುಗೊಂಡಾಗ ಮಾತ್ರ ಕಳಿಯುವಿಕೆ ಗರಿಷ್ಠ ಮಟ್ಟದಲ್ಲಿ ನಡೆಯುತ್ತದೆ. ಹಾಗೆಯೇ ತೇವಾಂಶವು ಅಧಿಕವಾದರೆ ಅನೇರೋಬಿಕ್ ಕಾಂಪೋಸ್ಟೀಕರಣ ಕ್ರಿಯೆಗೆ ಮಾರ್ಪಟ್ಟು, ಕಳಿಯುವಿಕೆಯು ಪೂರ್ಣವಾಗದೇ ಹ್ಯಡ್ರೋಜನ್ ಸಲ್ಪೆಡ್ ಮತ್ತು ಮೀಥೇನ್ ಉತ್ಪತ್ತಿಯಾಗಿ ದುರ್ವಾಸನೆ ಹೊಮ್ಮುತ್ತದೆ. ಆದ್ದರಿಂದ ಗೊಬ್ಬರವನ್ನು ಆಗಾಗ್ಗೆ ತಿರುವಿ ಹಾಕುವುದು ಅವಶ್ಯಕ.

‌ಉಷ್ಣಾಂಶ:

ಕಾಂಪೋಸ್ಟ್ ರಾಶಿಯಲ್ಲಿ ಉತ್ಪತ್ತಿಯಾಗುವ ಉಷ್ಣತೆಯು ತೇವಾಂಶ, ಆಮ್ಲಜನಕದ ಲಭ್ಯತೆ ಮತ್ತು ಸೂಕ್ಷ್ಮಜೀವಿಗಳ ಚಟುವಟಿಕೆಗಳನ್ನು ಅವಲಂಬಿ ಸಿರುತ್ತದೆ. ಈ ಒಂದು ಕ್ರಿಯೆಯಲ್ಲಿ ಭಾಗವಹಿಸುವ ಸೂಕ್ಷ್ಮಜೀವಿಗಳಿಗೆ 45 ರಿಂದ 55º ಸೆ. ಉಷ್ಣಾಂಶ ಇರಬೇಕು.

ಕಾಂಪೋಸ್ಟ್ ತಯಾರಿಕೆಗೆ ಸ್ಥಳದ ಆಯ್ಕೆ:

ಕಾಂಪೋಸ್ಟ್ ಮಾಡುವ ಸ್ಥಳ ಸ್ವಲ್ಪ ಎತ್ತರದ ಪ್ರದೇಶದಲ್ಲಿರಬೇಕು. ಮಳೆಯ ನೀರು ಆ ಜಾಗದಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಮಳೆಯ ನೀರು ಕಾಂಪೋಸ್ಟ್ ತಯಾರಿಕಾ ಜಾಗದಲ್ಲಿ ಹರಿದು ಹೋಗದಂತೆ ಎಚ್ಚರವಹಿಸಬೇಕು.

ಕಾಂಪೋಸ್ಟ್ ತಯಾರಿಸುವ ಪದ್ಧತಿಗಳು:

ಇಂದೋರ್ ಪದ್ದತಿ:

ಈ ಪದ್ದತಿಯನ್ನು ಡಾ. ಆಲ್ಬರ್ಟ್ ಹೋವರ್ಡ್ ಮತ್ತು ಡಾ. ವಾಡ್ ಎಂಬ ಕೃಷಿ ವಿಜ್ಞಾನಿಗಳು 1924 ಮತ್ತು 1931 ರಲ್ಲಿ ಮಧ್ಯಪ್ರದೇಶದ ಇಂದೋರ್ ನಗರದಲಿ ಅಭಿವೃದ್ಧಿಪಡಿಸಿ ಪ್ರಚುರ ಪಡಿಸಿದರು. ಲಭ್ಯವಿರುವ ಆಮ್ಲಜನಕವನ್ನು ಸೂಕ್ಷ್ಮಜೀವಿಗಳು ಬಳಸಿಕೊಂಡು ಜೈವಿಕ ಬದಲಾವಣೆಯನ್ನು ತರುವುದು ಈ ಪದ್ಧತಿಯ ಪ್ರಮುಖ ಅಂಶ. ಇಲ್ಲಿ ಬಳಸುವ ಸಾವಯವ ವಸ್ತುಗಳೆಂದರೆ ಸಸ್ಯ ಹಾಗೂ ಬೆಳೆಯ ತ್ಯಾಜ್ಯ ವಸ್ತುಗಳು, ದನಕರುಗಳ ಸಗಣಿ, ಕೊಟ್ಟಿಗೆಯ ಕಸಕಡ್ಡಿಗಳು ಹಾಗೂ ಬೂದಿ  ಕಾಂಪೋಸ್ಟ್ ಕ್ರಿಯೆಯಲ್ಲಿ ವೇಗವರ್ಧಕವಾಗಿ ಬಳಕೆಯಾಗುತ್ತದೆ.

ಕಾಂಪೋಸ್ಟ್ ಗುಂಡಿಗಳು 6 ರಿಂದ 8 ಅಡಿ ಅಗಲ, 2 ರಿಂದ 3 ಅಡಿ ಆಳ ಹಾಗೂ ಸಾವಯವ ಪದಾರ್ಥಗಳು ದೊರೆಯುವುದರ ಆಧಾರದ ಮೇಲೆ 10 ರಿಂದ 30 ಅಡಿಗಳಷ್ಟು ಉದ್ದ ಮಾಡಿಕೊಳ್ಳಬಹುದು. ಗುಂಡಿಗಳನ್ನು ತುಂಬುವಾಗ ಮೊದಲು ದನಕರುಗಳ ಕೊಟ್ಟಿಗೆಯಿಂದ ತಂದ ತ್ಯಾಜ್ಯ ವಸ್ತುಗಳನ್ನು ದಪ್ಪವಾದ ಹಾಸಿಗೆಯಾಗಿ ಬಳಸುವುದು ಅದರ ಮೇಲೆ ಕಟ್ಟಿಗೆ ಬೂದಿ, ನಂತರ ಕೃಷಿ ತ್ಯಾಜ್ಯ ವಸ್ತುಗಳನ್ನು ಹರಡಬೇಕು. ತದನಂತರ ದನಗಳ ಸಗಣಿ ಹಾಗೂ ಮಣ್ಣಿನ 2 ಪದರುಗಳನ್ನು ಸಮರೂಪವಾಗಿ ಹರಡಬೇಕು. ಈ ರೀತಿಯ ಪದರುಗಳನ್ನು ಸುಮಾರು 2 ರಿಂದ 3 ಅಡಿಗಳವರೆಗೆ ಹಾಕುತ್ತಾ ಹೋಗಬೇಕು.

ಗುಂಡಿಯ ಒಂದು ಭಾಗದ ಕೊನೆಯಲ್ಲಿ 3 ಅಡಿಗಳಷ್ಟು ಜಾಗವನ್ನು ಗೊಬ್ಬರ ತಿರುವಿ ಹಾಕಲು ಮತ್ತು ಮಿಶ್ರ ಮಾಡಲು ಬಿಡಬೇಕು. ಗುಂಡಿ ತುಂಬಿದ ಸುಮಾರು 15 ದಿವಸಗಳಲ್ಲಿ ಮೊದಲನೆಯ ಬಾರಿ ತಿರುವಿಹಾಕಬೇಕು. ಆನಂತರ 15 ದಿನಗಳ ಮೇಲೆ ಎರಡನೆಯ ಬಾರಿ ಮತ್ತು 2 ತಿಂಗಳ ನಂತರ ಮೂರನೆಯ ಬಾರಿ ತಿರುವಿ ಮತ್ತೆ ಒಂದು ತಿಂಗಳು ಕಳಿಯಲು ಬಿಡಬೇಕು. ಆಗಾಗ್ಗೆ ಮೇಲು ಭಾಗಕ್ಕೆ ನೀರನ್ನು ಚಿಮುಕಿಸಿ ತೇವಾಂಶ ಕಾಪಾಡುವುದು ಅವಶ್ಯಕ. ಸುಮಾರು 4 ತಿಂಗಳುಗಳಲ್ಲಿ ಕಾಂಪೋಸ್ಟ್ ಸಿದ್ದವಾಗುತ್ತದೆ.

ಬೇಕಾದ ಸಾವಯವ ವಸ್ತುಗಳು:

ಸಸ್ಯಮೂಲ:

ಬೆಳೆಯ ಉಳಿಕೆಗಳು, ಕಳೆಗಳು, ಕಬ್ಬಿನ ತರಗು, ಹುಲ್ಲು, ಬೂದಿ, ಶೇಂಗಾದ ಹೊಟ್ಟು ಮುಂತಾದವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಬಳಸುವುದು. ಮರದ ವಸ್ತುಗಳನ್ನು ಸಣ್ಣದಾಗಿ ಕತ್ತರಿಸಿ ಉಪಯೋಗಿಸುವುದು.

ಪ್ರಾಣಿ ಮೂಲ: ದನಕರುಗಳ ಸಗಣಿ, ಗಂಜಲಯುಕ್ತ ಮಣ್ಣು

ಬೂದಿ:

ಬೂದಿಯು ಕಾಂಪೋಸ್ಟ್ ರಸಸಾರವನ್ನು ಕಾಪಾಡುತ್ತದೆ ಹಾಗೂ ರಂಜಕವನ್ನು ಒದಗಿಸುತ್ತದೆ.

ನೀರು ಮತ್ತು ಗಾಳಿ: ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ವೃದ್ಧಿಸುತ್ತದೆ.

ಕಾಂಪೋಸ್ಟ್ ಗುಂಡಿ ತುಂಬುವ ವಿಧಾನ:

ಗುಂಡಿಯನ್ನು ತುಂಬುವ ಮೊದಲು ದನದ ಕೊಟ್ಟಿಗೆಯಲ್ಲಿ ದೊರೆಯುವ ತ್ಯಾಜ್ಯವಸ್ತುಗಳನ್ನು ತುಂಡಾಗಿ ಕತ್ತರಿಸಿ (5 ರಿಂದ 10 ಸೆಂ. ಮೀ. ಅಳತೆ), ಸುಮಾರು 3 ಅಂಗುಲದಷ್ಟು ದಪ್ಪದ ಹಾಸಿಗೆಯಾಗಿ ಬಳಸಬೇಕು. ಇದರ ಮೇಲೆ ಕೊಟ್ಟಿಗೆಯ ಬೂದಿ ಮತ್ತು ಗಂಜಲವನ್ನು ಸಮನಾಗಿ ಹರಡಬೇಕು. ಇದಾದ ನಂತರ 2 ಅಂಗುಲದಷ್ಟು ದಪ್ಪ ಸಗಣಿ ಮತ್ತು ಮಣ್ಣನ್ನು ಹರಡಬೇಕು. ಪದರಗಳ ಮೇಲೆ ನೀರನ್ನು ಚೆನ್ನಾಗಿ ಚಿಮುಕಿಸಬೇಕು.

ಈ ರೀತಿಯ ಪದರುಗಳನ್ನು ಸುಮಾರು 1 ಅಡಿ ಎತ್ತರದವೆರೆಗೆ ತುಂಬಬೇಕು. 6-7 ದಿವಸಗಳೊಳಗೆ ಸುಮಾರು ಮುಕ್ಕಾಲು ಭಾಗದಷ್ಟು ಗುಂಡಿಯನ್ನು ತುಂಬಿ, ಗುಂಡಿಯ ಕೊನೆಯ ಭಾಗದಲ್ಲಿ (ಅಂದರೆ ಕಾಲು ಭಾಗದಷ್ಟು ಸ್ಥಳವನ್ನು) ಗೊಬ್ಬರ ತಿರುವಿ ಹಾಕಲು ಖಾಲಿ ಬಿಡಬೇಕು. ಕೊನೆಯಲ್ಲಿ ಬೂದಿ ಮತ್ತು ಗಂಜಲಯುಕ್ತ ಮಣ್ಣಿನಿಂದ ಮತ್ತೊಂದು ಪದರವನ್ನು ಹರಡಬೇಕು. ಈ ಕಾಂಪೋಸ್ಟ್ನಲ್ಲಿ ಬಳಸಿದ ಸಾವಯವ ಪದಾರ್ಥಗಳ ಆಧಾರದ ಮೇಲೆ ಶೇ. 0.8 ರಷ್ಟು ಸಾರಜನಜಕ, ಶೇ. 0.3 ರಷ್ಟು ರಂಜಕ ಮತ್ತು ಶೇ. 1.5 ರಷ್ಟು ಪೊಟ್ಯಾಷ್ ಅಂಶವಿರುವುದು ಕಂಡು ಬಂದಿದೆ.

ಬೆಂಗಳೂರು ಪದ್ಧತಿ:

ಈ ಪದ್ದತಿಯನ್ನು ಬೆಂಗಳೂರಿನ  ಭಾರತೀಯ ವಿಜ್ಞಾನ ಸಂಸ್ಥೆಯ ಸಿ. ಎನ್. ಆಚಾರ್ಯ, ಇವರು 1939 ರಲ್ಲಿ ಅಭಿವೃದ್ಧಿ ಪಡಿಸಿದರು. ಈ ಪದ್ದತಿ ವಿಶೇಷವಾಗಿ ನಗರದಲ್ಲಿ ದೊರೆಯುವ ತ್ಯಾಜ್ಯವಸ್ತುಗಳು ಮತ್ತು ಪಟ್ಟಣಿಗರ ಮಲಮೂತ್ರವನ್ನು ಉಪಯೋಗಿಸಿಕೊಂಡು ಕಾಂಪೋಸ್ಟ್ ಮಾಡುವ ವಿಧಾನ. ಈ ವಿಧಾನವನ್ನು ಬಹಳ ಬಿಸಿಯಾದ ಹುದುಗುವಿಕೆ  ಎಂದು ಕರೆಯುತ್ತಾರೆ. ಮಾನವನ ಮಲ-ಮೂತ್ರವನ್ನು ಉಪಯೋಗಿಸುವುದರಿಂದ ಕಾಂಪೋಸ್ಟ್ ಅನ್ನು ಪಟ್ಟಣದ ಹೊರಭಾಗದಲ್ಲಿ ತಯಾರು ಮಾಡುತ್ತಾರೆ. ಒಂದು ಕಾಂಪೋಸ್ಟ್ ಘಟಕ ಸುಮಾರು 200 ಕಂದಕಗಳನ್ನು ಒಳಗೊಂಡಿರುತ್ತದೆ. ಕಂದಕದ/ಗುಂಡಿಯ ಅಳತೆ ಸುಮಾರು 6 ರಿಂದ 10 ಮೀಟರ್ ಉದ್ದವಾಗಿದ್ದು 2 ಮೀಟರ್‌ನಷ್ಟು ಅಗಲ ಹಾಗೂ 1 ಮೀಟರ್‌ನಷ್ಟು ಆಳವಾಗಿರುತ್ತದೆ.

ಗುಂಡಿ ತುಂಬುವ ವಿಧಾನ:

ಮೊದಲಿಗೆ ಅರ್ಧ ಅಡಿ ದಪ್ಪ ಪದರವಾಗಿ ನಗರದಲ್ಲಿ ದೊರೆಯುವ ತ್ಯಾಜ್ಯವಸ್ತುಗಳನ್ನು ತುಂಬಬೇಕು. ಆನಂತರ ಇದರ ಮೇಲೆ 2 ಅಂಗುಲ ದಪ್ಪ ಮಾನವನ ಮಲಮೂತ್ರವನ್ನು ಪದರವಾಗಿ ಹರಡಬೇಕು. ಹೀಗೆ ಪದರ ಪದರವಾಗಿ 3 ಅಡಿ ಎತ್ತರಕ್ಕೆ ಬರುವವರೆಗೂ ತುಂಬಬೇಕು. ಕೊನೆಯ ಪದರವು ತ್ಯಾಜ್ಯವಸ್ತುವಿದ್ದಾಗಿರಬೇಕು. ಕೊನೆಯಲ್ಲಿ 2 ರಿಂದ 3 ಅಂಗುಲ ದಪ್ಪ ಮಣ್ಣಿನ ರಾಡಿಯಿಂದ ಮೆತ್ತಿ ಮುಚ್ಚಬೇಕು. ಈ ಪದ್ಧತಿಯಲ್ಲಿ ಸುಮಾರು 3 ತಿಂಗಳುಗಳ ಕಾಲ ನೀರುಹಾಕುವ ಮತ್ತು ಸಾವಯವ ವಸ್ತುಗಳನ್ನು ತಿರುವಿ ಹಾಕುವ ಅವಶ್ಯಕತೆಯಿಲ್ಲ. ಸಾವಯವ ವಸ್ತುಗಳು ಮೆಲ್ಪದರದ ಹೊರತು ಗಾಳಿಯ ಸಂಪರ್ಕವಿಲ್ಲದೆ ಕಳಿಯುತ್ತವೆ. ಇದು ಬಹಳ ನಿಧಾನವಾಗಿದ್ದು ಸುಮಾರು 8 ರಿಂದ 9 ತಿಂಗಳುಗಳ ಕಾಲ ತೆಗೆದುಕೊಳ್ಳುತ್ತದೆ.

ಈ ಪದ್ದತಿಯ ಉಪಯೋಗಗಳು:

ಈ ಪದ್ದತಿಯ ಸರಳ ಮತ್ತು ಸುಲಭ. ಗೊಬ್ಬರವನ್ನು ತಿರುವಿ ಹಾಕುವ ಅವಶ್ಯಕತೆಯಿಲ್ಲ. ಮೊದಲು 2 ರಿಂದ 3 ವಾರಗಳಲ್ಲಿ ಹೆಚ್ಚಿನ ಶಾಖ (75º ಸೆ.) ಉತ್ಪತ್ತಿಯಾಗುವುದರಿಂದ ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ಕಳೆ ಬೀಜಗಳು ನಾಶವಾಗುತ್ತವೆ.

ಏರೋಬಿಕ್  ಕಾಂಪೋಸ್ಟ್ ಪದ್ಧತಿಗೆ ಹೋಲಿಸಿದಾಗ ಸುಮಾರು 1 ಪಟ್ಟು ಹೆಚ್ಚಿನ ಗೊಬ್ಬರ ಸಿಗುತ್ತದೆ ಹಾಗೂ ಶೇ. 50 ರಿಂದ 75 ರಷ್ಟು ನೀರಿನ ಅವಶ್ಯಕತೆ ಕಡಿಮೆಯಿರುತ್ತದೆ. ಈ ಪದ್ದತಿಯು ಮಳೆ ಕಡಿಮೆ ಇರುವ ಹಾಗೂ ಹೆಚ್ಚು ಒಣ ಹವೆ ಇರುವಲ್ಲಿ ಮಾತ್ರ ಸಾಧ್ಯ. ಈ ವಿಧಾನದಲ್ಲಿ ಮುಖ್ಯವಾಗಿ ಮನುಷ್ಯರ ಮಲಮೂತ್ರವನ್ನು ಉಪಯೋಗಿಸಿಕೊಂಡು ಕಾಂಪೋಸ್ಟ್ ಮಾಡುವುದರಿಂದ ಇದು ಹೆಚ್ಚು ಪ್ರಚಾರಕ್ಕೆ ಬಂದಿಲ್ಲ.

ಈ ರೀತಿಯಲ್ಲಿ ತಯಾರಿಸಿದ ಕಾಂಪೋಸ್ಟ್ನಲ್ಲಿ ಶೇ. 1.5 ರಷ್ಟು ಸಾರಜನಕ, 1.0 ರಷ್ಟು ರಂಜಕ ಹಾಗೂ 1.5 ರಷ್ಟು ಪೊಟ್ಯಾಷ್ ಅಂಶಗಳಿರುವುದು ಕಂಡುಬಂದಿದೆ.

ನಾಡೆಪ್ ಪದ್ದತಿ:

ನಾಮದೇವ್ ರಾವ್ ಪಂಡರಿ ಪಾಂಡೆ – ಕುಮಾರಪ್ಪ ಗೋವರ್ಧನ ಕೇಂದ್ರ, ಪ್ರಸಾದ್  ಇವರ 25 ವರ್ಷದ ಅನುಭವದಿಂದ ಸೂಚಿಸಿದ ವಿಧಾನಕ್ಕೆ ನಾಡೆಪ್ ವಿಧಾನವೆಂದು ಕರೆಯುತ್ತಾರೆ. ಇಟ್ಟಿಗೆ ಅಥವಾ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ತೊಟ್ಟಿಯನ್ನು ನಿರ್ಮಿಸಬೇಕು. ಈ ತೊಟ್ಟಿಯನ್ನು ದನಗಳ ಕೊಟ್ಟಿಗೆಯ ಹತ್ತಿರ ಕಟ್ಟುವುದು ಹೆಚ್ಚು ಸೂಕ್ತ.

ತೊಟ್ಟಿಯ ಅಳತೆ: 10 ಅಡಿ ಉದ್ದ, 6 ಅಡಿ ಅಗಲ ಮತ್ತು 3 ಅಡಿ ಎತ್ತರ ಇರಬೇಕು. ಗೋಡೆಯನ್ನು ಕಟ್ಟುವಾಗ (9 ಅಂಗುಲ ದಪ್ಪ) 4 ಕಡೆಗಳಲ್ಲೂ ಅಲ್ಲಲ್ಲಿ 6 ರಿಂದ 7 ಅಂಗುಲ ಸುತ್ತಳತೆಯ ಕಿಂಡಿಗಳನ್ನು ಬಿಟ್ಟು ಕಟ್ಟುವ ಮೂಲಕ ಗಾಳಿ ಸಂಚಾರಕ್ಕೆ ಅನುಕೂಲವಾಗುತ್ತದೆ. ಸೂಕ್ಷ್ಮಜೀವಿಗಳು ಗಾಳಿಯಲ್ಲಿ ಲಭ್ಯವಿರುವ ಆಮ್ಲಜನಕವನ್ನು ಉಪಯೋಗಿಸಿಕೊಂಡು ಸಾವಯವ ವಸ್ತುಗಳನ್ನು ಕಾಂಪೋಸ್ಟ್ ಆಗಿ ಪರಿವರ್ತಿಸುತ್ತವೆ. ಗೋಡೆಯ ಒಳಗೆ, ಹೊರಗೆ ಮತ್ತು ತಳವನ್ನು ಸಗಣಿಯಿಂದ ಸಾರಿಸಬೇಕು.

ಈ ಅಳತೆಯ ತೊಟ್ಟಿಯನ್ನು ತುಂಬಲು ಬೇಕಾಗುವ ಸಾಮಗ್ರಿಗಳೆಂದರೆ.

*ಕೃಷಿ ತಾಜ್ಯಗಳು, ಕಳೆಗಿಡಗಳು, ಹುಲ್ಲು, ಸಸ್ಯತಾಜ್ಯ ವಸ್ತುಗಳು ಇತ್ಯಾದಿ : 1400 ರಿಂದ 1500 ಕಿ.ಗ್ರಾಂ.

*ಜರಡಿ ಹಿಡಿದ ಮಣ್ಣು : 1750 ಕಿ.ಗ್ರಾಂ (120 ಬುಟ್ಟಿ) ಗಂಜಲಯುಕ್ತ ರಾಡಿಯನ್ನು ಬಳಸಿದರೆ ಹೆಚ್ಚು ಪರಿಣಾಮಕಾರಿ

*ಅವಶ್ಯಕತೆಗನುಗುಣವಾಗಿ ನೀರು : 1500 ರಿಂದ 2000 ಲೀ.

ತೊಟ್ಟಿ ತುಂಬುವ ವಿಧಾನ: ತೊಟ್ಟಿಯನ್ನು ತುಂಬುವ ಮೊದಲು ತೊಟ್ಟಿಯ ಕೆಳಭಾಗ ಮತ್ತು ಗೋಡೆಗಳನ್ನು ಸಗಣಿ ಬಗ್ಗಡದಿಂದ ಸಾರಿಸಬೇಕು

1ನೇ ಪದರ: 6 ಅಂಗುಲ ದಪ್ಪದಷ್ಟು ಕೃಷಿ ತಾಜ್ಯ ವಸ್ತುಗಳನ್ನು ಸಮನಾಗಿ ಹರಡಬೇಕು (100ರಿಂದ 110 ಕಿ.ಗ್ರಾಂ)

2ನೇ ಪದರ: ಸಗಣಿ ಅಥವಾ ಗೋಬರ್‌ಗ್ಯಾಸ್ ಬಗ್ಗಡವನ್ನು (4 ರಿಂದ 5 ಕಿ.ಗ್ರಾಂ ನಷ್ಟು ಸಗಣಿಯನ್ನು 125 ರಿಂದ 150 ಲೀಟರ್ ನೀರಿನಲ್ಲಿ ನೆನೆಸಿ) ಹರಡಬೇಕು.

3ನೇ ಪದರ: 50 ರಿಂದ 60 ಕಿ.ಗ್ರಾಂ. (4-5 ಬುಟ್ಟಿಯಷ್ಟು) ಜರಡಿ ಹಿಡಿದ ಮಣ್ಣನ್ನು ಹರಡಿ ನೀರನ್ನು ಚೆನ್ನಾಗಿ ಚಿಮುಕಿಸಬೇಕು.

ಈ ರೀತಿ ತೊಟ್ಟಿಯನ್ನು ಒಂದರಿಂದ ರಿಂದ ಒಂದೂವರೆ ಅಡಿ ಎತ್ತರ ಬರುವವರೆಗೆ ತುಂಬಬೇಕು. ಈ ಅಳತೆಯ ತೊಟ್ಟಿಯನ್ನು ತುಂಬಲು 11-12 ಪದರಗಳು ಬೇಕಾಗುತ್ತವೆ. ತೊಟ್ಟಿಯನ್ನು ತುಂಬಿದ ನಂತರ 3 ಅಂಗುಲ ದಪ್ಪದಷ್ಟು ಮಣ್ಣು ಮತ್ತು ಸಗಣಿಯ ರಾಡಿಯಿಂದ ಸಾರಿಸಬೇಕು.

ಅನಿಲ ಸೋರುವಿಕೆಯಾಗದಂತೆ ಎಚ್ಚರವಹಿಸಬೇಕು. ಬಿರುಕುಗಳೇನಾದರೂ ಕಾಣಿಸಿದರೆ ಪುನಃ ರಾಡಿಯಿಂದ ಸಾರಿಸಬೇಕು. 15-20 ದಿವಸಗಳ ನಂತರ ಸಾವಯವ ವಸ್ತುಗಳ ಮಟ್ಟ ಸುಮಾರು 8 ರಿಂದ 9 ಅಂಗುಲದಷ್ಟು ಕುಸಿಯುವುದರಿಂದ ಮೊತ್ತಮ್ಮೆ ತುಂಬಿ ರಾಡಿಯಿಂದ ಸಾರಿಸಿ, ವಸ್ತುಗಳನ್ನು ಕಳಿಯಲು ಬಿಡಬೇಕು. ಶೇಕಡ 15 ರಿಂದ 20 ರಷ್ಟು ತೇವಾಂಶವನ್ನು ಕಾಪಾಡಿಕೊಳ್ಳಲು ಸಗಣಿ ಮತ್ತು ನೀರಿನ ಬಗ್ಗಡದಿಂದ ಚಿಮುಕಿಸಬೇಕು. ಹೀಗೆ ಮಾಡುವುದರಿಮದ ಕಾಂಪೋಸ್ಟ್ ಪೋಷಕಾಂಶಗಳ ಮಟ್ಟ ಸುಧಾರಿಸುತ್ತದೆ. ಮೂರರಿಂದ  ನಾಲ್ಕು ತಿಂಗಳುಗಳ ಕಾಲಾವಧಿಯಲ್ಲಿ ಕಾಂಪೋಸ್ಟ್ ತಯಾರಾಗುತ್ತದೆ. ಒಂದು ತೊಟ್ಟಿಯಿಂದ ಸುಮಾರು 3 ಟನ್ನುಗಳಷ್ಟು ಗೊಬ್ಬರ ದೊರೆಯುತ್ತದೆ.

ತೊಟ್ಟಿ ಪದ್ದತಿ (ಜಪಾನ್ ಪದ್ದತಿ)   

ಈ ಕ್ರಮದಲ್ಲಿ ಗುಂಡಿಗಳ ಬದಲು, ಕಲ್ಲು ಚಪ್ಪಡಿ ಬಳಸಿ ತೊಟ್ಟಿಯಾಕಾರದಲ್ಲಿ ರಚಿಸಿಕೊಳ್ಳಬಹುದು. ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ 45-50 ಸೆಂ.ಮೀ. ಆಳದ ಕಂದಕವನ್ನು ಸುಮಾರು 4 ರಿಂದ 10 ಮೀ. ಉದ್ದ, 2 ಮೀ. ಅಗಲ ಮಾಡಿಕೊಂಡು ಅದರಲ್ಲಿ 1.5 ರಿಂದ 1.8 ಮೀ. ಎತ್ತರದ ಚಪ್ಪಡಿಗಳನ್ನು ನಿಲ್ಲಿಸಬೇಕು. ಎರಡು ಚಪ್ಪಡಿಗಳ ನಡುವೆ 3 ರಿಂದ 5 ಸೆಂ.ಮೀ. ಸಂದು ಬಿಡುವಂತೆ ನೋಡಿಕೊಳ್ಳಬೇಕು. ಇದನ್ನು ಉತ್ತರ ದಕ್ಷಿಣಾಭಿಮುಖವಾಗಿ ನಿಲ್ಲಿಸುವುದರಿಂದ ಗಾಳಿಯ ಸಂಚಾರ ಚೆನ್ನಾಗಿರುತ್ತದೆ. ಚಪ್ಪಡಿಗಳು ಬಿಗಿಯಾಗಿ ನಿಲ್ಲುವಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಕಲ್ಲುಚಪ್ಪಡಿ ಬಳಸಿ ತೊಟ್ಟಿಗಳನ್ನು ನಿರ್ಮಿಸಲು ಆರ್ಥಿಕವಾಗಿ ತೊಂದರೆ ಇದ್ದಲ್ಲಿ, ಸರ್ವೆ ಮರ/ ಬಿದಿರಿನ ಮರ / ಅಡಿಕೆ ಮರ ಇತ್ಯಾದಿ ಸ್ಥಳೀಯವಾಗಿ ಲಭ್ಯವಿರುವ ಮರಮುಟ್ಟುಗಳನ್ನು ಬಳಸಿ ತೊಟ್ಟಿಗಳನ್ನು ನಿರ್ಮಿಸಬಹುದು.

ತೊಟ್ಟಿಯ ಕೆಳಭಾಗವನ್ನು ದಮ್ಮಸ್‌ನಿಂದ ಕಟ್ಟುವ ಮೂಲಕ ಕೆಳಭಾಗದ ಭೂಮಿಯನ್ನು ಗಟ್ಟಿಯಾಗುವಂತೆ ಮಾಡಿಕೊಳ್ಳಬಹುದು ಹಾಗೂ ಸಗಣಿಯನ್ನು ನೀರಿನಲ್ಲಿ ಚೆನ್ನಾಗಿ ಕದಡಿಕೊಂಡು ತೆಳುವಾಗಿ ಕೆಳಭಾಗವನ್ನು ಸಾರಿಸಿಕೊಳ್ಳುವುದು ಸೂಕ್ತ. ಸಾವಯವ ವಸ್ತುಗಳನ್ನು ಪದರ ಪದರವಾಗಿ ತೊಟ್ಟಿಯಲ್ಲಿ ತುಂಬಬೇಕು. ಸಾಮಾನ್ಯವಾಗಿ ವಿಭಜನೆಯಾಗುವ ವಸ್ತುಗಳಾದ ತೆಂಗಿನ ಮೊಟ್ಟೆ, ಗರಿ, ತೆಂಗಿನನಾರು, ಜೋಳದ ಕಡ್ಡಿ ಇವುಗಳನ್ನು ಸಣ್ಣ ತುಂಡುಗಳಾಗಿ ಮಾಡಿಕೊಂಡು, ಮೊದಲನೆಯ ಪದರವಾಗಿ ಸುಮಾರು 15 ಸೆಂ.ಮೀ. ವರೆಗೂ ಹರಡಬೇಕು. ಅನಂತರ ಚೆನ್ನಾಗಿ ನೀರು ಚಿಮುಕಿಸಿ, ಸಗಣಿಯ ಬಗ್ಗಡ ಮಾಡಿಕೊಂಡು ತೆಳುವಾಗಿ ಹರಡಿ ಮೇಲೆ ತೆಳು ಪದರವಾಗಿ ಮಣ್ಣನ್ನು ಹರಡಬೇಕು.

ಮೊದಲನೆಯ ಪದರದ ವಸ್ತುಗಳಲ್ಲಿ ನಾರು ಮತ್ತು ಸೆಲ್ಯೂಲೋಸ್ ಅಂಶ ಜಾಸ್ತಿ ಇರುವುದರಿಂದ ಸೂಕ್ಷ್ಮ ಜೀವಿಗಳಾದ ಪ್ಲೂರೋಟಸ್, ಆರ್ಸ್ಪ್ಜಿಲ್ಲಸ್, ಟ್ರಕೋಡರ್ಮಾ, ಪ್ಯಾಸಿಲೋಮೈಸಿಸ್ ಮುಂತಾದವುಗಳ ಶಿಲೀಂಧ್ರಗಳನ್ನು ಸಗಣಿಯ ಬಗ್ಗಡದ ಜೊತೆಯಲ್ಲಿ ಸೇರಿಸಿ ಚಿಮುಕಿಸಬೇಕು.

ಎರಡನೆಯ ಪದರವಾಗಿ ಒಣಹುಲ್ಲು, ಕಳೆ, ನೆಲಗಡಲೆ ಸಿಪ್ಪೆ, ಸತ್ತೆ, ಸೋಯಾ ಅವರೆ ಅವಶೇಷಗಳನ್ನು ಸುಮಾರು 25 ರಿಂದ 30 ಸೆಂ.ಮೀ. ದಪ್ಪವಾಗಿ ಹರಡಬೇಕು. ಪದರವನ್ನು ಹರಡುತ್ತಿರುವಾಗ ಆಗಾಗ್ಗೆ ನೀರು ಹಾಕುತ್ತಿರಬೇಕು. ಅನಂತರ ಸಗಣಿಯ ಬಗ್ಗಡ, ತೆಳುವಾಗಿ ಮಣ್ಣು ಹಾಗೂ ಸೂಕ್ಷ್ಮಜೀವಿಗಳ ಮಿಶ್ರಣವನ್ನು ಈಗಾಗಲೇ ತಿಳಿಸಿರುವಂತೆ ಹರಡಬೇಕು. ಮೂರನೆಯ ಪದರದಲ್ಲಿ ಒಕ್ಕಣೆ ಮಾಡುವ ಕಾಲದಲ್ಲಿ ಕಣದಲ್ಲಿ ಶೇಖರವಾಗುವ ವಸ್ತುಗಳನ್ನು ಸುಮಾರು 10-15 ಸೆಂ. ಮೀ. ದಪ್ಪದ ಪದರವಾಗಿ ಹರಡಬೇಕು.

ಇಲ್ಲಿ ಹಸಿರೆಲೆ ಗೊಬ್ಬರವನ್ನು ಮಿಶ್ರಮಾಡಿಕೊಂಡು ತುಂಬುವುದು ಬಹಳ ಸೂಕ್ತ. ನಾಲ್ಕನೆಯ ಪದರದಲ್ಲಿ ಲಭ್ಯವಿರುವ ಹಸಿರೆಲೆ ಗೊಬ್ಬರಗಳು, ಕೋಳಿ ಗೊಬ್ಬರ, ರೇಷ್ಮೆ ಹುಳುವಿನ ಹಿಕ್ಕೆ, ತ್ಯಾಜ್ಯವಸ್ತುಗಳು, ಕೆರೆಗೋಡು, ಬಯೋಗ್ಯಾಸ್ ಬಗ್ಗಡ, ಹೀಗೆ ಲಭ್ಯವಿರುವ ವಸ್ತುಗಳ ಮತ್ತೊಂದು ಪದರವನ್ನು ಸುಮಾರು 25 ರಿಂದ 30 ಸೆಂ.ಮೀ.ನಷ್ಟು ದಪ್ಪವಾಗಿ ಹರಡಬೇಕು. ಪ್ರಕೃತಿದತ್ತವಾಗಿ ದೊರೆಯುವ ಶಿಲಾರಂಜಕವನ್ನು ಸೇರಿಸಬಹುದು. ಸಗಣಿ, ಮಣ್ಣು ಹಾಗೂ ಸೂಕ್ಷ್ಮಜೀವಿಗಳ ಮಿಶ್ರಣಗಳನ್ನು ತೆಳುವಾಗಿ ಹರಡುವುದನ್ನು ಪುನರಾವರ್ತಿಸಬೇಕು.

ಐದನೆಯ ಪದರವಾಗಿ ಜಾನುವಾರಗಳ ಕೊಟ್ಟಿಗೆಯಲ್ಲಿ ಲಭ್ಯವಾಗುವ ಸಗಣಿ, ದನಕರುಗಳು ತಿಂದು ಬಿಟ್ಟ ಮೇವಿನ ಭಾಗ, ಗಂಜಲ ಇವೆಲ್ಲವನ್ನು ಸುಮಾರು 25-30 ಸೆಂ.ಮೀ. ದಪ್ಪದವರೆಗೂ ಹರಡಿ ನೀರನ್ನು ಚಿಮುಕಿಸಬೇಕು. ಹೀಗೆ ತೊಟ್ಟಿಯಲ್ಲಿ ಸುಮಾರು 15 ರಿಂದ 30 ಸೆಂ.ಮೀ. ಎತ್ತರ ತೊಟ್ಟಿಯ ಮೇಲುಭಾಗಕ್ಕೆ ಬಂದಾಗ ಗಟ್ಟಿಯಾಗಿ ಸಗಣಿ ಬಗ್ಗಡ ಮಾಡಿಕೊಂಡು ಆರನೆಯ ಪದರವಾಗಿ ಹಾಕಿ ಸಾರಿಸಬೇಕು. ತೊಟ್ಟಿಯನ್ನು ತುಂಬುವಾಗ ಒಂದು ಕಡೆ ಸ್ವಲ್ಪ ಸ್ಥಳವನ್ನು ಬಿಟ್ಟುಕೊಂಡಿದ್ದಲ್ಲಿ ತಿರುವಿ ಹಾಕಲು ಅನುಕೂಲವಾಗುತ್ತದೆ. ಆಗಾಗ್ಗೆ ನೀರು ಚಿಮುಕಿಸುವುದು ಈ ವಿಧಾನದಲ್ಲಿ ಅವಶ್ಯಕ.

ಗುಡ್ಡೆ ಪದ್ದತಿ:

ಹೆಚ್ಚಾಗಿ ಮಳೆ ಬೀಳುವ ಪ್ರದೇಶಕ್ಕೆ ಸೂಕ್ತವಾಗುವ ಈ ವಿಧಾನದಲ್ಲಿ ಸಾವಯವ ವಸ್ತುಗಳನ್ನು ಪದರಪದರವಾಗಿ ಹಾಕುತ್ತಾ ಬಂದು ಅದು ಸುಮಾರು 0.5 ರಿಂದ 0.7 ಮೀಟರ್ ಎತ್ತರದಷ್ಟು ಎತ್ತರಿಸಬೇಕು/ಏರಿಸಬೇಕು. ಕೆಳಭಾಗದಲ್ಲಿ ಅಗಲವಾಗಿ ಹಾಕಿ 1 ಮೀಟರ್ ಏರಿಸುತ್ತಾ ಬಂದಂತೆ 0.6 ಮೀ. ಮೇಲುಗಡೆಯಿರುವಂತೆ ನೋಡಿಕೊಂಡಾಗ ಸಾವಯವ ವಸ್ತುಗಳು ಜಾರುವುದಿಲ್ಲ. 2 ರಿಂದ 3 ಬಾರಿ ತಿರುವು ಹಾಕಿದರೆ ಆದಷ್ಟು ಬೇಗನೆ ಕಾಂಪೋಸ್ಟ್ ಮಾಡಿಕೊಳ್ಳಲು ಸಾಧ್ಯ. ಇನ್ನೂ ಅನೇಕ ವಿಧಾನಗಳಲ್ಲಿ ಕಾಂಪೋಸ್ಟ್ ಮಾಡಿಕೊಳ್ಳಲು ಕೃಷಿ ಯಂತ್ರಗಳನ್ನು ಬಳಸಿ ತಿರುವಿ ಹಾಕುವುದು, ಗಾಳಿಯಾಡುವಂತೆ ಯಂತ್ರಗಳ ಮೂಲಕ ಗಾಳಿ ಬಿಡುವ ಕ್ರಮಗಳು ಮುಂದುವರಿದ ದೇಶಗಳಲ್ಲಿ ರೂಢಿಯಲ್ಲಿವೆ.

ಮಾಗಿದ ಕಾಂಪೋಸ್ಟ್ ಗೊಬ್ಬರದ ಗುಣಲಕ್ಷಣಗಳು:

ಚೆನ್ನಾಗಿ ಮಾಗಿರುವ ಕಾಂಪೋಸ್ಟ್ ಗೊಬ್ಬರವನ್ನು ಗುರುತಿಸಿ ಬೆಳೆಗಳಿಗೆ ಉಪಯೋಗಿಸುವುದು ಸೂಕ್ತ. ಇಲ್ಲದಿದ್ದರೆ, ಬೆಳೆಗಳಿಗೆ ಹಾನಿ. ಅಂದರೆ, ಸಾರಜನಕದ ಕೊರತೆ, ಭಾರಿ ಲೋಹಗಳ ನಂಜಾಗುವಿಕೆ, ಪೂರ್ತಿ ಮಾಗಿರದ ಗೊಬ್ಬರದಿಂದ ಉತ್ಪತ್ತಿಯಾಗುವ ಸಾವಯವ ಪದಾರ್ಥಗಳು ಬಿತ್ತಿದ ಬೀಜದ ಮೊಳಕೆಯೊಡೆಯುವುದನ್ನು ತಡೆಗಟ್ಟುತ್ತವೆ. ಇದರಿಂದ ಬೆಳೆಯ ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಕಾಂಪೋಸ್ಟ್ ತಯಾರಿಸುವಲ್ಲಿ ಚನ್ನಾಗಿ ಮಾಗಿರುವುದನ್ನು ಗುರುತಿಸಿ ಬೆಳೆಗೆ ಉಪಯೋಗಿಸಬೇಕು.

ಮಾಗಿದ ಕಾಂಪೋಸ್ಟ್ ಗೊಬ್ಬರದಲ್ಲಿ ಉಷ್ಣಾಂಶವು ಸ್ಥಿರವಾಗಿರುತ್ತದೆ ಹಾಗೂ ದುರ್ವಾಸನೆಯಿರುವುದಿಲ್ಲ. ಬಣ್ಣ ಕಂದುಯುಕ್ತ ಕಪ್ಪು ಅಥವಾ ಕಪ್ಪು; ರಸಸಾರ : 7 ರ ಹತ್ತಿರವಿರುತ್ತದೆ ಹಾಗೂ ಇಂಗಾಲ ಮತ್ತು ಸಾರಜನಕ ಅನುಪಾತ 20:1 ಕ್ಕಿಂತ ಕಡಿಮೆ ಇರುತ್ತದೆ. ಮಾಗಿದ ಕಾಂಪೋಸ್ಟನ್ನು ತೇವಾಂಶವಿಲ್ಲದ ಹಾಗೂ ತಂಪಾಗಿರುವ ಪ್ರದೇಶಗಳಲ್ಲಿ ಶೇಖರಿಸಬೇಕು.

ಲೇಖಕರು: ಡಾ. ಎನ್. ದೇವಕುಮಾರ್, ಡಾ. ಕೆ. ಮುರುಳಿ, ಜಿ.ಎಸ್. ನವೀನ್ ಕುಮಾರ್

1 COMMENT

  1. Kindly provide the consortium of microbes to be made available in each and every village at the grama sevaka as a nodal agent. Further the model and demonstrate with progressive farmers. The inclusion of NGOS is a first step to achive the result.more professionally.

LEAVE A REPLY

Please enter your comment!
Please enter your name here