ರೊಸೆಲ್’ (Roselle) ಮತ್ತು ‘ಜುಥೋ’ (Zutho), ಇವು ನಾಗಾಲ್ಯಾಂಡ್ ನ ಎರಡು ಫೇಮಸ್ ಡ್ರಿಂಕ್. ಈ ರೊಸೆಲ್ ಅನ್ನೋದು ಕಾಡಲ್ಲಿ ಹೇರಳವಾಗಿ ಸಿಗುವಂತ ಒಂದು ಗಿಡದ ಹೂ. ಹೂದೋಟದಲ್ಲೂ ನೆಟ್ಟು ಬೆಳೆಯಬಹುದು. ಇದರ ಒಣಗಿದ ಹೂಗಳನ್ನು, ನೀರಲ್ಲಿ ಹಾಕಿ ಕುದಿಸಿದರೆ ಬಣ್ಣ,ರುಚಿ,ಶಕ್ತಿ ಮೂರನ್ನೂ ಒಳಗೊಂಡಂತ ಹುಳಿ ಮಿಶ್ರಿತ ಕೆಂಪು ಬಣ್ಣದ ಪೇಯ ಸವಿಯಲು ಸಿದ್ಧ. ಬೇಕಿದ್ದಲ್ಲಿ ಸಿಹಿಗೆ ಬೆಲ್ಲ ಸೇರಿಸಿಕೊಳ್ಳಬಹುದು.
‘ಇದ್ರಲ್ಲಿ ಸಿಕ್ಕಾಬಟ್ಟೆ ಹೆಲ್ತ್ ಬೆನಿಫಿಟ್ಸ್ ಇರೋದ್ರಿಂದ ಕಾಫಿ, ಟೀ ಬದಲಿಗೆ ಇದನ್ನ ಸೇವಿಸಿದ್ರೆ ದಿನಪೂರ್ತಿ ಲವಲವಿಕೆಯಿಂದ ಇರಬಹುದು’ ಅನ್ನೋದು ಇಲ್ಲಿಯ ಜನರ ಅಭಿಪ್ರಾಯ
‘ಜೋತ್’ ಅಂದ್ರೆ ಮತ್ತೇನಲ್ಲ, ‘ಅಕ್ಕಿ ಹೆಂಡ’. ಇದನ್ನ ಮತ್ತಷ್ಟು ಫಿಲ್ಟರ್ ಮಾಡಿದರೆ ಅದನ್ನ ‘ರೈಸ್ ಬೀರ್’ ಅಂತ ಕರೆಯುತ್ತಾರೆ. ಇದನ್ನು ಕೂಡ ‘ಶಕ್ತಿವರ್ಧಕ ಪೇಯ’ ಎಂದೇ ಬಣ್ಣಿಸುತ್ತಾರೆ. ಅನೇಕ ರೋಗಗಳಿಗೂ ರಾಮಬಾಣವಂತೆ.
ಈ ರಾಜ್ಯದಲ್ಲಿ ಇದು ಇಷ್ಟೊಂದು ಪ್ರಸಿದ್ದಿ ಪಡೆಯೋಕೆ ಕಾರಣ, ಸರ್ಕಾರ ಇಲ್ಲಿ ಬಹಳ ಹಿಂದೆಯೇ ಮದ್ಯ ಮಾರಾಟವನ್ನು ನಿಷೇಧಿಸಿದೆ. ಹೀಗಾಗಿ ಮನೆ ಮನೆಯಲ್ಲೂ ‘ಜೋತ್’ ಕಾಮನ್.
ಒಂದು ವೇಳೆ ಸರ್ಕಾರ ಇಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರೆ ‘ಬಾರ್ ಅಂಡ್ ರೆಸ್ಟೋರೆಂಟ್’ ಗಳಲ್ಲಿ ವಯಸ್ಕರಿಗೆ ಮಾತ್ರ ಬಿಕರಿಯಾಗುತ್ತಿತ್ತು. ಆದ್ರೆ ಈಗ ಕಾನೂನು ಬಾಹಿರವಾಗಿ ತರಕಾರಿ ಮಳಿಗೆ, ಕಿರಾಣಿ ಅಂಗಡಿ, ಬೀಡಾ ಅಂಗಡಿ ಹೀಗೆ ಎಲ್ಲೆಂದರಲ್ಲಿ ಮದ್ಯ ಮಾರಾಟವಾಗುತ್ತಿದೆ. ಮಕ್ಕಳು ಕೂಡ ‘ರೈಸ್ ಬೀರ್’ ಅನ್ನು ಖರೀದಿಸಿ ಕುಡಿಯುತ್ತಾರೆ.
ಮದ್ಯಪ್ರಿಯರ ಪಾಲಿನ ‘ಡ್ರೈ ಲ್ಯಾಂಡ್’ ಅಂತಲೇ ಕರೆಸಿಕೊಳ್ಳುವ, ಮದ್ಯ ನಿಷೇಧವಿರುವ ಮಿಜೋರಾಂ,ಗುಜರಾತ್, ಬಿಹಾರ್ ನಲ್ಲೂ ಸಾರಾಸಗಟಾಗಿ ಮದ್ಯ ಮಾರಾಟ ನಡೆಯುತ್ತದೆ. ಲಕ್ಷ್ಯದ್ವೀಪದಲ್ಲಿ ಮಾತ್ರ ಕೆಲವೆಡೆ ಸಂಪೂರ್ಣ ನಿಷೇಧವಿದೆ.