ಕಳೆದ 15-20 ದಿನದಿಂದ ನಮ್ಮೂರ ಜನರ ಬಾಯಲ್ಲಿ ಇದೇ ಮಾತು, “ಕೃಷ್ಣಾ ನದಿಗೆ ನೀರ ಬಿಟ್ಟಾರಂತ.. ಕುಡಚಿ ತನಕಾ ಬಂದಾವಂತ” ಆಸಂಗಿ ಸಮೀಪ ತಮದಡ್ಡಿ ವರೆಗೆ ನೀರು ಬಂದದ್ದನ್ನು ಜನ ಅಧಿಕೃತಗೊಳಿಸಿದ್ದಾರೆ. ಮಹಾರಾಷ್ಟ್ರದ ಘಟ್ಟಗಳಲ್ಲಿ ಮಳೆ ಸುರಿದರಷ್ಟೇ ತುಂಬುವುದು ನಮ್ಮ ಕೃಷ್ಣೆಯ ಒಡಲು.
ನೀರಿಗಾಗಿ ನಮ್ಮಲ್ಲಿ ಹಾಹಾಕಾರ ಶುರುವಾಗಿದ್ದು ಕಳೆದ ಫೆಬ್ರವರಿ ಮೊದಲ ವಾರದಿಂದಲೇ. ದಿನ ಬಿಟ್ಟು ದಿನ ಬರತಿದ್ದ ನಲ್ಲಿ ನೀರು ಮೂರು ದಿನಕ್ಕೊಮ್ಮೆ ಬರಲಾರಂಭಿಸಿತು. ನಂತರ ವಾರಕ್ಕೊಮ್ಮೆ. ಮಾರ್ಚ್ ಮೊದಲ ವಾರದಿಂದ ಶುರುವಾಯ್ತು ಕೊಳವೆಬಾವಿಗಳೆದುರು ಕೊಡಗಳ ಮೆರವಣಿಗೆ. ತಿಂಗಳೊಪ್ಪತ್ತಿನಲ್ಲಿ ಬರಿದಾಗತೊಡಗಿದ ಕೊಳವೆ ಬಾವಿಗಳು. ಭರಪೂರ ಸೆಲೆ ಇರುವ ಕೊಳವೆ ಬಾವಿಗಳೆದುರು ದಿನಗಟ್ಟಲೆ ಸರತಿಯಲ್ಲಿ ನಿಂತು ತುಂಬಿಕೊಳ್ಳುವ ಅನಿವಾರ್ಯತೆ. ಮನೆಗಳಲ್ಲಿ ಸ್ವಂತ ಕೊಳವೆಬಾವಿ ಬರಿದಾಗಿ ನೀರಿಗಾಗಿ ಜನರಲ್ಲಿ ಭಾವೈಕ್ಯತೆ ಕುಡಿಯೊಡೆಯಿತು. ನೂರಾರು ಕೊಡಗಳನ್ನು ಸರತಿಯಲ್ಲಿರಿಸಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಯ್ತು.
ಸೈಕಲ್ಲುಗಳಿಗೆ ಹೆಚ್ಚಿದ ಬೇಡಿಕೆ. ಒಂದೊಂದು ಸೈಕಲ್ಲಿಗೆ ಹತ್ತತ್ತು ಕೊಡ ನೇತು ಹಾಕಿ ತಳ್ಳಿಕೊಂಡು ಬರುವ ತರುಣರು. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ೨-೪ ಕೊಡ ತರುವ ವಯಸ್ಕರು.. ಬಗಲಲ್ಲಿ ಒಂದು ತಲೆ ಮೇಲೆ ಒಂದು ಹೊತ್ತು ತರುವ ಹೆಂಗಳೆಯರು.. ಬಿಂದಿಗೆ ಹಿಡಿದು ಓಡಾಡುವ ಮಕ್ಕಳು. ಊರಿಗೆ ಊರೇ ನೀರ ಹಿಂಬಾಲಿಸತೊಡಗಿತು. ಕೇವಲ ವಯಸ್ಸಾದ ಹಿರಿಯರಷ್ಟೇ ಇರುವವರು ದುಡ್ಡು ಕೊಟ್ಟು ನೀರು ಹಾಕಿಸಿಕೊಳ್ಳತೊಡಗಿದರು.. ದಿನವೊಂದಕ್ಕೆ ಬಹಳವಾದರೆ ೧೦-೧೫ ಕೊಡ ನೀರು ಸಿಕ್ಕಿದರೆ ಪುಣ್ಯ ಅನ್ನುವಂತಾಯ್ತು. ಉದ್ಯೋಗ, ಮನೆ ಕೆಲಸ ಎಲ್ಲ ಬಿಟ್ಟು ನೀರು ಹೊತ್ತು ಹೊತ್ತು ಮೈಕೈ ನೋವು, ಬಾಧಿಸುವ ಹೊಟ್ಟೆ, ಜ್ವರ.
‘ಲಗೂನ್ ಎದ್ದ ಪಾಳೆ ಹಚ್ಚಬೇಕು. ಪಾಳೆ ಬರೂದರಾಗ ಕರೆಂಟ್ ಹೋತು. ಬೋರ್ ಬಂದ್ ಆತು..’ ನೀರು ಬಿಟ್ಟು ಮತ್ತೊಂದು ಮಾತೇ ಇಲ್ಲ. ಆಗ ತಾನೇ ಮೂತ್ರಾಶಯದ ಹರಳಿಗಾಗಿ ಚಿಕಿತ್ಸೆ ಮಾಡಿಸಿಕೊಂಡವನೊಬ್ಬ ಆಸ್ಪತ್ರೆ ಜನರಲ್ ವಾರ್ಡಿಗೆ ಹಾಕಿದಾಗ ಅರವಳಿಕೆ ಪ್ರಭಾವದಲ್ಲಿದ್ದವ ಬಡಬಡಿಸತೊಡಗಿದ- ‘ನೀರಿಗಿ ಪಾಳೆ ಹಚ್ಚರಿ.. ಸೈಕಲ್ ತಗೋರಿ.. ‘ ಅಂತ! ಶಾಲೆ ಪ್ರಾರಂಭವಾಗಿ ತಿಂಗಳಾದರೂ ತರಗತಿಗಳಿಗೆ ಹಾಜರಾಗದ ಮಕ್ಕಳು.. ನೀರಿಲ್ಲ, ಈಗ ನೀವು ಬರೂದು ಬ್ಯಾಡ ಅಂತ ನೆಂಟರಲ್ಲಿ ವಿನಂತಿಸಿಕೊಳ್ಳಬೇಕಾದ ಸ್ಥಿತಿ.
ಓಣಿಗೊಂದು, ಮನೆಗೊಂದರಂತೆ ಬಾವಿ ಕೊರೆದರೆ ಎಲ್ಲಿಂದ ನೀರು ಬಂದೀತು? ನೀರಿದ್ದಾಗ ಇವರೆಲ್ಲ ಮಾಡುವ ದುಂದು ನೋಡಬೇಕು. ತುಂಬಿಕೊಂಡ ಮೇಲೂ ನಲ್ಲಿ ಇದ್ದರೆ ಚರಂಡಿಗೊ. ಮನೆಯ ಬಚ್ಚಲಿಗೊ ಬಿಡುವರು. ಒಂದು ಚೊಂಬು, ಒಂದು ಬಾಟಲಿಯನ್ನು ತುಂಬಿಸಿಕೊಳ್ಳಲೂ ಸಾರ್ವಜನಿಕ ಬೋರ್ ಚಾಲೂ ಮಾಡುವರು. ದಿಕ್ಕಿಲ್ಲ; ದರಕಾರಿಲ್ಲದ ಸ್ಥಿತಿ. ಹೇಳಲು ಹೋದರೆ ‘ನಿಮ್ಮನೀದೇನಪಾ ಬೋರ್..’ ಅಂತ ಜಗಳಕ್ಕೆ ನಿಲ್ಲುವ ಜನ.
ಜೂನ್ ಕಳೆದರೂ ಮಳೆಯಿಲ್ಲದ ಊರು. ಅಂತರ್ಜಲ ಹೆಚ್ಚಿಸಲು ಏನಾದರೂ ಮಾಡಬೇಕು.. ಗಿಡಗಳನ್ನ ಹಚ್ಚಿ ಬೆಳೆಸಬೇಕು.. ಮಳೆ ಕೊಯ್ಲು ಮಾಡಬೇಕು.. ಇಂಥಾ ಯಾವ ಆಲೋಚನೆಗಳೂ ಅವರಿಗೆ ಹಿಡಿಸೊಲ್ಲ. ಮೊನ್ನೆ ಪ್ರಜಾವಾಣಿ ಯಲ್ಲಿ ‘ಟ್ಯಾಂಕರ್ ವಾಡಾ ಆದ ಮರಾಠವಾಡ’ ಅಂತ ವರದಿ ಇತ್ತು.ಪರಿಸ್ಥಿತಿ ಹೀಗೇ ಮುಂದುವರಿದರೆ, ನಮ್ಮ ತಪ್ಪು ನಾವು ತಿದ್ದಿಕೊಳ್ಳದಿದ್ದರೆ ನೀರು ಆಸಂಗಿ ಹೊಳೆಯಲ್ಲಲ್ಲ ನಮ್ಮ ಕಣ್ಣಲ್ಲೂ ಬತ್ತಿ ಹೋಗುವುದರಲ್ಲೇನೂ ಶಂಕೆಯಿಲ್ಲ.
ಮತ್ತೊಂದು ಮಹಾ ಯುದ್ಧ ಅಂತ ಆದರೆ ಅದು ನೀರಿನ ಹಾಹಾಕಾರಕ್ಕಾಗಿ ಆಗುವುದು ಎಂಬ ಐನ್ಸ್ಟೈನ್ ಮಾತು ನಿಜವೇ ಆದಲ್ಲಿ ಅದಕ್ಕೆ ಪೂರ್ವದಲ್ಲಿನ ಘಟನೆಗಳು ಊಹಿಸಲೂ ಆಗದಷ್ಟು ಕಠೋರವಾಗಿರುತ್ತವೆ.ನದೀ ಪಾತ್ರದ ಬರಿದಾದ ಬಯಲಂತೆ ಭೂಮಿ ಭಣಗುಟ್ಟಾಳು!!