ಚಿತ್ರ-ಲೇಖನ: ಸಂಧ್ಯಾ ಉರಣಕರ್

ಮಲೆ ಮಹದೇಶ್ವರನಬೆಟ್ಟದಿಂದ ತೊಳಸಿಗೆರೆಗೆ ಸುಮಾರು 5 ಕಿಮೀ ಅಂತರ. ಇಲ್ಲಿಗೆ ಕಡಿದಾದ ಮಾರ್ಗದಲ್ಲಿ ತೆರಳುವಾಗ ಜೀವ ಝಲ್ ಎನ್ನುತ್ತದೆ. ಸನಿಹದ ಇಂಡಿಗನಾಥ ಸೇರಿದಂತೆ ಸುತ್ತಲ ಪುಟ್ಟಪುಟ್ಟ ಹಳ್ಳಿಗಳ ನಿವಾಸಿಗಳು ಮಳೆಯಾಶ್ರಯದಲ್ಲಿ ರಾಗಿ,ನವಣೆ ಬೆಳೆದುಕೊಳ್ಳುತ್ತಾರೆ. ಕೈಗೆ ಫಸಲು ಬರುವ ತನಕ ಕಾಯುವುದೇ ಹರಸಾಹಸ. ಏಕೆಂದರೆ ಕಾಡುಪ್ರಾಣಿಗಳ ಹಾವಳಿ ನಿರಂತರ. ಇಲ್ಲಿನ ಹೆಚ್ಚಿನ ಮಂದಿ ಕೂಲಿಗಾಗಿ ಸನಿಹದ ತಮಿಳುನಾಡು ರಾಜ್ಯದ ಗ್ರಾಮ,ಪಟ್ಟಣಗಳಿಗೆ ತೆರಳುತ್ತಾರೆ.

ತುರ್ತುಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಪಡುವ ಬವಣೆ ಅಪಾರ. ರಸ್ತೆಯೇ ಇಲ್ಲದ ಕಾರಣ ಸಾರ್ವಜನಿಕ ಸಾರಿಗೆಯೇ ಇಲ್ಲಿಲ್ಲ. ರೋಗಿಗಳನ್ನು, ಬಸುರಿ ಬಾಣಂತಿಯರನ್ನು ದೂರದ ಆಸ್ಪತ್ರೆಗೆ ಕರೆದೊಯ್ಯಲು ಇವರು ಬಳಸುವುದು ಜೋಲಿ. ಬಿದಿರಿನ ಕೋಲಿಗೆ ಬಟ್ಟೆ ಕಟ್ಟಿ ಅದರೊಳಗೆ ಬಸುರಿ, ರೋಗಿಗಳನ್ನು ಕೂರಿಸಿ, ಮೂರ್ನಾಲ್ಕು ಮಂದಿ ಹೊತ್ತು ಸಾಗಬೇಕು. ದಾರಿಮಧ್ಯೆದಲ್ಲಿಯೇ ಸತ್ತವರ ಸಂಖ್ಯೆಗೇನೂ ಕಡಿಮೆಯಿಲ್ಲ. ಹಾದಿಯಲ್ಲಿ ಕಾಡುಪ್ರಾಣಿಗಳ ಕಾಟವೂ ಇದೆ.
ಕಾಡುಗಳ್ಳ ವೀರಪ್ಪನ್ ಬಂಧಿಸುವ ಕಾರ್ಯಾಚರಣೆಗೆ ಬಂದಿದ್ದ ಪೊಲೀಸ್ ಅಧಿಕಾರಿ ಆಸಕ್ತಿಯಿಂದ ಗ್ರಾಮಕ್ಕೆ ಪ್ರಾಥಮಿಕ ಶಾಲೆಯೇನೋ ಬಂದಿದೆ. ಆದರೆ ವಿದ್ಯುತ್ ಸೌಲಭ್ಯವೇ ಇಲ್ಲದ ಶಾಲೆಯಲ್ಲಿ ಮಕ್ಕಳು ಓದುವುದಾದರೂ ಹೇಗೆ? ಇಂಥ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಬಂದಿದ್ದು ಸೆಲ್ಕೊ. ವಿದ್ಯಾರ್ಥಿಗಳಿಗೆ ರೀಚಾರ್ಜಬಲ್ ಸೋಲಾರ್ ಬ್ಯಾಟರಿಗಳನ್ನು ನೀಡಿದರು. ಶಾಲೆಯಲ್ಲಿಯೇ ರೀಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಿದರು.

ಸಂಚಾರಿ ಆಸ್ಪತ್ರೆ ಬಗ್ಗೆ ವಿವರಿಸುತ್ತಿರುವ ಡಾ. ಅಂಜಲಿ

“ಶಾಲೆಗೆ ಸೌರಶಕ್ತಿ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ರೀಚಾರ್ಜಬಲ್ ಬ್ಯಾಟರಿಗಳನ್ನು ನೀಡಿದ ನಂತರ ಮಧ್ಯೆದಲ್ಲಿಯೇ ಶಿಕ್ಷಣ ತೊರೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಗಣನೀಯವಾಗಿ ಅಂಕಗಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಇದು ಶಿಕ್ಷಕರಿಗೂ, ಪೋಷಕರಿಗೂ ಸಂತಸ ನೀಡುವ ಸಂಗತಿ” ಎನ್ನುತ್ತಾರೆ ಶಿಕ್ಷಕ ಶಂಕರ್

ಸೆಲ್ಕೋ ಸೋಲಾರ್ ಹೆಲ್ತ್ ವ್ಯಾನ್: ಬೆಟ್ಟಗುಡ್ಡಗಳ ಕಡಿದಾದ ಮಾರ್ಗದಲ್ಲಿ ಜೋಲಿಯಲ್ಲಿ ತಂದವರನ್ನು ಮತ್ತಷ್ಟೂ ದೂರದ ಆಸ್ಪತ್ರೆಗೆ ಕರೆದೊಯ್ಯಲು ವಾಹನಗಳಿಗಾಗಿ ಪರದಾಡಬೇಕು. ಇಂಥ ಪರಿಸ್ಥಿತಿಯಲ್ಲಿ ನೆರವು ನೀಡಲು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಸಂಚಾರಿ ಕಿರು ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ವೈದ್ಯರೂ ಸೇರಿದಂತೆ ಆರುಮಂದಿ ಸಿಬ್ಬಂದಿ ಇರುತ್ತಾರೆ. ಇಲ್ಲಿನ ವೈದ್ಯಕೀಯ ಉಪಕರಣಗಳ ಘಟಕಗಳು ಸೆಲ್ಕೊ ಅಳವಡಿಸಿರುವ ಸೌರಶಕ್ತಿ ಬಳಕೆ ವ್ಯವಸ್ಥೆ ಮೂಲಕ ಚಾಲಿತವಾಗುತ್ತಿವೆ. ರಕ್ತಪರೀಕ್ಷೆ ಘಟಕ, ರಾತ್ರಿವೇಳೆ ಬಳಸಲು ದೀಪಗಳು, ಆರೋಗ್ಯ ಮಾಹಿತಿ ನೀಡಲು ಟಿವಿ ಅಳವಡಿಸಲಾಗಿದೆ.

ಗೋಪಿನಾಥಂ, ಆಲಂಬಾಡಿ, ಇಂಡಿಗನಾಥ, ತೊಳಸಿಗೆರೆ ಸೇರಿದಂತೆ ಮಲೆಮಹಾದೇಶ್ವರ್ ಬೆಟ್ಟದ ಸುತ್ತಮುತ್ತಲ ಗ್ರಾಮಗಳ ಪರಿಧಿಯಲ್ಲಿ ಈ ವ್ಯಾನ್ ಸಂಚರಿಸುತ್ತದೆ. ಪ್ರತಿದಿನ ಒಂದೊಂದು ಹಳ್ಳಿಗೆ ತೆರಳಲಾಗುತ್ತದೆ. ಗರ್ಭಿಣಿಯರಿಗೆ, ಮಧುಮೇಹ, ರಕ್ತದೊತ್ತಡ ಇರುವವರಿಗೆ, ಜ್ವರ, ವಾಂತಿಬೇಧಿ ಇತ್ಯಾದಿ ತೊಂದರೆಗ ಉಂಟಾದವರಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಸೌರಶಕ್ತಿಯಿಂದ ಚಾಲಿತವಾಗುವ ಉಪಕರಣದ ಮೂಲಕ ಸ್ಥಳದಲ್ಲಿಯೇ ವೈದ್ಯಕೀಯ ವರದಿ ನೀಡಬಹುದು ಎಂದು ಡಾ.ಅಂಜಲಿ ವಿವರಿಸುತ್ತಾರೆ.

ಸೌರಶಕ್ತಿ ಆಧರಿತ ಫ್ಲೋರ್ಮಿಲ್

ಸರ್ಕಾರಿಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್: ಕೊಳ್ಳೆಗಾಲ ತಾಲೂಕಿನ ಮೂಡಲ ಅಗ್ರಹಾರದ ಸರ್ಕಾರಿಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಗಳಲ್ಲಿ ಒಟ್ಟು 108 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಸೌರಶಕ್ತಿ ವ್ಯವಸ್ಥೆ ಮೂಲಕ ಡಿಜಿಟಲ್ ಶಿಕ್ಷಣ ನೀಡಲಾಗುತ್ತಿದೆ. ಸ್ಥಳೀಯ ದಾನಿಗಳು ಹಾಗೂ ಸಂಘಸಂಸ್ಥೆಗಳ ನೆರವಿನೊಂದಿಗೆ ಸೆಲ್ಕೋ ಕಂಪೆನಿ ಸ್ಮಾರ್ಟ್ ಕ್ಲಾಸ್ ಡಿಇಪಿ ವ್ಯವಸ್ಥೆ ಮಾಡಿದೆ. ಇದರ ಮೂಲಕ ಇಲ್ಲಿನ ಮಕ್ಕಳು ಶಿಕ್ಷಣವನ್ನು ಮನರಂಜನೆ ಖುಷಿಯಲ್ಲಿ ಕಲಿಯಲು ಸಾಧ್ಯವಾಗುತ್ತಿದೆ.

ಮೂಡಲ ಅಗ್ರಹಾರದ ಸರ್ಕಾರಿಶಾಲೆ ವಿದ್ಯಾರ್ಥಿಗಳು

ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಆದ್ದರಿಂದ ಶಾಲಾ ಉಪಕರಣಗಳನ್ನು ಬಳಸಲು ತೊಂದರೆಯಾಗುತ್ತಿತ್ತು. ಇದನ್ನು ಸೌರಶಕ್ತಿ ಘಟಕ ನಿವಾರಿಸಿದೆ. ಸ್ಮಾರ್ಟ್ ಕ್ಲಾಸ್ ಬಂದ ನಂತರ ವಿದ್ಯಾರ್ಥಿಗಳ ಹಾಜರಾತಿಯೂ ಹೆಚ್ಚಿದೆ. ಅವರ ಕಲಿಕೆಮಟ್ಟವೂ ವೃದ್ಧಿಸಿದೆ ಎನ್ನುತ್ತಾರೆ ಶಿಕ್ಷಕರು.


ಸೋಲಾರ್ ಯಂತ್ರಗಳು:
ಚಾಮರಾಜನಗರ ಜಿಲ್ಲೆಯ ಪಾಳ್ಯದಲ್ಲಿ ಜೆರಾಕ್ಸ್, ಪ್ರಿಂಟರ್ ಸೌರಶಕ್ತಿಯಿಂದಲೇ ಚಾಲನೆಗೊಳ್ಳುತ್ತಿವೆ. ಇನ್ನೊಂದು ವಿಶೇಷತೆಯೇನೆಂದರೆ ಸಾಂಪ್ರದಾಯಿಕ ಕುಲುಮೆಗೆ ಸೌರಶಕ್ತಿ ಬಳಸಲಾಗಿದೆ. ಇದರಿಂದ ಕುಲುಮೆಗಾರರ ಮೇಲೆ ಬೀಳುತ್ತಿದ್ದ ದೈಹಿಕ ಒತ್ತಡ ಕಡಿಮೆಯಾಗಿದೆ. ವಿಶೇಷವಾಗಿ ತೋಳುಗಳು, ಭುಜಗಳ ಸ್ನಾಯುಸೆಳೆತ ಉಂಟಾಗುವ ಸಾಧ್ಯತೆ ತಪ್ಪಿಸಿದೆ. ಇದರ ಬಗ್ಗೆ ಕುಲುಮೆ ಮಾಲೀಕರು ಹರ್ಷ ವ್ಯಕ್ತಪಡಿಸುತ್ತಾರೆ. ಸೌರಶಕ್ತಿ ಅಳವಡಿಕೆ ನಂತರ ಇಲ್ಲಿನ ಕೆಲಸಗಳು ಮತ್ತಷ್ಟೂ ತ್ವರಿತಗೊಂಡಿವೆ.

ತೆಂಕಣಮೊಳೆ ಹಳ್ಳಿಯಲ್ಲಿ 300 ಮನೆಗಳಿವೆ. ಇವರಲ್ಲಿ ಹಗ್ಗ ನೇಯ್ದು ಮಾರಾಟ  ಮಾಡುವವರೇ ಹೆಚ್ಚು. ಇದಕ್ಕಾಗಿ ಮೊದಲು ಭೂತಾಳೆ ಬಳಕೆ ಹೆಚ್ಚಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ದಾರಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ವಿಶೇಷವೆಂದರೆ ಹಗ್ಗ ನೇಯಲು ಸೆಲ್ಕೊ ಅಳವಡಿಸಿದ ಸೌರಶಕ್ತಿ ಚಾಲಿತ ಯಂತ್ರಗಳನ್ನು ಬಳಸುತ್ತಿರುವುದು. ಇದರಿಂದ ವಿದ್ಯುತ್ ಶುಲ್ಕ ಕಟ್ಟುವ ಅವಶ್ಯತೆ ಇಲ್ಲ. ಲಾಭಾಂಶ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here