ನಿಮ್ಮೂರ ಈ ಹೂವಿಗೆ ಇನ್ನೇನು ಹೆಸರಿದೆ ?

0
ಚಿತ್ರಲೇಖನ: ಶಿವಾನಂದ ಕಳವೆ

ಹಲ್ಲು ಬಾಯಿಯ ಹೊರಕ್ಕೆ ಚಾಚಿರುವ ಮಂದಿಯನ್ನು ತೆರೆಮರೆಯಲ್ಲಿ ಕೆರೆಮಣೆ ಎನ್ನುವವರಿದ್ದಾರೆ. ಇಲ್ಲಿ ನೋಡಿ ಅಂಥ ಹೆಸರಿನ ಕಾಡು ಹೂ ಕೂಡಾ ಇದೆ.

ಗಣೇಶ ಚೌತಿ ಹಬ್ಬದ ಹೊತ್ತಿಗೇ ಅರಳಲು ಶುರುವಾಗಿ ಈ ನವರಾತ್ರಿಗೂ ಹಲ್ಲು ತೆರೆದು ನಗುವ ಇವಳು ಕಾಡು ಬೆಟ್ಟದ ಬೆರಗು, ಮುಂದೆ ಚಾಚಿದ ಹಲ್ಲಿನಲ್ಲಿ ಸೊಬಗು ಸೂಸಿದವಳು.

ನಮ್ಮೂರ ಸುತ್ತ ಕೆರೆ ಮಣೆ ಹೂ, ಹೆರೆ ಮಣೆ ಹೂ, ಸಸ್ಯ ಮಿತ್ರ ತೀರ್ಥಹಳ್ಳಿ ಮಾಜ್ಜಿಗೆಸರ ಸುಬ್ಬಣ್ಣ ‘ನರಸಿಂಹ ಪುಷ್ಪ ‘ಎಂದು ಊರ ಹೆಸರು ಹೇಳಿದರು. ಪಶ್ಚಿಮ ಘಟ್ಟದ ಬೆಟ್ಟದ ಮೇಲಿನ ಬಿಳಿ ಬೆಡಗಿ ಮೂರು ನಾಲ್ಕು ಹೂಗಳನ್ನು ಒಟ್ಟಿಗೇ ಅರಳಿಸಿ ದಿಕ್ಕಿಗೊಂದು ಮುಖ ಮಾಡಿ ತಲೆಯಲ್ಲಿ ಹೊತ್ತು ನಿಲ್ಲುವವಳು!

ಇನ್ನೇನು ಮಳೆಗಾಲದ ಕೊನೆಯಲ್ಲಿ ಅರಳಿ ಅವಸರದಲ್ಲಿ ಎಲ್ಲಾ ಕೀಟಗಳನ್ನು ತನ್ನತ್ತ ಸೆಳೆಯುವ ತಂತ್ರವೂ ಇರಬಹುದು. ಕಾಯಿ ಆಗಿ, ಹಣ್ಣು ಬಲಿತು ನೆಲದ ಹುಲ್ಲು ಒಣಗುವ ಮುಂಚೆ ಮಣ್ಣಿಗೆ ಸೇರುವ ಯೋಜನೆ ಇದರದು.

ಒಳ್ಳೆಯ ಪರಿಮಳದ ಈ ಹೂ ಬಿ ಜಿಲ್ ಸ್ವಾಮಿಯವರ ಹಸಿರು ಹೊನ್ನು ಪುಸ್ತಕದಲ್ಲಿ ಕೂಡ ಸೊಗಸಾಗಿ ಅರಳಿದೆ. ಅಲ್ಲಿ ಇದನ್ನು ಗೌರಿ ಹೂ (plantanthera susannae) ಎಂದು ಹೇಳಲಾಗಿದೆ.

ಏನೇ ಹೇಳಿ, ನಮ್ಮ ಪರಿಸರದ ಭಾಷೆ ಮಜವಾಗಿದೆ. ಊರಿಗೊಂದು ಹೆಸರು ಹೊತ್ತು ಬೆಟ್ಟ ಏರಿದವರನ್ನು ಸೆಳೆದು ತನಗೊಂದು ಸ್ಥಳೀಯ ವೈವಿಧ್ಯಮಯ ಹೆಸರು ಪಡೆದ ಇವಳು ನಿಮ್ಮೂರಿನಲ್ಲೂ ಇರಬಹುದು. ಹೌದು, ನಿಮ್ಮೂರ ಆಧಾರ್ ಕಾರ್ಡ್ ನಲ್ಲಿ ಇವಳ ಹೆಸರು ಏನಿದೆ ?

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

LEAVE A REPLY

Please enter your comment!
Please enter your name here